ಬೆಂಗಳೂರು ಚಿತ್ರೋತ್ಸವ – ಇಂದು ನಾ ನೋಡಿದ ಚಿತ್ರಗಳು

17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) 2026ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯುತ್ತಿದೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಮಹಿಳಾ ಸಬಲೀಕರಣದ ಥೀಮ್‌ನೊಂದಿಗೆ, 60ಕ್ಕೂ ಹೆಚ್ಚು ದೇಶಗಳ ಸುಮಾರು 110ಕ್ಕೂ ಹೆಚ್ಚು ಚಿತ್ರಗಳನ್ನು ರಾಜಾಜಿನಗರದ ಲುಲು ಮಾಲ್, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಡಾ. ರಾಜ್‌ಕುಮಾರ್ ಭವನದಲ್ಲಿ ಪ್ರದರ್ಶಿಸಲಾಗುತ್ತಿದೆ.  ಕೆಲ ಚಿತ್ರಗಳ ಬಗ್ಗೆ  ಸಿನಿಮಾಸಕ್ತರಾದ ಎಂ. ನಾಗರಾಜ ಶೆಟ್ಟಿ  ಪರಿಚಯಿಸಿದ್ದಾರೆ.  ಬೆಂಗಳೂರು

Late Shift

ಪ್ರತಿಯೊಂದು ಕೆಲಸದಲ್ಲೂ ಒಂದಲ್ಲ ಒಂದು ರೀತಿಯ ಒತ್ತಡವಿರುತ್ತದೆ. ಡಾಕ್ಟರ್ ವೃತ್ತಿಯ ಬೇರೆ ಬೇರೆ ಆಯಾಮಗಳ ಬಗ್ಗೆ ಸಿನಿಮಾಗಳಿವೆ. ನರ್ಸ್ ಕೆಲಸದ ಒತ್ತಡದ ಬಗೆಗಿನ ಸಿನಿಮಾ ಇದ್ದಂತಿಲ್ಲ. ಲೇಟ್ ಶಿಫ್ಟ್ ನರ್ಸ್ ಒಬ್ಬಳ‌ ಪಾಡನ್ನು ಚಿತ್ರಿಸಿದ ಸಿನಿಮಾ. ಬೆಂಗಳೂರು

ಹೆಚ್ಚು ವೈದ್ಯಕೀಯ ಸವಲತ್ತುಗಳು ಲಭ್ಯವಿರುವ ಸ್ವಿಸರ್ ಲ್ಯಾಂಡ್ ನಲ್ಲೂ ಶುಶ್ರೂಷಕಿಯರ ಕೊರತೆಯಿದೆ. ತಡ ರಾತ್ರಿ ಒತ್ತಡದ ಶಿಫ್ಟ್ ಕೂಡಾ ಇಬ್ಬರೇ ನಿರ್ವಹಿಸುವ ಸಂದರ್ಭ. ಅವರಲ್ಲಿ ಒಬ್ಬಾಕೆ ಎರಡನೇ ಸೆಮಿಸ್ಟರ್ ನಲ್ಲಿ ಓದುವ ವಿದ್ಯಾರ್ಥಿನಿ. ನರ್ಸ್ ಫ್ಲೋರಿಯಾ ಹಲವಾರು ಪೇಷಂಟ್ ಗಳನ್ನು ಅತ್ಯಂತ ಸಹನೆಯಿಂದ, ಮಮತೆಯಿಂದ ಉಪಚರಿಸುತ್ತಾಳೆ. ಬೆಂಗಳೂರು

ಇದನ್ನೂ ಓದಿ: ಮಾಲೂರು | ಶಾಸಕರಾಗಿ ನಂಜೇಗೌಡ ಮುಂದುವರಿಕೆ : ಮರು ಎಣಿಕೆಯಲ್ಲೂ ಮತ್ತೊಮ್ಮೆ ಜಯ

ನೊಂದ ಮಹಿಳೆಗೆ ಹಾಡು ಹೇಳಿ ಸಮಾಧಾನ ಪಡಿಸುತ್ತಾಳೆ; ಸತತವಾಗಿ ಬರುವ ಫೋನ್ ಕರೆಗಳಿಗೆ ಉತ್ತರಿಸುತ್ತಾಳೆ; ತನ್ನೊಂದಿಗೆ ಯಾರೂ ಇಲ್ಲ ಎಂದವರಿಗೆ ಭರವಸೆ ನೀಡುತ್ತಾಳೆ.ಅವಳ ಸಂಸಾರದಲ್ಲಿ ಬಿರುಕಿದೆ‌. ಎಲ್ಲವನ್ನೂ‌ ಎದುರಿಸಿ ಬೇಗ ಬೇಗನೇ ಕಾರ್ಯ ನಿರ್ವಹಿಸುವ ಆಕೆಯೂ ಕುಸಿಯುವ ಪ್ರಸಂಗ ಬರುತ್ತದೆ.‌ಆಕೆಗೆ ಸಿಟ್ಟನ್ನು‌ ಅದುಮಿ ಹಿಡಿಯಲೂ ಆಗುವುದಿಲ್ಲ.

ಚಿತ್ರದಲ್ಲಿ ಘಟನೆಗಳು ಚಕಚಕನೆ ಸಾಗುತ್ತವೆ. ನಿರ್ದೇಶಕಿ ಪೆಟ್ರಾ ಬಿಯೋಂಡಿನ ಮೊಲ್ಪೆ‌ ಒಂದಿನಿತೂ ಪುರುಸೊತ್ತು ಕೊಡದಂತೆ ದೃಶ್ಯಗಳನ್ನು ಹೆಣೆಯುತ್ತಾರೆ. ಚಿತ್ರಕತೆ, ಸಂಗೀತ ಮನಸೆಳೆಯುವಂತಿದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ನರ್ಸ್ ಗಳ ಕೊರತೆಯಿದೆ, ಅವರಿಗೂ‌ ಸಾಂತ್ವನದ ಅಗತ್ಯ ಇದೆ ಎನ್ನುವ ಭಾವವನ್ನು ಸಿನಿಮಾ ಹುಟ್ಟಿಸುತ್ತದೆ.

The Presidents Cake

ಉದ್ದನೆಯ ಕ್ಯೂನಲ್ಲಿ ಭರವಸೆ ಕಳೆದುಕೊಳ್ಳದೆ ನಿಂತಿದ್ದರಿಂದ ಕೊನೆಯವನಾಗಿ ಒಳ ಹೋದೆ. ಹೋಗಿದ್ದು ಸಾರ್ಥಕವಾಯಿತು. 1990 ಕಾಲದ ಸದ್ದಾಂ ಹುಸೇನ್ ಕಾಲದ ಇರಾಕನ್ನು ಕಂಡಂತಾಯಿತು.

ಸದ್ದಾಂ ಹುಸೇನ್ ಹುಟ್ಟು ಹಬ್ಬಕ್ಕೆ ಪ್ರತಿ ಶಾಲೆಯ ಮಕ್ಕಳೂ ಕೇಕ್ ತಯಾರಿಸಬೇಕು. ಯಾರು ಮಾಡಬೇಕೆನ್ನುವುದನ್ನು ಚೀಟಿ ಎತ್ತಿ ನಿರ್ಧರಿಸುತ್ತಾರೆ.ಇದನ್ನು ತಿಳಿದಿದ್ದ ಲಮಿಯಾ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಅದು ಸಾಧ್ಯವಾಗದೆ ಅವಳ ಹೆಸರೇ ಬಂದಿರುತ್ತದೆ. ಅಪ್ಪ, ಅಮ್ಮನನ್ನು ಕಳೆದುಕೊಂಡಿರುವ ಆಕೆಗೆ ಕೇಕ್ ತಯಾರಿಸುವ ಅನುಕೂಲ ಇಲ್ಲ.

ಅಜ್ಜಿ ಅಪ್ಪನ ವಾಚ್, ಹಳೆಯ ರೇಡಿಯೋ ಪೇಟೆಯಲ್ಲಿ ಮಾರಲು‌ ಜೊತೆಗೆ ಹೋಗುತ್ತಾರೆ. ತೀರಾ ವಯಸ್ಸಾದ ಅಜ್ಜಿ ಆಕೆಯನ್ನು ಬೇರೊಬ್ಬರ ವಶಕ್ಕೆ ಒಪ್ಪಿಸಲು ನೋಡಿದಾಗ ಲಮಿಮಾ ಓಡಿ ಹೋಗಿ ಪಾರಾಗುತ್ತಾಳೆ. ಆದರೆ ಮಾರನೇ ದಿನ ಶಾಲೆಗೆ ಹೋಗಬೇಕಾದರೆ ಕೇಕ್ ತಯಾರಿಸಲೇ ಬೇಕು. ಕಳ್ಳತನ ಮಾಡಲು ಒಪ್ಪದ ಆಕೆ ಕೇಕ್ ಗೆ ಬೇಕಾದ ಸಾಮಾನುಗಳನ್ನು ಪಡೆದುಕೊಳ್ಳಲು ಒದ್ದಾಡುತ್ತಾಳೆ.

ಕೇಕ್ ನೆಪದಲ್ಲಿ ನಿರ್ದೇಶಕ ಹಸನ್ ಹಾಡಿ ಸದ್ದಾ‌ಂ ಸರ್ವಾಧಿಕಾರದ, ವ್ಯವಸ್ಥೆಯ ಪರಿಚಯ ಮಾಡಿಕೊಡುತ್ತಾರೆ. ನೀರಿನ ಬವಣೆ, ರೇಶನ್ ನಲ್ಲಿ ದಿನಸಿ,ವ್ಯಾಪಾರಸ್ಥರ ಗೋಳು,ಹೆಣ್ಣಿನ ಶೋಷಣೆ,ಕಳ್ಳತನ, ಖೋಟಾ ನೋಟುಗಳು,ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒದ್ದಾಡುವ ಜನ ಇವೆಲ್ಲ ಪರಿಚಯವಾಗುತ್ತಾ ಹೋಗುತ್ತದೆ.ಶಾಲೆಯಲ್ಲಿ ಕಡ್ಡಾಯವಾಗಿ ಹೇಳಬೇಕಾದ ಸದ್ದಾಂ ಘೋಷಣೆಗಳು, ಹುಟ್ಟುಹಬ್ಬದ ಮೆರವಣಿಗೆ,ಎಲ್ಲಾ ಕಡೆ ಕಾಣಿಸಿಕೊಳ್ಳುವ ಭಾವಚಿತ್ರ ಯಾವ ರೀತಿಯಲ್ಲಿ ದೇಶವನ್ನು ಆತ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಎನ್ನುವುದನ್ನು ಹೇಳುತ್ತದೆ.

ನಿರ್ದೇಶಕರು ಲಮಿಮಾ ಹೆಸರಿನ ಬಾಲೆಯ ಮುಖಾಂತರ ಕಥನವನ್ನು ಕಟ್ಟಿದ ರೀತಿಯಲ್ಲಿ ಆರ್ದತೆ, ಕುತೂಹಲ ಎರಡೂ‌ ಇವೆ. ಚಿತ್ರೀಕರಣ ಸೊಗಸಾಗಿದ್ದು ಸಂಗೀತ ಭಾವನೆಗಳನ್ನು ಮಿಡಿಯುತ್ತದೆ.ಲಮಿಮಾ ಕೈಯಲ್ಲಿ ಇರುವ ಹುಂಜ ಅಂತಹ ದುರ್ಭರ ಸನ್ನಿವೇಶದಲ್ಲೂ ಕಳೆದುಕೊಳ್ಳದ ಭರವಸೆಯ ಪ್ರತೀಕದಂತೆ ಕಾಣಿಸುತ್ತದೆ.

River Stone

ಪೋಲೀಸ್ ಕತೆಯಂತೆ ಕಂಡರೂ ವ್ಯಕ್ತಿತ್ವವನ್ನು ಶೋಧಿಸುವ ಶ್ರೀಲಂಕಾದ ‘ರಿವರ್ ಸ್ಟೋನ್’ ಕುತೂಹಲಕಾರಿಯಾಗಿದೆ.‌ಅಪರಾಧಿಯೊಬ್ಬನ್ನು ಮೂವರು ಪೊಲೀಸರು ಎನ್ ಕೌಂಟರ್ ಉದ್ದೇಶದಿಂದ ದೂರದ‌ ಪ್ರದೇಶಕ್ಕೆ ಕರೆದೊಯ್ಯುತ್ತಾರೆ.ಅವರಲ್ಲಿ ಹಿರಿಯ ಅಧಿಕಾರಿಯೊಬ್ಬ ಪ್ರೇಯಸಿಯನ್ನು ಭೇಟಿ ಮಾಡಿ ಉಂಗುರ ಕೊಟ್ಟರೂ ಅವಳಿಗೆ ತೃಪ್ತಿಯಿಲ್ಲ. ಮತ್ತೊಬ್ಬ ಪೊಲೀಸನ ಹೆಂಡತಿಗೆ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಗೆ ಸೇರಿಸಿದ ಸುದ್ದಿ ಬರುತ್ತದೆ.

ಪೊಲೀಸ್ ವೆಹಿಕಲ್ ನ ಡ್ರೈವರ್ ಗೆ ರೇಡಿಯೋ‌ ಸ್ಪರ್ಧೆಯ ಹುಚ್ಚು. ಇದರಲ್ಲಿ‌ ಗೆಲ್ಲಲು ಆಪಾದಿತ ಸಹಾಯ ಮಾಡುತ್ತಾನೆ.‌ಪೊಲೀಸನ‌ ಹೆಂಡತಿಯ ಆಸ್ಪತ್ರೆಯ ಖರ್ಚಿನ‌ ಹಣವನ್ನೂ ಕೊಡುವ ವಾಗ್ದಾನ ಮಾಡುತ್ತಾನೆ. ಅವರಲ್ಲಿ ಪರಸ್ಪರ ಸೌಹಾರ್ದ ಉಂಟಾಗುತ್ತದೆ. ಆದರೆ ಎನ್ ಕೌಂಟರ್ ಮಾಡುವ ಜರೂರಿದೆ. ಅದನ್ನು ಮಾಡುತ್ತಾರೋ‌ ಇಲ್ಲವೋ ಎನ್ನುವ ಕುತೂಹಲವನ್ನು ನಿರ್ದೇಶಕ‌ ಕೊನೆಯ ವರೆಗೆ ಉಳಿಸಿದ್ದಾರೆ. ನೀರೊಳಗಿರುವ ಕಲ್ಲು ಕಾಲಕ್ರಮೇಣ ನಯವಾಗುತ್ತಾ ಹೋಗುತ್ತದೆ.ಹಾಗೆಯೇ ಮನುಷ್ಯ ಪಕ್ವವಾಗುತ್ತಾನೆಯೇ ಎನ್ನುವುದನ್ನು‌ ಚಿತ್ರ ಪ್ರಶ್ನೆ ಮಾಡುತ್ತದೆ.

The diappearance of Joseph Mengele

ಪ್ರಯೋಗ ಶಾಲೆಯಲ್ಲಿ ತಲೆ ಬುರುಡೆಯನ್ನು ತೋರಿಸಿ ಇದು ನಾಜಿ ಡಾಕ್ಟರ್ ಜೊಸೆಫ್ ಮಿಂಗೆಲೆಯದ್ದು ಎಂದು ಹೇಳುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ‘ಏಂಜಲ್ ಆಫ್ ಢೆತ್’ ಎಂದು ಕುಖ್ಯಾತನಾದ ನಾಜಿ ಡಾಕ್ಟರ್ ಜೋಸೆಫ್ ನನ್ನು ಅವನ ಮಗ ರೌಫ್ ಹುಡುಕಿಕೊಂಡು ಬ್ರೆಜಿಲ್ ಗೆ ಬರುತ್ತಾನೆ.‌ ನಾಜಿ ಯುದ್ದಾಪರಾಧಿಗಳಲ್ಲಿ ಹಲವರಿಗೆ ಶಿಕ್ಷೆಯಾದರೂ ಜೋಸೆಫ್ ತಲೆ ತಪ್ಪಿಸಿ, ಅರ್ಜೆಂಟಿನಾ, ಪೆರುಗ್ವೆ ಮತ್ತು ಕೊನೆಗಾಲ್ಲಿ ಬ್ರೇಸಿಲ್ ನಲ್ಲಿ ವಾಸ ಮಾಡುತ್ತಾನೆ.ಮಗ‌ ರೌಫ್ ಅಪ್ಪ ಮಾಡಿದ ಹೀನ ಕೃತ್ಯಗಳ ಬಗ್ಗೆ ವಿಚಾರಿಸುತ್ತಾನೆ.

ಆದರೆ ಜೋಸೆಫ್ ಗೆ ತಾನು ಮಾಡಿದ ಕೊಲೆಗಳ ಬಗ್ಗೆ ಪಶ್ಚಾತ್ತಾಪವಿಲ್ಲ. ಆತ ಹಿಟ್ಲರ್ ನನ್ನು ಕೊನೆ ತನಕ ಸಮರ್ಥಿಸುತ್ತಾನೆ. ಜನಾಂಗೀಯ ಶ್ರೇಷ್ಠತೆಯ ವ್ಯಸನ ಮತ್ತು ಅಹಂಕಾರ‌‌ ದುರ್ಭರ ಸನ್ನಿವೇಶದಲ್ಲೂ‌ ಅವನಲ್ಲಿ ಉಳಿದಿರುತ್ತದೆ.ಎಲ್ಲ ಮಾನವ ಹತ್ಯೆಗಳನ್ನು‌ಸಮರ್ಥಿಸುವವರು ಇರುವಂತೆ ನಾಜಿ ಹತ್ಯಾಕಾಂಡವನ್ನೂ‌ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ಸಮರ್ಥಿಸುವವರು ಎಲ್ಲಾ ಕಾಲದಲ್ಲೂ ಇರುತ್ತಾರೆ ಎನ್ನುವುದನ್ನು ಸಿನಿಮಾ ತೋರಿಸುತ್ತದೆ.

ಇದನ್ನೂ ನೋಡಿ: ಫೆ.12 ಸಾರ್ವತ್ರಿಕ ಮುಷ್ಕರ – ಶ್ರಮಜೀವಿಗಳ ಘೋಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *