ಈ ಸಿನೆಮಾ ಭೂಮಿಯ ಹಕ್ಕಿಗಾಗಿ ಸಾವಿರಾರು ವರ್ಷಗಳಿಂದ ಆಸೆಗಣ್ಣಿನಿಂದ ಕಾಯುತ್ತಿರುವ ಭೂ ರಹಿತ ದಲಿತರ, ಕೂಲಿಕಾರರ ಕರುಳಿನ ಕಥೆ. ಅದೇ ರೀತಿ ಭೂಮಾಲಿಕರಾಗಿ ತಲತಲಾಂತರದಿಂದ ಬಡವರ ಬೆವರಿನ ಮೇಲೆ ಬಂಗಲೆಗಳನ್ನ ನಿರ್ಮಿಸಿಕೊಂಡು ಎಲ್ಲವನ್ನು ಅನುಭವಿಸುತ್ತಾ ದರ್ಪದಿಂದ ಮೆರೆಯುತ್ತಿರುವವರ ಬಣ್ಣ ಬಯಲು ಮಾಡುತ್ತಾ, ಶಿಕ್ಷಣ, ಸಂವಿಧಾನ ಕಾನೂನಿಗಿರುವ ಶಕ್ತಿ ಸಾಮರ್ಥ್ಯ ಮತ್ತು ಅದರಿಂದ ಸಿಗುವ ವಿಶ್ವಾಸ ಹಾಗೂ ಗೆಲುವಿನ ಪಾಠವನ್ನು ತಿಳಿಸುವ ಉತ್ತಮ ಪ್ರಯತ್ನ. ಲ್ಯಾಂಡ್ ಲಾರ್ಡ್
– ಹೆಚ್.ಆರ್.ನವೀನ್ ಕುಮಾರ್, ಹಾಸನ
ಯಾವುದೇ ಒಂದು ಅನಿಷ್ಟ ಮತ್ತು ಶೋಷಣಾ ವ್ಯವಸ್ಥೆಯನ್ನು ಇಲ್ಲವಾಗಿಸಿ ಹೊಸದಾಗಿ ಸಮಸಮಾಜ ನಿರ್ಮಾಣವಾಗಬೇಕಾದರೆ ಅದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ, ಅದನ್ನ ಜನಸಮುದಾಯವೇ ನಿರ್ಮಿಸುವುದು ಎಂಬುದನ್ನು ಇತಿಹಾಸದಲ್ಲಿ ಕಲಿತ ಪಾಠ. ಆದರೆ ಪ್ರತಿ ಆರಂಭಕ್ಕೂ ಒಬ್ಬ ವ್ಯಕ್ತಿಯೋ, ಒಂದು ಘಟನೆಯೋ ಕಾರಣವಾದಂತೆ ಇಲ್ಲಿಯೂ ಕೊಡಲಿ ರಾಚಯ್ಯನ ರೂಪದಲ್ಲಿ ವ್ಯಕ್ತವಾಗಿದೆ. ದುನಿಯಾ ವಿಜಯ್ ಅವರ ಹಿಂದಿನ ಸಿನಿಮಾಗಳ ರೀತಿಯಲ್ಲಿ ಅವರನ್ನು ಹೀರೋವಾಗಿ ಕಟ್ಟಿಕೊಡಲು ಹೋಗಿ ಅಗತ್ಯಕ್ಕಿಂತ ಹೆಚ್ಚು ಫೈಟ್ ಗಳನ್ನು, ರಕ್ತಪಾತವನ್ನು ಮತ್ತು ಅವುಗಳು ಸ್ವಲ್ಪ ವಾಸ್ತವಕ್ಕೆ ದೂರವಿರುವಂತೆ ಚಿತ್ರಿಸಲಾಗಿದೆ.
ಅವರನ್ನು ಹೀರೋವಾಗಿ ಕಟ್ಟಿಕೊಡಲು ಹೋಗಿ ಅಗತ್ಯಕ್ಕಿಂತ ಹೆಚ್ಚು ಫೈಟ್ ಗಳನ್ನು, ರಕ್ತಪಾತವನ್ನು ಮತ್ತು ಅವುಗಳು ಸ್ವಲ್ಪ ವಾಸ್ತವಕ್ಕೆ ದೂರವಿರುವಂತೆ ಚಿತ್ರಿಸಲಾಗಿದೆ.ಆದರೆ ಅದೇ ರಾಚಯ್ಯ ನಮ್ಮ ಬೆಳಕಿನ ದಾರಿ ಇರುವುದು ಶಿಕ್ಷಣ ಪಡೆಯುವುದರಿಂದ, ಭೂಮಿ ಪಡೆಯುವುದರಿಂದ ಮತ್ತು ಸಂವಿಧಾನವನ್ನು ಅದರ ಆಶಯವನ್ನು ಹಳ್ಳಿಹಳ್ಳಿಗೂ ತಲುಪಿಸುವುದರಿಂದ ಎಂಬುದನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ನಿರ್ದೇಶಕರಾದ ಜಡೇಶ್ ಯಶಸ್ವಿಯಾಗಿದ್ದಾರೆ. ಸಿನಿಮಾದುದ್ದಕ್ಕೂ ಬರುವ ಹಲವು ಡೈಲಾಗ್ ಗಳು ಕೇಲವ ಥಿಯೇಟರ್ ಸೀಟ ತುದಿಯಲ್ಲಿ ಕುಳಿತು ಸಿಳ್ಳೆ ಹೊಡೆದು ಕೇಕೆ ಹಾಕುವುದಕ್ಕಾಗಿ ಮಾತ್ರವಲ್ಲ, ಬದಲಾಗಿ ನಮ್ಮನ್ನ ಚಿಂತನೆಗೂ ಹಚ್ಚುವಲ್ಲಿ ಸಹಕಾರಿಯಾಗಲಿವೆ.
ಭೂಮಿಯ ಒಡೆತನವೇ ಎಲ್ಲದಕ್ಕೂ ಮುಖ್ಯ ಅದನ್ನು ಯಾವ ಕಾರಣಕ್ಕೂ ಇಲ್ಲದವರಿಗೆ, ತಳವರ್ಗದವರಿಗೆ, ದಲಿತರಿಗೆ, ಕೂಲಿಕಾರರಿಗೆ ಕೊಡಬಾರದು, ಆಮೂಲಕ ಅವರನ್ನು ಸಮಾನವಾಗಿ ಕಾಣುವ ವ್ಯವಸ್ಥೆಯನ್ನ ಕಲ್ಪಿಸಿಕೊಳ್ಳಲೂಬಾರದು ಎಂಬ ಭೂಮಾಲಕ ವ್ಯವಸ್ಥೆಯ ಕ್ರೌರ್ಯ, ಅದರ ದಬ್ಬಾಳಿಕೆ, ತನ್ನ ಕೈಯಲ್ಲಿ ಪೊಲೀಸ್, ಅಧಿಕಾರ, ರಾಜಕಾರಣ ಎಲ್ಲವೂ ನಿಯಂತ್ರಣದಲ್ಲಿರಬೇಕು, ನಾನು ಹೇಳಿದಂತೆ ನಡೆಯಬೇಕು ಎಂದು ಬಯಸುವ ಮತ್ತು ಹಾಗೆ ವ್ಯವಸ್ಥೆಯನ್ನು ನಿರ್ಮಿಸುವುದನ್ನು ಅತ್ಯಂತ ಮನೋಗ್ನವಾಗಿ ಕಟ್ಟಿಕೊಡಲಾಗಿದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಆಳುವ “ಪ್ರಭುತ್ವ” ಎನ್ನುವುದು. ಈ ಪ್ರಭುತ್ವದ ಕೈಯಲ್ಲಿ ಅಧಿಕಾರ, ಕಾನೂನು, ಪೊಲೀಸ್, ರಾಜಕೀಯ ವ್ಯವಸ್ಥೆ ಎಲ್ಲವೂ ಇರುತ್ತದೆ. ಹಿಂದೆ ಇದು ಭೂಮಾಲಿಕರ ಕೈಯಲ್ಲಿತ್ತು, ಈಗ ಅದು ಬಂಡವಾಳಶಾಹಿಗಳ ಕೈಯಲ್ಲಿದೆ.
ಇದನ್ನೂ ಓದಿ : ಸಂಡೂರು | ಒಂಟಿ ಮಹಿಳೆಯರಿಗೆ ಬಜೆಟ್‌ನಲ್ಲಿ ಶೇ33ರಷ್ಟು ಪುನರ್ವಸತಿಗೆ ಅನುದಾನ ಮೀಸಲಿಡಿ
ಈ ದೇಶದಲ್ಲಿ ಭೂಮಾಲಿಕ ವ್ಯವಸ್ಥೆ ವಿರುದ್ದ ರೈತರು, ಕೂಲಿಕಾರರು ಹೋರಾಟ ಮಾಡಿ ಹೊಸ ಇತಿಹಾಸ ನಿರ್ಮಿಸಿರುವ ಹಲವು ಘಟನೆಗಳಿವೆ. ಕರ್ನಾಟಕದ ಮಂಗಳೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಡೆದ ಗೇಣಿದಾರರ ಹೋರಾಟ, ಅಮರಸುಳ್ಯ ರೈತರ ಹೋರಾಟ, ಹೆಬ್ಬಳ್ಳಿ ಭೂಹೋರಾಟ, ಕೋಲಾರದ ಜೋಡಿ ಇನಾಮ್ತಿ ವಿರುದ್ದದ ಹೋರಾಟ, ಕಾಗೋಡು ಭೂ ಹೋರಾಟ, ನಾಗಸಂದ್ರ ಭೂಹೋರಾಟ, ಕೇರಳದ ಕಯ್ಯೂರು ರೈತ ಹೋರಾಟ, ತೆಲಂಗಾಣ ರೈತರ ಸಶಸ್ತ್ರ ಹೋರಾಟ, ಪುನ್ನಪವೈಲಾರ್, ತೇಬಾಗ ಮತ್ತು ವಾರಲಿ ಆದಿವಾಸಿಗಳ ಭೂಹೋರಾಟಗಳು ಸೇರಿದಂತೆ ಇನ್ನೂ ಹಲವು ಭೂ ಹೋರಾಟಗಳು ಚರಿತ್ರೆಯಲ್ಲಿ ತಳವರ್ಗದ ಜನ ಒಟ್ಟಾಗಿ ನಡೆಸಿದ ಸಂಘಟಿತ ಯಶಸ್ವೀ ಹೋರಾಟವಾಗಿ ಅಚ್ಚಳಿಯದೆ ದಾಖಲಾಗಿವೆ.
ಈಗಲೂ ನಾವು ಸ್ವತಂತ್ರ ದೇಶ, ಸಂವಿಧಾನವನ್ನು ಒಪ್ಪಿಕೊಂಡ ದೇಶ ಆದರೆ ಅದೇ ಸಂವಿಧಾನವನ್ನು ಇದೇ ಪ್ರಭುತ್ವ ಸಂಪೂರ್ಣವಾಗಿ ಟೊಳ್ಳಾಗಿಸಲು ಪ್ರತ್ನಿಸುತ್ತಿದೆ. ಅಂತಹ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲ ಘೋಷಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಇವುಗಳನ್ನು ಪ್ರಯೋಗಿಸಿ ಒಂದು ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ. ಅದಕ್ಕೆ ಜನತೆ ಒಂದಾಗಿ ಈ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು, ತನ್ನ ಶೋಷಣೆಗೆ ಕಾರಣಗಳನ್ನು ಕಂಡುಕೊಂಡು, ತಮ್ಮ ಶತೃಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು, ಜಾಗೃತರಾದರೆ ಬದಲಾವಣೆ ಕಟ್ಟಿಟ್ಟ ಬುತ್ತಿ ಮತ್ತು ಸಮತೆಯ ನಾಡಿನ ಉದಯ.
ಸಿನೆಮಾದಲ್ಲಿ ಜಾತಿಪದ್ದತಿಯ ಕ್ರೌರ್ಯ, ಕೂಲಿಕಾರರ ಮೇಲಿನ ದಬ್ಬಾಳಿಕೆ, ಅವರು ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟ, ಮಾನವ ಸಮಾಜ ತಲೆತಗ್ಗಿಸುವ ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ದತಿಯನ್ನು ಇದರಲ್ಲಿ ತಂದಿರುವುದು ಜನರ ಇಂದಿನ ಬದುಕಿನ ಬಗ್ಗೆ ಒಂದು ಕಲಾಪ್ರಕಾರ ಸ್ಪಂದನೆ ನೀಡಿದಂತಾಗಿದೆ.
ಕೊನೆಯಲ್ಲಿ ಭೀಮಬಂದ ಎಂಬ ಮಾತು ಎಲ್ಲಾ ಶೋಷಿತರ ಪರವಾಗಿ ಅಂಬೇಡ್ಕರ್ ಬಂದತೆ ಅದನ್ನು ಸಮೀಕರಿಸಲಾಗಿದೆ.ತಳವರ್ಗದವರ ಮತ್ತು ಈ ನಾಡಿನ ಕಥೆಗಳನ್ನು ದೊಡ್ಡ ಪರದೆಯ ಮೇಲೆ, ಮತ್ತು ಈಗಾಗಲೇ ಒಂದು ರೀತಿಯ ಇಮೇಜ್ ಗಳನ್ನು ಕಟ್ಟಿಕೊಂಡಿರುವ ಹೀರೋಗಳ ಕೈಯಲ್ಲಿ ಮಾಡಿಸುವುದು ಸಾಹಸದ ಕೆಲಸವೇ ಅದರಲ್ಲಿ ಎಲ್ಲರೂ ಯಶಸ್ವಿಯಾಗಿದ್ದಾರೆ ಜೊತೆಗೆ ಒಂದು ಕಮರ್ಷಿಯಲ್ ನಿನಿಮಾಗೆ ಬೇಕಾದ ರೀತಿಯಲ್ಲಿ ಕಥೆಯನ್ನು ಹೆಣೆದಿದ್ದಾರೆ.
ಕೊನೆಯಲ್ಲಿ ರಾಚಯ್ಯನಿಗೆ ತನ್ನ ತಾಯಿ ಆಯುಧ ಕೊಡುವುದನ್ನ ಶ್ರೀಕೃಷ್ಣ ಅರ್ಜುನನಿಗೆ ಕೊಟ್ಟಂತೆ ಚಿತ್ರಿಸಲಾಗಿದೆ. ಇದು ಮತ್ತೆ ನಮ್ಮನ್ನ ನಮ್ಮ ಜನಶಕ್ತಿಯ ವಿಶ್ವಾಸಕ್ಕಿಂತ ಹಿಂದಿನ ಪಾಳೆಗಾರಿ ವೈದಿಕ ಶಾಹಿಗೆ ಕರೆದೊಯ್ಯುವಂತೆ ಭಾಸವಾಗುತ್ತದೆ.
ರಾಚಯ್ಯನ ಪಾತ್ರದ ದುನಿಯಾ ವಿಜಯ್ ಇಂದ ಹಿಡಿದು, ರಚಿತಾ ರಾಮ್, ವಿಜಯ್ ಮಗಳು, ಉಮಾಶ್ರೀ, ಲ್ಯಾಂಡ್ ಲಾರ್ಡ್ ಪಾತ್ರದಲ್ಲಿ ರಾಜ್ ಬಿಶೆಟ್ಟಿಯ ನಟನೆ ಗಮನ ಸೆಳೆಯುತ್ತದೆ. ಬಿ.ಸುರೇಶ್, ಅಚ್ಚುತ್ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲಾ ಅಬ್ಬರಗಳ ನಡುವೆ ನಮ್ಮೆಲ್ಲರನ್ನು ಚಿಂತನೆಗೆ ಹಚ್ಚುವ ನೆಲಮೂಲ ಜನರ ಕಥೆ ಹೇಳುವ “ಲ್ಯಾಂಡ್ ಲಾರ್ಡ್” ಸಿನಿಮಾವನ್ನು ಎಲ್ಲರೂ ನೋಡಿ ಅದರ ವಸ್ತುವನ್ನು ಕುರಿತು ಚರ್ಚಿಸಿ.
ಇದನ್ನೂ ನೋಡಿ : ಕುವೆಂಪು ಸಾಹಿತ್ಯ| ಭಾವನೆಗೂ ಮೀರಿದ ವೈಚಾರಿಕ ಬಂಡಾಯ – ಡಾ.ಬಂಜಗೆರೆ ಜಯಪ್ರಕಾಶ Janashakthi Media
