ತರೀಕೆರೆಯ ಗಣಪತಿ ಮತ್ತು ಇಬ್ರಾಹಿಂ ಸಾಹೇಬರು

ಪ್ರತಿ ಊರಿಗೂ ವರುಷಕ್ಕೊಮ್ಮೆ ಜನರನ್ನು ಒಂದು ಕೇಂದ್ರಕ್ಕೆ ಕೂಡಿಸುವ ಹಬ್ಬ ಜಾತ್ರೆಗಳಿರುವಂತೆ, ತರೀಕೆರೆಗೆ ಗಣಪತಿ ಹಬ್ಬವಿತ್ತು. ಗಣಪತಿಯನ್ನು ಬೇರೆಡೆ ವಾರೊಪ್ಪತ್ತು ಕೂರಿಸಿದರೆ ನಮ್ಮಲ್ಲಿ ಬರಾಬರಿ ಒಂದು ಮಾಸ. ಅದರ ದೀಪಾಲಂಕಾರದ ಯಾವತ್ತೂ ಖರ್ಚನ್ನು ಶಿವಮೊಗ್ಗೆಯ ಹಿರೇಹಾಳ್ ಇಬ್ರಾಹಿಂ ಸಾಹೇಬರು ವಹಿಸಿಕೊಳ್ಳುತ್ತಿದ್ದರು. ಅದನ್ನು ಹ್ಯಾಂಡ್‍ಬಿಲ್ಲಿನಲ್ಲಿ ದೊಡ್ಡದಾಗಿ ಕಾಣಿಸುವಂತೆ ಮುದ್ರಿಸಲಾಗುತ್ತಿತ್ತು. ವರ್ಷವಿಡೀ ಪಾಳುಬಿದ್ದಿದ್ದ ತಗಡಿನ ಪೆಂಡಾಲು, ಚತುರ್ಥಿಯ ಹೊತ್ತಿಗೆ ಕಂಬ ಮಾಡು ಗೋಡೆಗೆಲ್ಲ ಬಿಳಿಬಟ್ಟೆ ಸುತ್ತಿಕೊಂಡು, ಜಗಮಗಿಸುವ ದೀಪಮಾಲೆ ಅಂಟಿಸಿಕೊಂಡು ಮೈಸೂರ ಅರಮನೆಯಾಗುತ್ತಿತ್ತು. ನಾವು ಹುಡುಗರು ಠೋಳಿ ಕಟ್ಟಿಕೊಂಡು ಹೋಗಿ, ಗಣಪ್ಪ ಕೂರುವ ತನಕ, ಪ್ರತಿದಿನವೂ ಪೆಂಡಾಲಿಗೆ ಹಾಜರಾತಿ ಕೊಟ್ಟು ಕೆಲಸ ಎಲ್ಲಿವರೆಗೆ ಬಂದಿದೆ ಎಂದು ಅನಧಿಕೃತ ಪರಿಶೀಲನೆ ನಡೆಸುತ್ತಿದ್ದೆವು. ನಮ್ಮೂರ ಗಣಪತಿಯೆಂದರೆ, ಗುಲಾಬಿ ಬಣ್ಣದ ಭಾರೀದೇಹ. ಹೊಂಬಣ್ಣದ ಕಿರೀಟ. ಕಂಠಕೆ ಮುತ್ತಿನಹಾರ, ಡೊಳ್ಳುಹೊಟ್ಟೆಗೆ ಎಳೆಯ ಸರ್ಪಬಂಧ. ಕೈಗಳಲ್ಲಿ ಅಂಕುಶ ಪುಸ್ತಕ ಇತ್ಯಾದಿ. ತಲೆಯ ಹಿಂದೆ ಪ್ರಭಾವಳಿಯ ಚಕ್ರ. ಕಾಲ್ಮಣೆಯ ಬಳಿ ಲಾಡು ತುಂಬಿದ ತಟ್ಟೆ; ಅದರಲ್ಲಿ ಒಂದನ್ನೆತ್ತಿಕೊಂಡು ತಿನ್ನುವುದರಲ್ಲಿ ಮಗ್ನವಾದ ಇಲಿಯಪ್ಪ. ನಾವು ಗಣಪ್ಪನ ಚಿತ್ರಗಳನ್ನು ಸ್ಲೇಟು ಎಕ್ಸೈಜು ಗೋಡೆಗಳ ಮೇಲೆ ಬಿಡಿಸುವ ಬಾಲಕಲಾವಿದರೂ ಆಗುತ್ತಿದ್ದೆವು. ತರೀಕೆರೆ

-ರಹಮತ್ ತರಿಕೇರಿ

ನಾವು ಶಾಲೆಗೆ ಸನಿಹವಿದ್ದ ಪೆಂಡಾಲಿಗೆ ಪ್ರತಿ ಮಧ್ಯಾಹ್ನ ತಪ್ಪದೇ ಆಗಮಿಸುತ್ತಿದ್ದೆವು. ಮಧ್ಯಾಹ್ನ ಪೂಜೆಯ ಬಳಿಕ ಬಾಳೆಹಣ್ಣು ಜೇನುತುಪ್ಪ ಜೋನಿಬೆಲ್ಲ ತುಪ್ಪ ಬೆರೆಸಿ ಮಾಡಿದ ರಸಾಯನವನ್ನು ವಿತರಿಸಲಾಗುತ್ತಿತ್ತು. ಎರಡು ಕೈಯನ್ನು ದೊನ್ನೆಯಾಕಾರ ಮಾಡಿ ಹೆಚ್ಚಾಗಿ ಹಾಕಿಸಿಕೊಂಡು ಚಪ್ಪರಿಸುತ್ತಿದ್ದೆವು-`ಕಾನೂರು ಹೆಗ್ಗಡಿತಿ’ಯ `ಇನ್ನು ಚೊಲ್ಪ’ ಎಂದು ಚರ್ಪು ಬೇಡುವ ಲಕ್ಷ್ಮಿಯಂತೆ. ಕೊನೆಯ ದಿನ ಸಾರ್ವಜನಿಕ ಅನ್ನಸಂತರ್ಪಣೆ. ಪಂಕ್ತಿಯಲ್ಲಿ ಕೂತು ಮುತ್ತುಗದೆಲೆಗೆ ಹಂಚಿಕಡ್ಡಿ ಚುಚ್ಚಿಮಾಡಿದ ತೇಪೆಯ ಪತ್ರೋಳಿಯ ತುಂಬ ಅನ್ನವನ್ನು ರಾಶಿಮಾಡಿಕೊಂಡು, ಗುಳಿಮಾಡಿ ಸಾರು ಬಿಡಿಸಿಕೊಂಡು, ಕಡಲೆಬೇಳೆ ಸೌತೆಕಾಯಿ ಕೊಚ್ಚಿಹಾಕಿದ ಕೋಸಂಬರಿ, ಅಕ್ಕಿಪಾಯಸ, ಹುರುಳಿಕಾಯಿ ಪಲ್ಯ, ಲಾಡುಗಳನ್ನು ಕತ್ತರಿಸುತ್ತಿದ್ದೆವು. ತರೀಕೆರೆ

ಪೆಂಡಾಲಿನಲ್ಲಿ ಮೂವತ್ತೂ ದಿನ ಹರಿಕತೆ ಆರ್ಕೆಸ್ಟ್ರಾ ಜನಪದಗೀತೆ ಭರತನಾಟ್ಯದ ಕಾರ್ಯಕ್ರಮ ಇರುತ್ತಿದ್ದವು. ಗುರುರಾಜುಲು ನಾಯ್ಡು ಮೊದಲಾದ ಹರಿಕತೆ ದಾಸರು `ಭಕ್ತಕುಂಬಾರ’ `ಭಕ್ತಮಾರ್ಕಂಡೇಯ’ ಕತೆ ನಡೆಸಿಕೊಡುತ್ತಿದ್ದರು. ನಾಯ್ಡು ಅವರದು ಕಂಚಿನಕಂಠ. ತಲೆಗೆ ಪಟಗ ಸುತ್ತಿ, ಕೊರಳಲ್ಲಿ ಹೂಮಾಲೆ ಧರಿಸಿ, ಹಾಡುತ್ತ, ನಾಟಕೀಯ ಸಂಭಾಷಣೆ ಮತ್ತು ಗದ್ಯದ ವಿವರಣೆಗಳ ಮೂಲಕ, ಚಿಟಕಿ ಹಾರ್ಮೋನಿಯಂ ಮದ್ದಲೆಗಳ ಹಿನ್ನೆಲೆಯಲ್ಲಿ ಸಣ್ಣಪ್ರಸಂಗವನ್ನು ನಡುರಾತ್ರಿಯ ತನಕ ವಿಸ್ತರಿಸುತ್ತಿದ್ದರು. ಸರ್ವಜ್ಞ, ಕನಕದಾಸ, ಪುರಂದರದಾಸರ ಕೀರ್ತನೆಗಳನ್ನು ನಡುವೆ ಉಲ್ಲೇಖಿಸುತ್ತಿದ್ದರು. ಕತೆಯಲ್ಲಿ ಬರುವ ಪ್ರತಿ ಪಾತ್ರವೂ ಜೀವಂತವಾಗಿ ಕಣ್ಮುಂದೆ ಬರುವಂತೆ ಅಭಿನಯಿಸುತಿದ್ದರು. ಸಣ್ಣಪ್ರಸಂಗವನ್ನು ಗಂಟೆಗಟ್ಟಲೆ ವಿಸ್ತರಿಸುತ್ತಿದ್ದರು. ತರೀಕೆರೆ

ಇದನ್ನೂ ಓದಿ: ಮಹಾರಾಷ್ಟ್ರ | ಬಾಲಕಿಯ ಬರ್ತ್‌ಡೇ ಪಾರ್ಟಿ ನಡೆಯುತ್ತಿದ್ದಾಗಲೇ ಅಪಾರ್ಟ್‌ಮೆಂಟ್’ ಕುಸಿತ 15 ಮಂದಿ ಮೃತ

ಮುಂದೆಯಾದರೂ ಅಧ್ಯಾಪಕನಾದ ಮೇಲೆ, ಹರಿಕತೆದಾಸರು ಅಥವಾ ಲಿಂಗಾನಂದ ಸ್ವಾಮಿಯಂತಹ ಪ್ರವಚನಕಾರರು ಸಭೆಯನ್ನು ಸಮ್ಮೋಹಗೊಳಿಸಿ ಹಿಡಿದಿಡುವ ಕಲೆಯ ಬಗ್ಗೆ ಅಸೂಯೆಯಿಂದ ನೆನೆಯುತ್ತಿದ್ದೆ. ನಾಯ್ಡು ಹರಿಕತೆಯೆಂದರೆ, ಸಿನಿಮಾ ಅಥವಾ ನಾಟಕ ನೋಡಲು ಥಿಯೇಟರಿಗೆ ಹೋದಂತೆ. ಅವರೊಬ್ಬ ಚಲಿಸುವ ರಂಗಭೂಮಿಯಂತಿದ್ದರು. ಮೂಲಕಥೆಗಿಂತ ನಡುನಡುವೆ ನಿದ್ದೆತೊಲಗಿಸಲು ಹೇಳುತ್ತಿದ್ದ ಹಾಸ್ಯಪ್ರಸಂಗಗಳೇ ಹೆಚ್ಚು ಮುದಕೊಡುತ್ತಿದ್ದವು. ಒಬ್ಬ ರಾಜ ತನ್ನ ಪ್ರಜೆಗಳೆಲ್ಲ ಹಾಡುತ್ತ ನಗುತ್ತ ಮಾತಾಡಬೇಕೆಂದು ಆಜ್ಞೆ ಹೊರಡಿಸಿ ಉಂಟಾಗುವ ಫಜೀತಿಯ ಪ್ರಸಂಗವನ್ನು ಕೇಳುವಾಗಲಂತೂ ಹೊರಳಾಡಿ ನಗುತ್ತಿದ್ದೆವು. ತರೀಕೆರೆ

ಹರಿಕತೆಗೆ ಜನ ಮನೆಯಿಂದ ಗೋಣಿಚೀಲ ಜಮಖಾನೆ ತಂದು ತೊಪ್ಪೆಯಿಂದ ಸಾರಿಸಿದ ನೆಲದ ಮೇಲೆ ಹಾಸಿಕೊಂಡು ಕೂರುತ್ತಿದ್ದರು. ಕೆಲವರು ಚಳಿಗೆ ಬೆಡ್‍ಶೀಟು ಸುತ್ತಿಕೊಂಡು ಬಂದು ಕೂತಿದ್ದು ನಿದ್ದೆಬಂದಾಗ ಅಲ್ಲಲ್ಲೇ ಮೂಟೆಯಂತೆ ಉರುಳಿಕೊಳ್ಳುತ್ತಿದ್ದರು. ಅವರನ್ನು ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕರ್ತರು ಎಬ್ಬಿಸಿ ಮನೆಗೆ ಕಳಿಸುತ್ತಿದ್ದರು. ದಾವಣಗೆರೆಯಿಂದ ಬರುತ್ತಿದ್ದ ಜನಪದ ಕಲಾವಿದರೊಬ್ಬರು `ತಾಯಿ ಸತ್ತಮೇಲೆ ತವರಿಗೆ ಹೋಗಬಾರದವ್ವಾ’ ಹಾಡುವಾಗ ಪ್ರೇಕ್ಷಕಗಣ ಕಂಬನಿ ಸುರಿಸುತ್ತಿತ್ತು. ಪಿ.ಬಿ. ಶ್ರೀನಿವಾಸ್, ಸುಶೀಲಾ ಮುಂತಾದ ಪ್ರಖ್ಯಾತರು ಬಂದು ಆರ್ಕೆಸ್ಟ್ರಾ ನಡೆಸಿಕೊಡುವಾಗ, ಪೆಂಡಾಲು ಸಾಲುತ್ತಿರಲಿಲ್ಲ. ಹೊರಗೆ ಮಂಚಿಕೆ ಕಟ್ಟಲಾಗುತ್ತಿತ್ತು. ಊರೇ ಮನೆ ಖಾಲಿಮಾಡಿಕೊಂಡು ಬಂದಂತೆ ಜನಸಾಗರ ಪೆಂಡಾಲಿನ ಮುಂದೆ ಸೇರುತ್ತಿತ್ತು. ಹೊಯ್ದಾಡುವ ಜನರನ್ನು ಸಂಭಾಳಿಸಲು, ಬೆಂಗಳೂರು ಶಿವಮೊಗ್ಗ ಹೆದ್ದಾರಿಯಲ್ಲಿ ಬರುತ್ತಿದ್ದ ವಾಹನಗಳನ್ನು ಬದಲಿ ರಸ್ತೆಯಲ್ಲಿ ಸಾಗಿಸಲು ಪೋಲಿಸರಿಗೆ ಸಾಕಾಗುತ್ತಿತ್ತು. ತರೀಕೆರೆ

ಕೊನೆಯ ದಿನ ಗಣಪತಿ ವಿಸರ್ಜನೆಗೆದ್ದು ಊರಾಡುತ್ತಿತ್ತು. ಮೆರವಣಿಗೆಯಲ್ಲಿ ವೀರಗಾಸೆ ಕೀಲುಕುದುರೆ ಕುಣಿತ ಶಹನಾಯಿಗಳು. ಮೆರವಣಿಗೆ ಮಸೀದಿಯ ಮುಂದೆ ಬಂದಾಗ ಕಮಿಟಿಯವರು ಹೂವಿನ ಹಾರವನ್ನು ಹಾಕುತ್ತಿದ್ದರು. ವಿಸರ್ಜನೆಯ ವೇಳೆ ಊರು ಚಿಕ್ಕೆರೆ ಏರಿಯ ಮೇಲೆ ದಂಡಿನಂತೆ ಜಮಾಯಿಸುತ್ತಿತ್ತು. ಡ್ರಮ್ಮು ಬಾಳೆದಿಂಡು ಬೊಂಬುಗಳಿಂದ ಕಟ್ಟಿದ ತೆಪ್ಪದಲ್ಲಿ ಗಣಪತಿಯನ್ನು ನಡುಗೆರೆಗೆ ಒಯ್ಯಲಾಗುತ್ತಿತ್ತು. ಗಣಪತಿಗೆ ಜಯವಾಗಲಿ ಘೋಷಣೆ ಹೊಮ್ಮುತ್ತಿತ್ತು. ತೆಪ್ಪದಲ್ಲಿರುವವರು ಗಣಪತಿಗೆ ಹಾಕಿದ ಹೂವನ್ನು ದಡದತ್ತ ಎಸೆಯುತ್ತಿದ್ದರು. ತರೀಕೆರೆ

ಅದನ್ನು ಕ್ಯಾಚುಹಿಡಿಯಲು ಪೈಪೋಟಿ. ಗಣಪತಿಯಂತೆಯೆ ದುಂಡಗಿದ್ದ ಅರ್ಚಕರು ನಡುಗೆರೆಯಿಂದ ದಡಕ್ಕೆ ಮಾರುಗೈ ಹಾಕುತ್ತ ಈಜಿ ಬರುವುದನ್ನು ಕಂಡು ಜನ ಕೇಕೆ ಹಾಕುತ್ತಿತ್ತು. ಊರನ್ನು ತಿಂಗಳ ಕಾಲ ಕತೆ ಹಾಡು ನಾಟಕಗಳಿಂದ ಜೀವಂತವಾಗಿಟ್ಟಿದ್ದ ಪೆಂಡಾಲಿನ ಅಲಂಕಾರಕ್ಕೆ ಕಟ್ಟಿದ್ದ ಬಿಳಿ ಅರಿವೆ, ರಿಪೀಸು, ದೀಪಗಳನ್ನು ಕೆಲಸಗಾರರು ಕಳಚುವುದನ್ನು ಖಿನ್ನವದನರಾಗಿ ನೋಡುತ್ತಿದ್ದೆವು. ಮುಂದಿನ ಹನ್ನೊಂದು ತಿಂಗಳು ಭಣಗುಡುವ ಮೌನಕ್ಕೆ ಪೆಂಡಾಲು ಜಾರುತ್ತಿತ್ತು.

ಗುಡಿಯಲ್ಲಿ ಸ್ಥಾಪನೆಯಾಗುವ ಶಿಲಾಮೂರ್ತಿಗಿಂತ ತಿಂಗಳಿದ್ದು ಹೋಗುವ ಮಣ್ಣ ಗಣಪನಿಗೆ, ಒಂಬತ್ತು ದಿನವಿದ್ದು ಬಿದಾಯಿ ಹೇಳುವ ಮೊಹರಂ ದೇವರಿಗೆ ಯಾಕಿಷ್ಟು ಆಕರ್ಷಣೆ? ಅವು ಎಲ್ಲರಿಗೂ ನಿಲುಕುವಂತೆ ಮೈಲಿಗೆಯ ಹಂಗಿಲ್ಲದೆ ಜಂಗುಳಿಯ ನಡುವೆ ಕೂರುತ್ತಾವೆಂದೇ? ಅವುಗಳ ಸುತ್ತ ಸೃಷ್ಟಿಯಾಗಿರುವ ಪುರಾಣ ಮತ್ತು ದುರಂತ ಕತೆಗಳಿಂದಲೇ? ಅವುಗಳ ನೆಪದಲ್ಲಿ ಜರುಗುವ ಕಲಾಪ್ರದರ್ಶಕ ಕಾರ್ಯಕ್ರಮಗಳಿಂದಲೇ? ಭಾರತದಲ್ಲಿ `ಧಾರ್ಮಿಕ’ ಎನ್ನಲಾಗುವ ಭಕ್ತಿಗೂ ಅದರ ಭಾಗವಾಗಿರುವ ಕಲಾತ್ಮಕ ಚಟುವಟಿಕೆಗಳಿಗೂ, ನರದೇಹಕ್ಕೆ ಆನೆಶಿರ ಸೇರಿ ಮೂರನೆಯಾದ ಸಂಕರರೂಪವೊಂದು ಮೂಡುವಂತೆ, ಸೃಜನಾತ್ಮಕ ನಂಟಿನ ಎಳೆಗಳಿವೆ. ಜನತೆಯ ಧರ್ಮಗಳು ಬೇರೆಬೇರೆಯಂತೆ ತೋರುತ್ತವೆ. ತರೀಕೆರೆ

ಆದರೆ ಅವುಗಳ ಸುತ್ತ ಹೆಣಿಗೆಗೊಂಡಿರುವ ಕಲೆಗಳು ಜನರನ್ನು ಶ್ರದ್ಧೆ ಮತ್ತು ರಂಜನೆಯಂತಹ ಸಮಾನಮನಸ್ಕ ಸಾಂಸ್ಕೃತಿಕ ಪರಂಪರೆಗೆ ಬೆಸೆದುಬಿಡುತ್ತವೆ. ನಾನು ಮಸೀದಿ ದರ್ಗಾ ಗುಡಿ ಚರ್ಚು ವಿಹಾರಗಳಿಗೆ ಹೋದರೆ, ಮೊದಲಿಗೆ ಅದರ ವಾಸ್ತುಶಿಲ್ಪ, ಅಲ್ಲಿರುವ ಚಿತ್ರಕಲೆ ಶಿಲ್ಪಗಳನ್ನು ಕಾಣುತ್ತೇನೆ. ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಆಹಾರ ಸಂಸ್ಕೃತಿಯನ್ನು ಗಮನಿಸುತ್ತೇನೆ. ನಮಾಜು ಕೇಂದ್ರಿತವಾದ ರಂಜಾನ್- ಬಕ್ರೀದ್‍ಗಳಿಗಿಂತ, ಉರುಸು ಮತ್ತು ಮೊಹರಂಗಳಿಗೆ ಧರ್ಮಾತೀತವಾಗಿ ಜನರನ್ನು ಬೆಸೆವ ಮತ್ತು ಊರನ್ನು ಸಚೇತನಗೊಳಿಸುವ ಗುಣವಿದೆ. ಇದು ಒದಗಿರುವುದು ಅವುಗಳ ಒಳಗಿನ ಕಲಾಮುಖಗಳಿಂದಲೇ ಇರಬೇಕು. ಗಣಪತಿ ಪೆಂಡಾಲಿನ ಕಾರ್ಯಕ್ರಮ ಅಥವಾ ಜಾತ್ರೆಗಳಿಗೂ ಇದೇ ತತ್ವ ಅನ್ವಯವಾಗುತ್ತದೆ. ತರೀಕೆರೆ

ಇದನ್ನೂ ನೋಡಿ: FRS ಗೆ ಯಾಕೆ ವಿರೋಧ? ಐಸಿಡಿಎಸ್‌ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers

 

ತಿಲಕರು ಬ್ರಿಟಿಶರ ವಿರುದ್ಧ ಜನರನ್ನು ಸಾತಂತ್ರ್ಯ ಹೋರಾಟಕ್ಕೆ ಪ್ರೇರಿಸಲು ಗಣಪತಿ ಉತ್ಸವವನ್ನು ಜಾರಿಗೊಳಿಸಿದರು. ಆದರೆ ಬ್ರಿಟಿಶರು ಹೋದಬಳಿಕ ಕೆಲವೆಡೆ ಗಣಪತಿಗಳು ಜನರನ್ನು ಕೂಡಿಸುವ ಬದಲು ವಿಭಜಿಸುವ ಹತ್ಯಾರಗಳಾಗಿರುವುದಕ್ಕೆ ಸಾಕ್ಷಿಯಾದವು. ಧಾರ್ಮಿಕ ಮೆರವಣಿಗೆಗಳ ದಿನ ಜನ ಬಾಯಲ್ಲಿ ಅಕ್ಕಿಕಾಳು ಹಾಕಿಕೊಳ್ಳುವುದು, ಮೆರವಣಿಗೆ ಗಲಭೆಯಿಲ್ಲದೆ ಮುಗಿದಾಗ ಬಿಡುಗಡೆಯ ನಿಟ್ಟುಸಿರು ಬಿಡುವುದು ವಾರ್ಷಿಕ ವಿದ್ಯಮಾನವಾಯಿತು. ಆದರೆ ನಮ್ಮೂರ ಗಣಪತಿ ತನ್ನ ಕಲಾಪ್ರದರ್ಶನಗಳಿಂದ ಪರ್ಯಾಯ ಥಿಯೇಟರಾಗಿತ್ತು. ದೀಪಾಲಂಕಾರದ ಖರ್ಚಿನ ಇಬ್ರಾಹಿಂ ಸಾಹೇಬರು, ಮುಂದೆ ಶಿವಮೊಗ್ಗೆಯ ದೊಡ್ಡ ಕಲಾಪೋಷಕರೂ ಆಗಿ ಹೆಸರಾದರು. ತರೀಕೆರೆ

ನನಗೆ ಯಾರಾದರೂ `ನಿನ್ನಲ್ಲಿ ಸಾಹಿತ್ಯ ಸಂಗೀತ ನಾಟಕಗಳ ಅಭಿರುಚಿ ಹುಟ್ಟಿಸಿದ ಸಂಗತಿಗಳು ಯಾವುವು?’ ಎಂದು ಕೇಳಿದರೆ, ಅಮ್ಮ ಓದಿ ಹೇಳುತ್ತಿದ್ದ ಪೈಗಂಬರ್ ಅಲಿ ಹಸನ-ಹುಸನರ ಪ್ರಸಂಗಗಳು, `ಚಂದಮಾಮಾ’ ಪತ್ರಿಕೆ, ನಮ್ಮೂರ ಸಿನಿಮಾ ಟಾಕೀಸು, ಮೊಹರಂ ಹಬ್ಬ ಹಾಗೂ ಗಣಪತಿ ಪೆಂಡಾಲುಗಳು ಎಂದು ನಿಶ್ಶಂಕೆಯಿಂದ ಹೇಳಬಲ್ಲೆ.

(‘ಕುಲುಮೆ’ಯಿಂದ)

Donate Janashakthi Media

Leave a Reply

Your email address will not be published. Required fields are marked *