ಸದಾ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ, ಈಗಲೂ ಸರಿಗಟ್ಟದ ಸಮಾಜವಾದದ ಅಭೂತಪೂರ್ವ ಸಾಧನೆ : ಪ್ರೊ. ಪಟ್ನಾಯಕ್

ಬಂಡವಾಳಶಾಹಿಯ ಅಡಿಯಲ್ಲಿ ಬೇಡಿಕೆಯ ಕುಸಿತವೆಂದರೆ ಅಗತ್ಯವಾಗಿ ಉತ್ಪತ್ತಿಯ ಕುಸಿತವೂ ಆಗುತ್ತದೆ. ಏಕೆಂದರೆ ಉತ್ಪಾದನಾ ಸಾಧನಗಳ ಒಡೆತನವು ಖಾಸಗಿ ಒಡೆತನದಲ್ಲಿರುತ್ತವೆ ಮತ್ತು ಅದು ಕೂಡ ಅಲ್ಲೊಬ್ಬ -ಇಲ್ಲೊಬ್ಬನಲ್ಲಿ ಚದುರಿ ಹೋಗಿರುತ್ತದೆ. ಆದರೆ, ಸಮಾಜವಾದದ ಅಡಿಯಲ್ಲಿ ಬೇಡಿಕೆಯ ಕುಸಿತವು ಉತ್ಪತ್ತಿಯಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡದೇ ಬೆಲೆಗಳ ಕುಸಿತದ ಮೂಲಕವೇ ಸರಿಹೊಂದಿಸಲ್ಪಡುತ್ತದೆ. ಏಕೆಂದರೆ ಉತ್ಪಾದನಾ ಸಾಧನಗಳು ಸಮಾಜದ ಒಡೆತನದಲ್ಲಿರುತ್ತವೆ. ಒಂದು ಉದ್ದಿಮೆ ಲಾಭ ಗಳಿಸುತ್ತದೆಯೇ ಅಥವಾ ನಷ್ಟದಲ್ಲಿದೆಯೇ ಎಂಬುದರ ಬಗ್ಗೆ ಅದರ ಮಾಲೀಕನಾದ ಸರ್ಕಾರವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಭುತ್ವವು ಎಲ್ಲ ಉದ್ದಿಮೆಗಳೂ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸುವಂತೆ ಆದೇಶಿಸಬಹುದು. ಆದ್ದರಿಂದ ಸಮಾಜವಾದದ ಅಡಿಯಲ್ಲಿ, ಬಳಕೆಯಾಗದೇ ಉಳಿದ ಶ್ರಮ ಎಂಬ ಅರ್ಥದಲ್ಲಿ ಅನುದ್ದೇಶಿತ ನಿರುದ್ಯೋಗ ಇರುವುದಿಲ್ಲ. ಇದು ಆಧುನಿಕ ಇತಿಹಾಸದಲ್ಲೂ ಇಂದಿಗೂ ಸರಿಗಟ್ಟದ ಸಮಾಜವಾದದ ಒಂದು ಅಭೂತಪೂರ್ವ ಸಾಧನೆಯೇ ಆಗಿತ್ತು. ಆಧುನಿಕ
                                                                                                                                                                                                                                                                                                                                                         ಪ್ರೊ.ಪ್ರಭಾತ್ ಪಟ್ನಾಯಕ್                                                                                                                                                                                                  

ವಸಾಹತುಶಾಹಿ ವಿರೋಧಿ ಹೋರಾಟದ ಕಾಲಘಟ್ಟದಲ್ಲಿ, ಮಹಾ ಆರ್ಥಿಕ ಕುಸಿತ ಮತ್ತು ಅಪಾರ ನಿರುದ್ಯೋಗದಿಂದ ಇಡೀ ಬಂಡವಾಳಶಾಹಿ ಜಗತ್ತು ತತ್ತರಿಸುತ್ತಿತ್ತು. ಆದರೆ, ಅದೇ ಸಮಯದಲ್ಲಿ ಸೋವಿಯತ್ ಒಕ್ಕೂಟವು ಈ ಎರಡೂ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿತ್ತು. ಸಮಾಜವಾದದ ಈ ಅಂಶವು ಭಾರತದ ಅನೇಕ ರಾಜಕೀಯ ಕಾರ್ಯಕರ್ತರನ್ನು ತನ್ನತ್ತ ಆಕರ್ಷಿಸಿತು. ಈ ಆಕರ್ಷಣೆಗೆ ಒಳಗಾದವರಲ್ಲಿ ಒಬ್ಬರಾದ ಕಾಮ್ರೇಡ್ ಇಎಂಎಸ್ ನಂಬೂದಿರಿಪಾಡ್, ಸಮಾಜವಾದದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಆರ್ಥಿಕ ಕುಸಿತವನ್ನು ತಪ್ಪಿಸುವಂಥಹ ಮತ್ತು ಬಂಡವಾಳಶಾಹಿಯೊಂದಿಗೆ ಸಾಮಾನ್ಯವಾಗಿ ಗುರುತಿಸಲ್ಪಡುವ ಅತಿ-ಉತ್ಪಾದನೆಗೆ ವ್ಯತಿರಿಕ್ತವಾಗಿರುವ ಯಾವುದೋ ಒಂದು ಅಂಶವು ಸಮಾಜವಾದಿ ಅರ್ಥವ್ಯವಸ್ಥೆಯ ಕಾರ್ಯವೈಖರಿಯಲ್ಲಿ ಅಂತರ್ಗತವಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಂಡರು. ಈ ಅಂಶ ಯಾವುದು ಎಂಬುದನ್ನು ನಾವೀಗ ನೋಡೋಣ.

ಇದನ್ನೂ ಓದಿ : ಧಾರವಾಡ| ವಿವಿಧ ಹುದ್ದೆಗಳ ನೇಮಕಾತಿಗೆ ಎಕೆಎಸ್ಎಸ್ಎ ಪ್ರತಿಭಟನೆ

ಲಭ್ಯವಿರುವ ಬಂಡವಾಳದ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆಮಾಡಿಕೊಂಡು ಉತ್ಪಾದಿಸಿದ ಗರಿಷ್ಠ ಪ್ರಮಾಣದ ಉತ್ಪತ್ತಿ, ಅದನ್ನು ಉತ್ಪಾದಿಸಿದ ಸಮಯದಲ್ಲಿ ಅದಕ್ಕಿದ್ದ ಬೇಡಿಕೆಯ ಪ್ರಮಾಣಕ್ಕಿಂತಲೂ ಅಧಿಕವಾಗಿದ್ದರೆ ಅದು ಅತಿ-ಉತ್ಪಾದನೆಯ ಪರಿಸ್ಥಿತಿ ಎಂದು ಹೇಳಲಾಗುತ್ತದೆ. ಈ ಅತಿ-ಉತ್ಪಾದನೆಯ ಪರಿಸ್ಥಿತಿಯಲ್ಲಿ, ಬಳಕೆಯಾಗದೇ ಉಳಿಯುವ ಅನಗತ್ಯ ಸಾಮಗ್ರಿಗಳ ದಾಸ್ತಾನು ಬೆಳೆಯುತ್ತದೆ. ಆದ್ದರಿಂದ, ಉತ್ಪತ್ತಿಯನ್ನು ಕಡಿಮೆ ಮಾಡಲಾಗುತ್ತದೆ. ಅಂದರೆ, ವಸ್ತುಗಳನ್ನು ಉತ್ಪಾದಿಸುವ ಸಮಯದಲ್ಲಿ ಎಷ್ಟು ಬೇಡಿಕೆ ಇರುತ್ತದೆಯೋ ಅಷ್ಟನ್ನು ಮಾತ್ರ ಉತ್ಪಾದಿಸಲಾಗುತ್ತದೆ.

ಹಣ-ಕೂಲಿ ಮತ್ತು ಬೆಲೆಗಳು ಅವುಗಳ ಏರಿಳಿಕೆಗಳಿಗೆ ಹೊಂದಿಕೊಳ್ಳುವAತಿದ್ದರೆ ಅತಿ-ಉತ್ಪಾದನಾ ಪರಿಸ್ಥಿತಿಯನ್ನು ನಿವಾರಿಸಬಹುದು ಎಂದು ಬೂರ್ಜ್ವಾ ಅರ್ಥಶಾಸ್ತ್ರ ಹೇಳುತ್ತದೆ. ಅತಿ-ಉತ್ಪಾದನಾ ಪರಿಸ್ಥಿತಿಯಿಂದಾಗಿ ಉತ್ಪತ್ತಿಯು ಗರಿಷ್ಠ ಮಟ್ಟದ ಕೆಳಗಿಳಿದಿದೆ ಎಂದು ಮೊದಲಿಗೆ ಭಾವಿಸೋಣ. ಆಗ ಹಣ ಕೂಲಿ ಮತ್ತು ಬೆಲೆಗಳು ಕುಸಿಯುತ್ತವೆ. ಆಗ ಜನರ ಬಳಿ ಇರುವ ನಗದು ಹಣದ ನಿಜ ಮೌಲ್ಯವು ವೃದ್ಧಿಯಾಗುತ್ತದೆ. ಹಾಗಾಗಿ ಜನರು ಹೆಚ್ಚು ಹೆಚ್ಚು ಖರ್ಚು ಮಾಡುತ್ತಾರೆ. ಹಾಗಾಗಿ ಒಟ್ಟು ಬೇಡಿಕೆ ಏರುತ್ತದೆ. ಹಣ ಕೂಲಿ ಮತ್ತು ಬೆಲೆಗಳ ಹೊಸ ಜೋಡಿಯೊಂದಿಗೆ ಈ ವಿದ್ಯಮಾನವು ಪೂರ್ಣ ಸಾಮರ್ಥ್ಯದ ಉತ್ಪತ್ತಿಗಾಗಿ ಬೇಡಿಕೆಯು ವಾಸ್ತವವಾಗಿ ವೃದ್ಧಿಸುವ ಮತ್ತು ಉತ್ಪಾದನೆಯಾಗುವ ವರೆಗೂ ಮುಂದುವರೆಯುತ್ತದೆ. ಹಾಗಾಗಿ ಉತ್ಪತ್ತಿ ಮತ್ತು ಉದ್ಯೋಗಗಳು ಒಂದು ವೇಳೆ ಪೂರ್ಣ ಸಾಮರ್ಥ್ಯದ ಕೆಳಗಿದ್ದರೆ, ಅದಕ್ಕೆ ಹಣ ಕೂಲಿ ಮತ್ತು ಬೆಲೆಗಳು ಪರಿಸ್ಥಿತಿ ಬಯಸುವ ಮಟ್ಟಿಗೆ ಇಳಿಕೆಯಾಗದಿರುವುದು ಕಾರಣವಾಗುತ್ತದೆ. ಅಂದರೆ, ಮಾರುಕಟ್ಟೆಗಳಿಗೆ ಅವು ಬಯಸುವ ರೀತಿಯ ಕಾರ್ಯಾಚರಣೆ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಟ್ರೇಡ್ ಯೂನಿಯನ್‌ಗಳು ಇರುವುದು. ಏಕೆಂದರೆ, ಒಂದು ನಿರ್ದಿಷ್ಟ ಮಟ್ಟದ ಹಣ ಕೂಲಿಗಾಗಿ ಟ್ರೇಡ್ ಯೂನಿಯನ್‌ಗಳು ಚೌಕಾಶಿ ಮಾಡುತ್ತವೆ ಮತ್ತು ಕೂಲಿಯನ್ನು ಆ ಮಟ್ಟಕ್ಕಿಂತ ಕೆಳಗೆ ಇಳಿಸಲು ಬಿಡುವುದಿಲ್ಲ. ಈ ಅತಿ-ಉತ್ಪಾದನೆಯ ಮತ್ತು ಸಾಮೂಹಿಕ ನಿರುದ್ಯೋಗದ ತಳದಲ್ಲಿರುವುದು ಹಣ ಕೂಲಿಯ ಕಾಠಿಣ್ಯವೇ ಮತ್ತು ಹೀಗಾಗುವುದು ಟ್ರೇಡ್ ಯೂನಿಯನ್‌ಗಳಿಂದಾಗಿ. ಹಾಗಾಗಿ, ಅತಿ-ಉತ್ಪಾದನೆ ಮತ್ತು ಅದರೊಂದಿಗೆ ಸಂಬAಧ ಹೊಂದಿದ ನಿರುದ್ಯೋಗವನ್ನು ಪರಿಹರಿಸುವುದಕ್ಕಾಗಿ ಟ್ರೇಡ್ ಯೂನಿಯನ್‌ಗಳನ್ನು ಮುರಿದು ಮಾರುಕಟ್ಟೆಗಳಿಗೆ ಅವು ಬಯಸಿದಂತೆ ಕೆಲಸ ಮಾಡಲು ಬಿಡುವುದು ಇದಕ್ಕೆ ರಾಮಬಾಣ ಎಂಬುದು ಬೂರ್ಜ್ವಾಗಳ ವಾದ. ಮಾರ್ಗರೇಟ್ ಥ್ಯಾಚರ್ ಮತ್ತು ಇತರರು ಮಾಡಲು ಪ್ರಯತ್ನಿಸಿದ್ದು ಇದನ್ನೇ.

ಅಸಂಬದ್ಧ ವಾದ

ಬೂರ್ಜ್ವಾ ಅರ್ಥಶಾಸ್ತ್ರದ ಈ ವಾದವು ಸೈದ್ಧಾಂತಿಕವಾಗಿ ಅಸಂಬದ್ಧವಾಗಿದೆ. ಅತಿ-ಉತ್ಪಾದನೆಯ ಸಮಸ್ಯೆಯನ್ನು ಹಣ ಕೂಲಿಯ ಮತ್ತು ಬೆಲೆಗಳ ಇಳಿಕೆಯ ಮೂಲಕ ನಿವಾರಿಸಲು ಪ್ರಯತ್ನಿಸಿದರೆ, ಆಗ, ಉತ್ಪಾದನೆಯನ್ನು ಮತ್ತು ಉದ್ಯೋಗಾವಕಾಶವನ್ನು ಸುಧಾರಿಸುವ ಬದಲು, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅದು ಒಂದು ದುರಂತವನ್ನು ಉಂಟುಮಾಡುತ್ತದೆ. ಸಂಸ್ಥೆಗಳು ಹಣವನ್ನು ಸಾಲವಾಗಿ ಪಡೆದಿರುತ್ತವೆ. ಹಣ ಕೂಲಿ ಮತ್ತು ಬೆಲೆಗಳು ಇಳಿಕೆಯಾದರೆ, ಅವರ ಆದಾಯವೂ ಕುಸಿಯುತ್ತದೆ. ಇದು ಅನೇಕ ಸಂಸ್ಥೆಗಳನ್ನು ದಿವಾಳಿತನಕ್ಕೆ ದೂಡುತ್ತದೆ. ಹಣ ಕೂಲಿ ಮತ್ತು ಬೆಲೆಗಳ ಕುಸಿತವು ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಉದ್ಯೋಗಾವಕಾಶ ಮತ್ತು ಉತ್ಪತ್ತಿಯ ಏರಿಕೆಗೆ ಕಾರಣವಾಗುವುದರ ಬದಲು, ಉದ್ಯೋಗಗಳ ಮತ್ತು ಉತ್ಪತ್ತಿಯ ಕುಸಿತಕ್ಕೆ ಕಾರಣವಾಗುತ್ತದೆ ಏಕೆಂದರೆ ಸಂಸ್ಥೆಗಳು ದಿವಾಳಿತನದ ಅಲೆಯಲ್ಲಿ ಮುಳುಗಿಹೋಗುತ್ತವೆ.

ಮತ್ತೊಂದೆಡೆಯಲ್ಲಿ, ಉತ್ಪತ್ತಿಯು ಪೂರ್ಣ ಸಾಮರ್ಥ್ಯದಲ್ಲಿರುವಾಗ ಮತ್ತು ಬೇಡಿಕೆಯು ಅಸಮರ್ಪಕವಾಗಿರುವಾಗ ಬೆಲೆಗಳು ಒಂದು ವೇಳೆ ಕುಸಿದರೆ ಮತ್ತು ಹಣ ಕೂಲಿಯು ಬದಲಾಗದೆ ಉಳಿದರೆ, ಕೂಲಿಯ ನಿಜ ಏರಿಕೆಯ ಕಾರಣದಿಂದಾಗಿ ಬೇಡಿಕೆಯು ನಿಸ್ಸಂದೇಹವಾಗಿ ಏರಿಕೆಯಾಗುತ್ತದೆ. ಆದರೆ ಲಾಭದ ಅಂತರಗಳು ಕುಸಿಯುತ್ತವೆ. ಇದನ್ನು ಉದ್ದಿಮೆಗಳು ವಿರೋಧಿಸುತ್ತವೆ. ಆದರೆ, ಅದಕ್ಕಿಂತಲೂ ಮಿಗಿಲಾಗಿ, ಕೆಲವು ಉದ್ದಿಮೆಗಳು ನಷ್ಟವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡು ತಮ್ಮ ವ್ಯವಹಾರಗಳನ್ನು ನಿಲ್ಲಿಸಲು ಮುಂದಾಗುತ್ತವೆ. ಇದರಿಂದಾಗಿ ಉತ್ಪತ್ತಿಯ ಮತ್ತು ಉದ್ಯೋಗಗಳ ಮಟ್ಟವು, ಉತ್ಪತ್ತಿಯ ಪೂರ್ಣ ಸಾಮರ್ಥ್ಯದ ಆರಂಭಿಕ ಮಟ್ಟದಲ್ಲಿ ಇದ್ದುದಕ್ಕಿಂತಲೂ ಕಡಿಮೆಯಿರುತ್ತದೆ. ಆದ್ದರಿಂದ ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಪೂರ್ಣ ಸಾಮರ್ಥ್ಯದ ಅತಿ-ಉತ್ಪಾದನೆಯ ಸಮಸ್ಯೆಯನ್ನು ಮಾರುಕಟ್ಟೆ ಕಾರ್ಯಾಚರಣೆಯ ಮೂಲಕ ನಿವಾರಿಸುವುದು ಎಂದಿಗೂ ಸಾಧ್ಯವಿಲ್ಲ.

ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು ಸಮಾಜದ ಒಡೆತನದಲ್ಲಿರುತ್ತವೆ. ಅಂದರೆ ಕಾರ್ಯತಃ ಪ್ರಭುತ್ವದ ಒಡೆತನದಲ್ಲಿರುತ್ತವೆ. ಎಲ್ಲ ಉದ್ದಿಮೆಗಳ ಲಾಭವೂ ಸರ್ಕಾರದ ಬಜೆಟ್‌ಗೆ ಸೇರುತ್ತದೆ. ಆದ್ದರಿಂದ, ಯಾವುದೋ ಒಂದು ಉದ್ದಿಮೆ ಲಾಭ ಗಳಿಸುತ್ತದೆಯೇ ಅಥವಾ ನಷ್ಟದಲ್ಲಿದೆಯೇ ಎಂಬುದರ ಬಗ್ಗೆ ಅದರ ಮಾಲೀಕನಾದ ಸರ್ಕಾರವು ತಲೆ ಕೆಡಿಸಿಕೊಳ್ಳುವುದಿಲ್ಲ. ಒಟ್ಟಾರೆಯಾಗಿ, ಉದ್ದಿಮೆಗಳು ಖಚಿತ ಲಾಭವನ್ನು ಗಳಿಸಬೇಕು ಎಂಬುದಷ್ಟೇ ಮುಖ್ಯ. ಹಾಗಾಗಿ, ಕೆಲವು ಉದ್ದಿಮೆಗಳು ಒಂದು ವೇಳೆ ನಷ್ಟದಲ್ಲಿದ್ದರೆ ಅವುಗಳನ್ನು ಮುಚ್ಚುವುದಿಲ್ಲ. ಪ್ರಭುತ್ವವು ಎಲ್ಲ ಉದ್ದಿಮೆಗಳೂ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸುವಂತೆ ಆದೇಶಿಸಬಹುದು ಮತ್ತು ಹಣ ಕೂಲಿಯು ಬದಲಾಗದೆ ಉಳಿದು ಮಾರುಕಟ್ಟೆಯಲ್ಲಿರುವ ದಾಸ್ತಾನುಗಳು ಖರ್ಚಾಗುವ ಮಟ್ಟಿಗೆ ಬೆಲೆಗಳನ್ನು ಇಳಿಯಲೂ ಬಿಡಬಹುದು. ಬೆಲೆಗಳ ಈ ಮಟ್ಟದಲ್ಲಿ, ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯು ಒಂದು ವೇಳೆ ಇಳಿಕೆಯಾದರೆ ಕೆಲವು ಉದ್ದಿಮೆಗಳು ಲಾಭ ಗಳಿಸಿದರೆ ಇನ್ನೂ ಕೆಲವು ನಷ್ಟದಲ್ಲಿರಬಹುದು. ಲಾಭ ಗಳಿಸುವ ಉದ್ದಿಮೆಗಳು ಸರ್ಕಾರದ ಬಜೆಟ್‌ಗೆ ಸಕಾರಾತ್ಮಕ ಕೊಡುಗೆ ನೀಡುತ್ತವೆ. ನಷ್ಟದಲ್ಲಿರುವ ಉದ್ದಿಮೆಗಳಿಗೆ ಸರ್ಕಾರದ ಬಜೆಟ್‌ನಿಂದ ಸಬ್ಸಿಡಿ ನೀಡಲಾಗುತ್ತದೆ. ಹಾಗಾಗಿ ಉತ್ಪತ್ತಿಯು ಸದಾ ಪೂರ್ಣ ಸಾಮರ್ಥ್ಯದಲ್ಲಿರುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ಉತ್ಪತ್ತಿಯ ಈ ಮಟ್ಟದಲ್ಲಿ ಲಾಭ ಗಳಿಸುವ ಉದ್ದಿಮೆಗಳ ಲಾಭವು ನಷ್ಟದಲ್ಲಿರುವ ಉದ್ದಿಮೆಗಳ ನಷ್ಟಕ್ಕಿಂತಲೂ ದೊಡ್ಡದಾಗಿರುತ್ತದೆ. ಹಾಗಾಗಿ ಈ ನೀತಿಯ ಅಡಿಯಲ್ಲಿ ಸರ್ಕಾರದ ಬಜೆಟ್, ಎಂದಿಗೂ ತೊಂದರೆಯಲ್ಲಿ ಸಿಲುಕಿಕೊಳ್ಳುವುದಿಲ್ಲ.

ಸದಾ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ

ಸರ್ಕಾರದ ಬಜೆಟ್ ತೊಂದರೆಯಲ್ಲಿ ಸಿಲುಕಿಕೊಳ್ಳುವುದಿಲ್ಲ ಎಂಬುದರ ಕಾರಣ ಸರಳವಾಗಿದೆ. ಹೂಡಿಕೆಯು ಸಕಾರಾತ್ಮಕವಾಗಿ ಇರುವ ವರೆಗೂ ಅರ್ಥವ್ಯವಸ್ಥೆಯಲ್ಲಿ ಉಳಿತಾಯವೂ ಸಕಾರಾತ್ಮಕವಾಗಿ ಇರಲೇಬೇಕು (ವಿದೇಶಿ ಹೂಡಿಕೆಯನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ). ಸರಳತೆಗಾಗಿ ಎಲ್ಲ ಕೂಲಿಗಳೂ ಬಳಕೆಯಾಗಿವೆ ಮತ್ತು ಎಲ್ಲ ಉಳಿತಾಯಗಳೂ ಉದ್ದಿಮೆಗಳ ಲಾಭಗಳಿಂದ (ಇದು ಹಳೆಯ ಸಮಾಜವಾದದ ಅಡಿಯಲ್ಲಿ ವಾಸ್ತವಕ್ಕೆ ಹತ್ತಿರವಾಗಿದೆ) ಬಂದಿವೆ ಎಂದು ಊಹಿಸಿಕೊಂಡರೆ, ಅರ್ಥವ್ಯವಸ್ಥೆಯಲ್ಲಿ ಹೂಡಿಕೆಯು ಸಕಾರಾತ್ಮಕವಾಗಿದ್ದರೆ ಉಳಿತಾಯವೂ ಸಕಾರಾತ್ಮಕವಾಗಿರುತ್ತದೆ. ಹಾಗಾಗಿ, ಲಾಭಗಳೂ ಸಹ ಸಕಾರಾತ್ಮಕವಾಗಿರುತ್ತವೆ. ಸಮಾಜವಾದಿ ಅರ್ಥವ್ಯವಸ್ಥೆಯು ಹೂಡಿಕೆಯನ್ನು ಸಕಾರಾತ್ಮಕವಾಗಿ ಮಾಡುವವರೆಗೆ, ಒಟ್ಟಾರೆ ಲಾಭಗಳೂ ಸದಾ ಸಕಾರಾತ್ಮಕವಾಗಿಯೇ ಇರುತ್ತವೆ. ಅಂದರೆ, ಲಾಭ ಗಳಿಸುವ ಉದ್ದಿಮೆಗಳ ಲಾಭವು ನಷ್ಟ ಹೊಂದುವ ಉದ್ದಿಮೆಗಳ ನಷ್ಟಕ್ಕಿಂತಲೂ ದೊಡ್ಡದಾಗಿರುತ್ತದೆ. ಆದ್ದರಿಂದ ಸಮಾಜವಾದಿ ಪ್ರಭುತ್ವವು ಸದಾ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸುವಂತೆ ಎಲ್ಲ ಉದ್ದಿಮೆಗಳನ್ನೂ ಕೇಳಬಹುದು ಮತ್ತು ಅಷ್ಟಾಗಿಯೂ ನಷ್ಟ ಅನುಭವಿಸುವ ಉದ್ದಿಮೆಗಳಗೆ ಬಜೆಟ್‌ನಿಂದ ಅಡ್ಡ-ಸಬ್ಸಿಡಿ ಒದಗಿಸುವುದು ಸಾಧ್ಯವಾಗುತ್ತದೆ.

ಒಂದು ಸಮಾಜವಾದಿ ಅರ್ಥವ್ಯವಸ್ಥೆಯು ಸದಾ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸ ಬಲ್ಲುದು. ಏಕೆಂದರೆ, ಎಲ್ಲ ಉದ್ದಿಮೆಗಳೂ ಸಾಮಾಜಿಕ ಒಡೆತನದಲ್ಲಿರುತ್ತವೆ. ಆದ್ದರಿಂದ ಒಂದು ಉದ್ದಿಮೆಯು ತನ್ನ ನಷ್ಟವನ್ನು ತಪ್ಪಿಸಬೇಕಾಗಿಲ್ಲ. ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲೂ ಸಹ ಮೂಲ ಬೆಲೆಗಳ ಲೆಕ್ಕಾಚಾರದಲ್ಲಿ ಒಟ್ಟು ಬೇಡಿಕೆಯಲ್ಲಿ ಏರಿಳಿತಗಳಿರಬಹುದು. ಏಕೆಂದರೆ ಒಟ್ಟು ಹೂಡಿಕೆಯ ಮಟ್ಟದಲ್ಲೂ ಏರಿಳಿತಗಳಿರುತ್ತವೆ. ಹೂಡಿಕೆಯ ಈ ಏರಿಳಿತಗಳಿಗೆ ಒಂದು ಪ್ರಮುಖ ಕಾರಣವೆಂದರೆ “ಅನುರಣನ ಪರಿಣಾಮಗಳು”, ಅಂದರೆ, ಉದಾ: ಸಮಾಜವಾದಿ ನಿರ್ಮಾಣವು ಆರಂಭವಾದಾಗ ಹೂಡಿಕೆಗಳನ್ನು ಒಟ್ಟಾಗಿ ಮಾಡಲಾಗುತ್ತದೆ ಮತ್ತು ಹಳೆಯ ಉಪಕರಣಗಳು ಕೆಲವು ವರ್ಷಗಳ ನಂತರ ಏಕಕಾಲದಲ್ಲಿ ಬಳಕೆಗೆ ಬಾರದಾಗಲೂ ಇದೇ ರೀತಿಯ ಹೂಡಿಕೆ ಇರುತ್ತದೆ. ಮುಖ್ಯವಾದ ವಿಷಯವೆಂದರೆ: ಹೂಡಿಕೆಯ ಈ ರೀತಿಯ ಏರಿಳಿತಗಳು ಒಟ್ಟು ಬೇಡಿಕೆಯ ಮೇಲೆ ಯಾವುದೇ ನಿಜ ಏರಿಳಿತಗಳನ್ನು ಉಂಟುಮಾಡುವುದಿಲ್ಲ, ಏಕೆಂದರೆ, ಹಣ ಕೂಲಿಗೆ ಹೋಲಿಸಿದರೆ ಬೆಲೆಗಳ ಚಲನೆಯಿಂದಾಗಿ ಹೂಡಿಕೆ ಇಳಿಕೆಯಾದಾಗ ಬಳಕೆ ಹೆಚ್ಚಾಗುತ್ತದೆ ಮತ್ತು ಹೂಡಿಕೆ ಹೆಚ್ಚಾದಾಗ ಬೆಲೆಗಳು ಇಳಿಯುತ್ತವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಹೂಡಿಕೆಯ ಏರಿಳಿತಗಳನ್ನು ಸಮತೋಲನಗೊಳಿಸಲು ನಿಜ ಕೂಲಿಯಲ್ಲಿ ಚಲನೆಯಾಗುತ್ತದೆ. ಇದರಿಂದಾಗಿ ಒಟ್ಟು ಬೇಡಿಕೆಯು ಪೂರ್ಣ ಸಾಮರ್ಥ್ಯದ ಉತ್ಪತ್ತಿಗೆ ಸದಾ ಸಮನಾಗಿರುತ್ತದೆ.

ನಿಜವಾಗಿಯೂ ಸಂಭವಿಸಿದವು

ಇದೆಲ್ಲವೂ ಸಮಾಜವಾದಿ ಅರ್ಥವ್ಯವಸ್ಥೆಯ ಬಗ್ಗೆ ಹೇಳುವ ಕೇವಲ ಅಮೂರ್ತ ಸಿದ್ಧಾಂತವಲ್ಲ. ಈ ರೀತಿಯ ಬೆಳವಣಿಗೆಗಳು ಸೋವಿಯತ್ ಒಕ್ಕೂಟದಲ್ಲಿ ಮತ್ತು ನಂತರ ಪೂರ್ವ ಯುರೋಪಿನ ದೇಶಗಳಲ್ಲಿ ನಿಜಕ್ಕೂ ಸಂಭವಿಸಿದ್ದವು. ಅಲ್ಲಿ ಹೂಡಿಕೆಯ ಏರಿಳಿತಗಳು ಬಂಡವಾಳಶಾಹಿಯ ಅಡಿಯಲ್ಲಿ, “ಗುಣಕ” ಎಂದು ಕರೆಯಲ್ಪಡುವ ರೀತಿಯಲ್ಲಿ ಆಗುವಂತೆ ಒಟ್ಟಾರೆ ಉತ್ಪತ್ತಿಯ ಉತ್ಪ್ರೇಕ್ಷಿತ ಏರಿಳಿತಗಳಿಗೆ ಕಾರಣವಾಗಲಿಲ್ಲ. ಅವು ಹೂಡಿಕೆಯ ಕೇವಲ ಏರಿಳಿತಗಳಾಗಿಯೇ ಉಳಿದವು. ಗ್ರಾಹಕ ಬೇಡಿಕೆಯು ಅಂತಹ ಏರಿಳಿತಗಳನ್ನು ಸಮತೋಲನಗೊಳಿಸಿ ಅರ್ಥವ್ಯವಸ್ಥೆಯು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವುದನ್ನು ಸದಾ ಖಚಿತಪಡಿಸುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ, ಹೂಡಿಕೆಯ ಏರಿಳಿತಗಳು ಬಳಕೆಯ ಅದೇ ದಿಕ್ಕಿನ ಏರಿಳಿತಗಳಿಗೆ ಕಾರಣವಾಗುತ್ತವೆ ಮತ್ತು ಅದರಿಂದಾಗಿ ಒಟ್ಟು ಉತ್ಪತ್ತಿಯ ಏರಿಳಿತಗಳಿಗೆ (ಬೆಲೆಗಳ ಕೆಲವು ಬದಲಾವಣೆಯೊಂದಿಗೆ ಅಥವಾ ಬೆಲೆಗಳ ಬದಲಾವಣೆಯೇ ಇಲ್ಲದೆ) ಕಾರಣವಾಗುತ್ತವೆ. ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ, ಪೂರ್ಣ ಸಾಮರ್ಥ್ಯದ ಉತ್ಪತ್ತಿಯು ಸಾಕಾರಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹೂಡಿಕೆಯ ಏರಿಳಿತಗಳು ವಿರುದ್ಧ ದಿಕ್ಕಿನಲ್ಲಿ ಬಳಕೆಯ ಏರಿಳಿತಗಳಿಗೆ ಕಾರಣವಾಗುತ್ತವೆ. ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಏಕೆಂದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು ಖಾಸಗಿ ಒಡೆತನದಲ್ಲಿರುತ್ತವೆ ಮತ್ತು ಅದು ಕೂಡ ಅಲ್ಲೊಬ್ಬನೊಂದಿಗೆ-ಇಲ್ಲೊಬ್ಬನೊAದಿಗೆ ಚದುರಿ ಹೋಗಿರುತ್ತದೆ. ಆದ್ದರಿಂದ, ಬೇಡಿಕೆಯ ಕುಸಿತವು ಒಂದು ವೇಳೆ ಬೆಲೆಗಳು ಕುಸಿಯಲು ಕಾರಣವಾದರೆ (ಬೇಡಿಕೆಯ ಕುಸಿತವು ಬೆಲೆಗಳ ಇಳಿಕೆಯು ಕಠಿಣವಾಗಿರುವ ಕೆಲವೇ ಉದ್ಯಮಿಗಳ ಹತೋಟಿಯಲ್ಲಿರುವ ಒಂದು ವ್ಯವಸ್ಥೆಯಲ್ಲಿ ಉತ್ಪತ್ತಿಯ ಕುಸಿತಕ್ಕೆ ನೇರ ಕಾರಣವಾಗಬಹುದು), ಕೆಲವು ಉತ್ಪಾದಕರು ನಷ್ಟ ಅನುಭವಿಸುತ್ತಾರೆ ಮತ್ತು ತಮ್ಮ ಉತ್ಪತ್ತಿಯನ್ನು ಕಡಿತಗೊಳಿಸುತ್ತಾರೆ ಎಂದರ್ಥ. ಆದ್ದರಿಂದ, ಬಂಡವಾಳಶಾಹಿಯ ಅಡಿಯಲ್ಲಿ ಬೇಡಿಕೆಯ ಕುಸಿvವೆಂದರೆ ಅಗತ್ಯವಾಗಿ ಉತ್ಪತ್ತಿಯ ಕುಸಿತವೂ ಆಗುತ್ತದೆ. ಆದರೆ, ಸಮಾಜವಾದದ ಅಡಿಯಲ್ಲಿ ಬೇಡಿಕೆಯ ಕುಸಿತವು ಉತ್ಪತ್ತಿಯಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡದೇ ಬೆಲೆಗಳ ಕುಸಿತದ ಮೂಲಕವೇ ಸರಿಹೊಂದಿಸಲ್ಪಡುತ್ತದೆ.

ಪ್ರಸಿದ್ಧ ಪೋಲಿಷ್ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞ ಮಿಚಲ್ ಕಲೆಕಿ, ಬೇಡಿಕೆ-ನಿರ್ಬಂಧಿತ ವ್ಯವಸ್ಥೆ ಮತ್ತು ಪೂರೈಕೆ-ನಿರ್ಬಂಧಿತ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ತೋರಿಸಿಕೊಟ್ಟರು. ಈ ವ್ಯತ್ಯಾಸವನ್ನು ನಂತರ ಹಂಗೇರಿಯನ್ ಅರ್ಥಶಾಸ್ತ್ರಜ್ಞ ಜಾನೋಸ್ ಕೊರ್ನೈ ಬಳಕೆಗೆ ತಂದರು. ಕಲೆಕಿ, ಬಂಡವಾಳಶಾಹಿಯನ್ನು ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆ ಎಂದೂ ಮತ್ತು ಸಮಾಜವಾದವನ್ನು ಒಂದು ಪೂರೈಕೆ-ನಿರ್ಬಂಧಿತ ವ್ಯವಸ್ಥೆ ಎಂದೂ ಕಂಡರು. ಬಂಡವಾಳಶಾಹಿಯಲ್ಲಿ ಒಟ್ಟು ಬೇಡಿಕೆಯು ಏರಿಕೆಯಾದರೆ ಅದು ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಸಮಾಜವಾದದಲ್ಲಿ ಒಟ್ಟು ಬೇಡಿಕೆಯು ಏರಿಕೆಯಾದರೆ ಅದು ಬೆಲೆಗಳನ್ನು ಹೆಚ್ಚಿಸುತ್ತದೆ, ಉತ್ಪತ್ತಿಯನ್ನಲ್ಲ, ಏಕೆಂದರೆ, ಉತ್ಪತ್ತಿಯು ಯಾವಾಗಲೂ ಅದರ ಗರಿಷ್ಠ ಮಟ್ಟದಲ್ಲೇ ಇರುತ್ತದೆ. ಅದಕ್ಕನುಗುಣವಾಗಿ, ಸಮಾಜವಾದದ ಅಡಿಯಲ್ಲಿ, ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಾದರೆ ಬಳಕೆಯಾಗುವಂತಹ ಬಳಕೆಯಾಗದೇ ಉಳಿದ ಶ್ರಮ ಎಂಬ ಅರ್ಥದಲ್ಲಿ ಅನುದ್ದೇಶಿತ ನಿರುದ್ಯೋಗ ಇರುವುದಿಲ್ಲ.

ಅನುದ್ದೇಶಿತ ನಿರುದ್ಯೋಗ ಎಂಬುದು ಇಲ್ಲದಿರುವುದು ಹಳೆಯ ಸಮಾಜವಾದದ ಒಂದು ಬಹು ದೊಡ್ಡ ಸಾಧನೆಯೇ ಸರಿ. ಇದು ಆಧುನಿಕ ಇತಿಹಾಸದಲ್ಲೂ ಇಂದಿಗೂ ಸರಿಗಟ್ಟದ ಒಂದು ಅಭೂತಪೂರ್ವ ಸಾಧನೆಯೇ ಆಗಿತ್ತು.

ಇದನ್ನೂ ನೋಡಿ : ಹಾವುಗಳ ವಿಸ್ಮಯಕಾರಿ ವಿಷಯಗಳು | ಡಾ : ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *