ಬೆಂಗಳೂರು : ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಮತ್ತು ನಂತರ ಸಂಘಟಿಸಿದ ಪ್ರತಿಭಟನೆ ಅತ್ಯಂತ ಕಳವಳಕಾರಿಯಾಗಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ತಿಳಿಸಿದೆ. ಮದ್ದೂರು
ಸಕ್ಕರೆಯ ನಾಡಾಗಿರುವ, ಕೃಷಿಮೂಲ ಸಂಸ್ಕೃತಿಯ ಮಂಡ್ಯ ಜಿಲ್ಲೆ, ನಿಧಾನವಾಗಿ ಕೋಮುವಿಷವನ್ನು ತಲೆಗೇರಿಸಿಕೊಳ್ಳುತ್ತಿರುವುದು ಆತಂಕಕ್ಕೆಡೆಮಾಡುತ್ತಿದೆ. ಈ ಹಿಂದೆ ನಾಗಮಂಗಲದಲ್ಲಿ ನಡೆದ ಘರ್ಷಣೆ, ಹನುಮ ಜಯಂತಿಯ ಹೆಸರಿನಲ್ಲಿ ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮ ಸಂಘಟಿಸಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಮಾಡಿದ ಅವಹೇಳನಕಾರಿ ಮಾತುಗಳು ಇವೆಲ್ಲವೂ ಒಂದು ಸಿದ್ಧ ಮಾದರಿಯನ್ನು ಸೂಚಿಸುತ್ತಿವೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕೃಷಿಯನ್ನು ಸರ್ವನಾಶ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಸುನಿಲ್ ಕುಮಾರ್ ಬಜಾಲ್ ಮದ್ದೂರು
ರಾಜ್ಯದಾದ್ಯಂತ ಕಿವಿ ಗಡಚಿಕ್ಕುವ ಶಬ್ದಗಳ ಡಿ.ಜೆ.ಗಳನ್ನು ನಿಷೇಧಿಸಿದಾಗ್ಯೂ ಅವುಗಳ ಬಳಕೆ ಮೊನ್ನೆಯ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಮದ್ದೂರಿನಲ್ಲಿ
ಮಾಡಲಾಗಿದೆ, ಮಸೀದಿಯ ಮುಂದೆ ಮೆರವಣಿಗೆಯನ್ನು ನಿಲ್ಲಿಸಿ ಪ್ರಚೋದನೆ ಮಾಡುವ ರೀತಿಯಲ್ಲಿ ಮಸೀದಿಯ ಕಡೆಯಿಂದ ಕಲ್ಲು ತೂರಾಟ ಮಾಡಲಾಗಿದೆ ಎಂದು ವರದಿಗಳಿದ್ದು ಇವು ಆತಂಕ ತರುವ ಸಂಗತಿಗಳಾಗಿವೆ.
ಅಚ್ಚರಿಯ ಸಂಗತಿ ಎಂದರೆ ಅದೇ ವೇಳೆಗೆ ವಿದ್ಯುತ್ ಕಡಿತವಾಗಿದ್ದು ಅನುಮಾನಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರತಿಬಂಧಕಾಜ್ಞೆ ಇದ್ದರೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ನೆರೆಸಿದ್ದು , ಮೆರವಣಿಗೆಯಲ್ಲಿ ಬಿ.ಜೆ.ಪಿ ಮತ್ತು ಜನತಾದಳದ ನಾಯಕರುಗಳು ಪಾಲ್ಗೊಂಡಿದ್ದು ಇವು ಉದ್ದೇಶಪೂರ್ವಕ ಕೃತ್ಯಗಳೆನಿಸಿದರೆ ಅತಿಶಯವಲ್ಲ. ಶ್ರಮ ಸಂಸ್ಕೃತಿಯ ಮಂಡ್ಯ ಜಿಲ್ಲೆಯನ್ನು ಕೋಮುವಾದಿ ಮತ್ತು ಮತೀಯವಾದಿಗಳ ಅಡಂಬೊಲ ಮಾಡದಂತೆ ಎಚ್ಚರಿಕೆಯನ್ನು ಮಂಡ್ಯದ ಜನತೆ ವಹಿಸಬೇಕು.
ಕರಾವಳಿಯಲ್ಲಿ ನಡೆಸಿದ ಪ್ರಯೋಗದ ಫಲಿತಾಂಶಗಳನ್ನು ಇತರ ಕಡೆ ಹಂಚುತ್ತಿರುವ ಅಪಾಯವನ್ನು ನಾವೀಗ ಗಮನಿಸಬೇಕು. ಕೋಮುವಾದ ಮತ್ತು ಮತೀಯವಾದದ ವಿಷಾನಿಲ ರಾಜ್ಯವನ್ನು ಸಂಪೂರ್ಣ ಆಕ್ರಮಿಸಿಕೊಳ್ಳುವ ಮುನ್ನ ನೆಲದ ಸಾಮರಸ್ಯ ಪರಂಪರೆಯನ್ನು ಕಾಪಾಡಲು ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಸಂಘಟಕರು ತಿಳಿಸಿದರು.
ಹಿರಿಯ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಕೆ.ಎಸ್.ವಿಮಲಾ, ಟಿ.ಸುರೇಂದ್ರ ರಾವ್, ಬಿ.ಶ್ರೀಪಾದ ಭಟ್,ಡಾ.ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ, ಜಾಣಗೆರೆ ವೆಂಕಟರಾಮಯ್ಯ, ಇಂದಿರಾ ಕೃಷ್ಣಪ್ಪ, ಡಾ.ಮೀನಾಕ್ಷಿ ಬಾಳಿ ಎನ್. ಕೆ.ವಸಂತ್ ರಾಜ್,ವಾಸುದೇವ ಉಚ್ಚಿಲ,ಡಾ.ಎನ್.ಗಾಯತ್ರಿ ಸೇರಿದಂತೆ ಹಲವಾರು ಸಾಹಿತಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media ಮದ್ದೂರು
