ಹಾವೇರಿ | ಗಾಳಿಗೆ ಬೃಹತ್ ಪೆಂಡಾಲ್ ಕುಸಿತ : ವಿಚಲಿತರಾದ ಸಚಿವ ಸತೀಶ್ ಜಾರಕಿಹೊಳಿ

ಹಾವೇರಿ: ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿದ ಪರಿಣಾಮ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ  ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಬೃಹತ್ ಪೆಂಡಾಲ್ ಕುಸಿದುಬಿದ್ದ ಘಟನೆ ರಾಣೆಬೆನ್ನೂರು ನಗರದಲ್ಲಿಂದು ನಡೆದಿದೆ.

ಸಚಿವರ ಬೆನ್ನಹಿಂದೆಯೇ ಈ ಪೆಂಡಾಲ್ ಇತ್ತು. ಪೆಂಡಾಲ್ ಕುಸಿಯುತ್ತಿದ್ದಂತೆಯೇ ಸಚಿವರು ಹಾಗೂ ಅಲ್ಲಿದ್ದವರು ಕ್ಷಣ ಕಾಲ ವಿಚಲಿತರಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ರಾಣೆಬೆನ್ನೂರು ನಗರದಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕ್ರಮ ಮುಗಿಸಿ ಇನ್ನೇನು ತೆರಳಬೇಕಿತ್ತು. ಅಲ್ಲಿ ಸೇರಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಧೂಳು ಮಿಶ್ರಿತ ಭಾರೀ ಸುಂಟರಗಾಳಿ ಬೀಸಿದ್ದು, ಗಾಳಿಗೆ ಕಾರ್ಯಕ್ರಮಕ್ಕೆಂದು ಪೆಂಡಾಲ್ ಏಕಾಏಕಿ ಕುಸಿದು ಬಿದ್ದಿದೆ.

ಇದನ್ನೂ ಓದಿ : ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಅನುಮೋದನೆ | ರೈತರ ಭೂಮಿ ಕಸಿದುಕೊಳ್ಳಲು ಸಿದ್ಧತೆ

ಮನರೇಗಾ ಯೋಜನೆಯಿಂದ ಗಾಂಧಿಜಿ ಹೆಸರು ತೆಗೆದಿದ್ದಾರೆ. ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎನ್ನುತ್ತಾರೆ. ನಾವು ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕು. ಗಟ್ಟಿಯಾಗಿ ನಿಲ್ಲದಿದ್ದರೆ ಇತಿಹಾಸದಲ್ಲಿ ಅಳಿಸುವ ಪ್ರಯತ್ನ ಮಾಡಬಹುದು. ಘಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರು ಇದೀಗ ಗಾಂಧಿ ವಿರೋಧ ಮಾಡುತ್ತಿದ್ದಾರೆ. ಮುಂದೆ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧ ಮಾಡಿದರೂ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯವರು ಗಾಂಧಿಜಿಯಿಂದ ಸ್ವತಂತ್ರ ಸಿಗಲಿಲ್ಲ ಎನ್ನುತ್ತಾರೆ.ನಮಗೆ ಗಾಂಧಿಜಿ, ಅಂಬೇಡ್ಕರ್, ಬಸವಣ್ಣನವರು ಪ್ರಸ್ತುತ ದಿನಗಳಲ್ಲಿ ಎಷ್ಟು ಅವಶ್ಯಕ ಎನ್ನುವ ಕುರಿತಂತೆ ತಿಳಿದುಕೊಳ್ಳಬೇಕು. ಅವರ ಹೆಸರು ಇತಿಹಾಸದಿಂದ ಅಳಸಿಹಾಕದಂತೆ ನೋಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ನಾವು ಹೋರಾಟ ಮಾಡಬೇಕು. ವಿಮಾನ ನಿಲ್ದಾಣಗಳ ಹೆಸರಿಗೆ ಬೇರೆ ಬೇರೆ ಹೆಸರಿಡುವ ಮೂಲಕ ಈ ರೀತಿಯ ಬದಲಾವಣೆಗೆ ಬಿಜೆಪಿ ಮುನ್ಸೂಚನೆ ಬರೆದಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ತನಿಖೆ ಬಳಿಕ ರಾಜಕೀಯ ವ್ಯಕ್ತಿಗಳ ಪಾತ್ರನೋ, ಅಧಿಕಾರಿಗಳ ಪಾತ್ರನೋ ಗೊತ್ತಾಗುತ್ತದೆ. ಬಳ್ಳಾರಿ ಘಟನೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅವರ ಮೇಲೆ ಕ್ರಮ ಆಗಿದೆ. ಮೇಲ್ನೋಟಕ್ಕೆ ಎಸ್ಪಿ ಕರ್ತವ್ಯಲೋಪ ಕಂಡುಬಂದಿದೆ. ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆಯಿಲ್ಲ. ನಮ್ಮ ಪೊಲೀಸರೇ ಮಾಡುತ್ತಿದ್ದಾರೆ. ಅದರ ಅವಶ್ಯಕತೆ ಬಿದ್ದಾಗ ನೋಡೋಣ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ನಡೆದ ಘಟನೆಯನ್ನು ತಡೆಯಬಹುದಿತ್ತು. ಅದರಲ್ಲಿ ನಿರ್ಲಕ್ಷ್ಯವಹಿಸಿದ್ದರಿಂದ ಪೊಲೀಸ್ ಅಧಿಕಾರಿಯ ಅಮಾನತಾಗಿದೆ. ಬಳ್ಳಾರಿಯಲ್ಲಿ ನಡೆದಿದ್ದು ಸಣ್ಣ ಘಟನೆ. ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಸಣ್ಣ ಗಲಾಟೆ ಇಷ್ಟು ದೊಡ್ಡ ಪ್ರಮಾಣಕ್ಕೆ ಹೋಗಬಾರದಿತ್ತು. ಈ ರೀತಿಯ ಘಟನೆಗಳು ಆಗುತ್ತಿರುತ್ತವೆ. ಆದಾಗ ಕಠಿಣ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯ. ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣಿಯಾಗುತ್ತೋ ಪುನರಚನೆಯಾಗುತ್ತೋ ಅದನ್ನು ಹೇಳುವ ಸ್ಥಾನದಲ್ಲಿ ನಾನಿಲ್ಲ. ಮುಂದೆ ಕಾದುನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇದನ್ನೂ ನೋಡಿ : ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಪತ್ರ ಚಳವಳಿ Janashakthi Media

Donate Janashakthi Media

Leave a Reply

Your email address will not be published. Required fields are marked *