ಪದವಿ ಪರೀಕ್ಷೆಯನ್ನು ಮುಂದೂಡಿ: ವಿದ್ಯಾರ್ಥಿಗಳು ಪ್ರತಿಭಟನೆ

ದಾವಣಗೆರೆ: ಸೆಪ್ಟೆಂಬರ್‌ 27ರಂದು ನಗರದಲ್ಲಿ “ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ 2 ತಿಂಗಳು ಕಳೆದರೂ, ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಈ ಶೈಕ್ಷಣಿಕ ಗೊಂದಲವನ್ನು ಕೂಡಲೇ ಪರಿಹರಿಸಬೇಕು” ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಏಷ್ಯಾ ಕಪ್: ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿ

ಸರ್ಕಾರಿ ಪದವಿ ಕಾಲೇಜಿನಿಂದ ಜಯದೇವ ವೃತ್ತದವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದೂ, “ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ತರಗತಿಗಳು ಸರಾಗವಾಗಿ ನಡೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಗಳನ್ನು ಮುಗಿಸಿ ಸೆಮಿಸ್ಟರ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ನಿತ್ಯ ಕಾಲೇಜಿಗೆ ತೆರಳಿ ಖಾಲಿ ಬೋರ್ಡ್ ಹಾಗೂ ಗೋಡೆ ನೋಡಿ ಮನೆಗೆ ತೆರಳುವ ಸ್ಥಿತಿ ಇದೆ” ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

“2025-26ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ದಾವಣಗೆರೆ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಇನ್ನೂ ಸರಿಯಾಗಿ ತರಗತಿಗಳೇ ಆರಂಭವಾಗದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದರಿಂದ ಘೋರ ಅನ್ಯಾಯವಾಗುತ್ತದೆ. ಸರ್ಕಾರ ಕೂಡಲೇ ಪರೀಕ್ಷೆ ಮುಂದೂಡಬೇಕು” ಎಂದು ಎಐಡಿಎಸ್‌ಒನ ಜಿಲ್ಲಾ ಘಟಕದ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಆಗ್ರಹಿಸಿದರು.

ಸಂಘಟನಾಕಾರರಾದ ಎಚ್.ಡಿ.ಗಂಗಾಧರ, ವಿ.ಎಚ್. ಮಂಜುನಾಥ, ಸಿದ್ದಿಕ್ ಆವರಗೆರೆ, ವಿಕಾಸ್ ಎಂ.ಆರ್., ಲಿಖಿತ್ ಕುಮಾರ್ ಕೆ., ಸಹನಾ ಎನ್., ಪ್ರಿಯಾಂಕಾ ಪಿ., ಐಶ್ವರ್ಯಾ, ಚೈತ್ರಾ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ಧರ್ಮಸ್ಥಳ :ಅಧಿಕ ಬಡ್ಡಿ, ಸಾಲ ವಸೂಲಿ ನೆಪದಲ್ಲಿ ಕಿರುಕುಳ : ನೂರಾರು ಜನರು ಆತ್ಮಹತ್ಯೆ – ಜಯಂತ್ ಟಿ

Donate Janashakthi Media

Leave a Reply

Your email address will not be published. Required fields are marked *