ಮುಡಾ ಹಗರಣ: ಡಿ. 23ರಂದು ಕೇಸ್‌ ಡೈರಿಯನ್ನು ಸಲ್ಲಸಿ: ವಿಶೇಷ ನ್ಯಾಯಾಲಯ

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಡಿಸೆಂಬರ್‌ 23ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಧಿಕ್ರಮ ಹಂಚಿಕೆ ಪ್ರಕರಣದ ಕೇಸ್‌ ಡೈರಿಯನ್ನು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ. ಪಾರ್ವತಿ ಸೇರಿ ಇತರರಿಗೆ ಕ್ಲೀನ್‌ಚಿಟ್‌ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ನ ಆಕ್ಷೇಪಣಾ ಅರ್ಜಿ ಕುರಿತು ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಹಾಜರಿದ್ದ ಲೋಕಾಯುಕ್ತ ವಿಶೇಷ ಸರಕಾರಿ ಆಭಿಯೋಜಕ ವೆಂಕಟೇಶ್‌ ಅರಬಟ್ಟಿ, ಪ್ರಕರಣದಲ್ಲಿಇದುವರೆಗೂ ನಡೆಸಿದ ತನಿಖಾ ವರದಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಪ್ರಕರಣದಲ್ಲಿ ಒಂದು ಹಂತದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಹಿರಿಯ ಅಧಿಕಾರಿಗಳ ಅಂತಿಮ ಪರಿಶೀಲನೆಯಲ್ಲಿದೆ. ಬಳಿಕ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ವಿರುದ್ಧ ಸರಕಾರದಿಂದ ಪೂರ್ವಾನುಮತಿ ಪಡೆದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು,” ಎಂದು ತಿಳಿಸಿದರು.

ಇದನ್ನೂ ಓದಿ: ಸಂಸ್ಕರಣೆ ಮಾಡದೆ ನದಿಗಳಿಗೆ ನೀರು ಹರಿಸುವ 11 ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು

ಕೇಸ್‌ ಡೈರಿಯನ್ನು ಡಿ.23ಕ್ಕೆ ಸಲ್ಲಿಸುವಂತೆ ಲೋಕಾಯುಕ್ತಗೆ ಸೂಚನೆ

”ದೂರುದಾರರು ತನಿಖೆಯ ಮೇಲೆ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಲಾಗಿದ್ದು, ಸರಕಾರಿ ಅಧಿಕಾರಿಗಳ ಲೋಪದ ಕುರಿತ ತನಿಖಾ ವರದಿಯು ಸಿದ್ಧವಿದೆ. ಅದನ್ನು ದೂರುದಾರರಿಗೂ ನೀಡುತ್ತೇವೆ. ಆದರೆ, ವರದಿ ಬಹಿರಂಗಪಡಿಸದಂತೆ ನಿರ್ಬಂಧ ವಿಧಿಸಬೇಕು,” ಎಂದು ನ್ಯಾಯಾಲಯವನ್ನು ಕೋರಿದರು. ಈ ವಾದ ಪುರಸ್ಕರಿಸಿದ ನ್ಯಾಯಾಲಯ, ಪ್ರಕರಣದ ತನಿಖಾ ವರದಿಯ ಕೇಸ್‌ ಡೈರಿಯನ್ನು ಡಿ.23ಕ್ಕೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿತು.

‘ಬಿ’ ರಿಪೋರ್ಟ್‌ ಆಕ್ಷೇಪಿಸಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ಸಂಬಂಧ ಹೆಚ್ಚಿನ ವಾದ ಮಂಡಿಸುವುದಿದ್ದರೆ ಮಂಡಿಸಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ, ಮಧ್ಯಂತರ ಅರ್ಜಿದಾರರಾಗಿರುವ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ ನ್ಯಾಯಾಲಯವು ವಿಚಾರಣೆ ಮುಂದೂಡಿತು.

ದಿನೇಶ್‌ ಪುನಃ ಜೈಲಿಗೆ

ಮುಡಾ ನಿವೇಶನ ಅಧಿಕ್ರಮ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನವಾಗಿದ್ದ ಮುಡಾದ ಮಾಜಿ ಆಯುಕ್ತ ಜಿ.ಟಿ ದಿನೇಶ್‌ಕುಮಾರ್‌ ಅವರನ್ನು ಕೋರ್ಟ್‌ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಡಿ.16ರಂದು ಇಡೀ ದಿನ ತನಿಖಾಧಿಕಾರಿಗಳು ದಿನೇಶ್‌ ವಿಚಾರಣೆ ನಡೆಸಿ ಲಿಖಿತ ಹೇಳಿಕೆ ದಾಖಲಿಸಿಕೊಂಡಿದ್ದರು. ಪುನಃ ಅದೇ ದಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಟ್ಟಿದ್ದಾರೆ.

ಇದನ್ನೂ ನೋಡಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media

Donate Janashakthi Media

Leave a Reply

Your email address will not be published. Required fields are marked *