ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆ ಅಗತ್ಯ ಮತ್ತು ಇದರಲ್ಲಿ ಸರ್ವ ಸಮುದಾಯಗಳ ಹಿಂದುಳಿದವರ ಹಿತ ಅಡಗಿದೆ. ಸಮೀಕ್ಷೆಗೆ
ಸಮೀಕ್ಷೆ ವಿರೋಧಿಸುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ.
ಮಂಡ್ಯ: ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಅನ್ನು ಬೆಂಬಲಿಸಿ ಅಕ್ಟೋಬರ್ 6ರಂದು ಜಾಗೃತ ಕರ್ನಾಟಕದ ವತಿಯಿಂದ ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಲಾಯಿತು.
ಭಾರತದಲ್ಲಿ ಜಾತಿ ವ್ಯವಸ್ಥೆ ವಾಸ್ತವ. ಅದೇ ರೀತಿ ಕೆಲವೇ ಕೆಲವು ಜಾತಿಗಳು ಮುಂದುವರೆದಿರುವುದು ಮತ್ತು ಹಲವು ಜಾತಿಗಳು ಹಿಂದುಳಿದಿರುವುದು ಕೂಡ ವಾಸ್ತವವೇ. ಅದಕ್ಕಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ? ಎಷ್ಟು ಮುಂದುವರೆದಿವೆ? ಎನ್ನುವುದನ್ನು ಕಾಲಕಾಲಕ್ಕೆ ಅಧ್ಯಯನ ಮಾಡಬೇಕು. ಅಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಪೃಥ್ವಿರಾಜ್ ಮಾತನಾಡಿ, ಹೇಳಿದರು.
ಈ ಸಮೀಕ್ಷೆ ಆಧಾರದ ಮೇಲೆ ಸರ್ಕಾರಗಳು ನೀತಿ-ನಿರೂಪಣೆ ರೂಪಿಸಬೇಕು. ಜೊತೆಗೆ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಪ್ರಯತ್ನಿಸಬೇಕು. ಇದೇ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ (ಮಂಡಲ್ ಕೇಸಿನಲ್ಲಿ) ಎಲ್ಲಾ ರಾಜ್ಯಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಬೇಕು ಎಂದು ಹೇಳಿದೆ. ಆನಂತರ ಬಂದ ಕಾಯ್ದೆಗಳು ಈ ಆಯೋಗಗಳು 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.
ಇದನ್ನೂ ಓದಿ: 7 ಎಕರೆಗೂ ಹೆಚ್ಚು ಜಮೀನು ಇದ್ದವರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಲು ಅನರ್ಹ
ಇದರಿಂದಾಗಿ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ನ್ಯಾಯಯುತವಾದುದಾಗಿದೆ. ಯಾರೂ ಕೂಡ ಜಾತಿ ಸಮೀಕ್ಷೆಗೆ ವಿರೋಧ ಮಾಡಬಾರದು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತದೆಯಾದರೂ ಅದು ಹಿಂದುಳಿದ ಜಾತಿಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸುವುದಿಲ್ಲ. ರಾಜ್ಯದ ಎಲ್ಲಾ ಜಾತಿಗಳನ್ನು ಅಧ್ಯಯನ ನಡೆಸುತ್ತದೆ. ಅದರಿಂದಾಗಿ ಈ ಸಮೀಕ್ಷೆಯಲ್ಲಿ ಸರ್ವ ಸಮುದಾಯಗಳ ಹಿತ ಅಡಗಿದೆ. ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಅನುಕೂಲವಾಗುವಂಥ ಶಿಫಾರಸುಗಳನ್ನು ಮಾಡುವುದರಿಂದ ಸಹಜವಾಗಿ ಇದರಿಂದ ಹಿಂದುಳಿದಿರುವ ಎಲ್ಲಾ ಜಾತಿ-ಉಪಜಾತಿಗಳಿಗೆ ಲಾಭ ಇದೆ. ಹಾಗಾಗಿ ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಹಿಂದುಳಿದವರ ವಿರೋಧಿಗಳೇ ಆಗಿರುತ್ತಾರೆ. ತಮ್ಮ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರವನ್ನು ಹಿಂದುಳಿದ ಸಮುದಾಯಗಳು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಜಾತಿ ಸಮೀಕ್ಷೆ ನಡೆಸುವುದೇ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು. ಆದುದರಿಂದ ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ವಿರೋಧಿಗಳು. ನಮ್ಮ ಮತಗಳನ್ನು ತೆಗೆದುಕೊಂಡು ಅಧಿಕಾರ ಪಡೆದು ನಮ್ಮ ವಿರುದ್ಧ ಮಸಲತ್ತು ನಡೆಸುತ್ತಿರುವ ಖಳನಾಯಕರು. ಇಂಥ ಸಮುದಾಯ ಮತ್ತು ನಾಯಕರ ವಿರುದ್ಧ ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗುತ್ತಿವೆ. ಇದರ ಬಗ್ಗೆ ಎಲ್ಲಾ ಹಿಂದುಳಿದ ಜಾತಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದರು.
ಇದೇ ವೇಳೆ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಮೀಕ್ಷೆ ವೇಳೆ ಆಗುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು. ಸಮಯ ಮಿತಿಯೊಳಗೆ ಪೂರ್ಣಗೊಳಿಸುವುದು ಎಷ್ಟು ಮುಖ್ಯವೋ ಅದನ್ನು ಸಮರ್ಪಕವಾಗಿ ನಡೆಸುವುದು ಕೂಡಾ ಅಷ್ಟೇ ಮುಖ್ಯ. 2015ರ ಸಮೀಕ್ಷೆ ಬಗ್ಗೆ ಆಕ್ಷೇಪಗಳು ಬಂದು ಕಡೆಗೆ ಸರಕಾರ ಅದನ್ನು ಅಂಗೀಕರಿಸದಿರುವುದು ದುರ್ಬಲ ಸಮುದಾಯಗಳಿಗೆ ಆದ ದೊಡ್ಡ ಅನ್ಯಾಯ. ಮತ್ತೊಮ್ಮೆ ಅಂಥ ಮಹದನ್ಯಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಆಯೋಗದ ಮೇಲಿದೆ ಎನ್ನುವುದನ್ನು ತಿಳಿಯಪಡಿಸುತ್ತಿದ್ದೇವೆ ಎಂದು ಹೇಳಿದರು.
ಜಾಗೃತ ಕರ್ನಾಟಕ ಸಂತೋಷ್ ಜಿ, ನಗರಕೆರೆ ಜಗದೀಶ್, ನಾಗೇಶ್ ಎನ್, ಪ್ರಶಾಂತ್ ಮತ್ತು ಸುಬ್ರಮಣ್ಯ ಭಾಗವಹಿಸಿದ್ದರು.
ಇದನ್ನೂ ನೋಡಿ: ಗಾಂಧೀಜಿ ಪರಿಕಲ್ಪನೆ ಇಂದಿಗೂ ಪ್ರಸ್ತುತ – ನಾ ದಿವಾಕರ Janashakthi Media
