ಬೆಂಗಳೂರು: ಬಿಡದಿ ಸಮಗ್ರ ಉಪ ನಗರ ಅಭಿವೃದ್ಧಿ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987 ರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆಗೆ ಈಗಾಗಲೇ ಶೇಕಡಾ 80 ಕ್ಕಿಂತ ಹೆಚ್ಚು ರೈತರು ತಮ್ಮ ವಿರೋಧ ಹಾಗೂ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಿದ್ದರೂ ಪರಿಗಣಿಸದೇ ಕದ್ದುಮುಚ್ಚಿ ತರಾತರಿಯಲ್ಲಿ ನವೆಂಬರ್ 6ರಂದು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳು ಭೂ ಬೆಲೆ ದರ ನಿಗದಿ ಸಭೆ ಏರ್ಪಡಿಸಿರುವುದು ಅಪಾರದರ್ಶಕ ಹಾಗೂ ನ್ಯಾಯ ನಿರಾಕರಣೆಯ ಪಿತೂರಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಬಿಡದಿ
ಭೂ ಸ್ವಾಧೀನಕ್ಕೆ ಒಳಪಡಿಸುತ್ತಿರುವ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 9680 ಎಕರೆ ಭೂಮಿ ಬಹು ವಾರ್ಷಿಕ ಫಲವತ್ತಾದ ಸಮೃದ್ಧ ವರ್ಷ ಪೂರ್ತಿ ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಭೂಮಿ ಯಾಗಿದೆ. ಪ್ರತಿಯೊಬ್ಬ ರೈತರು ಬಹು ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ತಮ್ಮ ಸಣ್ಣ ಹಿಡುವಳಿಯಲ್ಲಿ ಸುಸ್ಥಿರವಾದ ಬದುಕನ್ನು ನಡೆಸುತ್ತಿದ್ದಾರೆ. ಹೈನುಗಾರಿಕೆ, ರೇಷ್ಮೆ, ಬಾಳೆ ,ವಿವಿಧ ತರಕಾರಿಗಳು, ಅಡಿಕೆ ,ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾ ಹತ್ತಿರದ ಬೃಹತ್ ಬೆಂಗಳೂರು ಮಹಾನಗರದ ಆಹಾರದ ಕಣಜವಾಗಿದೆ ಎಂದು ಕೆಪಿಆರ್ಎಸ್ ತಿಳಿಸಿದೆ. ಬಿಡದಿ
ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ಮುಂದೂಡಿಕೆ
ಇಂತಹ ಫಲವತ್ತಾದ ಕೃಷಿ ಭೂಮಿ ರಕ್ಷಣೆಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರ ಆಹವಾಲುಗಳನ್ನು ಒಮ್ಮೆಯೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಕೇಳಿಲ್ಲ. ಸ್ಥಳೀಯ ಶಾಸಕರು ಕೂಡ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ.
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ನೋಟೀಸ್ ಗೆ ಲಿಖಿತವಾಗಿ ಸಾವಿರಾರು ರೈತರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿಲ್ಲ. ಕೇವಲ ಪ್ರಾಥಮಿಕ ಅಧಿಸೂಚನೆ ಆಧಾರದ ಮೇಲೆ ಭೂ ದರ ನಿಗದಿ ಸಭೆ ಏರ್ಪಡಿಸಿರುವುದು 2013 ರ ಭೂ ಸ್ವಾಧೀನ ಕಾಯ್ದೆಯ ಗಂಭೀರ ಉಲ್ಲಂಘನೆ ಯಾಗಿದ್ದು ಕೂಡಲೇ ದರ ನಿಗದಿ ಸಭೆ ರದ್ದುಪಡಿಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರು ದಕ್ಷಿಣ (ರಾಮನಗರ )ಜಿಲ್ಲಾಡಳಿತ ವನ್ನು ಆಗ್ರಹಿಸಿದೆ.

ದರ ನಿಗದಿ ಭೂತ ವನ್ನು ಮುಂದು ಮಾಡಿ ರೈತರಲ್ಲಿ ಗೊಂದಲ ಸೃಷ್ಟಿಸಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರಲ್ಲಿ ಒಡಕು ಸೃಷ್ಟಿಸುವ ರಿಯಲ್ ಎಸ್ಟೇಟ್ ಕಿಡಿಗೇಡಿತನವನ್ನು ಅರ್ಥ ಮಾಡಿಕೊಂಡು ಹಿಂದಿನ ಒಡಕು ಮೂಡಿಸುವ ಪ್ರಯತ್ನ ವನ್ನು ವಿಫಲಗೊಳಿಸಿದಂತೆ ಈ ಒಡಕು ಉಂಟು ಮಾಡುವ ಪಿತೂರಿಯನ್ನು ಕೂಡ ನಿರ್ಣಾಯಕವಾಗಿ ಸೋಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ರೈತರಲ್ಲಿ ವಿನಂತಿಸುತ್ತದೆ. ಈ ರೈತರ ನ್ಯಾಯಬದ್ದವಾದ ಹೋರಾಟವನ್ನು ರಾಜ್ಯದ ಎಲ್ಲಾ ರೈತರು ಹಾಗೂ ಕಾರ್ಮಿಕರು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡಿದೆ.
ಇದನ್ನೂ ನೋಡಿ: ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
