“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಕರೆ, 2ನೇ ಶತಮಾನದಲ್ಲಿಯೇ ಕನ್ನಡ ಭಾಷೆ ಮೂಡಿಬಂದಿದ್ದರೂ, 20ನೇ ಶತಮಾನದಲ್ಲಿ ಮಾತ್ರ ಕೇಳಿಬರಲು ಕಾರಣವೇನು? ಈ ಏಕೀಕರಣ ಚಳುವಳಿಯಲ್ಲಿ ವಿವಿಧ ವರ್ಗಗಳು ವಹಿಸಿದ ಪಾತ್ರವೇನು?
ಜಿ.ಎನ್. ನಾಗರಾಜ್
ಹರಿದು ತುಂಡಾಗಿಹುದು ಇಂದು ಕನ್ನಡನಾಡು;
ಅಣ್ಣ ತಮ್ಮದಿರು ತಾವಣ್ಣ ತಮ್ಮದಿರೆಂದು
ತಿಳಿಯಲಾರರು ನಡೆಯಲಾರರು; ಬಾ ಬಂಧು
ಎಂದು ಕರೆಯಲು, ಸ್ವಾಮಿ ನನ್ನೂರು ಧಾರ್ವಾಡ
ನನ್ನೂರು ಮೈಸೂರು, ನನ್ನೂರು ಎರಕಾಡು
ಮರ್ಯಾದೆಯಿಂದ ಕರೆಯಿರಿ ನನ್ನ ಎನ್ನುವರು,
ಕನ್ನಡದ ನಾಡ ಜನವೆಲ್ಲವೂ ನನ್ನವರು,
ಬಡಗ ತೆಂಕಣ ಮೂಡ ಕೊಡಗ ತೌಳವ ತೋಡ
ಇನ್ನೆಲ್ಲ ಕನ್ನಡಿಗರೆನ್ನವರು ಎನ್ನುಸಿರು,
ನಾವೆಲ್ಲ ಒಂದು ಮನೆಯವರಣ್ಣ ತಮ್ಮದಿರು,
ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು,
ಎಂದು ನಾವರಿದೆವೇ ನಮಗೆ ಇನ್ನಾರೆದುರು!
ಹಾ ನನ್ನ ಸೋದರರೆ ಬನ್ನಿ ಒಂದಾಗಿ;
ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ.
ಇದು ಕನ್ನಡನಾಡಿನ ನವೋದಯದ ಮೊದಲ ಸುತ್ತಿನ ಕವಿಗಳಲ್ಲೊಬ್ಬರಾದ ಮಾಸ್ತಿಯವರ ನುಡಿ. ಹೌದು, ಅಂದು ಕನ್ನಡನಾಡು ಹರಿದು ಹಂಚಿ ಹೋಗಿತ್ತು. ಬ್ರಿಟಿಷರ ಆಡಳಿತದಲ್ಲಿ “ಹತ್ತಾರು ಸಂಸ್ಥಾನಿಕರ ಅಡಳಿತದಲ್ಲಿ ಚರಗವನ್ನು ಚೆಲ್ಲಿದಂತೆ ಚೆಲ್ಲಿಹೋಗಿತ್ತು.” (ಬಿ.ಎಂ.ಶ್ರೀ)
ಇಂತಹ ಪರಿಸ್ಥಿತಿಯಲ್ಲಿ, “ಕನ್ನಡ ನಾಡಿನ ಮುಂಬಾನೊಳು ಚೆಂಬಣ್ಣದ ಬೆಳಕು” ಮೂಡಿ, “ಬೆಳಕು ಹರಿಯಿತು ಏಳಿತಾಯ ಕರೆ ಕೇಳಿ” ಎನ್ನುವ ಕರೆ ಎಲ್ಲ ಕಡೆ ಮೊಳಗಿತು. ಪುನರುಜ್ಜೀವನ, ಪುನರ್ ನಿರ್ಮಾಣ ಎಂದು ವಿವಿಧ ಹೆಸರಲ್ಲಿ ಕರೆಯಲಾಗುವ ನವೋದಯ ಮೂಡಿ ಬಂತು. ಕನ್ನಡಿಗರೆಲ್ಲರೂ ಒಂದೇ ಅವರು ಒಂದೇ ಆಡಳಿತದಲ್ಲಿರಬೇಕು ಎಂಬ ಏಕೀಕರಣದ ಕರೆಯೂ ಕೇಳಿ ಬಂತು. ಕರ್ನಾಟಕ
ಕನ್ನಡ ನುಡಿಯ ಈ ಕರೆ 20ನೆಯ ಶತಮಾನದ ಈ ಸಮಯದಲ್ಲಿಯೇ ಏಕೆ ಮೂಡಿಬಂತು?
ಕ್ರಿಸ್ತ ಶಕ 2-3ನೆಯ ಶತಮಾನದಲ್ಲಿಯೇ ಹುಟ್ಟಿ ಹಬ್ಬಿದ ಭಾಷೆ ಕನ್ನಡ. 8-9ನೆಯ ಶತಮಾನಕ್ಕೆ ಪ್ರಸಿದ್ಧ ಕಾವ್ಯಗಳೂ ಹುಟ್ಟಿದ್ದವು. ಪಂಪ `ವಿಕ್ರಮಾರ್ಜನ ವಿಜಯ’, `ಆದಿ ಪುರಾಣ’ಗಳನ್ನು ಬರೆದು ಭಾಷೆಯನ್ನು ಉನ್ನತ ಮಟ್ಟಕ್ಕೆ ಒಯ್ದು, 10ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು ಮೊದಲಾದ ಶಿವಶರಣರು ಸರಳವಾಣಿ ಜನರ ಭಾಷೆಯಲ್ಲಿ `ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ನುಡಿದ 12ನೇ ಶತಮಾನದಲ್ಲಿ, 20ನೆಯ ಶತಮಾನಕ್ಕಿಂತಲೂ ಅವ್ಯವಸ್ಥೆಯಿಂದ ಹತ್ತಾರು ರಾಜರ, ನೂರಾರು ಪಾಳೇಗಾರರ ಆಡಳಿತದಲ್ಲಿ ಹರಿದು ಹಂಚಿ ಹೋಗಿತ್ತಲ್ಲಾ, ಪಲ್ಲವ, ಚೋಳ, ಪಾಂಡ್ಯ ಮೊದಲಾದ ಬೇರೆ ಭಾಷೆಯವರ ಆಡಳಿತಕ್ಕೆ ಸಿಕ್ಕಿತ್ತಲ್ಲಾ, ಆಗ ಏಕೆ ಕನ್ನಡನಾಡು ಒಂದಾಗಬೇಕು, ಒಂದೇ ಆಡಳಿತಕ್ಕೆ ಬರಬೇಕು ಇಲ್ಲದಿದ್ದರೆ ಕನ್ನಡ ಬೆಳೆಯದು ಎಂದು ಯಾರೂ ಕೂಗು ಹಾಕಲಿಲ್ಲ? 2ನೇ ಶತಮಾನದಲ್ಲಿ ಭಾಷೆ ಹುಟ್ಟಿದರೂ 20ನೇ ಶತಮಾನಕ್ಕೇ ಏಕೆ ಕಾಯಬೇಕಾಯ್ತು?
ಇದಕ್ಕೆ ಉತ್ತರ ಬೇಕಾದರೆ ಅದು ಬೇರೆಲ್ಲಿಯೂ ಸಿಗುವುದಿಲ್ಲ. ಕಾರ್ಲ್ ಮಾರ್ಕ್ಸ್, ಎಂಗೆಲ್ಸ್, ಲೆನಿನ್ನರ ಬರವಣಿಗೆಗಳಲ್ಲಿ ಮಾತ್ರ ಇದು ಲಭ್ಯ. ಬಂಡವಾಳಶಾಹಿ ಯುಗದ ಬೃಹತ್ ಪ್ರಮಾಣದ ವ್ಯಾಪಕವಾದ ಮಾರುಕಟ್ಟೆ ಬೆಳೆಯಬೇಕಾದರೆ, ಭಾಷೆಯೊಂದರ ಬೆಳವಣಿಗೆಗೆ ಯಾವ ಅಡೆತಡೆಯೂ ಇರಬಾರದು ಎನ್ನುತ್ತಾರೆ ಲೆನಿನ್.
ಹೀಗೆ ಕರ್ನಾಟಕ ಇನ್ನೂ ಪಾಳೆಯಗಾರಿ ಸಮಾಜದ ಬಸಿರಲ್ಲಿ ಇರುವಾಗಲೇ ಇಲ್ಲಿ ಬ್ರಿಟಿಷರ ಸಂಪರ್ಕದೊಡನೆ ಹುಟ್ಟಿದ ಬಂಡವಾಳಶಾಹಿಯ ಅಗತ್ಯಗಳಿಗೆ ಅನುಗುಣವಾಗಿ ಕನ್ನಡ ಮಾತನಾಡುವವರೆಲ್ಲರೊ ಒಂದೇ ಅಡಳಿತದಲ್ಲಿ ಇರಬೇಕೆಂಬ ಕೂಗು ಸಣ್ಣದಾಗಿ ಹುಟ್ಟಿ, ಬರ ಬರುತ್ತಾ ಗಟ್ಟಿಯಾದ ಘರ್ಜನೆಯಾಗಿ ಎಲ್ಲ ಕಡೆ ಹರಡಿತು: ಕರ್ನಾಟಕದ ಪ್ರಗತಿಯಲ್ಲಿ ಒಂದು ದೊಡ್ಡ ಹೆಜ್ಜೆಯಾಯಿತು. ಕರ್ನಾಟಕದಲ್ಲಿ ಕೈಗಾರಿಕೆಯ ಬೆವಣಿಗೆ, ಶಿಕ್ಷಣದ ಪ್ರಗತಿ, ಸಾಹಿತ್ಯದ ನವೋದಯ ಹಲವು ಹಂತಗಳಲ್ಲಿ ಒಂದರ ಹಿಂದೆ ಒಂದು ಹೆಜ್ಜೆಯಿಟ್ಟು, ಒಂದು ಮತ್ತೊಂದಕ್ಕೆ ಕಾರಣವಾಗಿ, ಕೊನೆಯಲ್ಲಿ ಏಕೀಕರಣದ ಕೂಗಿಗೆ ಕಾರಣವಾದವು. ಈ ಬೆಳವಣೆಗೆಯನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಬಹುದು.
ಆರಂಭದ ಹಂತ: 19ನೆಯ ಶತಮಾನ
ಬ್ರಿಟಿಷರು ಒಂದೊAದಾಗಿ ಕರ್ನಾಟಕದ ವಿವಿಧ ಭಾಗಗಳನ್ನು ವಶಪಡಿಸಿಕೊಂಡರು. 1856-57ರ ಹೊತ್ತಿಗೆ ವಿಪುಲವಾದ ಬ್ರಿಟಿಶ್ ಬಂಡವಾಳ, ವಾಣಿಜ್ಯ, ಹೆಂಚಿನ ಕಾರ್ಖಾನೆಗಳು ಹಾಗೂ ಕಾಫಿ ತೋಟಗಳಲ್ಲಿ ಹೂಡಿಕೆಯಾಗಲು ಆರಂಭಿಸಿತು. ಮುಂದಿನ 50 ವರ್ಷಗಳು ಕೈಗಾರಿಕೆಗಳ ತೀವ್ರ ಬೆಳವಣಿಗೆಯ ಕಾಲ. ಜೊತೆ ಜೊತೆಗೆ ಶಿಕ್ಷಣ ವ್ಯಾಪಕವಾಗಿ ಹಲಡಲಾರಂಭಿಸಿ ಕನ್ನಡದ ಬೆಳವಣಿಗೆಗೆ ಅನುಕೂಲವಾಯಿತು. ನಾಲ್ಕೈದು ಕನ್ನಡ ಪತ್ರಿಕೆಗಳು, ಮರಾಠಿ, ಬಂಗಾಳಿ ಕಾದಂಬರಿಗಳ ಅನುವಾದ, ಸ್ವತಂತ್ರ ಕನ್ನಡ ಕಾದಂಬರಿಗಳು ಪ್ರಕಟವಾದವು. ಎಲ್ಲಕ್ಕೂ ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗೆಂದು ಆರಂಭವಾಗಿ ಮುಂದೆ ಕರ್ನಾಟಕ ಸಾಹಿತ್ಯಕ ಚಳುವಳಿಯ ಪುನರುಜೀವನದ ಮುಖ್ಯ ಅಂಗವಾದ `ಕರ್ನಾಟಕ ವಿದ್ಯಾ ವರ್ದಕ ಸಂಘ’ 1850ರಲ್ಲಿಯೇ ಹುಟ್ಟಿತ್ತು.
ಎರಡನೇ ಹಂತ-20ನೇ ಶತಮಾನದ ಆದಿಭಾಗ
ಈ ಶತಮಾನದ ಆರಂಭದ ವರ್ಷಗಳಲ್ಲಿ ವಂಗಭಂಗ ಚಳುವಳಿಯ ಪ್ರಭಾವ ಕರ್ನಾಟಕದ ಮೇಲೂ ಬಿತ್ತು. 1907ರಲ್ಲಿ ಮೊತ್ತಮೊದಲ ಬಾರಿಗೆ ‘ಕನ್ನಡ ವಾಗ್ಬೂಷಣ’ ಪತ್ರಿಕೆ ಇದನ್ನು ಕರ್ನಾಟಕದ ಜನತೆಯ ಮುಂದಿಟ್ಟಿತು. ಮುಂದೆ 1915ರಲ್ಲಿ ಬೆಂಗಳೂರಿನಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’, 1926ರಲ್ಲಿ ‘ಕರ್ನಾಕಟ ಸಭಾ’ ಹುಟ್ಟಿ, ಏಕೀಕರಣದ ಭಾವನೆ ವ್ಯಾಪಕವಾಗಿ ಹರಡಲಾರಂಭಿಸಿತು. ಅನೇಕ ಜನ ಮೈಸೂರು, ಬೆಂಗಳೂರು, ಮುಂಬೈ ಕರ್ನಾಟಕ, ಮಂಗಳೂರು ಮುಂತಾದೆಡೆ ಕನ್ನಡಕ್ಕಾಗಿ ಕೆಲಸ ಮಾಡಬೇಕು, ಅದು ಹೆಮ್ಮೆಯ ಕೆಲಸ ಎಂದು ಮನಗಂಡು ದುಡಿಯಲಾರಂಭಿಸಿದರು. ಇದರಲ್ಲಿ ಕನ್ನಡ ಕುಲ ಪುರೋಹಿತ ಎಂದು ಹೆಸರು ಪಡೆದ ಆಲೂರು ವೆಂಕಟರಾಯರು ಹಾಗೂ ಊರೂರು ಸುತ್ತಿ ಜನರನ್ನು ಈ ಕೆಲಸಕ್ಕಾಗಿ ಸೆಳೆಯುತ್ತಾ ಹೋದ ಬಿ.ಎಂ.ಶ್ರೀ ಪ್ರಮುಖರು. ಈ ಅವಧಿ ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯನವರ ದಿವಾನಗಿರಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದ ಸಮಯ ಎಂಬುದನ್ನು ನೆನಪಿನಲ್ಲಿಡಬೇಕು.
ಇದನ್ನೂ ಓದಿ :ಕರ್ನಾಟಕ ರಾಜ್ಯೋತ್ಸವ : ಏಕೀಕರಣ ಹೋರಾಟ ಮರೆಯಬಾರದು ಕಮ್ಯೂನಿಷ್ಟರ ಪಾತ್ರವನ್ನು ನೆನೆಯಬೇಕು
ಮೂರನೆಯ ಹಂತ-1920 ರಿಂದ 1947
1920ರಲ್ಲಿ ಧಾರವಾಡದಲ್ಲಿ ನಡೆದ ‘ಕರ್ನಾಟಕ ರಾಜಕೀಯ ಪರಿಷತ್ತು’ ಎಂಬ ಸಮಾವೇಶವು ಏಕೀಕರಣದ ಪ್ರಶ್ನೆಯ ಜೊತೆಗೆ ಕರ್ನಾಟಕ ಅರ್ಥಿಕ ಅಭಿವೃದ್ಧಿಯ ಹಲವು ಪ್ರಶ್ನೆಗಳನ್ನೂ ಮುಂದಿಟ್ಟಿತು. ಇದೇ ಸಮಯದಲ್ಲಿ ರಾಷ್ಟ್ರೀಯ ಆಂದೋಲನದ ಮುಖಂಡರು (ಕಾಂಗ್ರೆಸ್ ಪಕ್ಷ) ನಾಡ ಭಾಷೆಗಳ ಮಹತ್ವವನ್ನು ಅರಿತ ಫಲವಾಗಿ, ಏಕೀಕರಣದ ಅಂದೊಲನವು ರಾಷ್ಟ್ರೀಯ ಆಂದೊಲನದ ಭಾಗವಾಗಿಯೂ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿತು. ನಾಡಹಬ್ಬ ಆಚರಣೆ, ವಿದ್ಯಾರಣ್ಯ, ಬಸವೇಶ್ವರ ದಿನಾಚರಣೆಗಳು ಸಾರ್ವಜನಿಕರ ಮಧ್ಯೆ ಕನ್ನಡ ನುಡಿಯ ಬಗ್ಗೆ, ಸಾಹಿತ್ಯದ ಬಗ್ಗೆ ಅಭಿರುಚಿಯ ಜೊತೆಗೆ ಐಕ್ಯತೆ ಮೂಡಿಸಲು ನೆರವಾದವು. ಈ ಐಕ್ಯತೆಯ ಜೊತೆ-ಜೊತೆಗೇ ಆರ್ಥಿಕ ಅಭಿವೃದ್ಧಿಯ ಬೇಡಿಕೆಗಳೂ ಬಲವಾಗಲಾರಂಭಿಸಿದವು.
ಕರ್ನಾಟಕ ವ್ಯಾಪ್ತಿಯ (ಅಂದರೆ ವಿವಿಧ ರಾಜಕೀಯ ವಿಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳೆಲ್ಲಕ್ಕೂ ವ್ಯಾಪಿಸಿದ್ದ ಅನೇಕ ಸಂಘಟನೆಗಳು ಬೆಳೆದವು ಮಾತ್ರವಲ್ಲ ‘ಕರ್ನಾಟಕ’ ಒಂದಾಗಬೇಕು, ಕರ್ನಾಟಕದಲ್ಲಿ ಶಿಕ್ಷಣದ, ಆರ್ಥಿಕದ ಪ್ರಗತಿ ಸಾಧಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಡತೊಡಗಿದವು. ಇವುಗಳಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ಕರ್ನಾಟಕ ವೀರಶೈವ ಮಹಾಸಭಾ, ಕರ್ನಾಟಕ ಲಿಂಗಾಯತ್ ಎಜುಕೇಷನ್ ಸೊಸೈಟಿ ಇವು ಮುಖ್ಯವಾದುವು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ವ್ಯಾಪಕವಾಗಿ ಬೆಳೆದವು. ರಾಜ್ಯ ಸಮ್ಮೇಳನಗಳಲ್ಲದೆ ಜಿಲ್ಲಾ ಸಮ್ಮೇಳನಗಳು ಏರ್ಪಟ್ಟವು. ಉತ್ತರ ಕರ್ನಾಟಕದ ಸಾಹಿತಿಗಳು ಮೈಸೂರು ಸಂಸ್ಥಾನದಲ್ಲಿ ನಡೆದ ಸಮ್ಮೇಳನಗಳ ಅಧ್ಯಕ್ಷರಾಗಲು ಆಹ್ವಾನಿತರಾದರೆ, ಮೈಸೂರು ಸಂಸ್ಥಾನದವರು ಉತ್ತರ ಕರ್ನಾಟಕದ ನಗರಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಇತರ ಭಾಗಗಳ ಸಾಹಿತಿಗಳು ಅಧ್ಯಕ್ಷತೆ ವಹಿಸಿದರು. ಪುಸ್ತಕಗಳು, ಪತ್ರಿಕೆಗಳು ಹಾಗೂ ಸಾಹಿತ್ಯಕ ಚಟುವಟಿಕೆಗಳ ಫಲವಾಗಿ ಮಂಗಳೂರು ಕನ್ನಡ, ಧಾರವಾಡ ಕನ್ನಡ, ಹೈದರಬಾದ್ ಕನ್ನಡ, ಮೈಸೂರು ಕನ್ನಡದವರೆಲ್ಲರಿಗೂ ಅರ್ಥವಾಗುವ ಒಂದು ಬರಹದ ಭಾಷೆ ರೂಪಿತವಾಗಲಾರಂಭಿಸಿತು.
ನಾಲ್ಕನೆಯ ಹಂತ 1947- 1956
1947ರಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕರ್ನಾಟಕ ಏಕೀಕರಣದ ಕನಸು ಕೈಗೂಡಲಿಲ್ಲ. ಇದರಿಂದ ಜನರಿಗೆ ಬಹಳ ನಿರಾಶೆಯಾಯಿತು. ಕರ್ನಾಟಕ ಏಕೀಕರಣ ಸಮ್ಮೇಳನಗಳು ವಿವಿಧ ಭಾಗಗಳಲ್ಲಿ ನಡೆದವು. ಮದ್ರಾಸ್ ಹಾಗೂ ಬೊಂಬಾಯಿಯ ಶಾಸನಸಭೆಗಳು ವಿವಿಧ ಭಾಷೆಗಳ ಪ್ರದೇಶಗಳು ಏಕೀಕರಣವಾಗುವುದರ ಬಗ್ಗೆ ನಿರ್ಣಯ ಅಂಗೀಕರಿಸಿದವು.
1953ರಲ್ಲಿಯೇ ಅಲ್ಲಲ್ಲಿ ಕರ್ನಾಟಕ ರಾಜ್ಯ ನಿರ್ಮಾಣ ಶಿಬಿರಗಳು, ಉಪವಾಸ ಸತ್ಯಾಗ್ರಹಗಳು ಆರಂಭವಾದುವು. 1953ರ ಏಪ್ರಿಲ್ 20ರಲ್ಲಿ ನಡೆದ ಕೆಪಿಸಿಸಿ ಸಭೆಗೆ ಜನತೆ ಕಮ್ಯೂನಿಸ್ಟರ ನೇತೃತ್ವದಲ್ಲಿ ಮುತ್ತಿಗೆ ಹಾಕಿದರು. ಕೆಪಿಸಿಸಿಯ ಕಾರನ್ನು ಸುಡಲಾಯಿತು. ಏಕೀಕರಣವಾದಿಗಳಲ್ಲಿ ಕಮ್ಯೂನಿಸ್ಟರು ಮತ್ತು ಇತರರನ್ನು ಪ್ರತಿನಿಧಿಸುವ ಅಕರಾನಿ ಎಂದು ಖ್ಯಾತವಾದ ‘ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್’ ದಾವಣಗೆರೆಯಲ್ಲಿ ಶಾಂತಿಯುತ ಹೋರಾಟಕ್ಕಾಗಿ ನಿರ್ಣಯ ಕೈಗೊಂಡಿತು. ಇದರ ಫಲವಾಗಿ ನಡೆದ ಹೋರಾಟ 5 ತಿಂಗಳ ಕಾಲ ಸಾಗಿ 5000 ಜನರು ಸ್ಥಾನ ಬದ್ಧತೆಗೆ, ಇಲ್ಲವೆ ಬಂಧನಕ್ಕೆ ಒಳಗಾದರು. ನಂತರ ನಡೆದ 3-4 ಉಪ ಚುನಾವಣೆಗಳಲ್ಲಿ ಆಕರಾನಿ ಪ್ರತ್ಯೇಕ ಸ್ಪರ್ಧಿಗಳನ್ನು ನಿಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿತು.
ಇದೆಲ್ಲಾ ಘಟನೆಗಳಿಗೆ ಅಂಧ್ರದಲ್ಲಿ ನಡೆದ ಬೃಹತ್ ಚಳುವಳಿ ಸ್ಫೂರ್ತಿಯಾಯಿತು. ಕೊನೆಗೆ ಕೇಂದ್ರ ಸರ್ಕಾರ ಏಕೀಕರಣವಾಗದ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತಿತರ ರಾಜ್ಯಗಳ ಜನತೆಯ ಹೋರಾಟಕ್ಕೆ ಮಣಿದು ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಆಧಾರದಲ್ಲಿ ಲೋಕಸಭೆ ರಾಜ್ಯಗಳ ಪುನರ್ವಿಂಗಡಣೆಯನ್ನು ಒಪ್ಪುವ ನಿರ್ಣಯ ಕೈಗೊಂಡಿತು. ಹೀಗೆ 1-11-1956ರಂದು `ಉದಯವಾಯಿತು ನಮ್ಮ ಕನ್ನಡನಾಡು’
ದೇಶಭಾಷಾ ಆಂದೋಲನಗಳು ಹಾಗೂ ಬಂಡವಾಳಶಾಹೀ ಬೆಳವಣಿಗೆ
ಜಗತ್ತಿನೆಲ್ಲೆಡೆಯಲ್ಲಿಯೂ, ಬಂಡವಾಳಶಾಹಿ, ಪಾಳೆಗಾರಿಯ ಮೇಲೆ ತನ್ನ ಅಂತಿಮ ವಿಜಯವನ್ನು ಸಾಧಿಸಿದ ಅವಧಿ ದೇಶಭಾಷಾ ಆಂದೋಲನಗಳೊಂದಿಗೆ ಬೆಸೆಯಲ್ಪಟ್ಟಿದೆ. ವ್ಯಾಪಾರ, ಸರಕು ಉತ್ಪಾದನಾ ಪದ್ಧತಿ ಪೂರ್ಣ ವಿಜಯವನ್ನು ಸಾಧಿಸಬೇಕಾದರೆ, ಬಂಡವಾಳಶಾಹಿ ವರ್ಗ ಆಂತರಿಕ ಮಾರುಕಟ್ಟೆಯನ್ನು ಕೈವಶಮಾಡಿಕೊಳ್ಳಬೇಕು; ಒಂದೇ ಭಾಷೆಯನ್ನು ಮಾತನಾಡುವ ಜನರು ರಾಜಕೀಯವಾಗಿ ಒಂದೇ ಪ್ರದೇಶಗಳಲ್ಲಿರಬೇಕು. ಇಲ್ಲಿದೆ ದೇಶಭಾಷ್ಯ (ದೇಸೀಯ) ಜನಾಂಗಗಳ ಚಳುವಳಿಯ ಆರ್ಥಿಕ ತಳಹದಿ. ಮನುಷ್ಯ ಮನುಷ್ಯರ ನಡುವಿನ ವ್ಯವಹಾರದಲ್ಲಿ ಭಾಷೆ ಆತ್ಯಂತ ಮಹತ್ವದ ಸಾಧನ. ಈ ಭಾಷೆಯ ಅಭಿವೃದ್ಧಿಗೆ, ಸಾಹಿತ್ಯದ ಬೆಳವಣಿಗೆಗೆ ಇರುವ ಎಲ್ಲ ಅಡ್ಡಿ ಆತಂಕಗಳೂ ನಿವಾರಿಸಲ್ಪಡಬೇಕು.
ಆಧುನಿಕ ಬಂಡವಾಳಶಾಹಿ ವ್ಯವಹಾರಗಳ ಪ್ರಮಾಣಕ್ಕೆ ಅಗತ್ಯವಾದಷ್ಟು ವ್ಯಾಪಕವಾದ ಮತ್ತು ನಿಜವಾಗಿಯೂ ಮುಕ್ತ ವಾಣಿಜ್ಯಕ್ಕೆ, ವಿವಿಧ ವರ್ಗಗಳಿಗೆ ಸೇರಿದ ಜನತೆಯನ್ನು ಒಂದು ವಿಶಾಲವಾದ ಪ್ರದೇಶಗಳಲ್ಲಿ ಒಗ್ಗೂಡಿಸುವುದಕ್ಕೆ, ಮಾರುಕಟ್ಟೆಗೂ ಪ್ರತಿ ಸಣ್ಣ ಹಾಗೂ ದೊಡ್ಡ ಮಾಲೀಕರಿಗೂ ನಡುವೆ, ಕೊಳ್ಳುವವರ ಹಾಗೂ ಮಾರುವವರ ನಡುವೆ ನಿಕಟ ಸಂಬಂಧ ಏರ್ಪಡಿಸುವುದಕ್ಕೆ ಭಾಷೆಯ ಅನಿರ್ಬಂಧಿತವಾದ ಬೆಳವಣಿಗೆ ಹಾಗೂ ಐಕ್ಯತೆ ಇಲ್ಲದೆ ಸಾಧ್ಯವಿಲ್ಲ.
– ಲೆನಿನ್
ಹೊಸ ಪ್ರಾಂತದ ಸಮಸ್ಯೆಗಳನ್ನು ಧೈರ್ಯದಿಂದ ಇದಿರಿಸೋಣ!
ನವಂಬರ್ 1, 1956ರಂದು ಕನ್ನಡಿಗೆರೆ ಕನಸು ನನಸಾಗಲಿದೆ. ಛಿದ್ರ, ಛಿದ್ರವಾಗಿದ್ದ ಕನ್ನಡನಾಡು ಶತಮಾನಗಳ ನಂತರ ಒಂದುಗೊಡಲಿದೆ. 2 ಕೋಟಿ ಕನ್ನಡಿಗರು ಒಂದೇ ಆಡಳಿತೆಯೊಳಗೆ ಬಂದು ತಮ್ಮ ರಾಜಕೀಯ, ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಸಂಯುಕ್ತವಾಗಿ ಹೋರಾಡಲು ಅವಕಾಶ ದೊರೆಯಲಿದೆ. ವಿವಿಧ ಆಡಳಿತೆಗಳಲ್ಲಿ ಅಲ್ಪ ಸಂಖ್ಯಾತರಾಗಿ ನರಳುತ್ತಿದ್ದ ಕಾಲ ಕೊನೆಗೊಂಡು, ತಮ್ಮ ಭವಿಷ್ಯವನ್ನು ತಾವೇ ತೀರ್ಮಾನ ಮಾಡುವ ಸುಯೋಗೆ ದೊರೆಯಲಿದೆ. ಇದೊಂದು ಅತ್ಯಂತ ಮಹತ್ವದ ಚಾರಿತ್ರಿಕ ದಿನ.
-ಎನ್. ಎಲ್. ಉಪಾಧ್ಯಾಯ
ಇದನ್ನೂ ನೋಡಿ : ಕರ್ನಾಟಕ ರಾಜ್ಯೋತ್ಸವ | ಕನ್ನಡ ಕಟ್ಟುವಲ್ಲಿ ಚಳುವಳಿಗಳ ಪಾತ್ರ – ಭಾಗ -1 Janashakthi Media
