ಒಳಮೀಸಲಾತಿ – ಚಾರಿತ್ರಿಕ ಪ್ರಮಾದವನ್ನು ಸರಿಪಡಿಸುವ ಒಂದು ಮಾರ್ಗ ಎಂಬ ಪರಿವೆ ಇರಲಿ ದಲಿತ
ಭಾರತ ತನ್ನದೇ ಆದ ಸಂವಿಧಾನವನ್ನು ತನಗೇ ಅರ್ಪಿಸಿಕೊಂಡು ಈ ನವಂಬರ್ 26ಕ್ಕೆ 75 ವರ್ಷಗಳು ತುಂಬುತ್ತವೆ. ಗ್ರಾಂಥಿಕವಾಗಿ ತಳಮಟ್ಟದ ಸಮಾಜ ಮತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವ ಸಂವಿಧಾನ ಈಗ ಆರಂಭದಲ್ಲಿ ಇದನ್ನು ಕಟುವಾಗಿ ಟೀಕಿಸಿ ವಿರೋಧಿಸಿದ್ದ ಬಲಪಂಥೀಯ ರಾಜಕೀಯ-ಸಾಂಸ್ಕೃತಿಕ ಶಕ್ತಿಗಳಿಗೂ ಅಪ್ಯಾಯಮಾನವಾಗಿರುವುದು , ಈ ಗ್ರಂಥದ ಒಂದು ಆಂತರಿಕ ಶಕ್ತಿ ಎನ್ನಬಹುದು. ಸಾರ್ವಜನಿಕವಾಗಿ ಸಂವಿಧಾನವನ್ನು ವಿಮರ್ಶಾತ್ಮಕವಾಗಿ ನೋಡುವುದೂ ಸಹ ಒಂದು ನೆಲೆಯಲ್ಲಿ ಅಪರಾಧದಂತೆ ಕಾಣುವ ವಾತಾವರಣವನ್ನೂ ಸಹ ಸೃಷ್ಟಿಸಲಾಗಿದೆ. ಈ ಸಂವಿಧಾನವನ್ನು ಬದಲಿಸುವ ಹಂಬಲ ಆರೆಸ್ಸೆಸ್-ಸಂಘಪರಿವಾರವನ್ನು ಹೊರತುಪಡಿಸಿ ಮತ್ತಾವುದೇ ಸಾಂಸ್ಥಿಕ ನೆಲೆಯಲ್ಲೂ ಕಂಡುಬರುವುದಿಲ್ಲ. ವಿಡಂಬನೆ ಎಂದರೆ ಈ ಸಾಂಸ್ಕೃತಿಕ ರಾಷ್ಟ್ರೀಯವಾದ ಬುನಾದಿಯ ಮೇಲೆ ಚುನಾಯಿತವಾಗಿರುವ ಬಿಜೆಪಿ ಈಗ ಸಂವಿಧಾನವನ್ನು ಆರಾಧಿಸಲು ಹೆಚ್ಚು ಉತ್ಸುಕವಾಗಿದೆ.
ಇದು ಯಾವುದೇ ದೇಶದ ರಾಜಕಾರಣದಲ್ಲಿ ಗುರುತಿಸಬಹುದಾದ ಒಂದು ವೈಚಿತ್ರ್ಯ. ಪ್ರಜಾಪ್ರಭುತ್ವವನ್ನು ನಿರಾಕರಿಸಿ ಭಾರತವನ್ನು ಆಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಎಲ್ಲ ರಾಜಕೀಯ ಪಕ್ಷಗಳೂ ಅರಿತಿವೆ. ಹಾಗೆಯೇ ಈ ಪ್ರಜಾಪ್ರಭುತ್ವಕ್ಕೆ ಸುಭದ್ರ ಬುನಾದಿ ಒದಗಿಸಿರುವ ಭಾರತದ ಸಂವಿಧಾನ ಮತ್ತು ಅದರ ಕರ್ತೃಗಳ ತಾತ್ವಿಕ ಆಲೋಚನೆಗಳನ್ನು ಅಲ್ಲಗಳೆಯುವುದೂ ಸಹ ಸಾಧ್ಯವಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ರಾಜಕೀಯವಾಗಿ ಗಟ್ಟಿಯಾಗಿರುವ ಪ್ರಜಾಪ್ರಭುತ್ವದ ಮೌಲ್ಯಗಳು, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಇಂದಿಗೂ ಸಹ ಶಿಥಿಲವಾಗಿಯೇ ಕಾಣುತ್ತವೆ. ಇದಕ್ಕೆ ಕಾರಣ ನಮ್ಮ ಸಾಂಸ್ಕೃತಿಕ ವೈವಿಧ್ಯತೆ ಅಲ್ಲ, ಈ ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಜಾತಿಗಳ ನಡುವಿನ ಸಾಮಾಜಿಕ-ಆರ್ಥಿಕ ಅಂತರ ಮತ್ತು ವೈರುಧ್ಯಗಳು. ಭಾರತ ಹಲವು ರಾಜ್ಯ-ಭಾಷೆ-ಸಂಸ್ಕೃತಿಗಳ ಒಕ್ಕೂಟ ಎನ್ನುವಷ್ಟೇ ಸತ್ಯ ಭಾರತವು ಜಾತಿಗಳ ಒಕ್ಕೂಟ ಎನ್ನುವ ವಾಸ್ತವತೆ. ದಲಿತ
ಜಾತಿ ದೃಷ್ಟಿಯ ಸಮಾಜದಲ್ಲಿ
ವ್ಯಕ್ತಿಯನ್ನು, ಸಮುದಾಯವನ್ನು, ಸಮಾಜವನ್ನು ಜಾತಿಯ ಕಣ್ಣೋಟದಿಂದಲೇ ನೋಡುವುದರ ಕಾರಣಕ್ಕಾಗಿಯೇ ಸ್ವತಂತ್ರ ಭಾರತದ ಚುನಾವಣಾ ರಾಜಕಾರಣವೂ ತನ್ನ ಜಾತಿ-ಉಪಜಾತಿಗಳ ಸಂಕೋಲೆಗಳಿಂದ ಮುಕ್ತವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಮತ್ತೆಮತ್ತೆ ಹೇಳಿದಂತೆ ಭಾರತದ ಜಾತಿ ವ್ಯವಸ್ಥೆ ಮೆಟ್ಟಿಲುಗಳಿಲ್ಲದ ಒಂದು ಬಹುಮಹಡಿ ಕಟ್ಟಡ. ಇಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬರನ್ನು ಗುರುತಿಸುವುದೇ ಜಾತಿಯ ಮೂಲಕ. ಈ ತಳಮಟ್ಟದ ವಾಸ್ತವಿಕತೆಗೆ ಪೂರಕವಾಗಿಯೇ ಅಧಿಕಾರ ರಾಜಕಾರಣವೂ ಸಹ ಜಾತಿಗಳ ಸುತ್ತಲೂ ತನ್ನ ಭದ್ರ ಕೋಟೆಗಳನ್ನು ಕಟ್ಟಿಕೊಂಡಿದೆ. ಈ ಚುನಾಯಿತ ಆಡಳಿತ ವ್ಯವಸ್ಥೆ ಮತ್ತು ಅದನ್ನು ನಿರ್ದೇಶಿಸುವ ಶಾಸಕಾಂಗ-ಕಾರ್ಯಾಂಗಗಳೂ ಸಹ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು ಜಾತಿ-ಉಪಜಾತಿಗಳ ಚೌಕಟ್ಟಿನೊಳಗೇ ಕಂಡುಕೊಳ್ಳಲು ಬಯಸುತ್ತವೆ. ಹಾಗಾಗಿಯೇ ದಲಿತ ಮುಖ್ಯಮಂತ್ರಿ-ಪ್ರಧಾನಿ-ರಾಷ್ಟ್ರಪತಿ-ನ್ಯಾಯಾಧೀಶ ಮುಂತಾದ ಸಾಂವಿಧಾನಿಕ ಹುದ್ದೆಗಳು ಇಂದಿಗೂ ಸಹ ಅಪವಾದದಂತೆಯೇ (Aberation) ಕಾಣುತ್ತದೆ.
ಇದನ್ನೂ ಓದಿ: ಮುಂಗಾರು ಅಧಿವೇಶನ: ಅತೀ ಹೆಚ್ಚು ವಿಧೇಯಕಗಳ ಮಂಡನೆ
ಡಾ. ಅಂಬೇಡ್ಕರ್ ಅಭಿಪ್ರಾಯದಲ್ಲಿ ಜಾತಿ ವಿನಾಶ, ದೇಶದ ಶೋಷಿತ ತಳಸಮುದಾಯಗಳನ್ನು ಒಂದುಗೂಡಿಸುವ ಒಂದು ಬ್ರಹ್ಮಾಸ್ತ್ರವಾಗಿತ್ತು. ಜಾತಿ ಎಂಬ ಒಂದು ಸಂಸ್ಥೆಯನ್ನೇ ನಾಶಪಡಿಸುವ ಈ ಕಲ್ಪನೆಯ ಹಿಂದೆ, ಶೋಷಿತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಸಹ ತನ್ನ ಹುಟ್ಟಿನ ಜಾತಿಯ ಅಸ್ಮಿತೆಯನ್ನು, ತೊರೆಯಲಾಗದಿದ್ದರೂ, ಮರೆತು ಇತರ ಜಾತಿಗಳೊಡನೆ ಬೆರೆಯಬೇಕಾದ ಹಾಗೂ ಸಾಮಾಜಿಕ ತೋಳ್ಬಲ-ಆರ್ಥಿಕ ಆಧಿಪತ್ಯ-ರಾಜಕೀಯ ಪ್ರಾಬಲ್ಯವನ್ನು ಪಡೆದಿದ್ದ ಮೇಲ್ಜಾತಿಗಳ ಭದ್ರಕೋಟೆಗಳನ್ನು ಭೇದಿಸಿ, ಅಲ್ಲಿರಬಹುದಾದ ಮೇಲರಿಮೆ, ಅಹಮಿಕೆ ಮತ್ತು ದಬ್ಬಾಳಿಕೆಯ ಮನಸ್ಥಿತಿಯನ್ನು ತಹಬಂದಿಗೆ ತರುವ, ಒಂದು ಚಾರಿತ್ರಿಕ ಔದಾತ್ಯ ಇತ್ತು. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ ಅಂತರ ಜಾತಿ ವಿವಾಹ ಮತ್ತು ಸಹಭೋಜನದ ಪರಿಕಲ್ಪನೆಗಳು ಈ ಹಾದಿಯಲ್ಲಿನ ಒಂದು ದಿಟ್ಟ ಹೆಜ್ಜೆ. ಈ ಹೆಜ್ಜೆಗಳು ಹೆಚ್ಚಾದಷ್ಟೂ, ಜೊತೆಗೂಡುವ ಹೆಗಲುಗಳು ಬಲವಾದಷ್ಟೂ, ಜಾತಿ ವ್ಯವಸ್ಥೆಯ ಅಡಿಪಾಯ ಶಿಥಿಲವಾಗುತ್ತಾ ಹೋಗುತ್ತದೆ ಎಂಬ ದೃಢ ನಂಬಿಕೆಯನ್ನು, ಬಾಬಾ ಸಾಹೇಬರ ಜಾತಿ ವಿನಾಶ ಕಲ್ಪನೆಯಲ್ಲಿ ಗುರುತಿಸಬಹುದು.
ಆದರೆ ಸ್ವತಂತ್ರ ಭಾರತದಲ್ಲಿ ಒಂದು ಸಂಸ್ಥೆಯಾಗಿ ಜಾತಿಗಳೇ ಆಗಲೀ ಎಲ್ಲ ಜಾತಿ ಸಮುದಾಯಗಳಲ್ಲಿ ಬೇರೂರಿರುವ ಜಾತಿ ಪ್ರಜ್ಞೆಯಾಗಲೀ, ಜಾತಿ ತಾರತಮ್ಯ ಮೇಲರಿಮೆ-ಕೀಳರಿಮೆಗಳಾಗಲೀ ಸಂಪೂರ್ಣವಾಗಿ ನಾಶವಾಗಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಹುಟ್ಟಿನ ಅಸ್ಮಿತೆಗಳನ್ನು ಅಥವಾ ಸಾಮುದಾಯಿಕ ಅಸ್ತಿತ್ವವನ್ನು ನಿರ್ಧರಿಸುವ ಒಂದು ಪ್ರಬಲ ಆಕರವಾಗಿ ಇಂದಿಗೂ ಜಾತಿಯೇ ಪ್ರಧಾನವಾಗಿದೆ. ಅಂತರ ಜಾತಿ ವಿವಾಹಗಳು ಹೆಚ್ಚಾಗುತ್ತಿವೆ, ವರ್ಣಸಂಕರದ ಪ್ರಮಾಣ ಹೆಚ್ಚಾಗಿದೆ ಆದರೆ ಹೀಗೆ ತಮ್ಮ ಜಾತಿಯಿಂದಾಚೆಗಿನ ಸಂಗಾತಿಯನ್ನು ಆಯ್ಕೆ ಮಾಡುವವರು ವ್ಯಕ್ತಿಗತವಾಗಿ ಎಷ್ಟರ ಮಟ್ಟಿಗೆ ತಮ್ಮ ಮೂಲ ಅಸ್ಮಿತೆಯಿಂದ ಹೊರಬಂದು, ಆಚರಣಾತ್ಮಕವಾಗಿ ಜಾತಿವಿಹೀನ ಮನುಜ ಸಂಬಂಧಗಳನ್ನು ಕಟ್ಟಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಎಲ್ಲಿಯೂ ಸಿಗುವುದಿಲ್ಲ. ಮಾನವಕುಲದ ಏಕತೆ ಮತ್ತು ಸೂಕ್ಷ್ಮ ಸಂಬಂಧಗಳನ್ನು ಸಮ್ಮಾನಿಸುವ ಪ್ರಗತಿಪರ ಮನಸ್ಸುಗಳು ಮಾತ್ರ ಈ ಹಾದಿಯಲ್ಲಿನ ಬೆಳಕಿಂಡಿಗಳಾಗಿ ಕಾಣಬಹುದು.
ಜಾತಿ ವಿನಾಶದ ಕಲ್ಪನೆ ಮತ್ತು ಸಾಧನೆ
ಇದನ್ನು ವಿಷಾದದಿಂದ ನೋಡುವುದಕ್ಕಿಂತಲೂ ಆತ್ಮವಿಮರ್ಶೆಯ ನೆಲೆಯಲ್ಲಿ ನೋಡಿದಾಗ, ಸಮಾಜದಲ್ಲಿನ ತಮ್ಮ ಅಸ್ತಿತ್ವವನ್ನು ಜಾತಿಯಿಂದ ಹೊರತಾಗಿ ಗುರುತಿಸಿಕೊಳ್ಳುವ ಪ್ರಯತ್ನಗಳತ್ತಲೂ ಗಮನಹರಿಸಬೇಕಾಗುತ್ತದೆ. ಬಾಹ್ಯ ಸಮಾಜದಲ್ಲಿ ಈ ಪ್ರಯತ್ನಗಳನ್ನು ಗಮನಿಸುವಾಗಲೇ, ಆಂತರಿಕವಾಗಿ, ಕೌಟುಂಬಿಕವಾಗಿ, ವ್ಯಕ್ತಿಗತ ನೆಲೆಗಳಲ್ಲಿ ತಮ್ಮ ಮೂಲ ಜಾತಿಯ ಧಾರ್ಮಿಕ ಅಥವಾ ಸಾಂಪ್ರದಾಯಿಕ ಆಚರಣೆಗಳಿಗೆ ಅಂಟಿಕೊಳ್ಳುವ ಒಂದು ವಿದ್ಯಮಾನವನ್ನೂ ಇಲ್ಲಿ ಗಂಭೀರವಾಗಿ ನಿಕಷಕ್ಕೊಡ್ಡಬೇಕಿದೆ. ಇದರಿಂದಾಚೆ ನೋಡಿದಾಗಲೂ ಕಂಡುಬರುವ ವೈರುಧ್ಯ ಎಂದರೆ ಈ ಅಂತರಜಾತಿ ಕುಟುಂಬಗಳಲ್ಲಿ ಇಂದಿಗೂ ಉಳಿದುಕೊಂಡಿರುವ ಪಿತೃಪ್ರಧಾನ ಮೌಲ್ಯಗಳು, ಪುರುಷಾಧಿಪತ್ಯ ಮತ್ತು ಕೌಟುಂಬಿಕೆ ಅಸ್ಮಿತೆಗಳನ್ನು ಪುರುಷರ ಮುಖಾಂತರವೇ ನೋಡುವ ಒಂದು ನಡವಳಿಕೆ. ಸಾಂವಿಧಾನಿಕ ಸವಲತ್ತುಗಳಿಗಾಗಿ ಅಥವಾ ಸಾಮಾಜಿಕ ಅಸ್ತಿತ್ವಕ್ಕಾಗಿ ತಮ್ಮ ಮೂಲ ಹುಟ್ಟಿನ ಗುರುತನ್ನು ಉಳಿಸಿಕೊಳ್ಳುವುದೂ ಒಂದು ಕಾರಣವಾಗುತ್ತದೆ. ಹಾಗಾಗಿ ಅಂಬೇಡ್ಕರ್ ಕಲ್ಪನೆಯ ʼಜಾತಿ ವಿನಾಶʼ ಒಂದು ದೃಷ್ಟಿಯಿಂದ ಜಾತಿಗಳ ಅಸ್ಮಿತೆಯನ್ನು ಶಾಶ್ವತಗೊಳಿಸುವ ಒಂದು ಜೀವನ ವಿಧಾನವಾಗಿ ಅನುಸರಿಸಲ್ಪಡುತ್ತಿದೆ.

ಇದು ಸಮಕಾಲೀನ ಭಾರತದ ಸಂದರ್ಭದಲ್ಲಿ ಅನಿವಾರ್ಯವೂ ಹೌದು. ಏಕೆಂದರೆ ಮತಾಂತರ ಹೊಂದಿದ ಅಸ್ಪೃಶ್ಯ ಸಮುದಾಯಗಳೂ ಸಹ ತಾವು ಸ್ವೀಕರಿಸಿದ ಹೊಸ ಮತದ ಅಸ್ಮಿತೆಯನ್ನು ಬಯಸಿದರೆ, ಸಾಂವಿಧಾನಿಕ ಸವಲತ್ತುಗಳಿಂದ ವಂಚಿತವಾಗಬೇಕಾಗುತ್ತದೆ. ಮತ್ತೊಂದೆಡೆ ತಾವು ಸ್ವೀಕರಿಸಿದ ಹೊಸ ಮತದ ಧಾರ್ಮಿಕ ಆಚರಣೆಗಳಲ್ಲಿ, ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ತಮ್ಮ ಹುಟ್ಟಿನ ಜಾತಿಯ ನೆಲೆಯಲ್ಲೇ ಅಲ್ಲಿನ ಸಮಾಜ ಇವರನ್ನು ಸ್ವೀಕರಿಸುತ್ತದೆ. ಈ ದ್ವಂದ್ವವನ್ನು ನಿವಾರಿಸುವ ಬಗೆ ಹೇಗೆ ? ಗಂಭೀರವಾಗಿ ಯೋಚಿಸಬೇಕಿದೆ. ಇದರಿಂದಾಚೆ ನೋಡಿದಾಗ, ಎರಡೂ ಬದಿಗಳಲ್ಲಿ ಮಹಿಳೆಯೇ ಕೇಂದ್ರ ಬಿಂದುವಾಗಿ ಕಾಣಲ್ಪಡುತ್ತಾಳೆ. ಪತಿಯ ಮತವನ್ನು ಸ್ವೀಕರಿಸಿ, ಅವರ ಧಾರ್ಮಿಕ ಅಚರಣೆಗಳಿಗೆ ಅರ್ಪಿಸಿಕೊಳ್ಳಬೇಕಾದ ಅನಿವಾರ್ಯತೆಯೊಂದಿಗೇ, ತನ್ನ ಮೂಲ ಸಾಂಸ್ಕೃತಿಕ ನೆಲೆಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಮಹಿಳೆ ಎದುರಿಸುತ್ತಾಳೆ. ಇದನ್ನು ದಾಟಿ ಕೌಟುಂಬಿಕ ಸಂಬಂಧ ಮತ್ತು ದಾಂಪತ್ಯ ಬದುಕನ್ನು ಆರೋಗ್ಯಕರವಾಗಿ ಮುಂದುವರೆಸುವ ನಿದರ್ಶನಗಳೂ ಇವೆ. ಆದರೆ ಇದರ ಪ್ರಮಾಣ ಕಡಿಮೆ ಎನ್ನಬಹುದು.
ಇದೇ ಚಿಂತನೆಯ ನೆಲೆಯಲ್ಲಿ ಸಹಭೋಜನದ ಆಚರಣೆಯನ್ನೂ ಗಮನಿಸಿದಾಗ, ಇಲ್ಲಿ ಇಂದಿಗೂ ಸಹ ಮೇಲ್ಜಾತಿ ಸಮುದಾಯಗಳು ಅಸ್ಪೃಶ್ಯರೊಡನೆ ಬೆರೆತು ಊಟ ಮಾಡುವ ಪ್ರಸಂಗಗಳು ವಿರಳ. ಕೋಲಾರದ ಆರ್ ಶಿವಪ್ಪ ಅವರ ʼ ಅರಿವು ಭಾರತ ʼ ಎಂಬ ಸಂಸ್ಥೆ ಈ ನಿಟ್ಟಿನಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಅನೇಕ ಗ್ರಾಮಗಳಲ್ಲಿ ಮೇಲು ಕೀಳು ಎನ್ನುವುದಿಲ್ಲದೆ ಒಟ್ಟಾಗಿ ಕುಳಿತು, ಪರಸ್ಪರ ಮನೆಗಳಿಗೆ ಭೇಟಿ ನೀಡಿ, ಆಹಾರ ಸೇವಿಸುವ ಒಂದು ಆಂದೋಲನವನ್ನು ನಡೆಸುತ್ತಿದೆ. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚಾಗಬೇಕಿದೆ. ದಲಿತ ಸಂಘಟನೆಗಳು, ಮೇಲ್ಜಾತಿಯ ಸಾಮಾಜಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಜಗತ್ತು ಇಂತಹ ಪ್ರಯತ್ನಗಳಿಗೆ ಮುಂಚೂಣಿ ಹೆಗಲು ನೀಡಬೇಕಿದೆ. ಏಕೆಂದರೆ ಮತಾಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳ ಕಟ್ಟಳೆಗಳಿಂದ ಹೊರಬರಲು ಸಿದ್ಧವಾಗದ ಮೇಲ್ಜಾತಿ ಸಮುದಾಯದ ಧಾರ್ಮಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ ಸಂಸ್ಥೆಗಳು ಇಂದಿಗೂ ಸಹ ಸಹಭೋಜನವನ್ನು ಸಾರ್ವಜನಿಕವಾಗಿ ನಿರಾಕರಿಸುವ ಪಂಕ್ತಿಭೇದ ಆಚರಣೆಯನ್ನು ತೊರೆದಿಲ್ಲ.
ಆಚರಣಾತ್ಮಕವಾಗಿ ಅಸ್ಮಿತೆ-ಅಸ್ತಿತ್ವ
ಡಾ.ಬಿ.ಆರ್. ಅಂಬೇಡ್ಕರ್ ಜಾತಿ ವಿನಾಶದ ಕರೆ ನೀಡಿ ಒಂಬತ್ತು ದಶಕಗಳೇ ಸಂದಿವೆ. ಆದರೂ ಈ ಗುರಿ ಸಾಧನೆಗೆ ಪ್ರಬಲ ಅಸ್ತ್ರವಾಗಿ ಅವರು ಕಲ್ಪಿಸಿದ ಎರಡು ಆಚರಣೆಗಳು , ಸಾಮಾಜಿಕವಾಗಿ ಮತ್ತು ಆಚರಣಾತ್ಮಕವಾಗಿ ಸಾರ್ವತ್ರೀಕರಣಗೊಳ್ಳಲು ಸಾಧ್ಯವಾಗಿಲ್ಲ. ಭಾರತೀಯ ಸಮಾಜದ ಜಾತಿ ವ್ಯವಸ್ಥೆಯ ಗಟ್ಟಿಬೇರುಗಳ ಸಾಮರ್ಥ್ಯ ಮತ್ತು ಪ್ರಭಾವವನ್ನು ಇದು ಸೂಚಿಸುತ್ತದೆ. ಈ ಬೇರುಗಳನ್ನು ಸಡಿಲಗೊಳಿಸಲು ʼ ಜಾತಿ ವಿನಾಶ ʼ ಎಂದು ಜನಾಂದೋಲನದ ರೀತಿಯಲ್ಲಿ ರೂಪುಗೊಳ್ಳಬೇಕಿತ್ತು. ಸ್ವತಃ ಅಂಬೇಡ್ಕರರೂ ಸಹ ಇದನ್ನು ಒಂದು ಜನಾಂದೋಲನದ ರೂಪದಲ್ಲಿ ಮಾರ್ಗಸೂಚಿಗಳನ್ನು ಅಥವಾ ನಿರಂತರ ಹೋರಾಟಗಳಾಗಿ ರೂಪುಗೊಳ್ಳುವಂತಹ ಕಾರ್ಯೋಪಾಯಗಳನ್ನು ಸಿದ್ದಪಡಿಸಲಿಲ್ಲ. ಬಹುಶಃ ಅಂಬೇಡ್ಕರ್ ಅವರಿಗೆ ಭಾರತ ತನ್ನ ಪ್ರಜಾಪ್ರಭುತ್ವದ ಬೇರುಗಳನ್ನ, ಸಾಂವಿಧಾನಿಕ ಮೌಲ್ಯಗಳ ಅಡಿಪಾಯವನ್ನು ಕ್ರಮೇಣವಾಗಿ ಗಟ್ಟಿಗೊಳಿಸಿಕೊಳ್ಳುತ್ತದೆ, ತನ್ಮೂಲಕ ಸಮಾಜದಲ್ಲಿ ಜಾತಿ ಪ್ರಜ್ಞೆಯೂ ನಶಿಸುತ್ತಾ ಹೋಗುತ್ತದೆ ಎಂಬ ನಿರೀಕ್ಷೆ ಇದ್ದಿರಬಹುದು. ಅಥವಾ ಬೌದ್ಧ ಧಮ್ಮವನ್ನು ಸ್ವೀಕರಿಸಿದ ನಂತರದಲ್ಲೂ ದೇಶದ ದಲಿತ ಸಮುದಾಯಗಳ ಸ್ಪಂದನೆಯನ್ನು ಗಮನಿಸಲು ಅವಕಾಶ ಇದ್ದಿದ್ದಲ್ಲಿ, ಈ ರೀತಿಯ ಜನಾಂದೋಲನವನ್ನು ಕಟ್ಟುವ ಚಿಂತನೆ ಮಾಡುತ್ತಿದ್ದರು ಎಂದು ಖಚಿತವಾಗಿ ಹೇಳಬಹುದು.

ಆದರೆ ಅಂಬೇಡ್ಕರ್ ಅವರು ತಮ್ಮ ʼಜಾತಿ ವಿನಾಶʼ ಪ್ರಬಂಧದಲ್ಲಿ ಸ್ವಷ್ಟವಾಗಿ ಹೇಳಿರುವ ಸೈದ್ದಾಂತಿಕ-ತಾತ್ವಿಕ ನೆಲೆಗಳನ್ನು ಮತ್ತಷ್ಟು ಸದೃಢಗೊಳಿಸಿ, ಈ ನಿಟ್ಟಿನಲ್ಲಿ ಒಂದು ರಾಷ್ಟ್ರವ್ಯಾಪಿ ಜನಾಂದೋಲನವನ್ನು ರೂಪಿಸುವ ಜವಾಬ್ದಾರಿಯನ್ನು ದಲಿತ ಸಂಘಟನೆಗಳು ಹೊರಬೇಕಿತ್ತು. ಈ ಸಾಮಾಜಿಕ ಜವಾಬ್ದಾರಿಯನ್ನು ತಮ್ಮದಾಗಿಸಿಕೊಂಡು, ಅಂತರ ಜಾತಿ ವಿವಾಹ ಮತ್ತು ಸಹಭೋಜನಗಳಿಂದಾಚೆಗೆ, ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ದಲಿತ ಚಳುವಳಿಗಳ ಪ್ರಧಾನ ಪ್ರಣಾಳಿಕೆಯಾಗಬೇಕಿತ್ತು. ಬೌದ್ಧ-ಕ್ರೈಸ್ತ-ಇಸ್ಲಾಂ ಮತಕ್ಕೆ ಮತಾಂತರ ಹೊಂದುವುದರೊಂದಿಗೇ, ಹಿಂದೂ ಧರ್ಮದೊಳಗೇ ಇದ್ದುಕೊಂಡು, ಅದರೊಳಗಿನ ಜಾತಿ ತಾರತಮ್ಯಗಳನ್ನು, ದೌರ್ಜನ್ಯ ದಬ್ಬಾಳಿಕೆಗಳನ್ನು ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆ ಹಾಗೂ ವೈರುಧ್ಯಗಳನ್ನು ನೀಗಿಸುವ ನಿಟ್ಟಿನಲ್ಲಿ ದಲಿತ ಚಳುವಳಿಗಳು ಸ್ಥಳೀಯ ಮಟ್ಟದಲ್ಲಾದರೂ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು. ದಲಿತ
ಬಹಳ ಮುಖ್ಯವಾಗಿ ಜಾತಿ ವಿನಾಶದ ಚೌಕಟ್ಟಿನಲ್ಲಿ ನೋಡಿದಾಗ ಗಮನಿಸಬೇಕಿರುವುದು ದಲಿತರನ್ನೂ ಒಳಗೊಂಡಂತೆ ಎಲ್ಲ ಸಮಾಜಗಳಲ್ಲೂ ಬೇರೂರಿರುವ ಪಿತೃಪ್ರಧಾನತೆ ಮತ್ತು ಯಜಮಾನಿಕೆಯ ಸಂಸ್ಕೃತಿಯ ವಿರುದ್ಧ ದಲಿತ ಚಳುವಳಿಗಳು, ರಾಜಕೀಯ ಪಕ್ಷಗಳು ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೆ ಇರುವುದು. ಸಮಕಾಲೀನ ಸಂದರ್ಭದಲ್ಲಿ ನಿಂತು ನೋಡಿದಾಗ ನಮ್ಮ ವಿವೇಕ ಮತ್ತು ವಿವೇಚನೆಗೆ ಹೊಳೆಯಬೇಕಾದ ಒಂದು ವಾಸ್ತವ ಎಂದರೆ, ಯಾವುದೇ ಸಮಾಜ ಸುಧಾರಕರು, ಕ್ರಾಂತಿಕಾರಿ ಚಿಂತಕರು ತಮ್ಮ ಕಾಲಘಟ್ಟದಲ್ಲಿ ಸಮಾಜ ಸುಧಾರಣೆಗಾಗಿ ರೂಪಿಸುವ ಕಾರ್ಯೋಪಾಯಗಳು, ಮಾರ್ಗದರ್ಶಿ ಸೂತ್ರಗಳು ಅಂತಿಮ ಎನ್ನಲಾಗುವುದಿಲ್ಲ. ಏಕೆಂದರೆ ಕಾಲ ಬದಲಾದಂತೆ ಸಮಾಜವೂ ಬದಲಾಗುತ್ತಾ ಹೋಗುತ್ತದೆ, ಸಂಸ್ಕೃತಿಯೂ ಪಲ್ಲಟಗಳನ್ನು ಎದುರಿಸುತ್ತದೆ , ಜನರ ಮನೋಭಾವವೂ ಪರಿವರ್ತನೆಗೊಳಗಾಗುತ್ತದೆ. ಈ ದಾರ್ಶನಿಕರು ಬಿಟ್ಟು ಹೋಗಿರುವ ಮಾರ್ಗಗಳನ್ನು, ದಾಖಲಿಸಿರುವ ತತ್ವ-ನೀತಿಗಳನ್ನು ಸಮಕಾಲೀನಗೊಳಿಸಿ, ವರ್ತಮಾನದ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ-ಕಾರ್ಯೋಪಾಯಗಳನ್ನು ರೂಪಿಸುವುದು ಚಳುವಳಿಗಳ ಗುರಿಯಾಗಬೇಕು. ದಲಿತ
ಸಮಕಾಲೀನಗೊಳಿಸುವ ನಿಟ್ಟಿನಲ್ಲಿ
ಈ ದೃಷ್ಟಿಯಿಂದ ನೋಡಿದಾಗ ಅಂಬೇಡ್ಕರ್ ಅವರ ದಾರ್ಶನಿಕ ಮಾರ್ಗದರ್ಶನವನ್ನು ಗ್ರಾಂಥಿಕವಾಗಿ ಮಾತ್ರ ಅನುಸರಿಸುತ್ತಾ, ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಶಾಸನಾತ್ಮಕ ಸವಲತ್ತು, ಸೌಲಭ್ಯಗಳನ್ನೇ ಅಂತಿಮ ಎಂದು ಭಾವಿಸಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇದರಲ್ಲಿ ಬಹುಮುಖ್ಯವಾಗಿ ಇಡೀ ತಳಸಮುದಾಯಗಳನ್ನು ಆವರಿಸಿರುವ ಒಂದು ಚಿಂತನೆ ಎಂದರೆ ಮೀಸಲಾತಿ ಸೌಲಭ್ಯ. ಒಳಮೀಸಲಾತಿಯ ವಿಚಾರದಲ್ಲಿ ಎಡಗೈ-ಬಲಗೈ ಸಮುದಾಯಗಳ ನಡುವೆ ಎದ್ದಿರುವ ದೊಡ್ಡ ಗೋಡೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. 80 ವರ್ಷಗಳ ಮುನ್ನ ಅಂಬೇಡ್ಕರ್ ಕಂಡಂತಹ ಜಾತಿ-ಉಪಜಾತಿಗಳ ಸಮೀಕರಣಕ್ಕೂ, ಸ್ವತಂತ್ರ ಭಾರತದಲ್ಲಿ ಸರ್ಕಾರಗಳು ವರ್ಗೀಕರಿಸಿದ ಜಾತಿಗಳ ಸಮೀಕರಣಕ್ಕೂ ಅಪಾರ ಅಂತರ ಇರುವುದನ್ನು ಗಮನಿಸಬೇಕಿದೆ. ಪ್ರತಿಯೊಂದು ಜಾತಿ ಸಮಾಜದಲ್ಲೂ ಇರುವ ಅನೇಕ ಉಪಜಾತಿಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ ಹೋಗುತ್ತವೆ.
ಇದಕ್ಕೆ ಕಾರಣ ಸ್ವಾತಂತ್ರ್ಯಾನಂತರದಲ್ಲಿ ಸಾಂವಿಧಾನಿಕ ಸವಲತ್ತು, ಸೌಲಭ್ಯಗಳನ್ನು ವಿತರಿಸುವ ಸಲುವಾಗಿ ರಾಜ್ಯ ಸರ್ಕಾರಗಳು ಜಾತಿಗಳನ್ನು, ಉಪಜಾತಿಗಳನ್ನು ಮರು ವರ್ಗೀಕರಣಕ್ಕೊಳಪಡಿಸಿರುವುದು. ಈ ವರ್ಗೀಕರಿಸಲ್ಪಟ್ಟ ಜಾತಿ ಸಮುದಾಯಗಳು ಕೆಲವು ರಾಜ್ಯಗಳಲ್ಲಿ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಎಂದು ಪರಿಗಣಿಸಲ್ಪಟ್ಟರೆ, ಕೆಲವೆಡೆ ಪರಿಶಿಷ್ಟ ಜಾತಿ-ಪಂಗಡಗಳಾಗಿ ಮಾನ್ಯತೆ ಪಡೆಯುತ್ತವೆ. ಈ ವರ್ಗೀಕರಣವನ್ನು ಆಧರಿಸಿಯೇ ಸರ್ಕಾರಗಳು ಮೀಸಲಾತಿ ನೀತಿಯನ್ನೂ ಮರುನಿರ್ವಚನೆಗೊಳಪಡಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ರಚಿಸುವ ಆಯೋಗಗಳೂ ಸಹ ಹೊಸ ವರ್ಗೀಕರಣಗಳನ್ನು ಶಿಫಾರಸು ಮಾಡಿರುವುದು ಸಾಂವಿಧಾನಿಕವಾಗಿ ಸ್ವೀಕೃತವೂ ಆಗಿದೆ. ಈ ಹೊಸ ವರ್ಗೀಕರಣದ ಅನುಸಾರವೇ ಮೀಸಲಾತಿ ಸೌಲಭ್ಯಗಳನ್ನೂ ವಿಸ್ತರಿಸಲಾಗುತ್ತಿದೆ.
ಈ ಆಳ್ವಿಕೆಯ ಮೀಸಲಾತಿ ನೀತಿಗಳು ಸಮಗ್ರ ನೆಲೆಯಲ್ಲಿ, ವೈಜ್ಞಾನಿಕ ವರ್ಗೀಕರಣವನ್ನು ಆಧರಿಸಿ ಸಮಾಜದ ನಿರ್ಲಕ್ಷಿತ, ಅವಕಾಶವಂಚಿತ ಜನಸಮುದಾಯಗಳಿಗೆ ತಲುಪಬೇಕಾಗುತ್ತದೆ. ಆದರೆ ಎಲ್ಲ ರಾಜ್ಯಗಳಲ್ಲೂ ಕಾಣಬಹುದಾದ ಸಮಾನ ಎಳೆ ಎಂದರೆ, ಏಳು ದಶಕಗಳಿಗೂ ಹೆಚ್ಚಿನ ಮೀಸಲಾತಿ ಸೌಲಭ್ಯಗಳ ಹೊರತಾಗಿಯೂ, ಇಂದಿಗೂ ಸಹ ತಳಸಮುದಾಯದ ಅನೇಕ ಉಪಜಾತಿಗಳು, ಪರಿಶಿಷ್ಟ ಪಂಗಡಗಳ ಒಳಗಿನ ಜಾತಿಗಳು, ಮೀಸಲಾತಿಯಿಂದಲೇ ವಂಚಿತರಾಗಿರುವುದು. ಮೀಸಲಾತಿ ಮೂಲತಃ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಸುತ್ತಲೂ ನಿರ್ಣಾಯಕವಾಗಿರುವುದರಿಂದ ದಲಿತ ಸಮುದಾಯಗಳ/ಬುಡಕಟ್ಟು ಸಮಾಜಗಳ ಒಳಗೇ ಪ್ರಬಲ ವರ್ಗಗಳು, ಸಾಮಾಜಿಕವಾಗಿ ಮೇಲ್ ಚಲನೆ ಸಾಧಿಸಿರುವ ಜಾತಿಗಳು, ಇತರ ಸಾಂವಿಧಾನಿಕ ಸವಲತ್ತುಗಳ ಫಲವಾಗಿ ಆರ್ಥಿಕವಾಗಿ ಮುಂದುವರೆದಿರುವ ಸಮುದಾಯಗಳು ಪ್ರಮುಖ ಫಲಾನುಭವಿಗಳಾಗಿವೆ. ವಿಶೇಷವಾಗಿ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆಲವು ಸಮುದಾಯಗಳು ಅಧಿಕ ಪಾಲನ್ನು ಪಡೆದಿರುವುದನ್ನು ಅಂಕಿಅಂಶಗಳೇ ನಿರೂಪಿಸುತ್ತವೆ.
ಪರಿಶಿಷ್ಟ ಜಾತಿಗಳ ಪೈಕಿ ಮಾದಿಗ ಸಮುದಾಯ ಮತ್ತು ಅದು ಪ್ರತಿನಿಧಿಸುವ ಎಡಗೈ ಬಣ ಹೆಚ್ಚು ಅವಕಾಶ ವಂಚಿತವಾಗಿರುವುದೂ ಸಹ ಅಂಕಿಅಂಶಗಳಿಂದ ಸಾಬೀತಾಗಿದೆ. ಆಂಧ್ರಪ್ರದೇಶದಲ್ಲಿ ಮಾದಿಗ ದಂಡೋರ ಎಂಬ ಜನಾಂದೋಲನವೇ ರೂಪುಗೊಂಡಿರುವುದನ್ನು ಗಮನಿಸಬಹುದು. ಕರ್ನಾಟಕದಲ್ಲೂ ಈ ಸಮುದಾಯ ಮತ್ತು ಎಡಗೈ ಬಣದ ಹಲವು ಜಾತಿ ಸಮುದಾಯಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿವೆ. ಹಾಗಾಗಿಯೇ ಈ ವಂಚಿತ ಸಮುದಾಯಗಳ ದನಿಯಾಗಿ ಒಳಮೀಸಲಾತಿಯ ಆಗ್ರಹವೂ ರಾಜ್ಯದಲ್ಲಿ ಹೆಚ್ಚು ತೀವ್ರವಾಗುತ್ತಿದೆ. ಈ ಸಮುದಾಯಗಳಿಗೆ ಜನಸಂಖ್ಯಾಧಾರಿತ ಅನುಪಾತದ ಅಡಿ ಸಾಂವಿಧಾನಿಕ ಸವಲತ್ತುಗಳನ್ನು ಕಲ್ಪಿಸುವುದು ಕೇವಲ ಆಳುವ ಸರ್ಕಾರಗಳ ಜವಾಬ್ದಾರಿ ಮಾತ್ರವಲ್ಲ ಇದು ಅಂಬೇಡ್ಕರರಲ್ಲಿ ವಿಶ್ವಾಸ ಇರುವ, ಸಮ ಸಮಾಜ ಮತ್ತು ಸಮಾನತೆಯಲ್ಲಿ ನಂಬಿಕೆ ಇರುವ ಎಲ್ಲ ಸಾಮಾಜಿಕ ಮನಸ್ಸುಗಳ ಜವಾಬ್ದಾರಿಯೂ ಹೌದು.
ಇದನ್ನೂ ನೋಡಿ: ಅಲೆಮಾರಿ ಸಮುದಾಯದ ಹೋರಾಟ | ಓಟಿನ ಲೆಕ್ಕ ನಿಮ್ಮದಣ್ಣ – ಮೋಸ ಮಾಡಿದಿರಲ್ಲಣ್ಣ – ರಾಯಚೂರು ಪಲ್ಲವಿ Janashakthi Media
