“ಕಮ್ಯುನಿಸ್ಟ್ ಸಿದ್ಧಾಂತವನ್ನು ಹೊಂದಿರುವ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಗೆದ್ದರೆ, ಕನಿಷ್ಠ ಅಗತ್ಯಗಳಿಗೆ ಸಾಕಾಗುವಷ್ಟೇ ಹಣವನ್ನು ನಾನು ಹಂಚಿಕೆ ಮಾಡುತ್ತೇನೆ” -ಇದು ಚುನಾವಣೆಗೆ ಕೆಲವು ಗಂಟೆಗಳ ಮೊದಲು, ಅಮೆರಿಕ ಅಧ್ಯಕ್ಷ ಟ್ರಂಪ್ ರವರ ಸಾಮಾಜಿಕ ಮಾಧ್ಯಮ ಪೋಸ್ಟ್. ಟ್ರಂಪ್ ರ ಈ ಕೊನೆಯ ಪ್ರಯತ್ನವೂ ವಿಫಲವಾಗಿ, ಡೆಮಾಕ್ರಟಿಕ್ ಪಕ್ಷದ ಜೋಹ್ರಾನ್ ಮಮ್ದಾನಿ ಜಗತ್ತಿನ ಅತಿ ಶ್ರೀಮಂತ ದೊಡ್ಡ ನಗರವೆನಿಸಿರುವ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಭಾರತೀಯ-ಉಗಾಂಡಾ ಮೂಲದ ಈ ಅಭ್ಯರ್ಥಿಯ ಸೋಲಿಗೆ ಟ್ರಂಪ್ ಸ್ವತಃ ತಲೆಕೆಡಿಸಿಕೊಂಡದ್ದು ಈ ಚುನಾವಣೆಯು ಅಮೆರಿಕಾದ ಅಧ್ಯಕ್ಷರಿಗೆ ಎಷ್ಟು ಪ್ರತಿಷ್ಠಿತವಾಗಿತ್ತು ಎಂಬುದನ್ನು ತೋರಿಸುತ್ತದೆ.
ಸಿ.ಸಿದ್ದಯ್ಯ
ತನ್ನನ್ನು ತಾನು ಸಮಾಜವಾದಿ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಜೋಹ್ರಾಮ್ ಮಮ್ದಾನಿ ಬಹಳ ನಿರ್ಣಾಯಕವಾಗಿರುವ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ (34 ವರ್ಷ) ಎಂಬ ದಾಖಲೆಯನ್ನು ಈಗ ಜೋಹ್ರಾನ್ ಮಮ್ದಾನಿ ನಿರ್ಮಿಸಿದ್ದಾರೆ. ಜೋಹ್ರಾನ್ ಮಮ್ದಾನಿ ಶೇ. 50.4 ಮತಗಳನ್ನು ಗಳಿಸಿದ್ದಾರೆ ಮತ್ತು ಆಂಡ್ರ್ಯೂ ಕ್ಯುಮೊ ಶೇ. 41.6 ಮತಗಳನ್ನು ಗಳಿಸಿದ್ದಾರೆ. ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಕೇವಲ ಶೇ. 7.1 ಮತಗಳನ್ನು ಮಾತ್ರ ಗಳಿಸಿದ್ದಾರೆ. ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ, ಒಂದು ಶತಮಾನಕ್ಕೂ ಹೆಚ್ಚು ಕಾಲ ನಗರದ ಮೊದಲ ಮುಸ್ಲಿಂ ಮತ್ತು ಕಿರಿಯ ಮೇಯರ್ ಆಗಿದ್ದಾರೆ.
ಇದಲ್ಲದೆ ಅಮೆರಿಕ ಸ್ಥಳೀಯ ಚುನಾವಣೆಯ ಫಲಿತಾಂಶಗಳು ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್ ಪಕ್ಷವನ್ನು ಬೆಚ್ಚಿಬೀಳಿಸಿವೆ. ವರ್ಜಿನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳ ಗವರ್ನರ್ ಚುನಾವಣೆಗಳಲ್ಲೂ ಡೆಮಾಕ್ರೆಟಿಕ್ ಪಕ್ಷದ ಮಂದಗಾಮಿ ಅಭ್ಯರ್ಥಿಗಳು ಕೂಡ ಟ್ರಂಪ್ ರವರ ಪಕ್ಷದ ಅಭ್ಯರ್ಥಿಗಳ ಮೇಲೆ ಜಯಗಳಿಸಿದ್ದಾರೆ. ಅಬಿಗೆಲ್ ಸ್ಪಾನ್‍ಬರ್ಗರ್ ಮತ್ತು ಮಿಕಿ ಶೆರ್ರಿಲ್ಲ್ ಮೊದಲ ಮಹಿಳಾ ಗವರ್ನರ್ ಮತ್ತು ಮೊದಲ ಡೆಮಾಕ್ರಟಿಕ್ ಮಹಿಳಾ ಗವರ್ನರ್ ಆಗಿದ್ದಾರೆ. ಭಾರತೀಯ ಮೂಲದ ಇನ್ನೊಬ್ಬ ಮಹಿಳಾ ಡೆಮಾಕ್ರಟಿಕ್ ಅಭ್ಯರ್ಥಿ ಘಜಾಲಾ ಹಾಶ್ಮಿ ಕೂಡ ವರ್ಜಿನಿಯಾ ರಾಜ್ಯದ ಉಪ ಗವರ್ನರ್ ಆಗಲಿದ್ದಾರೆ ಎನ್ನಲಾಗಿದೆ.
‘ಧೂಮ್ ಮಚಾ ಲೆ’
ಕಳೆದ 50 ವರ್ಷಗಳಲ್ಲೇ ಅತಿ ಹೆಚ್ಚು ಮತದಾನ ನಡೆದ ಚುನಾವಣೆಗಳಲ್ಲಿ 34 ವರ್ಷದ ಜೋಹ್ರಾನ್ ಮಮ್ದಾನಿ ಶೇ. 50.4 ಮತಗಳನ್ನು ಗಳಿಸಿದ್ದಾರೆ ಮತ್ತು ಆಂಡ್ರ್ಯೂ ಕ್ಯುಮೊ ಶೇ. 41.6 ಮತಗಳನ್ನು ಗಳಿಸಿದ್ದಾರೆ. ಟ್ರಂಪ್‍ರವರ ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಕೇವಲ ಶೇ. 7.1 ಮತಗಳನ್ನು ಮಾತ್ರ ಗಳಿಸಿದ್ದಾರೆ. ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ, ಒಂದು ಶತಮಾನಕ್ಕೂ ಹೆಚ್ಚು ಕಾಲದಲ್ಲಿ ನಗರದ ಮೊದಲ ಮುಸ್ಲಿಂ ಮತ್ತು ಅತ್ಯಂತ ಕಿರಿಯ ಮೇಯರ್ ಆಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಒಂದು ಕ್ಷಣವೆಂದರೆ, ಮಮ್ದಾನಿ ತನ್ನ ಭಾಷಣವನ್ನು ಮುಗಿಸಿದಾಗ ಜನಸಮೂಹವು ಚಪ್ಪಾಳೆ ತಟ್ಟುತ್ತಿದ್ದಂತೆ ಹಿನ್ನೆಲೆಯಲ್ಲಿ ಹಿಂದಿಯ ಜನಪ್ರಿಯ ಹಾಡು ‘ಧೂಮ್ ಮಚಾಲೆ’ ನುಡಿಸುವುದನ್ನು ತೋರಿಸುತ್ತದೆ.
ಚುನಾವಣೆಯಲ್ಲಿ ತನ್ನ ವಿಜಯದ ಸುದ್ದಿ ಕೇಳಿದ ಅವರು ಮೊದಲಿಗೆ ನೆನಪಿಸಿಕೊಂಡದ್ದು 1947ರ ಆಗಸ್ಟ್ 14-15ರ ಮಧ್ಯರಾತ್ರಿ, 1947ರಂದು ಭಾರತ ಸ್ವತಂತ್ರವಾಗುತ್ತಿದ್ದಾಗ ನೆಹರೂ ಮಾಡಿದ ಐತಿಹಾಸಿಕ ಭಾಷಣದ ಮೊದಲ ಸಾಲುಗಳು-“ ಇಂದು ರಾತ್ರಿ , ನ್ಯೂಯಾರ್ಕ್ ನಗರ ಹಳತಿನಿಂದ ಹೊಸದಕ್ಕೆ ಕಾಲಿಟ್ಟಿದೆ” ಎಂದ ಅವರು “ ಭವಿಷ್ಯ ನಮ್ಮ ಕೈಗಳಲ್ಲಿದೆ, ನಾವು ಒಂದು ರಾಜಕೀಯ ವಂಶವನ್ನು ಉರುಳಿಸಿದ್ದೇವೆ” ಎಂದು ಮಾರ್ಮಿಕವಾಗಿ ಹೇಳಿದರು.
ಜೋಹ್ರಾನ್ ಮಮ್ದಾನಿ, ಭಾರತೀಯ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಮತ್ತು ಗುಜರಾತ್ ಮೂಲದ ಉಗಾಂಡಾ ಪ್ರಜೆ ಮತ್ತು ರಾಜಕೀಯ ಶಾಸ್ತ್ರಜ್ಞ ಮಹಮೂದ್ ಮಮ್ದಾನಿ ಅವರ ಮಗ. ಅವರು ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು. ಅವರ ಪತ್ನಿ ರಮಾ ದುವಾಜಿ ಸಿರಿಯನ್ ಮೂಲದ ಕಲಾವಿದೆ. ಅವರು 2018 ರಲ್ಲಿ ಅಮೆರಿಕದ ಪೌರತ್ವ ಪಡೆದು, 2021 ರಿಂದ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ತನ್ನನ್ನು ತಾನು ಸಮಾಜವಾದಿ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿರುವ ಜೋಹ್ರಾನ್ ಮಮ್ದಾನಿ, ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಡೆಮಾಕ್ರಟಿಕ್ ಪ್ರಾಥಮಿಕವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದರು.
ಇದನ್ನೂ ಓದಿ : ಮರಕುಂಬಿ ಪ್ರಕರಣಕ್ಕೆ 1 ವರ್ಷ |ದಲಿತರು ಭಾಗವಹಿಸುತ್ತಾರೆ ಎಂದು ಜಾತ್ರೆಗಳನ್ನೇ ನಿಲ್ಲಿಸಿದರು…. ಸಮಾಜವಾದಿ
ಸಮಾಜವಾದಿ ಐಡೆಂಟಿಟಿ ಮತ್ತು ರಾಜಕೀಯ ನಿಲುವು
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಕುರಿತು ಪಕ್ಷದೊಳಗೆ ಚರ್ಚೆಗಳು ನಡೆಯುತ್ತಿದ್ದಂತೆ, ನ್ಯೂಯಾರ್ಕ್ ನಗರದ ನಿವಾಸಿಗಳಿಗೆ ಹೆಚ್ಚು ತಿಳಿದಿಲ್ಲದ ಜೋಹ್ರಾನ್ ಮಮ್ತಾನಿ ಅವರು ಪಕ್ಷದ ಪರವಾಗಿ ಸ್ಪರ್ಧೆಗೆ ಧುಮುಕಿದರು. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಯಾರೂ ನಿರೀಕ್ಷಿಸದ ರೀತಿಯಲ್ಲಿ, ಭಾರತೀಯ ಮೂಲದ ಯುವ ನಾಯಕ ಜೋಹ್ರಾನ್ ಮಮ್ದಾನಿ ಅಭ್ಯರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈಗ ಅವರಿಗೆ ನ್ಯೂಯಾರ್ಕ್ ನಗರದ ಜನರಿಂದಲೂ ಅಪಾರ ಬೆಂಬಲ ದೊರಕಿದೆ. ಜೋಹ್ರಾನ್ ಮಮ್ದಾನಿ ತಮ್ಮನ್ನು ತಾವು ಸಮಾಜವಾದಿ ಎಂದು ಘೋಷಿಸಿಕೊಂಡಿದ್ದಾರೆ. ಅವರಿಗೆ ಅಮೆರಿಕದ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷ ಬೆಂಬಲ ನೀಡಿತು. ಕಮ್ಯುನಿಸ್ಟರು ಮತ್ತು ಎಡಪಂಥೀಯರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದರು.
ಅತ್ಯಂತ ವೆಚ್ಚದಾಯಕ ನಗರವಾದ ನ್ಯೂಯಾರ್ಕಿನಲ್ಲಿ ಉಚಿತ ಬಸ್ ಪ್ರಯಾಣ, ಸಾರ್ವತ್ರಿಕ ಶಿಶು ಸೇವೆ, ಸಾರ್ವಜನಿಕ ಕಿರಾಣಿ ಅಂಗಡಿಗಳು, ಸ್ಥಿರಗೊಂಡಿರುವ ಅಪಾರ್ಟ್‍ಮೆಂಟ್‍ಗಳಲ್ಲಿ ಬಾಡಿಗೆ ಏರಿಕೆಗೆ ತಡೆ, ಮತ್ತು ಕನಿಷ್ಟ ಸಂಬಳವನ್ನು 30ಡಾಲರಿಗೆ ಏರಿಸುವುದು, ಒಟ್ಟಿನಲ್ಲಿ ಈ ನಗರವನ್ನು ದುಡಿಯುವ ಜನರು ಬದುಕಲು ಸಾಧ್ಯವಾದ ನಗರವಾಗಿ ಮಾಡುವ ಭರವಸೆಗಳನ್ನು ಅವರು ಮನೆ-ಮನೆ ಪ್ರಚಾರದ ವೇಳೆಯಲ್ಲಿ ನಗರದ ದುಡಿಯುವ ಜನರಿಗೆ ನೀಡಿದರು. ಇವನ್ನೆಲ್ಲ ಕಾರ್ಪೊರೇಟ್‍ಗಳು ಮತ್ತು ಶ್ರೀಮಂತರ ಮೇಲೆ ತೆರಿಗೆಗಳನ್ನು ಹಾಕಿ ಸಾಧ್ಯಗೊಳಿಸುವುದಾಗಿಯೂ ಅವರು ಬಹಿರಂಗವಾಗಿಯೇ ಹೇಳಿದರು. ಸುಮಾರು 20ಲಕ್ಷ ಮನೆಗಳನ್ನು ತಲುಪಿದ ಅವರ ಪ್ರಚಾರ ಯುಎಸ್‍ನ ಅತಿ ವ್ಯಾಪಕವಾದ ಪ್ರಚಾರ ಎಂದು ಹೇಳಲಾಗಿದೆ.
ಸಹಜವಾಗಿಯೇ ಅಮೆರಿಕಾದ ಬಿಲಿಯಾಧಿಪತಿಗಳು ಅವರನ್ನು ಸೋಲಿಸಲು ಹಣದ ಹೊಳೆ ಹರಿಸಿದರು. ಚುನಾವಣೆಯ ಹಿಂದಿನ ದಿನ ಅಮೆರಿಕಾದ ಸೂಪರ್ ಶ್ರೀಮಂತ ಇಲನ್ ಮಸ್ಕ್ ಅಂತೂ ತನ್ನ ಒಡೆತನದ ಎಕ್ಸ್ ನಲ್ಲಿ “ನಾಳೆ ನ್ಯೂಯಾರ್ಕ್‍ನಲ್ಲಿ ಮತ ನೀಡಲು ಮರೆಯದಿರಿ!’ ಎನ್ನುತ್ತ ರಿಪಬ್ಲಿಕನ್ ಅಭ್ಯರ್ಥಿಗಲ್ಲ, ಡೆಮಾಕ್ರಟಿಕ್ ಪಕ್ಷ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕ್ಯುಮೊಗೆ ಮತನೀಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದರು. ಆದರೆ ನ್ಯೂಯಾರ್ಕ್ ನಗರದ ಎಲ್ಲ ಸಮುದಾಯಗಳಿಗೆ ಸೇರಿದ ದುಡಿಯುವ ಜನರು ಜೊಹ್ರಾನ್ ಮಮ್ದಾನಿ ಕರೆಗೆ ಸ್ಪಂದಿಸಿರುವುದು ಫಲಿತಾಂಶದಿಂದ ದೃಢಪಟ್ಟಿದೆ.
ಮಮ್ದಾನಿಯನ್ನು ಅಧ್ಯಕ್ಷ ಟ್ರಂಪ್ ಸೇರಿಂದತೆ ಕೆಲವರು ಕಮ್ಯೂನಿಸ್ಟ್ ಎಂದು ಕರೆದರೂ, ಅವರು ಕಮ್ಯೂನಿಸ್ಟ್ ಪಕ್ಷದ ಸದಸ್ಯರಲ್ಲ. ಬಡವರ ನೋವನ್ನು ನಿವಾರಿಸಲು ಡೆಮಾಕ್ರಟಿಕ್ ಪಕ್ಷ ಮುಂದೆ ಬರಬೇಕು ಎಂದು ಅವರು ಹೇಳುತ್ತಾರೆ. ಇರಾನ್ ಪ್ರವೇಶಿಸಿದ ಅಮೆರಿಕದ ವೈಮಾನಿಕ ದಾಳಿಯನ್ನು, ಇದು ಸಾರ್ವಭೌಮ ದೇಶದ ಮೇಲಿನ ದಾಳಿ ಎಂದು ಬಲವಾಗಿ ಖಂಡಿಸಿದರು. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಅಮೆರಿಕ ಖಂಡಿಸಬೇಕು ಎಂದು ಅವರು ಹೇಳುತ್ತಾರೆ. ಹೀಗೆ ಅವರು ಮಾತನಾಡುತ್ತಿರುವುದರಿಂದಲೇ ಅವರನ್ನು ಕಮ್ಯೂನಿಸ್ಟ್ ಎಂದು ಕರೆದು, ಡೊನಾಲ್ಡ್ ಟ್ರಂಪ್ ಮತ್ತು ಭಾರತದಲ್ಲಿ ಕಂಗನಾ ರನೌತ್ ಅವರಂತಹ ಅರೆಬೆಂದ ಜ್ಞಾನದ ಜನರು ಅವರನ್ನು ಟೀಕಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ, “ಅವರನ್ನು ಡೆಮಾಕ್ರಟಿಕ್ ಪಕ್ಷವು ಸ್ವಾಗತಿಸಬಾರದು. ಏಕೆಂದರೆ ಅವರ ಕೈಗಳು ರಕ್ತದ ಕಲೆಗಳಿಂದ ಕೂಡಿವೆ. ಗುಜರಾತ್ ಹಿಂಸಾಚಾರದಲ್ಲಿ ಸಾವಿರಾರು ಮುಸ್ಲಿಮರ ಹತ್ಯೆಯನ್ನು ಮೋಜಿನಿಂದ ನೋಡುತ್ತಿದ್ದವರು” ಎಂದು ಮಮ್ದಾನಿ ಕಟುವಾಗಿ ಹೇಳಿದ್ದರು. ಈ ಚುನಾವಣಾ ಪ್ರಚಾರದ ವೇಳೆಯಲ್ಲೂ , ದೀಪಾವಳಿಯ ಸಮಯದಲ್ಲಿ ನ್ಯೂಯಾರ್ಕಿನ ಹಿಂದೂ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತ , ತಾನು ಭಾರತದ ಬಹುತ್ವದ ಕಣ್ಣೋಟದೊಂದಿಗೆ ಬೆಳೆದವನು, ಆದರೆ ಮೋದಿಯವರದ್ದು ತದ್ವಿರುದ್ಧವಾದ ಕೆಲವು ವಿಭಾಗಗಳನ್ನು ಹೊರಗಿಡುವ ಹಿಂದುತ್ವ ಸಿದ್ಧಾಂತ ಎಂದು ನೇರವಾಗಿಯೇ ಟೀಕಿಸಿದರು.

ನ್ಯೂಯಾರ್ಕ್‌ನ ವೈಭವ
ನ್ಯೂಯಾರ್ಕ್ ಒಂದು ದೊಡ್ಡ ನಗರವಾಗಿದೆ. ಸುಮಾರು 8.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, ಇದು ಅಮೆರಿಕದ 12 ರಾಜ್ಯಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿದೆ. ಇದರ ಬಜೆಟ್ 110 ಶತಕೋಟಿ ಡಾಲರ್ ಗಿಂತ ಹೆಚ್ಚು. ಅದು ದೆಹಲಿಯ ಗಾತ್ರಕ್ಕಿಂತ ಹತ್ತು ಪಟ್ಟು ಹೆಚ್ಚು. ಭಾರತೀಯ ಮೂಲದ ಕಟ್ಟಾ ಸಮಾಜವಾದಿ ಮಮ್ದಾನಿ, ವಿಶ್ವದ ಪ್ರಮುಖ ಹಣಕಾಸು ಮತ್ತು ಸೃಜನಶೀಲ ನಗರಗಳಲ್ಲಿ ಒಂದನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿರುವುದು ದೊಡ್ಡ ವಿಷಯವಾಗಿದೆ.
ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದ ನಂತರ, ಅಮೆರಿಕದಲ್ಲಿ ಅನೇಕರ ನಿದ್ರೆ ಕೆಡಿಸಿದ್ದಾರೆ. ಅವರ ವಿರುದ್ಧ ಟ್ರಂಪ್ ತಮ್ಮ ಮಾತಿನ ದಾಳಿಯನ್ನು ತೀವ್ರಗೊಳಿಸಿದರು. ಮಮ್ದಾನಿಯನ್ನು ‘ಕಮ್ಯುನಿಸ್ಟ್, ಅಸಮರ್ಥ ಮತ್ತು ಅಪಾಯಕಾರಿ ನಾಯಕ’ ಎಂದು ಪ್ರಚಾರ ಮಾಡಿದರು. ಜೋಹ್ರಾನ್ ಮಮ್ತಾನಿ ಎಂಬುವವನು “100 ಪ್ರತಿಶತ ಕಮ್ಯುನಿಸ್ಟ್ ಹುಚ್ಚ” ಎಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೆ ಕರೆದಾಗಿನಿಂದ, ಜಗತ್ತು ಮಮ್ದಾನಿಯ ಬಗ್ಗೆ ತಿಳಿಯಲು ಹೆಚ್ಚಿನ ಆಸಕ್ತಿಹೊಂದಿದೆ. ಮಮ್ದಾನಿಯ ಮೇಲಿನ ಟ್ರಂಪ್ ರ ಈ ಕೋಪಕ್ಕೆ ಒಂದು ಕಾರಣವಿದೆ. ಅವರು ವರ್ಣಭೇದ ಮತ್ತು ಜನಾಂಗ ದ್ವೇಷ ನೀತಿಯ ವಿರುದ್ಧ ಮಾತನಾಡುತ್ತಾರೆ. ದುಡಿಯುವ ಜನರ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಾರೆ. ಬಲಪಂಥೀಯ ರಾಜಕಾರಣವನ್ನು ಅವರು ವಿರೋಧಿಸುತ್ತಾರೆ. ಅದಕ್ಕಾಗಿಯೇ, ಮಮ್ದಾನಿಯಂತಹವರು ಮೇಯರ್ ಆಗುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ ಟ್ರಂಪ್ ತಮ್ಮ ಆ ಪ್ರಯತ್ನದಲ್ಲಿ ಸೋತರು.
ಅದೇ ಸಮಯದಲ್ಲಿ, ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಕ್ರಮ ವಲಸಿಗರನ್ನು ಬಂಧಿಸುವುದನ್ನು ನಿಲ್ಲಿಸಬೇಕು ಎಂಬ ಮಮ್ದಾನಿ ಅವರ ಹೇಳಿಕೆಯನ್ನು ಟ್ರಂಪ್ ತೀವ್ರವಾಗಿ ಟೀಕಿಸಿದರು. ಫೆಡರಲ್ ಏಜೆನ್ಸಿಯ ನಿಯಮಗಳನ್ನು ಪಾಲಿಸದಿದ್ದರೆ, ಅವರನ್ನು ಬಂಧಿಸಲಾಗುವುದು ಎಂದು ಎಚ್ಚರಿಸಿದರು. ಅಮೆರಿಕದಲ್ಲಿ ಕಮ್ಯುನಿಸ್ಟರು ತಮಗೆ ಬೇಡ ಮತ್ತು ಅಂತಹ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಅವರು ಸಾಮಾಜಿಕ ಮಾಧ್ಯಮ ಖಾತೆ ಟ್ರೂತ್ ನಲ್ಲಿ ಪೋಸ್ಟ್ ಮಾಡಿದರು.
ಅಮೆರಿಕ ಅಧ್ಯಕ್ಷರು ತಮ್ಮನ್ನು ಬಂಧಿಸುವುದಾಗಿ, ಪೌರತ್ವವನ್ನು ರದ್ದುಗೊಳಿಸುವುದಾಗಿ, ಕಾನ್ಸಂಟ್ರೇಶನ್ ಕ್ಯಾಂಪ್ ನಲ್ಲಿ ಇರಿಸುವುದಾಗಿ ಮತ್ತು ಗಡೀಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾವು ಇದಕ್ಕೆಲ್ಲ ಬೆದರುವುದಿಲ್ಲ ಎಂದು ಜೋಹ್ರಾನ್ ಮಮ್ದಾನಿ ಸ್ಪಷ್ಟಪಡಿಸಿದರು. ನ್ಯೂಯಾರ್ಕ್ ನಗರದ ಜನರಲ್ಲಿ ಭಯವನ್ನು ಹರಡಲು ಮಾತ್ರ ಟ್ರಂಪ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಬಲಪಂಥೀಯರಿಂದ ತೀವ್ರ ದಾಳಿ
ಮಮ್ದಾನಿ ಅವರ ಪ್ರಾಥಮಿಕ ಗೆಲುವು ಸ್ಪಷ್ಟವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಜೀವ ಬೆದರಿಕೆಗಳು ಬರುತ್ತಿದ್ದವು ಎನ್ನಲಾಗಿದೆ. ನ್ಯೂಯಾರ್ಕ್ ಪೊಲೀಸ್ ಇಲಾಖೆಯ ದ್ವೇಷ ಅಪರಾಧಗಳ ಕಾರ್ಯಪಡೆ, ಈ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಮಮ್ದಾನಿಯ ಅಮೇರಿಕನ್ ಪೌರತ್ವವನ್ನು ರದ್ದುಗೊಳಿಸಬೇಕು ಮತ್ತು ಅವರನ್ನು ಗಡೀಪಾರು ಮಾಡಬೇಕೆಂದು ಟ್ರಂಪ್ ಅವರ ಬೆಂಬಲಿಗರು ಒತ್ತಾಯಿಸಿದರು. ತೀವ್ರ ಬಲಪಂಥೀಯ ಕಾರ್ಯಕರ್ತೆ ಲಾರಾ ಲೂಮರ್ ಅವರು, “ಜೋಹ್ರಾನ್ ಮಮ್ದಾನಿಯ ನಾಯಕತ್ವದಲ್ಲಿ ನ್ಯೂಯಾರ್ಕ್‌ನಲ್ಲಿ ಮತ್ತೊಂದು 9/11 ನಡೆಯಲಿದೆ” ಎಂದು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದರು. ಅದೇ ರೀತಿ ನ್ಯೂಯಾರ್ಕ್ ನಗರ ಕೌನ್ಸಿಲರ್ ವಿಕಿ ಪಲಾಡಿನೊ, ಜೋಹ್ರಾನ್ ಮಮ್ದಾನಿ ಅವರನ್ನು “ಪ್ರಸಿದ್ಧ ಜಿಹಾದಿ ಭಯೋತ್ಪಾದಕ” ಮತ್ತು “ಕಮ್ಯುನಿಸ್ಟ್” ಎಂದು ಬಣ್ಣಿಸಿದರು. ಅಲ್ಲದೇ “ಮಮ್ದಾನಿ ಅಮೆರಿಕನ್ ಪೌರತ್ವ ಹೊಂದಿದ್ದರೂ, ಅವರನ್ನು ಈ ಕೂಡಲೇ ಗಡಿಪಾರು ಮಾಡಬೇಕು” ಎಂದು ಪಲಾಡಿನೊ ಒತ್ತಾಯಿಸಿದರು.
ಇನ್ನು ಶ್ವೇತಭವನದ ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್ ಕೂಡ ಜೋಹ್ರಾನ್ ಮಮ್ದಾನಿ ಅವರನ್ನು ಟೀಕಿಸಿದ್ದು, “ವಲಸೆಯನ್ನು ನಿಯಂತ್ರಿಸಲು ವಿಫಲವಾದಾಗ ಸಮಾಜಕ್ಕೆ ಏನಾಗುತ್ತದೆ ಎಂಬುದಕ್ಕೆ ಜೋಹ್ರಾನ್ ಮಮ್ದಾನಿ ಸ್ಪಷ್ಟ ಉದಾಹರಣೆ” ಎಂದು ಅಸಮಾಧಾನ ಹೊರಹಾಕಿದರು.
ಅದೇ ರೀತಿ ಈ ಹಿಂದೆ ವಿಶ್ವಸಂಸ್ಥೆಯ ರಾಯಭಾರಿಯಾಗಿ ಆಯ್ಕೆಯಾಗಿದ್ದ ನ್ಯೂಯಾರ್ಕ್ ಪ್ರತಿನಿಧಿ ಎಲಿಸ್ ಸ್ಟೆಫಾನಿಕ್, ಮಮ್ದಾನಿ ಅವರನ್ನು “ಹಮಾಸ್ ಭಯೋತ್ಪಾದಕ ಸಹಾನುಭೂತಿಗಾರ” ಎಂದು ಬ್ರಾಂಡ್ ಮಾಡುವ ಮೂಲಕ ನಿಧಿಸಂಗ್ರಹಣೆ ಇಮೇಲ್‌ಗಳನ್ನು ಕಳುಹಿಸಿದ್ದರು.
ಇವಕ್ಕೆಲ್ಲ ಉತ್ತರ ಎಂಬಂತೆ ಜೋಹ್ರಾನ್ ಮಮ್ದಾನಿ “ ನ್ಯೂಯಾರ್ಕ್ ವಲಸೆಗಾರರು ಕಟ್ಟಿದ ನಗರ, ವಲಸೆಗಾರರು ಶಕ್ತಿದುಂಬಿದ ನಗರ, ರಾತ್ರಿಯ ವೇಳೆಯಲ್ಲಿ ಒಬ್ಬ ವಲಸೆಗಾರ ನೇತರತ್ವ ವಹಿಸಿದ ನಗರ ವಲಸೆಗಾರ ನಗರವಾಗಿಯೇ ಉಳಿಯುತ್ತದೆ” ಎಂದು ತನ್ನ ವಿಜಯೋತ್ಸವದ ಭಾಷಣದಲ್ಲಿ ಸಾರಿ ಹೇಳಿದರು.
ಜೋಹ್ರಾನ್ ಮಮ್ದಾನಿ ಮೇಲಿನ ದಾಳಿಗಳನ್ನು ವಿಶ್ಲೇಷಿಸಿರುವ ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ (ಕೈರ್) ಸಂಶೋಧನೆ ಮತ್ತು ವಕಾಲತ್ತು ನಿರ್ದೇಶಕ ಕೋರಿ ಸೇಲರ್, “ನಾವು ನೋಡುತ್ತಿರುವ ಅನೇಕ ಪ್ರವೃತ್ತಿಗಳು ಸಾಮಾನ್ಯ ಇಸ್ಲಾಮೋಫೋಬಿಕ್ ವಿಷಯವನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದ್ದಾರೆ.
ಭಾರತೀಯ ಮಾಧ್ಯಮಗಳ ಮೌನ
ಬ್ರಿಟನ್ನಿನಲ್ಲಿ ರಿಷಿ ಸುನಕ್ ಪ್ರಧಾನ ಮಂತ್ರಿಯಾದಾಗ ಅವರನ್ನು ವಿಜೃಂಭಿಸಿದ್ದ ಭಾರತದ ಮುಖ್ಯಧಾರೆಯ ಮಾಧ್ಯಮಗಳು ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯ ಸುದ್ದಿಯನ್ನು ಗಮನಿಸಲೂ ನಿರಾಕರಿಸಿದಂತೆ ಕಾಣುತ್ತದೆ. ಕಾರಣ ಸ್ಪಷ್ಟವಾಗಿದೆ. ಮಮ್ದಾನಿ ಬಲಪಂಥೀಯರ ವಿರುದ್ಧವಾಗಿರುವುದರಿಂದ ಭಾರತೀಯ ಮಾಧ್ಯಮಗಳು ಮೌನವನ್ನು ಕಾಯ್ದುಕೊಂಡವು.
ಅಮೆರಿಕದ ರಾಜಕೀಯದಲ್ಲಿ ಭಾರತೀಯ ಮತ್ತು ದಕ್ಷಿಣ ಏಷ್ಯಾದ ಅಮೆರಿಕನ್ನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಘಟನೆಯಾದ ಇಂಡಿಯಾ ಇಂಪ್ಯಾಕ್ಟ್ ಫಂಡ್, ಜೋಹ್ರಾನ್ ಮಮ್ದಾನಿ ಅವರನ್ನು ಬೆಂಬಲಿಸಿದರೆ, ಬಲಪಂಥೀಯ ಭಾರತೀಯ ಅಮೆರಿಕನ್ನರು ಮತ್ತು ಅಮೇರಿಕನ್ ಹಿಂದೂ ಒಕ್ಕೂಟ ಅವರನ್ನು ವಿರೋಧಿಸಿತು. ಇದಕ್ಕೆ ಕಾರಣ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನರೇಂದ್ರ ಮೋದಿ ಅವರ ವಿರುದ್ದದ ಮಮ್ದಾನಿ ಅವರ ಟೀಕೆ.
ಅದರ ಹೊರತಾಗಿಯೂ, ಜೋಹ್ರಾನ್ ಮಮ್ದಾನಿ ಅವರ ಗೆಲುವು ಖಂಡಿತವಾಗಿಯೂ ಅಮೇರಿಕನ್ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ.

ನನ್ನ ನ್ಯೂಯಾರ್ಕ್!
ನನ್ನ ಮೇಯರ್!
ಕೃಪೆ: ಸತೀಶ ಚಾರ್ಯ,@ ಫೇಸ್ ಬುಕ್
ಇದನ್ನು ನೋಡಿ : ಧರ್ಮಸ್ಥಳದ ನಿಗೂಢಗಳು |ಮಹಿಳಾ ಆಯೋಗ ಮತ್ತೆ ಎಂಟ್ರಿಎಸ್‌ಐಟಿ ವಿರುದ್ಧಅಸಮಾಧಾನ | ಗುರುರಾಜ ದೇಸಾಯಿ Janashakthi Media
