ಕೇರಳದ ‘ತೀವ್ರ ಬಡತನ ನಿರ್ಮೂಲನಾ’ ಕಾರ್ಯಕ್ರಮ: ಇಪಿಇಪಿ – ಅಸಾಧಾರಣ ಸಾಧನೆ ಮತ್ತು ತಿಳುವಳಿಕೆಯಿಲ್ಲದ ಟೀಕೆಗಳು

ಕೇರಳವು ಎಲ್‍ಡಿಎಫ್‍ ಸರಕಾರದ ‘ತೀವ್ರ ಬಡತನ ನಿವಾರಣಾ ಕಾರ್ಯಕ್ರಮ’ (ಇಪಿಇಪಿ)ಮೂಲಕ ‘ತೀವ್ರ ಬಡತನ’ವನ್ನು ನಿವಾರಿಸಿದ ನಮ್ಮ ದೇಶದ ಮೊದಲ ರಾಜ್ಯವಾಗಿರುವುದನ್ನು ಹಲವರು ಅಭಿನಂದಿಸಿದರೆ, ಕೆಲವರು, ಈ ಬಗ್ಗೆ ಸಿನಿಕತವನ್ನು ಪ್ರದರ್ಶಿಸಿದ್ದಾರೆ, ಇನ್ನು ಕೆಲವರು, ವಿಶೇಷವಾಗಿ ಕಳೆದ ಒಂದು ದಶಕದಲ್ಲಿ, ಜಿಡಿಪಿ, ಬಡತನದ ರೇಖೆ ಮುಂತಾದ ಅಂಕಿ-ಅಂಶಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ತೀವ್ರ ಟೀಕೆ – ಟಿಪ್ಪಣಿಗಳನ್ನೂ ಮಾಡಿದ್ದಾರೆ. ಇಪಿ ಇಪಿ1.0 ಬಗ್ಗೆ ಈ ರೀತಿಯಲ್ಲಿಆಧಾರರಹಿತ ಟೀಕೆಗಳು ಮತ್ತು ಸರಿಯಾದ ತಿಳುವಳಿಕೆ ಇಲ್ಲದ ಪ್ರಶ್ನೆಗಳನ್ನು ಎತ್ತುವುದು ಒಂದು ಅಸಾಧಾರಣ ಶ್ಲಾಘನೀಯ ಪ್ರಜಾಸತ್ತಾತ್ಮಕ ಕಾರ್ಯಕ್ರಮ ಮತ್ತು ಅದರ ಹಿಂದಿರುವ ರಾಜಕೀಯದ ಬಗ್ಗೆ ಅಸಡ್ಡೆ ಮತ್ತು ತಿರಸ್ಕಾರವನ್ನು ತೋರಿಸುತ್ತದಷ್ಟೆ ಎನ್ನುತ್ತಾರೆ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಈ ಲೇಖಕರು. ಕೇರಳ ರಾಜ್ಯ ಯೋಜನಾ ಮಂಡಳಿಯ ಸದಸ್ಯರೂ ಆಗಿರುವ ಲೇಖಕರು, “ಬಡತನ” ಮಾತ್ರವಲ್ಲ, “ತೀವ್ರ ಬಡತನ” ದ ವ್ಯಾಖ್ಯಾನವೂ ಬಹಳ ವಿವಾದಾಸ್ಪದವಾಗಿರುವ ವಿಷಯ ಎಂಬುದು 2021ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿದಾಗ ಕೇರಳ ಸರ್ಕಾರಕ್ಕೆ ಚೆನ್ನಾಗಿ ತಿಳಿದಿತ್ತು ಎನ್ನುತ್ತ  ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ರೀತಿಯನ್ನು, ಮತ್ತು ಹಲವರು ಎತ್ತಿರುವ ಪ್ರಶ್ನೆಗಳನ್ನು ಲೇಖನದಲ್ಲಿ ಪರಿಶೀಲಿಸಿದ್ದಾರೆ. ಬಡತನ ನಿರ್ಮೂಲನೆ ಒಂದು ನಿರಂತರ ಪ್ರಕ್ರಿಯೆಯಾಗಿದೆ –ಅದುಯಾವಾಗಲೂ ಚಲನಶೀಲ ಮತ್ತು ಎಂದಿಗೂ ನಿಶ್ಚಲವಲ್ಲ ಎಂದೂ ಅವರು ನೆನಪಿಸುತ್ತಾರೆ.

-ಮೂಲ: ಪ್ರೊ. ಆರ್. ರಾಮಕುಮಾರ್

-ಅನುವಾದ: ಜಿ .ಎಸ್ಮಣಿ

ನವೆಂಬರ್ 1, 2025 ರಂದು, ಕೇರಳ ಸರ್ಕಾರವು ರಾಜ್ಯದಲ್ಲಿ “ತೀವ್ರ ಬಡತನ”ವನ್ನು ಕೊನೆಗೊಳಿಸಿದೆ ಎಂದು ಘೋಷಿಸಿತು.ಈ ಸಾಧನೆಯನ್ನು ನೀತಿ ನಿರೂಪಕರು, ನಾಗರಿಕ ಸಮಾಜ ಕಾರ್ಯಕರ್ತರು ಮತ್ತು ಸಾಮಾನ್ಯ ಜನರು ವ್ಯಾಪಕವಾಗಿ ಸ್ವಾಗತಿಸಿದರು.ಕೇರಳದಂತಹ ರಾಜ್ಯಮಾತ್ರ – ಅದರ ಸಾಮಾಜಿಕ ರಾಜಕೀಯ ಪರಂಪರೆಯ ಹಿನ್ನೆಲೆಯಲ್ಲಿ – ಸಮಕಾಲೀನ ಭಾರತೀಯ ಸಮಾಜದಲ್ಲಿ ಉಳಿದುಕೊಂಡಿರುವ ಮತ್ತು ಮುಂದುವರಿಯುತ್ತಿರುವ ವಿವಿಧ ರೀತಿಯ ತೀವ್ರ ಬಡತನ ಮತ್ತು ಅಭಾವವನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಬಹುದು ಎಂದು ಅನೇಕ ವೀಕ್ಷಕರು ಗಮನಸೆಳೆದರು.

ಕೇರಳವು 1970 ರ ದಶಕದಿಂದಲೇ ತನ್ನ ವಿಶಿಷ್ಟ ಅಭಿವೃದ್ಧಿ ಪ್ರಯೋಗಗಳ ಅನುಭವಕ್ಕಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಆಗ ಭಾರತದ ಇತರ ಕೆಲವು ರಾಜ್ಯಗಳಿಗಿಂತ ಅದರ ತಲಾ ಆದಾಯ ಕಡಿಮೆ ಇದ್ದರೂ ಸಹ, ಹಲವಾರು ಸಾಮಾಜಿಕ ಸೂಚಕಗಳಲ್ಲಿ ಜಾಗತಿಕ ಮಾನದಂಡಗಳನ್ನು ಸಾಧಿಸಿದ್ದಕ್ಕಾಗಿ ಅದು ಮೆಚ್ಚುಗೆ ಪಡೆಯಿತು.ಕೇರಳದತಲಾ ಆದಾಯವು ಕಡಿಮೆಯಿತ್ತು ಎಂಬುದು ಅಲ್ಲಿನ “ಆದಾಯ ಬಡತನ” ವು ದೇಶದ ಇತರ ಹಲವು ರಾಜ್ಯಗಳಿಗಿಂತ ಅತ್ಯಧಿಕವಾಗಿತ್ತು ಎಂದು ಸೂಚಿಸುತ್ತದೆ. ಮೊದಲು ‘ರಾಷ್ಟ್ರೀಯ ಸಾಂಖ್ಯಿಕ ಸಮೀಕ್ಷೆ ಸಂಸ್ಥೆ’ (NSSO)ಯ ಅಂಖೆ ಸಂಖ್ಯೆಗಳ ಪ್ರಕಾರ ಭಾರತ ಸರ್ಕಾರವು “ಆದಾಯ ಬಡವರು” ಎಂದು ವರ್ಗೀಕರಿಸಿದ ಜನಸಂಖ್ಯೆಯ ಪಾಲು ಕೇರಳದಲ್ಲಿ1973-74ರಲ್ಲಿ 58.8% ಆಗಿತ್ತು. ಇದು ಆಗಿನರಾಷ್ಟ್ರೀಯ ಸರಾಸರಿ (54.9%) ಅಥವಾ ಉತ್ತರ ಪ್ರದೇಶ (57.1%), ರಾಜಸ್ಥಾನ (46.1%), ಮಹಾರಾಷ್ಟ್ರ (53.2%) ಅಥವಾ ಗುಜರಾತ್ (48.2%)ನ‘ಆದಾಯಬಡವರ’ ಪ್ರಮಾಣಕ್ಕಿಂತ ಹೆಚ್ಚಾಗಿತ್ತು. ವಾಸ್ತವವಾಗಿ, ಕೇರಳದಲ್ಲಿ ಆದಾಯದ ಬಡವರ ಪಾಲು ಬಿಹಾರದಲ್ಲಿನ (61.9%) ಆದಾಯದ ಬಡವರ ಪ್ರಮಾಣದ ಹತ್ತಿರದಲ್ಲಿತ್ತು..

ಇದನ್ನೂ ಓದಿ: ಒಳ ಮೀಸಲಾತಿ ಹೆಚ್ಚಳದ ಜಾರಿಗೆ ಹೈಕೋರ್ಟ್‌ ತಡೆ

ಹೀಗಿದ್ದರೂ, ನಂತರದ ದಶಕಗಳಲ್ಲಿ, ಕೇರಳವು ಸಾಮಾಜಿಕ ರಕ್ಷಣೆ ಮತ್ತು ಸಾಮಾಜಿಕ ನೆರವು ಕ್ರಮಗಳ ವಿಸ್ತರಣೆ ಮತ್ತು ಸಾರ್ವತ್ರಿಕೀಕರಣದ ಮೂಲಕ ಆದಾಯ ಬಡತನವನ್ನು ಕಡಿಮೆ ಮಾಡುವಲ್ಲಿ ಅಸಾಧಾರಣ ಯಶಸ್ಸನ್ನು ಸಾಧಿಸಿತು. 1980 ರ ದಶಕದಿಂದ ಅದರ ಉತ್ಪಾದನಾ ವಲಯಗಳಲ್ಲಿ, ವಿಶೇಷವಾಗಿ ಕೃಷಿಯಲ್ಲಿನ ಬೆಳವಣಿಗೆಯ ಪುನರುಜ್ಜೀವನ ಮತ್ತು ಪಶ್ಚಿಮ ಏಷ್ಯಾದಲ್ಲಿ ಅದರ ವಿದ್ಯಾವಂತ ವಲಸಿಗ ಜನರಿಂದ ಹಣ ಹರಿವಿನಿಂದ ತಲಾ ಆದಾಯವು ಏರಿತು. ಹೀಗಾಗಿ, ಕೇರಳದಲ್ಲಿ ಆದಾಯ ಬಡವರ ಪಾಲು 1999-00 ರಲ್ಲಿ 12.7% ಮತ್ತು 2011-12 ರಲ್ಲಿ 7.1% ಕ್ಕೆ ಇಳಿಯಿತು. 2011-12 ರಲ್ಲಿ ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಕೇರಳದಲ್ಲಿ ಕಡಿಮೆ ಆದಾಯದ ಬಡವರ ಪ್ರಮಾಣ ಎಲ್ಲಕ್ಕಿಂತ ಕಮ್ಮಿಯಿತ್ತು; ಆ ವರ್ಷ ರಾಷ್ಟ್ರೀಯ ಸರಾಸರಿ 21.9% ಆಗಿತ್ತು.

2022-23 ರಲ್ಲಿ, ಆದಾಯ ಬಡವರ ಪಾಲು ಕೇರಳದಲ್ಲಿ 1.3% ಎಂದು ದಾಖಲಾಗಿದೆ. ಆದರೆ ಇದನ್ನು2011-12 ರ ಅಂಕೆ-ಸಂಖ್ಯೆಯೊಂದಿಗೆ ಹೋಲಿಸಲಾಗುವುದಿಲ್ಲ. ಏಕೆಂದರೆ, 2022-23 ರಲ್ಲಿ NSSO ನಡೆಸಿದ ಗ್ರಾಹಕ ವೆಚ್ಚ ಸಮೀಕ್ಷೆಯು ಪರಿಷ್ಕೃತ ವಿಧಾನವನ್ನು ಅಳವಡಿಸಿಕೊಂಡಿದೆ. ಅದು ಮೂಲಭೂತವಾಗಿ ಬಳಕೆಯ ವೆಚ್ಚವನ್ನು ಉಬ್ಬರಿಸಿದೆ- ಬಡತನದ ಪ್ರಮಾಣವನ್ನು ಕಡಿಮೆ ಮಾಡಿದೆ.

ಬಳಕೆಯ ವೆಚ್ಚದ ಸಮೀಕ್ಷೆಗಳನ್ನು ಆಯೋಜಿಸದ ಮಧ್ಯಂತರ ಅವಧಿಯಲ್ಲಿ, ಭಾರತ ಸರ್ಕಾರವು ಬಡತನದ ಹೊಸ ಸೂಚಕವನ್ನು ಅವಲಂಬಿಸಲು ಪ್ರಾರಂಭಿಸಿತ್ತು: ನೀತಿ ಆಯೋಗದ ‘ಬಹು ಆಯಾಮದ ಬಡತನ ಸೂಚ್ಯಂಕ’ (MPI-Multidimensional Poverty Index) ಎಂಬ ಹೊಸ ಸೂಚಕದ ಪ್ರಕಾರ ಕೇರಳದ ಜನಸಂಖ್ಯೆಯಲ್ಲಿ “ಬಹು ಆಯಾಮದ ಬಡವರ” ಪಾಲು 2005-06ರಲ್ಲಿ 12.31% ರಷ್ಟಿತ್ತು, ಇದು 2019-21ರಲ್ಲಿ 0.55% ಕ್ಕೆ ಇಳಿದಿದೆ. ರಾಷ್ಟ್ರೀಯ ಮಟ್ಟದಲ್ಲಿ 2019-21ರಲ್ಲಿ ಈ ಪ್ರಮಾಣ 15% ಆಗಿತ್ತು. ಈ ಸೂಚ್ಯಂಕದ ಬಗ್ಗೆ ವಿದ್ವಾಂಸರಿಂದ ಗಂಭೀರ ಟೀಕೆಗಳು ಬಂದಿವೆ. ಅವರ ಪ್ರಕಾರ, ಇದು ಬಡತನಕ್ಕಿಂತ ಹೆಚ್ಚಾಗಿ ವಂಚಿತತೆ (deprivation)ಯ ಸೂಚಕವಾಗಿದೆ.

ಇಂತಹ ಟೀಕೆ-ಟಿಪ್ಪಣಿಗಳೇನೇ ಇದ್ದರೂ, ಎರಡು ತೀರ್ಮಾನಗಳಂತೂ ಎದ್ದುಕಾಣುತ್ತವೆ. ಮೊದಲನೆಯದಾಗಿ, 1980 ರ ದಶಕದಿಂದ ಒಟ್ಟಾರೆ ಬಡತನ ಮತ್ತು ಅಭಾವದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೇರಳವು ಉತ್ತಮ ಪ್ರದರ್ಶನ ನೀಡಿದೆ. ಎರಡನೆಯದಾಗಿ, ಕೇರಳದ ಮುಂದಿನ ಕಾರ್ಯ, ಇತರ ರಾಜ್ಯಗಳಿಗಿಂತ ಬಡತನದ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಿದ್ದರೂ ಸಹ,ಕೆಲವು ಕ್ಷೇತ್ರಗಳಲ್ಲಿ ಮತ್ತು ಕೆಲವು ವಿಭಾಗಗಳಲ್ಲಿ ಇನ್ನೂಇರುವತೀವ್ರ ಬಡತನವನ್ನು ಪರಿಹರಿಸುವತ್ತ ಗಮನಹರಿಸುವುದು.ಇದು 2021 ರಲ್ಲಿ ಕೇರಳದಲ್ಲಿ ತೀವ್ರ ಬಡತನ ನಿರ್ಮೂಲನಾ ಕಾರ್ಯಕ್ರಮ (EPEP) ಪ್ರಾರಂಭಕ್ಕೆ ಆಧಾರವಾಯಿತು.

‘ಬಡತನ’ ಮತ್ತು ‘ತೀವ್ರ ಬಡತನ’

“ಬಡತನ” ಮಾತ್ರವಲ್ಲ, “ತೀವ್ರ ಬಡತನ” ದ ವ್ಯಾಖ್ಯಾನವೂ ಬಹಳ ವಿವಾದಾಸ್ಪದವಾಗಿರುವ ವಿಷಯ ಎಂಬುದು 2021ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿದಾಗ ಕೇರಳ ಸರ್ಕಾರಕ್ಕೆ ಚೆನ್ನಾಗಿ ತಿಳಿದಿತ್ತು. ಆಹಾರ ಸೇವನೆಯ ಪ್ರಮಾಣಿತ ಪ್ರಮಾಣವನ್ನು ಹಣದ ರೂಪಕ್ಕೆ ಪರಿವರ್ತಿಸಿ ಬಡತನ ಪ್ರಮಾಣವನ್ನು ಲೆಕ್ಕಾಚಾರ ಮಾಡುವ ಅಧಿಕೃತ ವಿಧಾನವಲ್ಲದೆ, ಮಾನವ ಅಭಿವೃದ್ಧಿ ಸೂಚ್ಯಂಕ (HDI) ಮತ್ತು ಮೇಲೆ ಹೇಳಿದಂತಹ MPI ನಂತಹ ಪರ್ಯಾಯ ಸೂಚಕಗಳು ಲಭ್ಯವಿದ್ದವು. ನಿಜ, ಇವುಗಳು ಟೀಕೆಗಳಿಂದ ಮುಕ್ತವಾಗಿರಲಿಲ್ಲ. ಅಂತಿಮವಾಗಿ, ಅಪ್ಪಟ ಬಡತನದ ವಸ್ತುನಿಷ್ಠ ವ್ಯಾಖ್ಯಾನವೇ ಅಸಾಧ್ಯ, ಸಾಪೇಕ್ಷ ಪರಿಭಾಷೆಯಲ್ಲಿ ಮಾತ್ರ ಬಡತನವನ್ನು ಅಳೆಯಬಹುದು ಎಂಬ ಮೂಲವಾದವೂ ಇದೆ.

ಇಂತಹ ಚರ್ಚೆಗಳ ಹಿನ್ನೆಲೆಯಲ್ಲಿ, ಕೇರಳದಲ್ಲಿ ಸಾರ್ವಜನಿಕ ನೀತಿಯು ಐತಿಹಾಸಿಕವಾಗಿ ಎರಡು ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸಿದೆ. ಮೊದಲನೆಯದಾಗಿ, ಬಡವರನ್ನು ಗುರುತಿಸಲು ಪ್ರಯತ್ನಿಸುವಾಗ ಅವರನ್ನು ಹೊರಗಿಡುವ ಸಾಧ್ಯತೆಗಳನ್ನು ತಪ್ಪಿಸಲುಗುರಿ-ನಿರ್ದೇಶಿತ (targetted) ಸಾಮಾಜಿಕ ಸೇವೆಗಳ ಬದಲಾಗಿ ಅವುಗಳನ್ನು ಸಾರ್ವತ್ರಿಕಗೊಳಿಸುವ ಅಂಶದ ಮೇಲೆ ಒತ್ತು ನೀಡಲಾಗಿತ್ತು. ಎರಡನೆಯದಾಗಿ, ಸರ್ಕಾರಿ ಯೋಜನೆಗಳ ಮೂಲಕ ಸಮಾಜದ ಅತ್ಯಂತ ಅಂಚಿನಲ್ಲಿರುವ ವಿಭಾಗಗಳಿಗೆ ನೀತಿಯನ್ನು ವಿನ್ಯಾಸಗೊಳಿಸುವಾಗ “ಬಡವರು” ಎಂಬುದಕ್ಕೆ ಭಿನ್ನವಾದ, ಆದರೆ ವಿಶಾಲವಾದ ವ್ಯಾಖ್ಯಾನಗಳನ್ನು ಅವಲಂಬಿಸುವ ಪ್ರಯತ್ನ ಮಾಡಲಾಗಿತ್ತು. ಸಹಜವಾಗಿ, ಬಡತನದ ಒಂದು ವ್ಯಾಖ್ಯಾನವು ಬಡತನದ ಮತ್ತೊಂದು ವ್ಯಾಖ್ಯಾನಕ್ಕೆ ಎದುರಾಗಿ ಯಾವಾಗಲೂ ಸ್ಪರ್ಧಿಸಬಹುದಾಗಿತ್ತು. ಆದರೆ ವಂಚಿತತೆಗಳು ವಿವಿಧರೂಪಗಳಲ್ಲಿ ಇರುವುದರಿಂದ ಅವನ್ನು ನಿವಾರಿಸಲು ವಿಭಿನ್ನ ರೀತಿಗಳಲ್ಲಿ ಮಧ್ಯ ಪ್ರವೇಶಿಸಬೇಕಾಗುತ್ತದೆ. ಆದ್ದರಿಂದ ಅವಕ್ಕೆ ಅನುಗುಣವಾದ ಅನೇಕ ವಿಶಾಲ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಯಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರತಿಯೊಂದು ಸಂದರ್ಭದ ಅವಶ್ಯಕತೆಗಳಿಗೆ ಸರಿಹೊಂದುವಂತೆ ಮತ್ತು ತನ್ನಪ್ರತಿಯೊಂದು ಮಧ್ಯಪ್ರವೇಶದ ವ್ಯಾಪ್ತಿಯನ್ನು ಗರಿಷ್ಟಗೊಳಿಸಲು ಎಲ್‍ಡಿಎಫ್ ಪ್ರರಕಾರ “ಬಡವರು” ಅಥವಾ “ಬಡತನ”ದ ಭಿನ್ನ-ಭಿನ್ನ ವ್ಯಾಖ್ಯಾನಗಳನ್ನು ಅಳವಡಿಸಿಕೊಂಡಿತು.

‘ಕುಟುಂಬಶ್ರೀ’ ಯಿಂದ ‘ಎ.ಎ.ವೈ’ ವರೆಗೆ

ಕೇರಳದಲ್ಲಿ, ಸಮಾಜದ ಅತ್ಯಂತ ಅಂಚಿನಲ್ಲಿರುವ ವಿಭಾಗಗಳ ಮೇಲೆ ಪ್ರಯತ್ನಗಳನ್ನು ಕೇಂದ್ರೀಕರಿಸುವ ನೀತಿಗೆ ಒಂದುದೀರ್ಘ ಇತಿಹಾಸವೇ ಇದೆ. ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ 1998 ರಲ್ಲಿ ಸ್ಥಾಪಿಸಲಾದ ‘ಕುಟುಂಬಶ್ರೀ’ ಯೋಜನೆಯು “ಬಡತನ ನಿರ್ಮೂಲನೆ”ಯನ್ನು ತನ್ನ ಸ್ಥಾಪಕ ವಿಷಯವಾಗಿ ಹೊಂದಿತ್ತು. 2002 ರಲ್ಲಿ ಸ್ಥಾಪಿಸಲಾದ ‘ಆಶ್ರಯ’ ಯೋಜನೆಯು ಕುಟುಂಬಶ್ರೀ ಯೋಜನೆಯನ್ನು ಅನುಸರಿಸಿತು ಮತ್ತು ಸಾಮಾನ್ಯ ಬಡತನ ನಿರ್ಮೂಲನಾ ಯೋಜನೆಗಳಲ್ಲಿ ಕಡೆಗಣಿಸಲ್ಪಟ್ಟ ನಿರ್ಗತಿಕ ಕುಟುಂಬಗಳನ್ನು ಗುರುತಿಸುವುದು ಮತ್ತು ಅವರ ಪುನರ್ವಸತಿಯ ಮೇಲೆ ಕೇಂದ್ರೀಕರಿಸಿತು. ಆಶ್ರಯದಲ್ಲಿ, ಒಂಬತ್ತು ಅಪಾಯದ ನಿಯತಾಂಕಗಳಲ್ಲಿ ಕನಿಷ್ಠ ಒಂದಕ್ಕೆ ಸಂಬಂಧಿಸಿದಂತೆ ಅರ್ಹತೆ ಪಡೆದಿದ್ದರೆ ಕುಟುಂಬವನ್ನು ನಿರ್ಗತಿಕರೆಂದು ಗುರುತಿಸಲಾಯಿತು. 2017 ರಲ್ಲಿ, ಆಶ್ರಯ ಯೋಜನೆಯನ್ನು “ನಿರ್ಗತಿಕ-ಮುಕ್ತ ಕೇರಳ” (ಅಥವಾ “ಅಗತಿ ರಹಿತ ಕೇರಳಂ”) ಎಂಬ ಹೊಸ ಮತ್ತು ವಿಸ್ತೃತ ಯೋಜನೆಯಾಗಿ ಮರು ನಾಮಕರಣ ಮಾಡಲಾಯಿತು. ಇಲ್ಲಿ, ಒಂಬತ್ತು ಮಾನದಂಡಗಳಲ್ಲಿ ಏಳನ್ನು ಪೂರೈಸುವ ಕುಟುಂಬಗಳನ್ನು (ಜೊತೆಗೆ ಒಂದು ಹೆಚ್ಚುವರಿ ಮಾನದಂಡ) ನಿರ್ಗತಿಕರೆಂದು ಗುರುತಿಸಲಾಗಿದೆ. ಈ ಎರಡೂ ಯೋಜನೆಗಳಲ್ಲಿ, ಫಲಾನು ಭವಿಗಳನ್ನು ಸ್ಥಳೀಯ ಸಂಸ್ಥೆಗಳು ಗುರುತಿಸುತ್ತವೆ ಮತ್ತು ಅವರ ಪಟ್ಟಿಗಳನ್ನು ಗ್ರಾಮ ಸಭೆಗಳು ಅನುಮೋದಿಸಬೇಕಾಗಿದೆ.

ಆಶ್ರಯ ಯೋಜನೆ ಮತ್ತು ನಿರ್ಗತಿಕ ಮುಕ್ತ ಕೇರಳ ಯೋಜನೆಗಳು ನಿರ್ಗತಿಕರನ್ನು ಗುರುತಿಸಲು ಒಂದು ನಿರ್ದಿಷ್ಟ ಅಧಿಕೃತ ವಿಧಾನವನ್ನು ಬಳಸಿದರೆ, ಸರ್ಕಾರದ ಇತರ ಯೋಜನೆಗಳು ವಿಭಿನ್ನ ಪರಿಕಲ್ಪನೆಗಳು ಮತ್ತು ವ್ಯಾಖ್ಯಾನಗಳನ್ನು ಬಳಸಿದವು. ಉದಾಹರಣೆಗೆ, 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪರಿಚಯದೊಂದಿಗೆ “ಬಡವರು” ಎಂಬುದರ ಮತ್ತೊಂದು ಪರಿಕಲ್ಪನೆಯನ್ನು ಬಳಸಲಾಯಿತು. ಇಲ್ಲಿ, ಗ್ರಾಮೀಣ ಜನಸಂಖ್ಯೆಯ 75% ಮತ್ತು ನಗರ ಜನಸಂಖ್ಯೆಯ 50% ಜನರನ್ನು “ಆದ್ಯತೆ” ಎಂದು ವರ್ಗೀಕರಿಸಲಾಯಿತು, ಅವರು ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದರು. ಆದ್ಯತೆಯ ಕುಟುಂಬಗಳಿಂದ, ಒಂದು ಸಣ್ಣ ಗುಂಪನ್ನು ‘ಅಂತ್ಯೋದಯ ಅನ್ನ ಯೋಜನೆ’ (ಎ.ಎ.ವೈ-AAY) ಯ ಫಲಾನುಭವಿಗಳೆಂದು ಗುರುತಿಸಲಾಯಿತು. ಎಎವೈ ಒಳಗೆ, ಅವರನ್ನು ಕೆಲವೊಮ್ಮೆ “ಬಡವರಲ್ಲಿ ಅತ್ಯಂತ ಬಡವರು” ಎಂದು ಕರೆಯಲಾಗುತ್ತಿತ್ತು, ಅವರು ಆರಂಭದಲ್ಲಿ ಕ್ರಮವಾಗಿ ಕೆಜಿಗೆ ₹3 ಮತ್ತು ₹2 ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಪಡೆಯಬೇಕಾಗಿತ್ತು.ನಂತರ, ಅವರು ತಿಂಗಳಿಗೆ 35 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಉಚಿತವಾಗಿ ಪಡೆದರು.

ಎಎವೈ ಮತ್ತು ಆಶ್ರಯ/ನಿರ್ಗತಿಕ – ಮುಕ್ತ ಕೇರಳ ಯೋಜನೆಗಳು ಅನುಸರಿಸುವ ಅರ್ಹತಾ ಷರತ್ತುಗಳು ಬಹಳ ಭಿನ್ನವಾಗಿದ್ದವು. ಎಎವೈಯಲ್ಲಿ, ರಾಜ್ಯ ಸರ್ಕಾರಗಳು ಹಲವಾರು ಹೊಸ ಸೂಚಕಗಳ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಬೇಕಾಗಿತ್ತು: ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು, ಗ್ರಾಮೀಣ ಕುಶಲಕರ್ಮಿಗಳು/ಕಸುಬುದಾರರು, ಅನೌಪಚಾರಿಕ ವಲಯವನ್ನು ಅವಲಂಬಿಸಿರುವ ವ್ಯಕ್ತಿಗಳು, ವಿಧವೆಯರು ಅಥವಾ ಸಾವಿನ ಸಮೀಪವಿರುವ ಅನಾರೋಗ್ಯ /ಅಂಗವಿಕಲರು/60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಮುಖ್ಯಸ್ಥರಾಗಿರುವ ಕುಟುಂಬಗಳು ಮತ್ತು ಆದಿಬುಡಕಟ್ಟು ಕುಟುಂಬಗಳು.

ಬಹು ಮುಖ್ಯವಾಗಿ, ಎಎವೈಯಲ್ಲಿ ಅರ್ಹತಾ ಷರತ್ತುಗಳನ್ನು ಒಂದು ಕುಟುಂಬವು ಸಬ್ಸಿಡಿ/ಉಚಿತ ಆಹಾರ ಧಾನ್ಯಗಳನ್ನು ಪಡೆಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸೀಮಿತ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ – ಬಡತನವನ್ನು ವ್ಯಾಖ್ಯಾನಿಸಲು ಅಥವಾ ಅರ್ಥಮಾಡಿಕೊಳ್ಳಲು ಯಾವುದೇ ಸಾಮಾನ್ಯ ವಿಶ್ಲೇಷಣಾತ್ಮಕ ಉದ್ದೇಶಕ್ಕಾಗಿ ಅಲ್ಲ.ಅಧಿಕೃತಎಎವೈ ದಾಖಲೆಗಳಲ್ಲಿ “ಬಡವರಲ್ಲಿ ಬಡವರು” ಎಂಬ ಪದವನ್ನು ಬಳಸಲಾಗಿದ್ದರೂ, ಭಾರತದಲ್ಲಿ ಬಡತನವನ್ನು ಅಧಿಕೃತವಾಗಿ ವ್ಯಾಖ್ಯಾನಿಸಲಾಗಿದೆ ಎಂಬ ಅರ್ಥದಲ್ಲಿ ಯಾರೂ ಎ.ಎ.ವೈ ಕುಟುಂಬಗಳನ್ನು ಬಡವರು ಎಂದು ಪರಿಗಣಿಸಲಿಲ್ಲ. ಎ.ಎ.ವೈ ಕೇವಲ ಒಂದು ಸರ್ಕಾರಿ ಯೋಜನೆಯಾಗಿದ್ದು, ಅದರ ಫಲಾನುಭವಿಗಳನ್ನು ಗುರುತಿಸಲು ಕೆಲವು ಮಾನದಂಡಗಳನ್ನು ಹೊಂದಿದೆ. “ಬಡವರಲ್ಲಿ ಬಡವರು” ಎಂಬ ಪದವು ವಿಶ್ಲೇಷಣಾತ್ಮಕ ವಿಧಕ್ಕಿಂತ ಹೆಚ್ಚಾಗಿ ವಿಶಾಲ ವಿವರಣೆಯಾಗಿದೆ; ಎಎವೈ ಫಲಾನುಭವಿಗಳನ್ನು ಅಧಿಕೃತವಾಗಿ ಎಲ್ಲಿಯೂ “ಅತ್ಯಂತ ಬಡವರು” ಎಂದು ವರ್ಗೀಕರಿಸಲಾಗಿಲ್ಲ. ವಾಸ್ತವವಾಗಿ, ಭಾರತ ಸರ್ಕಾರದ ಯಾವುದೇ ಅಧಿಕೃತ ದಾಖಲೆಯಲ್ಲಿ “ಅತ್ಯಂತ ಬಡವರು” ಎಂಬುದಕ್ಕೆ ಯಾವುದೇ ಅಧಿಕೃತ ವ್ಯಾಖ್ಯಾನವಿಲ್ಲ.

ದಾಖಲೆಗಳ ಪ್ರಕಾರ, 2021 ರಲ್ಲಿ ಭಾರತದಲ್ಲಿ ಎಎವೈ ಕುಟುಂಬಗಳ ಸಂಖ್ಯೆ 2.38 ಕೋಟಿ ಮತ್ತು ಕೇರಳದಲ್ಲಿ 5.96 ಲಕ್ಷ. ಅಂದರೆ ಜನ ಸಂಖ್ಯೆಯ ಲೆಕ್ಕದಲ್ಲಿ ಭಾರತದಲ್ಲಿ 9 ಕೋಟಿ ಮತ್ತು ಕೇರಳದಲ್ಲಿ 25.59 ಲಕ್ಷ ಜನರು. ಇದಲ್ಲದೆ, 2021 ರಲ್ಲಿ ನಿರ್ಗತಿಕ-ಮುಕ್ತ ಕೇರಳ ಯೋಜನೆಯಡಿಯಲ್ಲಿ 1.57 ಲಕ್ಷ ಕುಟುಂಬಗಳಿಗೆ ಬೆಂಬಲ ನೀಡಲಾಯಿತು.

ಇಪಿಇಪಿ ಯೋಜನೆ

ಈ ಹಂತದಲ್ಲಿಕೇರಳ ಸರ್ಕಾರವು 2021 ರಲ್ಲಿ “ತೀವ್ರ ಬಡತನ”ವನ್ನು ನಿರ್ಮೂಲನೆ ಮಾಡಲು ಒಂದುಹೊಸ ಯೋಜನೆಯನ್ನು – ಇಪಿಇಪಿ – ಜಾರಿಗೆ ತರಲು ನಿರ್ಧರಿಸಿತು.ಯೋಜನೆಯ ಅನುಷ್ಠಾನವನ್ನು ಸ್ಥಳೀಯ ಆಡಳಿತಸಂಸ್ಥೆಗಳ (ಎಲ್‌ಎಸ್‌ಜಿ – local self governments) ಇಲಾಖೆಗೆ ವಹಿಸಲಾಯಿತು. ಇಪಿಇಪಿಯ ಹಿಂದಿನ ಪ್ರೇರಣೆ ಕುಟುಂಬಶ್ರೀ /ಆಶ್ರಯ/ ನಿರ್ಗತಿಕ – ಮುಕ್ತ ಕೇರಳ ಯೋಜನೆಗಳು ಅಥವಾ ಎಎವೈ ಉದ್ದೇಶಗಳಿಗಿಂತ ಭಿನ್ನವಾಗಿತ್ತು. ಈ ಅಸ್ತಿತ್ವದಲ್ಲಿರುವ ಯೋಜನೆಗಳು ಮುಂದುವರಿಯಬೇಕಿತ್ತು ಮತ್ತು ಅವುಗಳಲ್ಲಿ ಗುರುತಿಸಲಾದ ಕುಟುಂಬಗಳು ತಮ್ಮ ಪ್ರಯೋಜನಗಳನ್ನು ಪಡೆಯುವುದು ಮುಂದುವರಿಯಬೇಕಿತ್ತು.

ಆದರೆ ಅತ್ಯಂತ ಬಡ ಮತ್ತು/ಅಥವಾ ತೀವ್ರ ನಿರ್ಗತಿಕ ಸ್ಥಿತಿಯಲ್ಲಿದ್ದ ಮತ್ತುಎಎವೈ ಮತ್ತು ನಿರ್ಗತಿಕ – ಮುಕ್ತ ಕೇರಳ ಯೋಜನೆ ಸೇರಿದಂತೆ ಅಸ್ತಿತ್ವದಲ್ಲಿರುವ ಯಾವುದೇ ಯೋಜನೆಗಳಲ್ಲಿ ಫಲಾನುಭವಿಗಳಾಗಿ ಒಳಗೊಳ್ಳದ ಅನೇಕ ಕುಟುಂಬಗಳಿವೆ ಎಂದು ಗುರುತಿಸಲಾಯಿತು. ಇವು ಹೆಚ್ಚಿನ ಬಡತನ ನಿರ್ಮೂಲನಾ ಪ್ರಯತ್ನಗಳಿಗೆ ಅಗೋಚರವಾಗಿದ್ದ ಕುಟುಂಬಗಳು ಅಥವಾ ವ್ಯಕ್ತಿಗಳು. ಹೀಗಾಗಿ, ಅಂತಹ ಕುಟುಂಬಗಳು ಅಥವಾ ವ್ಯಕ್ತಿಗಳನ್ನು ಗುರುತಿಸಲು ಮತ್ತು ಅವರ ಜೀವನೋಪಾಯದ ಕಾಳಜಿಗಳನ್ನು ಪರಿಹರಿಸಲು ಹೊಸ ವ್ಯಾಖ್ಯಾನವನ್ನು ರೂಪಿಸಲಾಯಿತು ಮತ್ತು ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಯಿತು. ಇಪಿಇಪಿಯಲ್ಲಿ, ಅವರನ್ನು “ತೀವ್ರ ಬಡ” ಕುಟುಂಬಗಳು ಅಥವಾ ವ್ಯಕ್ತಿಗಳು ಎಂದು ಕರೆಯಲಾಯಿತು.

“ಅತ್ಯಂತಬಡವರು” ಅಥವ “ತೀವ್ರಬಡತನ” ಎಂಬ ಹೊಸ ವಿಧದ ಬಗ್ಗೆ ಯಾರಿಗಾದರೂ ಪ್ರಶ್ನೆಗಳು ಬರುವುದು ಸಹಜ.”ಅತ್ಯಂತಬಡವರು” ಎಂದು ಕರೆದ ಈ ಕುಟುಂಬಗಳುಎಎವೈ ಅಡಿಯಲ್ಲಿ “ಬಡವರಲ್ಲಿ ಬಡವರು” ಅಥವಾ ‘ನಿರ್ಗತಿಕ-ಮುಕ್ತ ಕೇರಳ’ ಯೋಜನೆಯ ಫಲಾನುಭವಿಗಳು ಒಂದೇ ಆಗಿದ್ದಾರೆಯೇ?ವಾಸ್ತವದಲ್ಲಿ, ಇವು ಮೇಲು-ವ್ಯಾಪನೆಯವಿಧ(overlapping category)ಗಳಲ್ಲ.ಸಬ್ಸಿಡಿ ಆಹಾರ ಧಾನ್ಯಗಳ ವಿತರಣೆಗಾಗಿ ಕುಟುಂಬಗಳನ್ನು ಅದರ ಫಲಾನುಭವಿಗಳಾಗಿ ವರ್ಗೀಕರಿಸಲು ಎಎವೈ ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಬಳಸಿದಂತೆ ಅಥವಾ ನಿರ್ಗತಿಕ-ಮುಕ್ತ ಕೇರಳ ಯೋಜನೆಯು ಕುಟುಂಬಗಳನ್ನು “ನಿರ್ಗತಿಕರು” ಎಂದು ವರ್ಗೀಕರಿಸಲು ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಬಳಸಿದಂತೆ, ಇಪಿಇಪಿಕುಟುಂಬಗಳನ್ನು “ಅತ್ಯಂತಬಡವರು” ಎಂದು ವರ್ಗೀಕರಿಸಲು ತನ್ನದೇ ಆದ ವ್ಯಾಖ್ಯಾನವನ್ನು ಬಳಸಿತು.

ಇವೆಲ್ಲವೂ ಪ್ರತಿಯೊಂದು ಯೋಜನೆಯ ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲಾದ ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿರುವ ವಿಧಗಳಾಗಿದ್ದವು;ಈ ಸಂದರ್ಭದಲ್ಲಿ, “ಅತ್ಯಂತ ಬಡವರು” ಇಪಿಇಪಿಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾದ ವಿಧವಾಗಿತ್ತು.ಅಸ್ತಿತ್ವದಲ್ಲಿರುವ ಯಾವುದೇ ಯೋಜನೆಗಳಲ್ಲಿ ಒಳಗೊಳ್ಳದ ಅಂಚಿನಲ್ಲಿರುವ ಕುಟುಂಬಗಳನ್ನು ಗುರುತಿಸುವುದು ಮತ್ತು ಅವರನ್ನು ಅವರ ಭೀಕರ ಸ್ಥಿತಿಯಿಂದ ಹೊರತರುವುದುಇದರ ಉದ್ದೇಶವಾಗಿತ್ತು.

ಈ ಕುಟುಂಬಗಳು ಯಾವುವು? ಮೊದಲಿಗೆ, ಒಂದು ಕುಟುಂಬ ಅಥವಾ ವ್ಯಕ್ತಿ ನಿರ್ಗತಿಕ-ಮುಕ್ತ ಕೇರಳ ಯೋಜನೆಯ ಫಲಾನುಭವಿಯಾಗಿದ್ದರೆ, ಅವರು ತಂತಾನೇ ಇಪಿಇಪಿಯಿಂದ ಹೊರಗಿರುತ್ತಾರೆ. ಅತ್ಯಂತ ಬಡವರು ಎಂದರೆ ಆಹಾರ, ಬಟ್ಟೆ, ವಸತಿ ಮತ್ತು ಆದಾಯದಂತಹ ಮೂಲಭೂತ ಬದುಕುಳಿಯುವ ಅವಶ್ಯಕತೆಗಳನ್ನು ಸಹ ಪಡೆಯಲು ಸಂಪೂರ್ಣವಾಗಿ ಅಸಮರ್ಥರಾಗಿರುವವರು – ಅಂದರೆ, ಅತ್ಯಂತ ನಿರ್ಗತಿಕರು; ಏನೇನೂ ಬೆಂಬಲವಿಲ್ಲದವರು; ಸಂಪೂರ್ಣವಾಗಿ ಅಸಹಾಯಕರು. ಅಧಿಕೃತ ದಾಖಲೆಗಳು ಅಂತಹ ಕುಟುಂಬಗಳು ಅಥವಾ ವ್ಯಕ್ತಿಗಳ ಉದಾಹರಣೆಗಳನ್ನು ಒದಗಿಸುತ್ತವೆ: ನಿರಾಶ್ರಿತ ವ್ಯಕ್ತಿಗಳು, ಎಲ್ಲಾ ಸದಸ್ಯರು ಅಂಗವೈಕಲ್ಯ ಹೊಂದಿರುವ ಕುಟುಂಬಗಳು; ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಿದ ಮತ್ತು ಆದಾಯ ಅಥವಾ ಆಸ್ತಿಗಳನ್ನು ಹೊಂದಿರದ ವೃದ್ಧ ವ್ಯಕ್ತಿಗಳು; ತಮ್ಮ ಪ್ರಾಥಮಿಕ ಜೀವನೋಪಾಯದಾರರಿಂದ ಕೈಬಿಡಲ್ಪಟ್ಟ ಮತ್ತು ಆದಾಯ, ಸ್ವತ್ತುಗಳು ಅಥವಾ ಕೆಲಸ ಮಾಡುವ ಸಾಮರ್ಥ್ಯವಿಲ್ಲದ ಕುಟುಂಬಗಳು; ಮತ್ತು ಆಸ್ತಿ ಅಥವಾ ಆದಾಯದ ಕೊರತೆಯಿಂದ ಹಾಸಿಗೆ ಹಿಡಿದ ರೋಗಿಗಳನ್ನು ಮಾತ್ರ ಒಳಗೊಂಡಿರುವ ಕುಟುಂಬಗಳು.

ಹೀಗಾಗಿ, “ತೀವ್ರ ಬಡತನ”ವು ಇಪಿಇಪಿಯಲ್ಲಿ ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಹೊಂದಿತ್ತು: “ತೀವ್ರ ಬಡತನ”ವು ಬಡತನದ ಅತ್ಯಂತ ತೀವ್ರ ಅಭಿವ್ಯಕ್ತಿಯಾಗಿದೆ. ತೀವ್ರ ಬಡತನದಲ್ಲಿ ಬದುಕುತ್ತಿರುವವರು ಗಣನೀಯ ಸರ್ಕಾರಿ ಮತ್ತು ಸಾಮಾಜಿಕ ಬೆಂಬಲವಿಲ್ಲದೆ ಜೀವನದಲ್ಲಿ ಪ್ರಗತಿ ಸಾಧಿಸಲು ಅಥವಾ ಬಡತನವನ್ನು ಮೀರಲು ಸಾಧ್ಯವಿಲ್ಲ”. ಇದಕ್ಕೆ ವ್ಯತಿರಿಕ್ತವಾಗಿ, “ಸಾಮಾನ್ಯ ಬಡವರು” ತಮ್ಮಲ್ಲಿರುವ ಅಲ್ಪ ಆದಾಯ ಅಥವಾ ಉದ್ಯೋಗದಿಂದ ಮತ್ತು ಒಂದು ಅಥವಾ ಇನ್ನೊಂದು ಸರ್ಕಾರಿ ಯೋಜನೆಯ ಸಹಾಯದಿಂದ ತಮ್ಮ ದೈನಂದಿನ ವ್ಯವಹಾರಗಳನ್ನು ಹೇಗಾದರೂ ಉಳಿಸಿಕೊಳ್ಳಬಹುದು. ಆದರೆ “ಅತ್ಯಂತ ಬಡವರು” ಎಂದರೆ ನಿರ್ಗತಿಕ-ಮುಕ್ತ ಕೇರಳ ಯೋಜನೆಗೆ ಸೇರ್ಪಡೆಹೊಂದಿರದ ಜನರು. ಅವರು ತಮ್ಮ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವವರು. ಇವು ಇಪಿಇಪಿ ಗುರಿಯಾಗಿಸಿಕೊಂಡ ವಿಭಾಗಗಳಾಗಿದ್ದವು. ಅಂತಹ ಎಲ್ಲಾ “ಅತ್ಯಂತ ಬಡ” ಕುಟುಂಬಗಳು ಅಥವಾ ವ್ಯಕ್ತಿಗಳನ್ನು ಗುರುತಿಸಿ 2025 ರ ನವೆಂಬರ್ 1 ರೊಳಗೆ ಆ ಸ್ಥಿತಿಯಿಂದ ಹೊರತರಲಾಗುವುದು ಎಂದು 2021 ರಲ್ಲಿ ಘೋಷಿಸಲಾಯಿತು.

ವಂಚಿತತೆಯ ಆಯಾಮಗಳ ಪ್ರಶ್ನೆ

ಇಪಿಇಪಿ ಅಡಿಯಲ್ಲಿ “ಅತ್ಯಂತ ಬಡವರು” ಮತ್ತುನಿರ್ಗತಿಕ-ಮುಕ್ತ ಕೇರಳ’ ಯೋಜನೆಯ ಫಲಾನುಭವಿಗಳ ನಡುವೆಮೇಲು-ವ್ಯಾಪನೆ ಇಲ್ಲ ಎಂಬುದು ಸ್ಪಷ್ಟವಾಗಬೇಕು. ಅಂದರೆ, ನಿರ್ಗತಿಕ-ಮುಕ್ತ ಕೇರಳ ಯೋಜನೆಯ ಫಲಾನುಭವಿಯಾಗಿರುವುದರಿಂದ ಕುಟುಂಬಗಳು ಅಥವಾ ವ್ಯಕ್ತಿಗಳು ಇಪಿಇಪಿಯ ಫಲಾನುಭವಿಯಾಗಲು ಅನರ್ಹರಾಗುತ್ತಾರೆ. ನಿರ್ಗತಿಕ-ಮುಕ್ತ ಕೇರಳ ಯೋಜನೆಯು ಸೇರಿಸಲು ವಿಫಲವಾದ ಕುಟುಂಬಗಳು ಅಥವಾ ವ್ಯಕ್ತಿಗಳನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಆದರೆ ಆಹಾರ, ವಸತಿ, ಸಾಮಾಜಿಕ ಭದ್ರತೆ ಅಥವಾ ಉಪಶಾಮಕ ಆರೈಕೆಯ ಕ್ಷೇತ್ರಗಳಲ್ಲಿ ಎ.ಎ.ವೈ ಅಥವಾ ಸರ್ಕಾರಿ ಯೋಜನೆಯಡಿಯಲ್ಲಿ ಒಂದು ಕುಟುಂಬ ಅಥವಾ ವ್ಯಕ್ತಿಯನ್ನು ಸೇರಿಸಿದ್ದರೆ, ಅವರು ಇಪಿಇಪಿಯಿಂದ ತಂತಾನೇ ಹೊರಗಿಡಲ್ಪಡುವುದಿಲ್ಲ. ಕಾರಣವೆಂದರೆ ನಿರ್ಗತಿಕ – ಮುಕ್ತ ಕೇರಳ ಯೋಜನೆಯು ನಿರ್ಗತಿಕರಿಗೆ ಸಮಗ್ರ ವ್ಯಾಪ್ತಿಯನ್ನು ಒದಗಿಸಿದರೆ ,ಎಎವೈ ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯಂತಹ ಒಂದೆರಡು ಇತರ ಯೋಜನೆ ಒಂದೇ ಅಭಾವವನ್ನು ಪೂರೈಸಿ ಇತರ ಆಯಾಮಗಳನ್ನು ಪರಿಗಣಿಸದೆ ಬಿಡುತ್ತದೆ

ಮೊದಲಿಗೆ, ಪಂಚಾಯತ್ – ಅಥವಾ ಪುರಸಭೆ – ಅಥವಾ ನಿಗಮ ಮಟ್ಟದಲ್ಲಿ ವಾರ್ಡ್ ಸಮಿತಿಗಳು ತಮ್ಮ ದತ್ತಾಂಶಗಳಿಂದ ಸಂಭಾವ್ಯ ಫಲಾನುಭವಿಗಳ ದೀರ್ಘ ಪ್ರಾಥಮಿಕ ಪಟ್ಟಿಯನ್ನು ತಯಾರು ಮಾಡಿದವು. ಕುಟುಂಬಶ್ರೀ ಘಟಕಗಳು ಮತ್ತು ಈ ಪ್ರದೇಶದ ವಿವಿಧ ದತ್ತಿ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ಸಂಭಾವ್ಯ ಫಲಾನುಭವಿಗಳ ಹೆಚ್ಚುವರಿ ಪಟ್ಟಿಗಳನ್ನು ತೆಗೆದುಕೊಂಡವು. ಇದು ಇಪಿಇಪಿಗೆ ಸೇರಿಸುವಲ್ಲಿ ದೊಡ್ಡ ಪ್ರಮಾಣದ ಭಾಗವಹಿಸುವಿಕೆಯ ಪ್ರಕ್ರಿಯೆಯನ್ನು ರೂಪಿಸಿತು. ಪ್ರತಿ ವಾರ್ಡ್‌ನಲ್ಲಿ ಫಲಾನುಭವಿಗಳ ಪ್ರಾಥಮಿಕ ಪಟ್ಟಿಯ ಮೇಲೆ ಗಮನ ಕೇಂದ್ರೀಕರಿಸಿ ಗುಂಪು ಚರ್ಚೆಗಳನ್ನು ನಡೆಸಲಾಯಿತು. ಇದು 118, 309 ಕುಟುಂಬಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಕೊನೆಗೊಂಡಿತು. ಮೊದಲ ಪಟ್ಟಿಯನ್ನು ತಯಾರಿಸಲು ಗುರುತಿಸಲಾದ ಮಾನದಂಡಗಳು (ಎ) ಆಹಾರ ಭದ್ರತೆ, (ಬಿ) ಆರೋಗ್ಯ ರಕ್ಷಣೆ, (ಸಿ) ಆದಾಯ ಉತ್ಪಾದನೆ ಮತ್ತು (ಡಿ) ಸುರಕ್ಷಿತ ಮತ್ತುಸುಭದ್ರಆಶ್ರಯ.

ಈ ಸಂಭಾವ್ಯ ಫಲಾನುಭವಿಗಳ ಪಟ್ಟಿಯಿಂದ, ಚಾಲ್ತಿಯಲ್ಲಿರುವ ನಿರ್ಗತಿಕ-ಮುಕ್ತ ಕೇರಳ ಯೋಜನೆಯಲ್ಲಿ ಸೇರಿಸಲಾದವರನ್ನು ಹೊರಗಿಡಲಾಯಿತು. ಇದರ ಪರಿಣಾಮವಾಗಿ 87,158 ಕುಟುಂಬಗಳ ಎರಡನೇ ಪಟ್ಟಿ ಬಂದಿತು. ಎರಡನೇ ಪಟ್ಟಿಯನ್ನು ಪ್ರತಿ ವಾರ್ಡ್‌ನ ಗ್ರಾಮ ಸಭೆಗಳಲ್ಲಿ ಇರಿಸಿ ಅನುಮೋದನೆ ಪಡೆಯಲಾಯಿತು. ನಂತರ, ಸ್ವಯಂಸೇವಕರು ಈ 87,158 ಕುಟುಂಬಗಳನ್ನು ಭೇಟಿ ಮಾಡಿ ಮೊಬೈಲ್ ಅರ್ಜಿಯ ಸಹಾಯದಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಿದರು. ಹಲವು ಕುಟುಂಬಗಳು ಅಸ್ತಿತ್ವದಲ್ಲಿರುವ ಒಂದಕ್ಕಿಂತ ಹೆಚ್ಚು ಬಡತನ ನಿರ್ಮೂಲನಾ ಯೋಜನೆಯ ಫಲಾನುಭವಿಗಳಾಗಿ ಕಂಡುಬಂದ ಕಾರಣ ಅಂತಹ ಕುಟುಂಬಗಳನ್ನು ಎರಡನೇ ಪಟ್ಟಿಯಿಂದ ಹೊರಗಿಡಲಾಯಿತು.

ಹೀಗಾಗಿ, 73,747 ಕುಟುಂಬಗಳ ಮೂರನೇ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ನಾಲ್ಕನೇ ಮತ್ತು ಅಂತಿಮ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು, ಮೊಬೈಲ್ ಅರ್ಜಿಯೊಂದಿಗೆ ಸಂಗ್ರಹಿಸಿದ ಮಾಹಿತಿಯ 20% ಗೆ ಸಂಬಂಧಿಸಿದಂತೆ ಒಂದು ಸುತ್ತಿನ ಸೂಪರ್-ಚೆಕ್ ನಡೆಸಲಾಯಿತು. ಅಂತಿಮವಾಗಿ, 64,006 ಕುಟುಂಬಗಳ ದೃಢೀಕೃತ ಪಟ್ಟಿಯನ್ನು ತಯಾರಿಸಿ, ಅಭಿಪ್ರಾಯಗಳಿಗಾಗಿ ಪ್ರಕಟಿಸಲಾಯಿತು ಮತ್ತು ಗ್ರಾಮ ಸಭೆಗಳಲ್ಲಿ ಮತ್ತೊಮ್ಮೆ ಅನುಮೋದಿಸಲಾಯಿತು.ಅದು103,099 ಜನರಿದ್ದ64,006 ಕುಟುಂಬಗಳನ್ನುಒಳಗೊಂಡಿತ್ತು.

ಪಟ್ಟಿಯಲ್ಲಿದ್ದ 64,006 ಕುಟುಂಬಗಳಲ್ಲಿ ಪ್ರತಿಯೊಂದಕ್ಕೂ, ಸ್ಥಳೀಯ ಸಂಸ್ಥೆಗಳು ಮತ್ತು ಕುಟುಂಬಶ್ರೀ ಗುಂಪುಗಳು ತಳಮಟ್ಟದಲ್ಲಿಯೋಜನೆಗಳನ್ನು ಸಿದ್ಧಪಡಿಸಿದವು. ಇವುತಲೆಗೆಲ್ಲಾ ಒಂದೇ ಮಂತ್ರ ಎಂಬ ರೀತಿಯ ಯೋಜನೆಗಳಲ್ಲ, ಬದಲಾಗಿ ಈ ಯೋಜನೆಯಲ್ಲಿ ಒಳಗೊಳ್ಳಲು ಗುರುತು ಮಾಡಿದ ಪ್ರತಿಯೊಂದು ಕುಟುಂಬದ ನಿರ್ದಿಷ್ಟ ಜೀವನೋಪಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿಸಲ್ಪಟ್ಟವುಗಳು. ಉದಾಹರಣೆಗೆ, ಒಂದು ಕುಟುಂಬವು ಮನೆ ನಿರ್ಮಿಸಲು ಸಮರ್ಪಕವಾಗಿರದ ಒಂದು ಸಣ್ಣ ಜಮೀನನ್ನು ಹೊಂದಿರಬಹುದು. ಅಂತಹ ಕುಟುಂಬಕ್ಕೆ ಸೂಕ್ತದೊಡ್ಡ ಜಮೀನನ್ನು ಒದಗಿಸಲಾಗಿದೆ. ಮತ್ತೊಂದು ಕುಟುಂಬವು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆ ಅಥವಾ ವೀಲ್‌ಚೇರ್‌ ನಂತಹ ನಿರ್ದಿಷ್ಟ ಅವಶ್ಯಕತೆಯನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆಯನ್ನು ಆಯೋಜಿಸಲಾಯಿತು, ಅಥವಾ ವೀಲ್‌ಚೇರ್ ಅನ್ನು ಉಚಿತವಾಗಿ ನೀಡಲಾಯಿತು. ಅಂತಹ ತಳಮಟ್ಟದ ಯೋಜನೆಗಳ ವಿನ್ಯಾಸ ಮತ್ತು ಅನುಷ್ಠಾನದ ಮೂಲಕ ಗುರುತಿಸಲಾದ ಎಲ್ಲಾ ಕುಟುಂಬಗಳನ್ನು ಅವರ ಕಠಿಣ ಪರಿಸ್ಥಿತಿಯಿಂದ ಯೋಗಕ್ಷೇಮದ, ಘನತೆಯ ಮತ್ತು ಸ್ವಾವಲಂಬನೆಯಸ್ಥಿತಿಗೆ ಎತ್ತಲಾಯಿತು. ಇವು ಕೇವಲ ಸಹಾನುಭೂತಿಯ ಇಂಗಿತಗಳಲ್ಲ, ಬದಲಿಗೆ ಸಂರಚನಾತ್ಮಕ, ಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಆಳ್ವಿಕೆಯ ಪ್ರಕ್ರಿಯೆಯ ಫಲಿತಾಂಶ.

ಎತ್ತಿರುವಪ್ರಶ್ನೆಗಳು, ಆತಂಕಗಳಬಗ್ಗೆ

ಈ ವಿಷಯದಲ್ಲಿತೀರ್ಮಾನವನ್ನುತಿಳಿಸುವಬದಲಾಗಿ ಈ ಕೆಳಗಿನ ಅಂಶಗಳನ್ನು ಪಟ್ಟಿಮಾಡಬಹುದು. ಈ ಅಂಶಗಳು ಕೇರಳದ ಈ ಸಾಧನೆಯ ಕುರಿತು ವಿವಿಧ ವಲಯಗಳಿಂದ ಎತ್ತಿರುವ ಪ್ರಶ್ನೆಗಳಿಗೆ, ಆತಂಕಗಳಿಗೆ ಒಂದು ಸ್ಪಂದನೆಯೂ ಆಗಬಹುದು.

ಮೊದಲನೆಯದಾಗಿ, ಕೇರಳವು “ಬಡತನವನ್ನು” ನಿರ್ಮೂಲನೆ ಮಾಡಿದೆ ಎಂಬ ಯಾವುದೇ ದಾವೆಯನ್ನುಮಾಡಿಲ್ಲ. ತಾವು ‘ತೀವ್ರಬಡತನ’ವನ್ನು ನಿರ್ಮೂಲನೆ ಮಾಡಿದ್ದೇವೆಯೆಂದಷ್ಟೇ ಅದರ ದಾವೆ. ಇದಕ್ಕಾಗಿ, ಅದು “ಅತ್ಯಂತಬಡವರು” ಯಾರು ಎಂಬುದಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಅನುಸರಿಸಿತು; ಈ ಯೋಜನೆಯಲ್ಲಿ ಸೇರಿಸಬೇಕಾದವರನ್ನು ಗುರುತಿಸುವಲ್ಲಿ ಸಂಬಂಧ ಪಟ್ಟ ಎಲ್ಲರ ಭಾಗವಹಿಸುವಂತಹ ಪ್ರಕ್ರಿಯೆಯನ್ನು ಅನುಸರಿಸಿತು; ಪರಿಹಾರ ಅಥವಾ ಜೀವನೋಪಾಯ ನಿರ್ಮಾಣವನ್ನುಒಂದು ವೈಜ್ಞಾನಿಕವಾಗಿ ಮತ್ತು ನಿರ್ದಿಷ್ಟ ವ್ಯಕ್ತಿ/ಕುಟುಂಬಕ್ಕೆ ಸೂಕ್ತವಾಗುವಂತೆ ರೂಪಿಸಲಾಯಿತು; ಮತ್ತು ಪ್ರಜಾಸತ್ತಾತ್ಮಕ ಮತ್ತು ವಿಕೇಂದ್ರೀಕೃತ ಉಸ್ತುವಾರಿ ವ್ಯವಸ್ಥೆಯಲ್ಲಿ ನಡೆಸಲಾಯಿತು.  ಒಟ್ಟು ಕಾರ್ಯಕ್ರಮದ ಸ್ಥಿತಿ-ಗತಿಯ ವಿವರಗಳನ್ನು ಕಾಲ ಕಾಲಕ್ಕೆ ರಾಜ್ಯ ಯೋಜನಾ ಮಂಡಳಿಯ ವಾರ್ಷಿಕ ಆರ್ಥಿಕ ಪರಾಮರ್ಶೆಯಂತಹ ವಿವಿಧ ಅಧಿಕೃತ ವರದಿಗಳಲ್ಲಿ ಪ್ರಕಟಿಸಲಾಯಿತು. ಫಲಾನುಭವಿಗಳ ಸಂಖ್ಯೆಯನ್ನು 118,309 ಕುಟುಂಬಗಳಿಂದ ಆರಂಭಿಸಿ, ಅಂತಿಮವಾಗಿ 64,006 ಅತ್ಯಂತ ಬಡ ಕುಟುಂಬಗಳನ್ನು ಗುರುತಿಸಲು ಹಂತಹಂತವಾಗಿ ಅನುಸರಿಸಿದ ಕಾರ್ಯವಿಧಾನಗಳನ್ನು ಮೇಲೆ ವಿವರಿಸಲಾಗಿದೆ ಮತ್ತು ಇದು2021 ರಿಂದಲೇ ಸಾರ್ವಜನಿಕವಾಗಿ ಲಭ್ಯವಿತ್ತು.

ಎರಡನೆಯದಾಗಿ, ಇಂದು ಭಾರತದಲ್ಲಿ ತೀವ್ರ ಬಡತನಕ್ಕೆ ಯಾವುದೇ ಅಧಿಕೃತ ವ್ಯಾಖ್ಯಾನವಿಲ್ಲ. ಎಎವೈಆಹಾರ ಧಾನ್ಯಗಳನ್ನು ಸಬ್ಸಿಡಿದರಗಳಲ್ಲಿಅಥವಾ ಉಚಿತವಾಗಿ ಒದಗಿಸುವ ಉದ್ದೇಶಕ್ಕಾಗಿ ಗುರುತಿಸಲಾದ ಫಲಾನುಭವಿಗಳ ಪಟ್ಟಿಯನ್ನು ಹೊಂದಿದೆ. ಎಎವೈಯ ಫಲಾನುಭವಿಯಾಗಿರುವುದು ಒಂದು ಕುಟುಂಬ ಅಥವಾ ವ್ಯಕ್ತಿಯನ್ನು “ಅತ್ಯಂತ ಬಡವರು” ಎಂದು ವರ್ಗೀಕರಿಸುವುದಿಲ್ಲ. ಏಕೆಂದರೆ ಇದು ವಂಚಿತತೆಯ ಒಂದು ಆಯಾಮವನ್ನು, ಅಂದರೆ, ಆಹಾರ ಭದ್ರತೆಯನ್ನು ಮಾತ್ರ ಒಳಗೊಂಡಿದೆ. ಆದರೆ ಇಪಿಇಪಿ “ಅತ್ಯಂತ ಬಡವರು” ಎಂದು ಗುರುತಿಸಲು ಒಂದು ನಿರ್ದಿಷ್ಟ ವ್ಯಾಖ್ಯಾನ ಮತ್ತು ಬಹು ಆಯಾಮದ ಮಾನದಂಡಗಳ ಒಂದು ಗುಚ್ಛವನ್ನು ಬಳಸಿತು. ವಂಚಿತತೆಯ ಅತ್ಯಂತ ತೀವ್ರ ಸಂಕಷ್ಟದಿಂದ ಬಳಲುತ್ತಿರುವವರನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಬಹು ಮುಖ್ಯವಾಗಿ, ಎಎವೈ ಕುಟುಂಬವನ್ನು ಇಪಿಇಪಿನಲ್ಲಿ ಫಲಾನುಭವಿಯಾಗಿ ಸೇರಿಸಿದರೆ, ಅದು ಎಎವೈ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುವುದರಿಂದ ಹೊರಗಿಡುವುದಿಲ್ಲ. ಇಪಿಇಪಿ ಜೊತೆಗೇ ಎಎವೈ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.

ಮೂರನೆಯದಾಗಿ,ಎಎವೈ ಕಾರ್ಯನಿರ್ವಹಣೆ ಮುಂದುವರೆಯುವಂತೆಯೇ, ನಿರ್ಗತಿಕ-ಮುಕ್ತ ಕೇರಳ ಯೋಜನೆಯು ಸಹ 1.57 ಲಕ್ಷ ಕುಟುಂಬಗಳನ್ನು ಒಳಗೊಳ್ಳುವುದು ಕೂಡ ಮುಂದುವರಿಯುತ್ತದೆ. ಪ್ರಸ್ತುತ ಯೋಜನೆಯಡಿಯಲ್ಲಿ, ಅವರನ್ನು “ನಿರ್ಗತಿಕರು” ಅಥವಾ “ಅಗತಿ” ಎಂದು ವರ್ಗೀಕರಿಸಲಾಗಿದೆ. ಅವರು ಕೂಡ ಇಪಿಇಪಿ “ಅತ್ಯಂತ ಬಡವರು” ಎಂದು ಗುರುತಿಸಿರುವ 64,006 ಕುಟುಂಬಗಳ ಜೊತೆಗೆ ಅವರು ಒಂದು ಭಿನ್ನವಿಧವಾಗಿ ಇರುತ್ತಾರೆ ಮತ್ತು ನಿರ್ಗತಿಕ-ಮುಕ್ತ ಕೇರಳ ಯೋಜನೆಯಿಂದ ಅವರು ಪ್ರಸ್ತುತ ಪಡೆಯುತ್ತಿರುವ ಪ್ರಯೋಜನಗಳು ಮುಂದುವರೆಯುತ್ತವೆ.

ನಾಲ್ಕನೆಯದಾಗಿ,ಇಪಿಇಪಿ 1.0 ರ ಪ್ರಾರಂಭ ಮತ್ತು ಪೂರ್ಣಗೊಂಡಿರುವುದು ಪ್ರಸ್ತುತ ನಡೆಯುತ್ತಿರುವ ನಿರ್ಗತಿಕ-ಮುಕ್ತ ಕೇರಳ ಯೋಜನೆಯ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಏನನ್ನೂ ಹೇಳುವುದಿಲ್ಲ. ನಿರ್ಗತಿಕ-ಮುಕ್ತ ಕೇರಳ ಯೋಜನೆಯ ಮೌಲ್ಯಮಾಪನವನ್ನು ಯಾವುದೇ ಸಮಯದಲ್ಲಿ ಆಯೋಜಿಸಬಹುದು. ಆದರೆ ಇಪಿಇಪಿ ಅಡಿಯಲ್ಲಿ ಗುರುತಿಸಲಾದ 64,006 ಕುಟುಂಬಗಳು ನಿರ್ಗತಿಕ-ಮುಕ್ತ ಕೇರಳ ಯೋಜನೆಯಡಿಯಲ್ಲಿ ಒಳಗೊಂಡಿರುವ 1.57 ಲಕ್ಷ ಕುಟುಂಬಗಳಗಳಲ್ಲಿ ಸೇರಿರುವುದಿಲ್ಲ, ಆದರೆ ಈ ಯೋಜನೆಗಳ ನಡುವ ಮೇಲು-ವ್ಯಾಪನೆ ಇಲ್ಲ ಎಂಬುದು ಸತ್ಯ. ಈ ಅರ್ಥದಲ್ಲಿ, ಇಪಿಇಪಿ ನಿರ್ಗತಿಕ-ಮುಕ್ತ ಕೇರಳ ಯೋಜನೆಯಡಿಯಲ್ಲಿ ಮಾಡಿರುವ ಪ್ರಯತ್ನಗಳ ವಿಸ್ತರಣೆಯಾಗಿದೆ.

ಐದನೆಯದಾಗಿ, ಪ್ರತಿ ಸ್ಥಳೀಯ ಆಢಳಿತದ ಮಟ್ಟದಲ್ಲಿ ವಿಸ್ತಾರವಾದ ಮತ್ತು ಪ್ರಜಾಸತ್ತಾತ್ಮಕ ಪರಿಶೀಲನೆಗಳ ನಂತರ ತೀವ್ರ ಬಡತನ ನಿರ್ಮೂಲನೆಯ ಘೋಷಣೆಯನ್ನು ಮಾಡಲಾಯಿತು. ಸಾಧ್ಯವಾದಲ್ಲೆಲ್ಲಾ ಅಸ್ತಿತ್ವದಲ್ಲಿರುವ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒಟ್ಟುಗೂಡಿಸುವುದು ಇಪಿಇಪಿ ಗುರಿಯಾಗಿದೆ. ಪ್ರತಿ ಮನೆಯ ಪರಿಸ್ಥಿತಿಯನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಯೋಜನೆಗಳು ಅಸಮರ್ಪಕವೆಂದು ಕಂಡುಬಂದಲ್ಲಿ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಹೊಸ ಸಂಪನ್ಮೂಲಗಳನ್ನು ಬಳಸುವ ಗುರಿಯನ್ನು ಇದು ಹೊಂದಿದೆ. ವ್ಯಕ್ತಿ-ಸೂಕ್ತಗೊಳಿಸಿದತಳಮಟ್ಟದ ಯೋಜನೆಗಳ ರೂಪೀಕರಣವು ಅಂತಹ ತತ್ವವನ್ನು ಅನುಸರಿಸಿತು. ಪ್ರತಿಯೊಂದು ಸ್ಥಳೀಯ ಚುನಾಯಿತ ಸಂಸ್ಥೆಯು ಇಪಿಇಪಿಯ ಭಾಗವಾಗಿ ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ಚಟುವಟಿಕೆಗಳ ಸಮಗ್ರ ವರದಿಯನ್ನು ಹೊಂದಿದೆ. ಫಲಾನುಭವಿಗಳ ರಾಜ್ಯ ಮಟ್ಟದ ಪಟ್ಟಿ ಮತ್ತು ತಳಮಟ್ಟದಯೋಜನೆಗಳಮಾಹಿತಿ ಸಹ ಲಭ್ಯವಿದೆ; ಆದರೆ ಗೌಪ್ಯತೆ ಕಾರಣಗಳಿಂದಾಗಿ ಅವನ್ನು ಪ್ರಕಟಿಸಲಾಗಿಲ್ಲ.

ಆರನೆಯದಾಗಿ, ನಿರ್ಗತಿಕ-ಮುಕ್ತ ಕೇರಳ ಯೋಜನೆಯಲ್ಲಿ ದಲಿತ ಮತ್ತು ಆದಿವಾಸಿ ಕುಟುಂಬಗಳ ವ್ಯಾಪಕ ವ್ಯಾಪ್ತಿಯನ್ನು ಗಮನಿಸಿದರೆ, 64,006 ಕುಟುಂಬಗಳ ಪಟ್ಟಿಯಲ್ಲಿರುವ ಪ್ರತಿಯೊಂದು ಜಾತಿ ಗುಂಪಿನ ಪಾಲುಗಳು ಜನಸಂಖ್ಯೆಯಲ್ಲಿನ ಅವರ ಪಾಲು ಅಥವಾ ಅವರೊಳಗಿನ ಬಡತನದ ಪ್ರಮಾಣಕ್ಕೆ ಹೊಂದಿಕೆಯಾಗಬೇಕಾಗಿಲ್ಲ. ವಾಸ್ತವವಾಗಿ, 64,006 ಕುಟುಂಬಗಳ ಪಟ್ಟಿಯಲ್ಲಿ ಕೇವಲ 6,400 ಆದಿವಾಸಿ ಕುಟುಂಬಗಳು ಇದ್ದವು. ಕಾರಣವೆಂದರೆ ಆದಿವಾಸಿ ಕುಟುಂಬಗಳನ್ನು ಕೇರಳ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ನಿರ್ಗತಿಕ-ಮುಕ್ತ ಕೇರಳ ಯೋಜನೆಯಡಿಯಲ್ಲಿ ಸಮಗ್ರವಾಗಿ ಒಳಗೊಳ್ಳಲಾಗಿದೆ. 6,400 ಕುಟುಂಬಗಳು ಎಂಬ ಅಂಕಿಯು ಇಪಿಇಪಿಯಿಂದ ಆದಿವಾಸಿ ಕುಟುಂಬಗಳನ್ನು ಹೊರಗಿಡಲಾಗಿದೆ ಎಂಬುದನ್ನೂ ತೋರಿಸುತ್ತಿಲ್ಲ, ಅಥವಾ ಕೇರಳದ ಎಲ್ಲಾ ಆದಿವಾಸಿ ಕುಟುಂಬಗಳು ತಂತಾನೇ “ಅತ್ಯಂತ ಬಡವರು” ಎಂಬ ದೃಷ್ಟಿಕೋನದಿಂದ ಹುಟ್ಟಿಕೊಂಡಿದೆ ಎಂಬುದನ್ನೂ ತೋರಿಸುತ್ತಿಲ್ಲ.

ಏಳನೆಯದಾಗಿ, ಇಪಿಇಪಿ ಫಲಾನುಭವಿಗಳ ಮೊದಲ ಪಟ್ಟಿಯ ತಯಾರಿಕೆಯು ಸೇರ್ಪಡೆ ಪ್ರಕ್ರಿಯೆಯಲ್ಲಿ ಗರಿಷ್ಟ ಭಾಗವಹಿಸುವಿಕೆಯನ್ನು ಅನುಸರಿಸಿತು ಮತ್ತು ಅದು ಜನಗಣತಿ ಸಮೀಕ್ಷೆಯನ್ನು ಆಧರಿಸಿರಲಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. ಈ ಸೇರ್ಪಡೆ ಪ್ರಕ್ರಿಯೆಯು ಮುಕ್ತವಾಗಿತ್ತು ಮತ್ತು ಪ್ರತಿ ಸ್ಥಳೀಯ ಸರ್ಕಾರದಿಂದ ಸೇರ್ಪಡೆಯಾಗುವ ಕುಟುಂಬಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯನ್ನು ಹೇರಿರಲಿಲ್ಲ. ಈ ಸೇರ್ಪಡೆಗಳನ್ನು ಕುಟುಂಬಶ್ರೀ ಗುಂಪುಗಳ ಶಿಫಾರಸುಗಳೊಂದಿಗೆ ಮತ್ತು ವಾರ್ಡ್ ಸಮಿತಿಗಳು ಸ್ವೀಕರಿಸಿದ ಇತರ ಪಟ್ಟಿಗಳೊಂದಿಗೆ ಸಂಯೋಜಿಸಲಾಗಿದೆ. ಅಂತಿಮ ಪಟ್ಟಿಯನ್ನು ಅನುಮೋದಿಸುವವರೆಗೆ ಈ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಅಧಿಕೃತವಾಗಿ ದಾಖಲಿಸಲಾಗಿದೆ ಮತ್ತು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿ ಲಭ್ಯಗೊಳಿಸಲಾಗಿದೆ.

ಇದನ್ನೂ ನೋಡಿ: ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media

 

ಕೊನೆಯದಾಗಿ, ಭಾರತ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರನ್ನು – ಮತ್ತು ಅವರಿಗೆ ಕನಿಷ್ಠ ವೇತನ ನಿರಾಕರಿಸಲಾಗುತ್ತಿರುವವರನ್ನು -ತಂತಾನೇ ಅತ್ಯಂತ ಬಡವರು ಎಂದು ಪರಿಗಣಿಸಬಾರದು ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಉದಾಹರಣೆಗೆ, ಕೇರಳದಲ್ಲಿ ಆಶಾ ಕಾರ್ಯಕರ್ತೆಯರು ತಿಂಗಳಿಗೆ ಸರಾಸರಿ ₹450-₹470 ದೈನಂದಿನ ವೇತನವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಅಧಿಕೃತ ತೆಂಡೂಲ್ಕರ್ ಬಡತನ ರೇಖೆ ಎಂದು ನಿಗದಿಪಡಿಸಲಾದ ಸರಾಸರಿ ತಲಾ ಬಳಕೆಯ ವೆಚ್ಚವು ದಿನಕ್ಕೆ ₹60-₹70 ಮಾತ್ರ. ವಾಸ್ತವವಾಗಿ, ಆಶಾ ಕಾರ್ಯಕರ್ತೆಯರಿಗೆ ಖಚಿತವಾದ ಕನಿಷ್ಠ ವೇತನವನ್ನು ಒದಗಿಸುವುದನ್ನು ರಾಜಕೀಯ ಬೇಡಿಕೆಯಾಗಿ ರಾಷ್ಟ್ರೀಯವಾಗಿ ಹೆಚ್ಚಿಸಬೇಕು. ತೆಂಡೂಲ್ಕರ್ ಬಡತನ ರೇಖೆಯನ್ನು ತಿರಸ್ಕರಿಸುವ ಮತ್ತು ಕನಿಷ್ಠ ವೇತನ ಆಧಾರಿತ ಬಡತನ ರೇಖೆಯನ್ನು ಅಳವಡಿಸಿಕೊಳ್ಳುವ ಅನೇಕ ಅಧ್ಯಯನಗಳು ಈಗಾಗಲೇ ಮಾಡಿರುವಂತೆ, ಆಶಾ ಕಾರ್ಯಕರ್ತೆಯರನ್ನು “ಬಡವರು” ಎಂದು ವರ್ಗೀಕರಿಸಲು ಬಲವಾದ ಕಾರಣವೂ ಇದೆ. ಆದರೆ ಕನಿಷ್ಠ ವೇತನ ನಿರಾಕರಣೆಯು ಒಬ್ಬರನ್ನು “ಅತ್ಯಂತ ಬಡವರು” ಎಂದು ವರ್ಗೀಕರಿಸಲು ಅರ್ಹಗೊಳಿಸುವುದಿಲ್ಲ; ಇಪಿಇಪಿಯಲ್ಲಿ ಅನುಸರಿಸಲಾಗಿರವ ವ್ಯಾಖ್ಯಾನಗಳು ಮತ್ತು ಮಾನದಂಡಗಳು ಭಿನ್ನವಾಗಿವೆ.

ಬಡತನ ನಿರ್ಮೂಲನೆ ಒಂದು ನಿರಂತರ ಪ್ರಕ್ರಿಯೆಯಾಗಿದೆ –ಅದು ಯಾವಾಗಲೂ ಚಲನಶೀಲ ಮತ್ತು ಎಂದಿಗೂ ನಿಶ್ಚಲವಲ್ಲ. ಬಡತನವನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನಿಸುವುದು ಕಷ್ಟ ಎಂಬ ಕಾರಣದಿಂದಾಗಿ ಮಾತ್ರವಲ್ಲ, ಜೀವನೋಪಾಯದ ಆಘಾತಗಳ ಸಂದರ್ಭದಲ್ಲಿ ದುರ್ಬಲ ಕುಟುಂಬಗಳು ಮತ್ತೆ ಬಡತನಕ್ಕೆ ಜಾರುತ್ತವೆ ಎಂಬ ಕಾರಣದಿಂದಾಗಿಯೂ ಇದು ಸಂಭವಿಸುತ್ತದೆ. ಇದಲ್ಲದೆ, ಸರ್ಕಾರವು ಮಾನದಂಡಗಳನ್ನು ವಿಸ್ತರಿಸಲು ನಿರ್ಧರಿಸಿದರೆ “ಅತ್ಯಂತ ಬಡವರು” ಎಂದು ವ್ಯಾಖ್ಯಾನಿಸಬಹುದಾದ ಹೆಚ್ಚಿನ ಕುಟುಂಬಗಳು ಇರಬಹುದು. ಇವೆಲ್ಲವೂ ಇಪಿಇಪಿ 2.0 ಅನ್ನು ರೂಪಿಸುವ ಅಗತ್ಯವನ್ನು ಪ್ರಕಟಪಡಿಸುತ್ತವೆ, ಇದು ಈಗಿನದಕ್ಕಿಂತ ದೊಡ್ಡದಾಗಿರಬೇಕು, ಅದರಲ್ಲಿ ಸೇರ್ಪಡೆ ಉತ್ತಮಗೊಳ್ಳಬೇಕು ಮತ್ತು ಪ್ರಯೋಜನಗಳನ್ನು ವಿಸ್ತರಿಸಬೇಕು. ಇವೆಲ್ಲವೂ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ನಿಲುವುಗಳೇ ಆಗಿವೆ. ಆದರೆ ಇಪಿಇಪಿ 1.0 ಬಗ್ಗೆ ಆಧಾರರಹಿತ ಟೀಕೆಗಳು ಮತ್ತು ಸರಿಯಾದ ತಿಳುವಳಿಕೆ ಇಲ್ಲದ ಪ್ರಶ್ನೆಗಳನ್ನು ಎತ್ತುವುದು ಒಂದು ಅಸಾಧಾರಣ ಶ್ಲಾಘನೀಯ ಪ್ರಜಾಸತ್ತಾತ್ಮಕ ಕಾರ್ಯಕ್ರಮ ಮತ್ತು ಅದರ ಹಿಂದಿರುವ ರಾಜಕೀಯದ ಬಗ್ಗೆ ಅಸಡ್ಡೆ ಮತ್ತು ತಿರಸ್ಕಾರವನ್ನು ತೋರಿಸುತ್ತದಷ್ಟೆ.

(ದಿ ನ್ಯೂಸ್‍ಮಿನಿಟ್ ಜಾಲತಾಣ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಕನ್ನಡ ಅನುವಾದ)

Donate Janashakthi Media

Leave a Reply

Your email address will not be published. Required fields are marked *