ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರ ಹುದ್ದೆ ಒಂದು ಮಹತ್ವದ ಸಂವಿಧಾನಿಕ ಸ್ಥಾನ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯಪಾಲರ ನಡೆ–ನುಡಿಗಳು ಗಂಭೀರ ಚರ್ಚೆಗೆ ಕಾರಣವಾಗಿವೆ. “ರಾಜ್ಯಪಾಲರ ಹುದ್ದೆ ಅಗತ್ಯವೇ?” ಎಂಬ ಪ್ರಶ್ನೆ ಕೇವಲ ರಾಜಕೀಯ ವಿವಾದವಲ್ಲ; ಅದು ಪ್ರಜಾಪ್ರಭುತ್ವ, ರಾಜ್ಯ ಸ್ವಾಯತ್ತತೆ ಮತ್ತು ಸಂವಿಧಾನದ ಹೃದಯಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಯಾಗಿದೆ.
– ಗುರುರಾಜ ದೇಸಾಯಿ
ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ರೂಢಿ. ಆದರೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಕೇವಲ ಒಂದು ನಿಮಿಷದ ಭಾಷಣ ಮಾಡಿ ಹೊರನಡೆದಿದ್ದಾರೆ. ರಾಜ್ಯ ಪಾಲರ ನಡೆ ಸರ್ವಾಧಿಕಾರಿ ಧೋರಣೆ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಕೇಂದ್ರ ವಿರುದ್ಧ ವಿನಾ ಕಾರಣ ದ್ವೇಷ ಕಾರುವ, ರಾಜಕೀಯ ಮಾಡುವ ಉದ್ದೇಶದ ಭಾಷಣವನ್ನು ಓದದೇ ನಿರ್ಗಮಿಸಿದ್ದು ಸರಿಯಾದ ಕ್ರಮ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪರ ವಿರೋಧವನ್ನು ಹುಟ್ಟು ಹಾಕಿರುವ ರಾಜ್ಯಪಾಲ ಹುದ್ದೆ ಮತ್ತು ಅವರ ಜವಬ್ದಾರಿಗಳ ಬಗ್ಗೆ ತಿಳಿಯುವುದು ಅಗತ್ಯವಿದೆ. ರಾಜ್ಯಪಾಲ ಹುದ್ದೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲ ಹುದ್ದೆ ಅತ್ಯಂತ ಮಹತ್ವದ ಸಂವಿಧಾನಾತ್ಮಕ ಸ್ಥಾನವಾಗಿದೆ. ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ಸಂವಿಧಾನದ ಚೌಕಟ್ಟಿನೊಳಗೆ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ: ವಿಚಾರಣೆಯಲ್ಲಿ ಪೌರತ್ವ: ಬಂಧನ, ಗಡೀಪಾರು ಅಭಿಯಾನಗಳ ವಿರುದ್ಧ ದನಿ ಎತ್ತಿದ ವಲಸೆ ಕಾರ್ಮಿಕರು
ಭಾರತೀಯ ಸಂವಿಧಾನದ 153ರಿಂದ 162ನೇ ವಿಧಿಗಳು ರಾಜ್ಯಪಾಲರ ನೇಮಕ, ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸುತ್ತವೆ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಅವರು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ. ಆದ್ದರಿಂದ ರಾಜ್ಯಪಾಲರ ಪಾತ್ರ ಜನಪ್ರತಿನಿಧಿ ಸರ್ಕಾರದ ಪರ್ಯಾಯವಾಗದೇ, ಅದರ ಮೇಲ್ವಿಚಾರಕ ಮತ್ತು ಸಂವಿಧಾನ ರಕ್ಷಕನಾಗಿರಬೇಕು ಎಂಬುದು ಸಂವಿಧಾನದ ಆಶಯ.
ಸಂವಿಧಾನದ 163ನೇ ವಿಧಿ ರಾಜ್ಯಪಾಲರು ಸಾಮಾನ್ಯವಾಗಿ ರಾಜ್ಯ ಮಂತ್ರಿಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸುತ್ತದೆ. ಅಂದರೆ, ಆಡಳಿತದ ನೈಜ ಅಧಿಕಾರ ಆಯ್ಕೆಯಾದ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದ ಕೈಯಲ್ಲಿರುತ್ತದೆ. ರಾಜ್ಯಪಾಲರಿಗೆ ನೀಡಲಾಗಿರುವ ವಿವೇಚನಾ ಅಧಿಕಾರ ಅಪರೂಪದ ಹಾಗೂ ನಿರ್ದಿಷ್ಟ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆ—ಉದಾಹರಣೆಗೆ, ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಇಲ್ಲದಾಗ ಸರ್ಕಾರ ರಚನೆಗೆ ಆಹ್ವಾನ ನೀಡುವುದು ಅಥವಾ ಸಂವಿಧಾನಾತ್ಮಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕ್ರಮ ಕೈಗೊಳ್ಳುವುದು.
ರಾಜ್ಯಪಾಲರ ಪ್ರಮುಖ ಕರ್ತವ್ಯಗಳಲ್ಲಿ ಸರ್ಕಾರ ರಚನೆಗೆ ಆಹ್ವಾನ, ಮಂತ್ರಿಮಂಡಲದ ನೇಮಕ, ವಿಧಾನಸಭೆಯನ್ನು ಕರೆಯುವುದು–ವಿಸರ್ಜಿಸುವುದು, ಮಸೂದೆಗಳಿಗೆ ಅನುಮೋದನೆ ನೀಡುವುದು ಮತ್ತು ವಾರ್ಷಿಕ ಭಾಷಣ ಮಾಡುವುದನ್ನು ಒಳಗೊಂಡಿದೆ. ಜೊತೆಗೆ, ಅಗತ್ಯವಿದ್ದಲ್ಲಿ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವ ಅಧಿಕಾರವೂ ಅವರಿಗೆ ಇದೆ. ಆದರೆ ಈ ಎಲ್ಲಾ ಅಧಿಕಾರಗಳು ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ಬಳಸಬೇಕಾದವು.
ಭಾರತೀಯ ಸಂವಿಧಾನದ 176ನೇ ವಿಧಿಯಂತೆ, ರಾಜ್ಯ ವಿಧಾನಮಂಡಲದ ಪ್ರತಿಯೊಂದು ವರ್ಷದ ಮೊದಲ ಅಧಿವೇಶನದ ಆರಂಭದಲ್ಲಿ ಅಥವಾ ವಿಧಾನಸಭೆ ಚುನಾವಣೆಯ ನಂತರ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ವಿಧಾನಸಭೆ–ವಿಧಾನಪರಿಷತ್ಗಳ ಸಂಯುಕ್ತ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಬೇಕು. ಈ ಭಾಷಣವನ್ನು ಸಾಮಾನ್ಯವಾಗಿ ಆಡಳಿತ ಭಾಷಣ ಅಥವಾ ರಾಜ್ಯಪಾಲರ ಭಾಷಣ ಎಂದೂ ಕರೆಯಲಾಗುತ್ತದೆ.
ಜಂಟಿ ಅಧಿವೇಶನದ ಭಾಷಣದ ಮೂಲ ಉದ್ದೇಶ ಸರ್ಕಾರದ ನೀತಿ, ಯೋಜನೆಗಳು ಮತ್ತು ಆದ್ಯತೆಗಳನ್ನು ಶಾಸನಾಂಗದ ಮುಂದೆ ಮಂಡಿಸುವುದಾಗಿದೆ. ರಾಜ್ಯಪಾಲರು ಈ ಭಾಷಣವನ್ನು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿ ನೀಡುವುದಿಲ್ಲ. ಇದು ಸಂಪೂರ್ಣವಾಗಿ ಮಂತ್ರಿಮಂಡಲ ತಯಾರಿಸುವ ಭಾಷಣವಾಗಿದ್ದು, ಆಯ್ಕೆಯಾದ ಸರ್ಕಾರದ ನಿಲುವು ಮತ್ತು ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುತ್ತದೆ. ಅಂದರೆ, ಈ ಭಾಷಣದ ರಾಜಕೀಯ ಹೊಣೆಗಾರಿಕೆ ಸರ್ಕಾರದ ಮೇಲಿರುತ್ತದೆ.
ಕೇಂದ್ರದ ಕೈಗೊಂಬೆ
ಭಾರತ ಫೆಡರಲ್ ರಾಷ್ಟ್ರ. ರಾಜ್ಯಗಳಿಗೆ ಸ್ವಾಯತ್ತತೆ ಇದೆ ಎಂದು ಸಂವಿಧಾನ ಹೇಳುತ್ತದೆ. ಆದರೆ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಆಡಳಿತದಲ್ಲಿ ನೇರವಾಗಿ ಕೈಹಾಕುತ್ತಿರುವುದು ಫೆಡರಲಿಸಂಗೆ ನೀಡುತ್ತಿರುವ ತೆರೆದ ಸವಾಲು. ಚುನಾಯಿತ ಸರ್ಕಾರಗಳನ್ನು ದುರ್ಬಲಗೊಳಿಸಿ, ರಾಜ್ಯಗಳನ್ನು ಕೇಂದ್ರದ ಅಧೀನ ಘಟಕಗಳಂತೆ ನೋಡುವ ಮನೋಭಾವವೇ ಈ ಹುದ್ದೆಯ ದುರುಪಯೋಗದ ಮೂಲ ಎಂದು ಹೇಳಬಹುದು.
ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ. ಆದರೆ ಜನರಿಂದ ಆಯ್ಕೆಯಾದ ಸರ್ಕಾರಗಳ ಭವಿಷ್ಯವನ್ನು ನಿರ್ಧರಿಸುವಷ್ಟು ಅಧಿಕಾರವನ್ನು ಅವರು ಬಳಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಯಾವ ತತ್ವಕ್ಕೆ ಸರಿಹೊಂದುತ್ತದೆ? ಬಹುಮತವಿದ್ದ ಸರ್ಕಾರಗಳನ್ನು ಅನುಮಾನದಿಂದ ನೋಡುವುದು, ಸರ್ಕಾರ ರಚನೆಗೆ ಆಹ್ವಾನ ನೀಡುವಲ್ಲಿ ರಾಜಕೀಯ ಲೆಕ್ಕಾಚಾರ ಮಾಡುವುದು, ವಿಶ್ವಾಸಮತಕ್ಕೆ ಗಡುವುಗಳನ್ನು ತಮಗೆ ಬೇಕಾದಂತೆ ನಿಗದಿಪಡಿಸುವುದು—ಇವೆಲ್ಲವೂ ಸಂವಿಧಾನದ ತತ್ವಗಳ ಮೇಲೆ ನಡೆಯುತ್ತಿರುವ ದಾಳಿ ಅಲ್ಲವೇ? ಎಂಬ ಪ್ರಶ್ನೆಗಳು ದಶಕಗಳಿಂದ ಕೇಳಿ ಬರುತ್ತಿವೆ.

ಭಾರತದಲ್ಲಿ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವು ರಾಜಕೀಯ ಮತ್ತು ಸಾಂವಿಧಾನಿಕವಾಗಿ ಪ್ರಮುಖ ಚರ್ಚೆಯಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕದಿರುವುದು, ಭಾಷಣ ಮೊಟಕುಗೊಳಿಸುವುದು ಮತ್ತು ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡುವುದು ಸಂಘರ್ಷಕ್ಕೆ ಪ್ರಮುಖ ಕಾರಣಗಳಾಗಿವೆ. ಇತ್ತೇಚೆಗೆ ಕರ್ನಾಟಕದಂತೆ, ತಮಿಳುನಾಡು ಅಸೆಂಬ್ಲಿಯಲ್ಲಿ, ಸತತವಾಗಿ ಮೂರನೇ ಬಾರಿ ಅಲ್ಲಿನ ರಾಜ್ಯಪಾಲರಾದ ಆರ್ ಎನ್ ರವಿ ಅಧಿವೇಶನದಲ್ಲಿ ಭಾಷಣ ಮಾಡದೆ ಹೊರ ನಡೆದರು. ಕೇರಳದಲ್ಲೂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪೂರ್ಣ ಭಾಷಣ ಮಾಡದೆ ಅಧಿವೇಶನದಿಂದ ಹೊರ ನಡೆದಿದ್ದಾರೆ.
ದಕ್ಷಿಣ ಭಾರತದಲ್ಲಿ ಚುನಾಯಿತ ಸರ್ಕಾರಗಳು ಮತ್ತು ರಾಜಭವನದ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ. ಕರ್ನಾಟಕ, ಕೇರಳ & ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಅಧಿವೇಶನದಲ್ಲಿ ತಮ್ಮ ವರ್ತನೆಯ ಮೂಲಕ ರಾಜಕೀಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಕೇರಳದಲ್ಲಿ ಈ ಹಿಂದಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಯಾವರೀತಿ ಎಲ್ಡಿಎಫ್ ಸರ್ಕಾರದ ಜೊತೆ ಸಂಘರ್ಷ ನಡೆಸಿದ್ದರೋ ಅದೇ ರೀತಿ ರಾಜೇಂದ್ರ ಅರ್ಲೇಕರ್ ನಡೆದುಕೊಳ್ಳುತ್ತಿದ್ದಾರೆ.
ಕೇರಳದಲ್ಲಿ ವಿಶ್ವವಿದ್ಯಾಲಯ ಕುಲಪತಿ ನೇಮಕದಲ್ಲಿ ನಿರಂತರವಾಗಿ ಅಡ್ಡಿಪಡಿಸಿದರು. ಸಚಿವ ಮಂಡಳಿಯ ನಿರ್ಣಯಗಳನ್ನು ಪ್ರಶ್ನಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಸಂಘರ್ಷಕ್ಕೆ ಕಾರಣವಾಗಿತ್ತು. ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡುವುದರಲ್ಲಿ ಆಗುತ್ತಿರುವ ವಿಳಂಬವೂ ಸಂಘರ್ಷವನ್ನು ತೀವ್ರಗೊಳಿಸಿದೆ. ಆಯ್ಕೆಯಾದ ಸರ್ಕಾರದ ನೀತಿನಿರ್ಣಯಗಳನ್ನು ಜಾರಿಗೊಳಿಸಲು ಅಗತ್ಯವಿರುವ ವಿಧೇಯಕಗಳನ್ನು ತಡೆಹಿಡಿಯುವುದು, ಸರ್ಕಾರದ ಕಾರ್ಯಕ್ಷಮತೆಗೆ ನೇರ ಅಡ್ಡಿಯಾಗುತ್ತದೆ. ಇದು ವಿಧಾನಸಭೆಯ ಸರ್ವೋಚ್ಚತೆ ಮತ್ತು ಜನಮತದ ಗೌರವವನ್ನು ಕುಗ್ಗಿಸುವ ಕ್ರಮವೆಂದು ಎಲ್ಡಿಎಫ್ ಸರ್ಕಾರ ಆರೋಪಿಸಿದೆ.
ತಮಿಳುನಾಡಿನಲ್ಲಿ ಆಯ್ಕೆಯಾದ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ರಾಜ್ಯಪಾಲರು ದೀರ್ಘಕಾಲ ಅನುಮೋದನೆ ನೀಡದೆ ತಡೆಹಿಡಿದಿರುವುದು ಸರ್ಕಾರದ ಆಡಳಿತ ಕಾರ್ಯಾಚರಣೆಗೆ ನೇರ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ನೀತಿ ನಿರ್ಣಯಗಳ ವಿರುದ್ಧ ರಾಜ್ಯಪಾಲರು ಬಹಿರಂಗವಾಗಿ ಮಾತನಾಡಿರುವುದು ಸಂವಿಧಾನಾತ್ಮಕ ತಟಸ್ಥತೆಯ ಮಿತಿಯನ್ನು ಮೀರುವ ನಡೆ ಎಂದು ಡಿಎಂಕೆ ಸರ್ಕಾರ ಟೀಕಿಸಿದೆ.
ವಿವಿಧ ರಾಷ್ಟ್ರಗಳಲ್ಲಿ ರಾಜ್ಯಪಾಲ ಹುದ್ದೆ
ಆಸ್ಟ್ರೇಲಿಯಾದಲ್ಲಿ ರಾಜ್ಯಪಾಲರ ಸಮಾನ ಹುದ್ದೆಯಾದ ಗವರ್ನರ್ ರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥನಾಗಿದ್ದರೂ, ಅವರ ಅಧಿಕಾರಗಳು ಬಹುತೇಕ ವಿಧಿವಿಧಾನಗಳಿಗೆ ಸೀಮಿತವಾಗಿವೆ. ಅವರು ಬ್ರಿಟಿಷ್ ರಾಜಸಂಸ್ಥೆಯ ಪ್ರತಿನಿಧಿಗಳಾಗಿದ್ದು, ರಾಜ್ಯ ಸರ್ಕಾರದ ಸಲಹೆಯಂತೆ ಕಾರ್ಯನಿರ್ವಹಿಸುತ್ತಾರೆ. ರಾಜಕೀಯ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡುವ ಪದ್ಧತಿ ಇಲ್ಲದಿರುವುದರಿಂದ, ಈ ಹುದ್ದೆ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಅಡ್ಡಿಯಾಗುವುದಿಲ್ಲ. ಇಲ್ಲಿ ರಾಜ್ಯಪಾಲರ ಹುದ್ದೆ ನೇರ ಸಾಧನವಾಗದೆ, ಸ್ಥಾಪಿತ ಉದಾರ ಪ್ರಜಾಪ್ರಭುತ್ವದ ಪ್ರತೀಕಾತ್ಮಕ ಅಂಗವಾಗಿ ಉಳಿದಿದೆ.
ಕೆನಡಾದಲ್ಲಿ ಪ್ರಾಂತ್ಯಗಳಿಗೆ ಲಿಫ್ಟಿನೆಂಟ್ ಗವರ್ನರ್ ಎಂಬ ಹುದ್ದೆ ಇದ್ದರೂ, ಅದು ರಾಜಕೀಯವಾಗಿ ಬಹುತೇಕ ನಿಷ್ಕ್ರಿಯವಾಗಿದೆ. ಫೆಡರಲ್ ಸರ್ಕಾರದಿಂದ ನೇಮಕವಾದರೂ, ಅವರು ಪ್ರಾಂತ್ಯ ಸರ್ಕಾರಗಳ ದಿನನಿತ್ಯದ ಕಾರ್ಯಗಳಲ್ಲಿ ತಲೆಹಾಕುವುದಿಲ್ಲ. ಸಂವಿಧಾನಾತ್ಮಕ ಅಧಿಕಾರಗಳಿದ್ದರೂ ಸಹ, ಪ್ರಜಾಪ್ರಭುತ್ವದ ಸಂಪ್ರದಾಯಗಳು ಮತ್ತು ಸಂಸ್ಥಾತ್ಮಕ ಶಿಸ್ತು ಈ ಹುದ್ದೆಯನ್ನು ನಿಯಂತ್ರಿಸುತ್ತವೆ. ಇದರಿಂದ ಕೇಂದ್ರ–ಪ್ರಾಂತ್ಯ ಸಂಬಂಧಗಳಲ್ಲಿ ಘರ್ಷಣೆ ಕಡಿಮೆ ಕಾಣಿಸುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ರಾಜ್ಯಪಾಲರ ಹುದ್ದೆಯೇ ಇಲ್ಲ. ಪ್ರತಿ ರಾಜ್ಯದಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗುವ ಗವರ್ನರ್ ಕಾರ್ಯನಿರ್ವಹಣಾಧಿಕಾರದ ಮುಖ್ಯಸ್ಥನಾಗಿರುತ್ತಾನೆ. ಕೇಂದ್ರ ಸರ್ಕಾರ ರಾಜ್ಯಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಯಾವುದೇ ನೇಮಕಾತಿ ವ್ಯವಸ್ಥೆ ಇಲ್ಲ. ಇದು ಫೆಡರಲಿಸಂನ ಬಲಿಷ್ಠ ರೂಪವಾಗಿದ್ದು, ರಾಜ್ಯಗಳ ಸ್ವಾಯತ್ತತೆಯನ್ನು ಕಾನೂನುಬದ್ಧವಾಗಿ ರಕ್ಷಿಸುತ್ತದೆ ಎಂದು ಭಾವಿಸಲಾಗಿದ್ದರೂ. ಈ ಸ್ವಾಯತ್ತತೆಯೂ ಬಂಡವಾಳಶಾಹೀ ಆಳುವ ವರ್ಗದ ಒಳಗಿನ ಅಧಿಕಾರ ಹಂಚಿಕೆಯ ಒಂದು ರೂಪವಾಗಿಯೇ ಕಾಣುತ್ತದೆ ಎಂದು ವಿಶ್ಲೇಷಿಸಲಾಗಿದೆ. ಏಕೆಂದರೆ ಅಧ್ಯಕ್ಷೀಯ ವ್ಯವಸ್ಥೆಯೇ ಒಂದು ಸೀಮಿತ ಅವಧಿಯ ಸರ್ವಾಧಿಕಾರಶಾಹಿಯಂತೆಯೇ ವರ್ತಿಸಿರುವುದು ಕಂಡು ಬಂದಿದೆ.
ಜರ್ಮನಿಯಲ್ಲಿ ಲ್ಯಾಂಡರ್ಗಳ ಆಡಳಿತಕ್ಕೆ ರಾಜ್ಯಪಾಲರಂತಹ ಪ್ರತ್ಯೇಕ ಹುದ್ದೆಯಿಲ್ಲ. ಪ್ರತಿ ಪ್ರಾಂತ್ಯಕ್ಕೆ ಸಚಿವಾಧ್ಯಕ್ಷ (Minister-President) ಎಂಬ ಚುನಾಯಿತ ಮುಖ್ಯಸ್ಥನಿದ್ದು, ಆಡಳಿತಾಧಿಕಾರ ಸಂಪೂರ್ಣವಾಗಿ ಅವರಲ್ಲಿ ಕೇಂದ್ರೀಕೃತವಾಗಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ಯಾವುದೇ ನೇಮಿತ ಹುದ್ದೆ ಇಲ್ಲದಿರುವುದರಿಂದ, ಫೆಡರಲಿಸಂ ಹೆಚ್ಚು ಪ್ರಜಾಪ್ರಭುತ್ವಾತ್ಮಕ ಸ್ವರೂಪವನ್ನು ಪಡೆಯುತ್ತದೆ. ಇದು ಕೇಂದ್ರದ ರಾಜಕೀಯ ಪ್ರಭಾವವನ್ನು ನಿಯಂತ್ರಿಸುವ ಒಂದು ಸಂಸ್ಥಾತ್ಮಕ ಮಾದರಿಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಅಪಾರ್ಥೈಡ್ ನಂತರ ರೂಪುಗೊಂಡ ಸಂವಿಧಾನಿಕ ವ್ಯವಸ್ಥೆಯಲ್ಲಿ ಪ್ರಾಂತ್ಯಗಳಿಗೆ ಪ್ರೀಮಿಯರ್ಗಳೇ ಮುಖ್ಯಸ್ಥರಾಗಿದ್ದಾರೆ. ರಾಜ್ಯಪಾಲರ ಸಮಾನ ಹುದ್ದೆಯನ್ನು ಇಲ್ಲಿ ಜಾಣ್ಮೆಯಿಂದ ಅಳವಡಿಸಲಾಗಿಲ್ಲ. ಇದರಿಂದ ಕೇಂದ್ರದಿಂದ ಪ್ರಾಂತ್ಯಗಳ ಮೇಲೆ ಹೇರಬಹುದಾದ ನಿಯಂತ್ರಣ ಕಡಿಮೆಯಾಗಿದ್ದು, ಜನಪ್ರತಿನಿಧಿ ಸಂಸ್ಥೆಗಳ ಪಾತ್ರ ಬಲಪಡಿಸಲಾಗಿದೆ. ಇದು ಇತಿಹಾಸಾತ್ಮಕ ದಮನದ ಅನುಭವದಿಂದ ಹೊರಬಂದ ರಾಜಕೀಯ ಪಾಠವಾಗಿಯೂ ನೋಡಬಹುದು.
ಈ ತೂಲನಾತ್ಮಕ ಅವಲೋಕನದಿಂದ ಸ್ಪಷ್ಟವಾಗುವುದು ಏನೆಂದರೆ, ಜನರಿಂದ ಚುನಾಯಿತವಾಗದ ಯಾವುದೇ ರಾಜ್ಯಪಾಲರಂತಹ ಹುದ್ದೆ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನಿವಾರ್ಯವಲ್ಲ. ಕೆಲವು ದೇಶಗಳಲ್ಲಿ ಅದು ಕೇವಲ ವಿಧಿವಿಧಾನಗಳ ಮಟ್ಟಿಗೆ ಸೀಮಿತವಾಗಿದ್ದರೆ, ಭಾರತಂಥ ರಾಷ್ಟ್ರಗಳಲ್ಲಿ ಅದು ಕೇಂದ್ರದ ವರ್ಗಹಿತಗಳನ್ನು ರಾಜ್ಯಗಳ ಮೇಲೆ ಜಾರಿಗೊಳಿಸುವ ರಾಜಕೀಯ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯಪಾಲ ಹುದ್ದೆ ಅಗತ್ಯವೇ?
ಭಾರತದ ಒಕ್ಕೂಟ ವ್ಯವಸ್ಥೆ ಒಂದು ನೈಜ ಒಕ್ಕೂಟ ವ್ಯವಸ್ಥೆಯಾಗಿ ಬದಲಾಗುತ್ತಿಲ್ಲ. ಕೇಂದ್ರ ಸರ್ಕಾರವು ಹಣಕಾಸು, ಭದ್ರತೆ ಮತ್ತು ಆಡಳಿತಾತ್ಮಕ ಯಂತ್ರಾಂಗಗಳ ಮೂಲಕ ರಾಜ್ಯಗಳನ್ನು ನಿಯಂತ್ರಿಸುವ ಪ್ರವೃತ್ತಿ ಹೊಂದಿದೆ. ಈ ನಿಯಂತ್ರಣಕ್ಕೆ ರಾಜ್ಯಪಾಲರ ಹುದ್ದೆ ಒಂದು ಪರಿಣಾಮಕಾರಿ ಸಾಧನವಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ವಕ್ತಾರನಂತೆ ವರ್ತಿಸುತ್ತಿದೆ.
ಭಾರತದಲ್ಲಿನ ರಾಜ್ಯಪಾಲರ ಹುದ್ದೆ ಜನರಿಂದ ಆಯ್ಕೆಯಾಗದ, ಮೇಲಿಂದ ನೇಮಕವಾಗುವ ಅಧಿಕಾರ ಸ್ಥಾನ. ಇದು ಸ್ವತಃ ಜನರ ಸಾರ್ವಭೌಮತೆಯ ತತ್ವಕ್ಕೆ ವಿರುದ್ಧವಾಗಿದೆ. ರಾಜ್ಯಪಾಲರು ನೇರವಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ; ಅಂದರೆ ಅವರು ರಾಜ್ಯದ ಜನತೆಗೆ ಅಲ್ಲ, ಕೇಂದ್ರದಲ್ಲಿರುವ ಆಳುವ ವರ್ಗದ ರಾಜಕೀಯ ಶಕ್ತಿಗೆ ಉತ್ತರದಾಯಿಗಳಾಗಿರುತ್ತಾರೆ. ಇದರಿಂದ ರಾಜ್ಯಪಾಲರ ಹುದ್ದೆ ಫೆಡರಲ್ ವ್ಯವಸ್ಥೆಯಲ್ಲಿ ಸಮನ್ವಯದ ಸಾಧನವಾಗುವುದಕ್ಕಿಂತ, ಕೇಂದ್ರದ ಪ್ರಾಬಲ್ಯವನ್ನು ರಾಜ್ಯಗಳ ಮೇಲೆ ಹೇರಲು ಬಳಸುವ ಉಪಕರಣದಂತೆ ಕಾಣುತ್ತಿದೆ.

ಈ ಮೊದಲು ಸಂವಿಧಾನದ ಕಲಮ 356 ನ್ನು ಕೇಂದ್ರದಲ್ಲಿ ಆಳ್ವಿಕೆ ನಡೆಸುವರಿಗೆ ಒಗ್ಗದ ಚುನಾಯಿತ ರಾಜ್ಯ ಸರಕಾರಗಳನ್ನು ಪದಚ್ಯುತಗೊಳಿಸಲು ಬಳಸಲಾಗುತ್ತಿತ್ತು. 1959ರಲ್ಲಿ ಕೇರಳದಲ್ಲಿ ಇ ಎಂಎಸ್ ನಂಬೂದಿರಿಪಾಡ್ ನೇತೃತ್ವದ ಸರಕಾರವನ್ನು ಉರುಳಿಸುವುದರೊಂದಿಗ ಆರಂಭಿಸಿ ಇದುವರೆಗೆ ಸುಮಾರ 130 ಬಾರಿ ಇದನ್ನು ಬಳಸಲಾಗಿದ್ದು, ಬಹುಪಾಲು ಸಂದರ್ಭಗಳಲ್ಲಿ ಇದನ್ನು ಚುನಾಯಿತು ಮತ್ತು ಬಹುಮತ ಹೊಂದಿರುವ ಸರಕಾರವನ್ನು ಉರುಳಿಸಲು ಬಳಸಲಾಗಿದೆ ಎಂದು ಮಾಹಿತಿಗಳು ಹೇಳುತ್ತವೆ. ಸುಪ್ರಿಂ ಕೋರ್ಟ್ ಕೆಲವ ಪ್ರಕರಣಗಳಲ್ಲಿ, ಮಧ್ಯಪ್ರವೇಶಿಸಿ ದನಂತರ ದುರ್ಬಳಕೆ ಬಹಳವಾಗಿ ಕಡಿಮೆಯಾಗಿದೆ.
ಆನಂತರ, ವಿಶೇಷವಾಗಿ 2014 ನಂತರ ರಾಜ್ಯಪಾಲರ ಹುದ್ದೆಯ ದುರ್ಬಳಕರಯ ಮೂಲಕ ಮುಂದುವರೆದಿರುವುದನ್ನು ನಾವು ಕಾಣುತ್ತಿದ್ದೇವೆ.
ಇತ್ತೀಚಿನ ರಾಜಕೀಯ ಅನುಭವಗಳು ಈ ವಿಶ್ಲೇಷಣೆಯನ್ನು ದೃಢಪಡಿಸುತ್ತವೆ. ಬಿಜೆಪಿಯೇತರ, ಜನಪರ ಅಥವಾ ಎಡಪಂಥೀಯ ಸರ್ಕಾರಗಳಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಆಡಳಿತಕ್ಕೆ ಅಡ್ಡಿಪಡಿಸುವುದು, ವಿಧೇಯಕಗಳನ್ನು ತಡೆಹಿಡಿಯುವುದು, ಸರ್ಕಾರ ರಚನೆ ಮತ್ತು ವಿಶ್ವಾಸಮತ ಪರೀಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವುದು, ಇವೆಲ್ಲವೂ ಆಯ್ಕೆಯಾದ ಜನಪರ ಸರ್ಕಾರಗಳನ್ನು ದುರ್ಬಲಗೊಳಿಸುವ ತಂತ್ರಗಳಾಗಿ ಬಳಸಲಾಗುತ್ತಿದೆ.
ನವಉದಾರೀಕರಣ ಹಂತದಲ್ಲಿ ರಾಜ್ಯಪಾಲರ ಪಾತ್ರವನ್ನು, ಇನ್ನಷ್ಟು ರಾಜಕೀಯಗೊಳಿಸಲಾಗಿದೆ, ಆಳುವವರ ಆಪ್ತ ವರ್ಗಗಗಳ ಹಿತಕ್ಕಾಗಿ ಅಧಿಕಾರಗಳ ಕೇಂದ್ರೀಕರಣದ ಇನ್ನೊಂದು ಸಾಧನವಾಗಿಯೂ ಬಳಕೆಯಾಗುತ್ತಿದೆ. ಖಾಸಗೀಕರಣ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು, ಭೂಸ್ವಾಧೀನ ಮತ್ತು ಸಂಪನ್ಮೂಲಗಳ ಲೂಟಿ—ಇವುಗಳಿಗೆ ಪ್ರತಿರೋಧ ತೋರಿಸುವ ರಾಜ್ಯ ಸರ್ಕಾರಗಳು ನವ-ಉದಾರವಾದೀ ಧೋರಣೆಗಳಿಗೆ ಅಂಟಿಕೊಂಡಿರುವ ಕೇಂದ್ರಕ್ಕೆ ಅಸಹನೀಯವಾಗುತ್ತವೆ. ಅಂಥ ಸಂದರ್ಭಗಳಲ್ಲಿ ರಾಜ್ಯಪಾಲರ “ಸಂವಿಧಾನಿಕ ವಿವೇಚನೆ” ಕಾರ್ಯಪ್ರವೃತ್ತವಾಗುತ್ತದೆ. ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳ ಮೇಲೆ ಕುಳಿತು ವಿಳಂಬ, ಆಡಳಿತಾತ್ಮಕ ಸರ್ಕಾರಗಳ ನೈತಿಕತೆಯನ್ನು ಪ್ರಶ್ನಿಸುವ ನಡೆ—ಇವೆಲ್ಲವೂ ಪಕ್ಷಪಾತದ ರಾಜಕೀಯ ಕ್ರಮಗಳೇ ಆಗಿವೆ.
ಸರ್ಕಾರಿಯ ಆಯೋಗ ಸೂಚಿಸಿರುವ ಮಾನದಂಡಗಳೇನು?
ಒಕ್ಕೂಟ ತತ್ವದ ಉಲ್ಲಂಘನೆಗಳಿಗೆ ಪ್ರತಿರೋಧ ಹಿನ್ನೆಲೆಯಲ್ಲಿನೇಮಕಗೊಂಡ ಸರ್ಕಾರಿಯ? ಆಯೋಗ ದಶಿಫಾರಸುಗಳು ಈ ದಿಕ್ಕಿನಲ್ಲ ಒಂದು ಮೈಲಿಗಲ್ಲು ಅದರ ಶಿಫಾರಸುಗಳನ್ನು ಈ ಕೆಳಗಿನಂತೆ ನೋಡಬಹುದು.
ರಾಜ್ಯಗಳಿಗೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರ ವ್ಯವಸ್ಥೆ, ಫೆಡರಲ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಿಕೆಯಾಗದ ಒಂದು ವ್ಯವಸ್ಥೆಯಾಗಿ ಮುಂದುವರಿದಿದೆ. ರಾಜ್ಯಪಾಲರ ಹುದ್ದೆಯನ್ನು ಮುಂದುವರೆಸಬೇಕಾದರೆ, ಸರ್ಕಾರಿಯಾ ಆಯೋಗ ಸೂಚಿಸಿರುವ ಮಾನದಂಡಗಳನ್ನು ಪೂರೈಸುವಂತೆ, ಮುಖ್ಯಮಂತ್ರಿ ಸೂಚಿಸುವ ಮೂರು ಗಣ್ಯ ವ್ಯಕ್ತಿಗಳ ಪಟ್ಟಿಯಿಂದ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಕ ಮಾಡಬೇಕು.
ಈ ವಿಷಯವನ್ನು ಅಂತರ-ರಾಜ್ಯ ಮಂಡಳಿಯಲ್ಲಿ (Inter-State Council) ಕೂಡ ಮರುಮರು ಚರ್ಚಿಸಲಾಗಿದೆ. ಫೆಡರಲ್ ಸಂವಿಧಾನ ಹೊಂದಿರುವ ವಿಶ್ವದ ಯಾವುದೇ ಪ್ರಮುಖ ದೇಶದಲ್ಲಿಯೂ, ರಾಜ್ಯದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡುವಂತಹ ವ್ಯವಸ್ಥೆ ಇಲ್ಲ.
ರಾಜ್ಯ ವಿಧಾನಸಭೆಗಳು ಅಂಗೀಕರಿಸುವ ಮಸೂದೆಗಳಿಗೆ ರಾಜ್ಯಪಾಲರು ಅನುಮೋದನೆ ನೀಡುವ ಕುರಿತು ಕಡ್ಡಾಯ ಕಾಲಮಿತಿಯನ್ನು ನಿಗದಿಪಡಿಸುವ ಅಗತ್ಯವೂ ಇದೆ. ಅಲ್ಲದೆ, ರಾಜ್ಯ ಸರ್ಕಾರದೊಂದಿಗೆ ಇರುವ ಭಿನ್ನಾಭಿಪ್ರಾಯಗಳು ಅಥವಾ ಅಸಮ್ಮತಿಗಳನ್ನು ರಾಜ್ಯಪಾಲರು ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನು ತಡೆಯುವ ಸ್ಪಷ್ಟ ಮಾನದಂಡಗಳ ಅಗತ್ಯವಿದೆಯೇ ಎಂಬುದನ್ನು ಚರ್ಚಿಸಬೇಕು.
ಸಿಪಿಐ(ಎಂ) ಪಕ್ಷವು ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕನಿಷ್ಠ ಪ್ರಜಾಸತ್ತಾತ್ಮಕ ಚೌಕಟ್ಟಾಗಿ ನೋಡಬಹುದು ಎಂದು ಹೇಳಿದೆ. ಕೇಂದ್ರ–ರಾಜ್ಯ ಸಂಬಂಧಗಳಲ್ಲಿ ಉಂಟಾಗಿರುವ ಹೆಚ್ಚುತ್ತಿರುವ ಕೇಂದ್ರಿಕರಣದ ಪ್ರವೃತ್ತಿಗೆ ವಿರುದ್ಧವಾಗಿ, ಸರ್ಕಾರಿಯಾ ಆಯೋಗವು ರಾಜ್ಯಗಳ ಸ್ವಾಯತ್ತತೆಯನ್ನು ರಕ್ಷಿಸುವ ಸಲಹೆಗಳನ್ನು ನೀಡಿದೆ ಎಂದು 2009 ರಲ್ಲಿ ಸಿಪಿಐ(ಎಂ) ವಾದಿಸಿತ್ತು.
ಇದನ್ನೂ ನೋಡಿ: ಕಾಂಗ್ರೆಸ್ನಿಂದ ರಾಜಭವನ ಚಲೋ, ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ
ರಾಜ್ಯಪಾಲರನ್ನು ಸಂವಿಧಾನಾತ್ಮಕ ಮುಖ್ಯಸ್ಥರಾಗಿ ವರ್ತಿಸಬೇಕಾದ ಬದಲು, ಅವರನ್ನು ಕೇಂದ್ರದ ರಾಜಕೀಯ ಹಿತಾಸಕ್ತಿಗಳಿಗೆ ಉಪಯೋಗಿಸಲಾಗುತ್ತಿದೆ ಎಂಬುದು ಪಕ್ಷದ ಆರೋಪವಾಗಿತ್ತು. 2009ರ ಹೊತ್ತಿಗೆ ವಿವಿಧ ರಾಜ್ಯಗಳಲ್ಲಿ ಕಂಡುಬಂದ ಅನುಭವಗಳನ್ನು ಆಧರಿಸಿ, ರಾಜ್ಯಪಾಲರ ನೇಮಕದಲ್ಲಿ ಪಕ್ಷಪಾತ ನಿವಾರಣೆ, ರಾಜ್ಯ ಸರ್ಕಾರಗಳ ವಿರುದ್ಧ ಅನಗತ್ಯ ವರದಿಗಳನ್ನು ತಡೆಯುವುದು ಹಾಗೂ ಸಂವಿಧಾನಾತ್ಮಕ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಿಯಾ ಆಯೋಗ ಶಿಫಾರಸು ಮಾಡಿದ ಅಂಶಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಸಿಪಿಐ(ಎಂ) ಒತ್ತಾಯಿಸಿತ್ತು.
Article 356 ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯ ದುರುಪಯೋಗವೂ ಸಿಪಿಐ(ಎಂ) ನಿಲುವಿನಲ್ಲಿ ಪ್ರಮುಖ ವಿಷಯವಾಗಿತ್ತು. ಸರ್ಕಾರಿಯಾ ಆಯೋಗ ಸೂಚಿಸಿದಂತೆ, ರಾಷ್ಟ್ರಪತಿ ಆಳ್ವಿಕೆಯನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸಬೇಕು ಮತ್ತು ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಮೊದಲ ಆದ್ಯತೆ ನೀಡಬೇಕು ಎಂಬ ಅಂಶಗಳನ್ನು ಪಕ್ಷವು ಬಲವಾಗಿ ಬೆಂಬಲಿಸಿತು.
ಪ್ರಜಾಪ್ರಭುತ್ವದಲ್ಲಿ ಅಂತಿಮ ಅಧಿಕಾರ ಜನರಿಗೇ ಸೇರಿದೆ. ಆ ಜನಾದೇಶದ ಮೇಲೆ ಸಂವಿಧಾನಾತ್ಮಕ ಮುಸುಕು ಹಾಕಿ ರಾಜಕೀಯ ಆಟ ಆಡುವ ಯಾವುದೇ ವ್ಯವಸ್ಥೆ, ಅದು ಎಷ್ಟೇ ಶುದ್ಧವಾದ ಆಡಳಿತ ನೀಡುತ್ತೇವೆ ಎಂದರೂ ದೀರ್ಘಕಾಲ ಉಳಿಯಲಾರದು.
