ಬಂಡವಾಳಶಾಹಿ ವ್ಯವಸ್ಥೆಯ ಹುಚ್ಚು ದುರಾಸೆಗೆ ಐಟಿ ವಲಯವು ಒಂದು ಜ್ವಲಂತ ಉದಾಹರಣೆ. ಬಂಡವಾಳ ಮತ್ತು ಸೇವಾ ಹರಿವಿನ ವಿಷಯದಲ್ಲಿ ಬಹುಮಟ್ಟಿಗೆ ಜಾಗತಿಕ ಸ್ವರೂಪದಲ್ಲಿರುವ ಈ ವಲಯದ ಉದ್ಯೋಗಿಗಳು ಪ್ರತಿಕೂಲ ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಈ ವಲಯವು ಕೆಲವು ಅತ್ಯಂತ ಆಧುನಿಕ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳನ್ನು ಒಳಗೊಳ್ಳುವ ವಲಯವೂ ಆಗಿರುವುದರಿಂದ, ಒಟ್ಟಾರೆ ತಾಂತ್ರಿಕ ಬದಲಾವಣೆಗಳ ಹೊಡೆತಗಳಿಗೆ ಮೊದಲ ಗುರಿಯೂ ಆಗುತ್ತಾರೆ. ಇಂತಹ ಬದಲಾವಣೆಗಳ ಪರಿಣಾಮಗಳನ್ನು ಜವಾಬ್ದಾರಿಯುತ ಕ್ರಮಗಳ ಮೂಲಕ ನಿಭಾಯಿಸುವ ಬದಲು, ಅದರ ಹೊರೆಯನ್ನು ಉದ್ಯೋಗಿಗಳ ಮೇಲೆ ದಾಟಿಸುವ ಸುಲಭ ದಾರಿಯನ್ನು ಆಯ್ಕೆ ಮಾಡಿಕೊಂಡರೆ?ಭಾರತದಐಟಿ ಉದ್ಯಮದಲ್ಲೇ ಅತಿ ಹೆಚ್ಚು ಲಾಭ ದಾಖಲಿಸಿರುವ ಟಿಸಿಎಸ್ಟಿಸಿಎಸ್ಇದನ್ನೇಮಾಡುತ್ತಿದೆ. ಇದುಟಿಸಿಎಸ್ಗೆ ಮಾತ್ರ ಸೀಮಿತವಾಗಿಲ್ಲ. ಏಕೆಂದರೆ ಈ ಕಂಪನಿಗಳ ನಿಜವಾದ ಕಾರ್ಯಸೂಚಿ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೇರಿಸುವುದೇ ಹೊರತು, ಉದ್ಯಮದ ಸುಸ್ಥಿರತೆ ಮತ್ತು ತಮ್ಮ ಉದ್ಯೋಗಿಗಳ ಭದ್ರತೆ ಅಲ್ಲ. ಆದರೆ ಸರಕಾರ ಮಧ್ಯಪ್ರವೇಶಿಸಬೇಕು-ನಿರ್ಣಾಯಕ ಸೇವೆಗಳನ್ನು ಒದಗಿಸುವ ಮತ್ತು ಭಾರತದ ವಿದೇಶಿ ವಿನಿಮಯ ಗಳಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಲಕ್ಷಾಂತರ ಐಟಿ ಉದ್ಯೋಗಿಗಳ ಜೀವನೋಪಾಯವನ್ನು ರಕ್ಷಿಸಬೇಕು
-ತಪನ್ ಸೆನ್
ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ಸಾಮೂಹಿಕ ರಿಟ್ರೆಂಚ್ಮೆಂಟ್ ಯೋಜನೆ ಲಜ್ಜೆಗೆಟ್ಟ ಮತ್ತು ವಿನಾಶಕಾರಿ ನಡೆ. ಇದು ಜಾಗತಿಕವಾಗಿ ಅದರ ಉದ್ಯೋಗಿಗಳ 2% ರಷ್ಟು – ಭಾರತದಾದ್ಯಂತ 12,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬಾಧಿಸಲಿದೆ. ಜವಾಬ್ದಾರಿ
ಟಿಸಿಎಸ್ 2024–25ರ ಹಣಕಾಸು ವರ್ಷದಲ್ಲಿ ₹2,55,324 ಕೋಟಿಗಳ ಆದಾಯವನ್ನು ಗಳಿಸಿ, 6 ಶೇ.ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. 24.3ಶೇ. ಲಾಭಾಂಶ ಗಳಿಸಿದೆ. ಇದು ಐಟಿ ಉದ್ಯಮದಲ್ಲೇ ಅತಿ ಹೆಚ್ಚು. ಕಂಪನಿಯ ಆಡಳಿತ ಮಂಡಳಿ ಅನುಮೋದಿಸಿದ ಡಿವಿಡೆಂಡ್ ಮೊತ್ತ ₹45,588 ಕೋಟಿ – ಹಿಂದಿನ ವರ್ಷಕ್ಕಿಂತ 20% ಹೆಚ್ಚಳ. ಹಣಕಾಸು ವರ್ಷ 2025ರಲ್ಲಿ ಪ್ರತಿ ಉದ್ಯೋಗಿಯು ಕಂಪನಿಗೆ ತಂದು ಕೊಟ್ಟ ಆದಾಯ ₹42.45 ಲಕ್ಷವಾಗಿದ್ದು, ಇದರಲ್ಲೂ ಹಿಂದಿನ ವರ್ಷಕ್ಕಿಂತ ಶೇ. 15.8 ರಷ್ಟು ಹೆಚ್ಚಳವಾಗಿದೆ. ಈ ನಡುವೆ ಟಿಸಿಎಸ್ ನ ಸಿಇಒ ಎರಡಂಕಿಯ ವೇತನ ಹೆಚ್ಚಳದ ಮೂಲಕ, ₹28 ಕೋಟಿಗೂ ಹೆಚ್ಚು ಸಂಭಾವನೆ ಪಡೆದರು.
ಇದನ್ನೂ ಓದಿ: ಚುನಾವಣಾ ಆಯೋಗ ಅನುಮಾನಗಳನ್ನು ನಿವಾರಿಸಬೇಕು
ಆದರೂ ಅದೇ ವೇಳೆಗೆ ಸರಾಸರಿ ಉದ್ಯೋಗಿಗೆ ವೇತನ ಹೆಚ್ಚಳವನ್ನು ನಿರಾಕರಿಸಲಾಯಿತು. ಮತ್ತು ಜತೆಗೆ ದೊಡ್ಡ ಪ್ರಮಾಣದ ರಿಟ್ರೆಂಚ್ಮೆಂಟ್ ಬೆದರಿಕೆ! (ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಮೇಲೆ ಈಗ ಸಪ್ಟಂಬರಿನಿಂದ 80% ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುವುದಾಗಿ ಕಂಪನಿ ವಕ್ತಾರರು ಈಗ ಪ್ರಕಟಿಸಿದ್ದಾರೆ).
ಏಕೆ ಇಂತಹ ಸ್ಥಿತಿ?
ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಹುಚ್ಚು ದುರಾಸೆಗೆ ಐಟಿ ವಲಯವು ಒಂದು ಜ್ವಲಂತ ಉದಾಹರಣೆಯಾಗಿದೆ. ಭಾರತದಲ್ಲಿನ ಐಟಿ ಉದ್ಯೋಗಿಗಳು ತಮ್ಮ ದೇಶೀಯ ಮತ್ತು ಅಂತರರಾಷ್ಟ್ರೀಯ ಉದ್ಯೋಗದಾತರಿಗೆ ಭಾರಿ ಪ್ರಮಾಣದ ಮಿಗುತಾಯವನ್ನು ಉತ್ಪಾದಿಸುತ್ತಾರೆ ಮತ್ತು ಬಹುಪಾಲು ಯಾವುದೇ ಕಾರ್ಮಿಕ ಹಕ್ಕಿನಿಂದ ವಂಚಿತರಾಗಿರುತ್ತಾರೆ.
ಬಂಡವಾಳ ಮತ್ತು ಸೇವಾ ಹರಿವಿನ ವಿಷಯದಲ್ಲಿ ಬಹುಮಟ್ಟಿಗೆ ಜಾಗತಿಕ ಸ್ವರೂಪದಲ್ಲಿರುವ ಈ ವಲಯದ ಕಾರ್ಯಪಡೆಯು ಪ್ರತಿಕೂಲ ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಗೆ ಹೆಚ್ಚು ಗುರಿಯಾಗುತ್ತದೆ. ಚೀನಾ ಮತ್ತು ಭಾರತೀಯ ತಂತ್ರಜ್ಞಾನ ಉಪಕರಣಗಳು ಮತ್ತು ಸೇವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನೇತೃತ್ವದ ಸುಂಕ ಸಮರವು ಖಂಡಿತವಾಗಿಯೂ ಅಮೆರಿಕದ ಕಂಪನಿಗಳ ಲಾಗುವಾಡು ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಹೊರಗುತ್ತಿಗೆಯಿಂದ ಪಡೆಯುವ ಲಾಭಾಂಶಗಳನ್ನು ಕುಗ್ಗಿಸುತ್ತದೆ. ಇದರ ದುಷ್ಪರಿಣಾಮ ಭಾರತೀಯ ಐಟಿ ವಲಯದ ಮೇಲೆ ತೀವ್ರವಾಗಿರುತ್ತದೆ- ಏಕೆಂದರೆ ಇದು ಹೊರಗುತ್ತಿಗೆ ಆಧಾರಿತವಾಗಿದೆ.
ಈ ವಲಯವು ಕೆಲವು ಅತ್ಯಂತ ಆಧುನಿಕ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳನ್ನು ಒಳಗೊಳ್ಳುವ ವಲಯ. ಆದ್ದರಿಂದ, ಒಟ್ಟಾರೆ ತಾಂತ್ರಿಕ ಬದಲಾವಣೆಗಳ ಹೊಡೆತಗಳಿಗೆ ಮೊದಲ ಗುರಿಯೂ ಆಗುತ್ತದೆ. ಸ್ವಯಂಚಾಲಕತೆ(ಆಟೋಮೇಷನ್) ಹೆಚ್ಚುತ್ತಿರುವುದು – ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಆಗಮನ – ಕೋಡಿಂಗ್ನಂತಹ ಉದ್ಯೋಗಗಳನ್ನು ತೆಗೆದುಹಾಕುವ ಬೆದರಿಕೆ ಹಾಕುತ್ತಿದೆ. ಇಂತಹ ಬದಲಾವಣೆಗಳ ಪರಿಣಾಮಗಳನ್ನು ಜವಾಬ್ದಾರಿಯುತ ಕ್ರಮಗಳ ಮೂಲಕ ಹೀರಿಕೊಳ್ಳುವ ಬದಲು, ಟಿಸಿಎಸ್ನಂತಹ ಭಾರತೀಯ ಸಂಸ್ಥೆಗಳು ಅದರ ಹೊರೆಯನ್ನು ನೌಕರರ ಮೇಲೆ ದಾಟಿಸುವ ಸುಲಭ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.
ಲಾಭದ ಪ್ರಮಾಣವನ್ನು ಉಳಿಸಿಕೊಳ್ಳಲಿಕ್ಕಾಗಿ
ಟಿಸಿಎಸ್ ₹47,000 ಕೋಟಿಗೂ ಹೆಚ್ಚು ನಗದು ಮತ್ತು ನಗದು-ಸಮಾನ ಸಂಪತ್ತನ್ನು ಹೊಂದಿದೆ, ಇದು ಭಾರತದ ಅತ್ಯಂತ ನಗದು-ಸಮೃದ್ಧ ಖಾಸಗಿ ಕಂಪನಿಗಳಲ್ಲಿ ಒಂದಾಗಿದೆ. ಈ ಬೃಹತ್ ಮೀಸಲು ಮತ್ತು ಹಲವು ವರ್ಷಗಳ ಪುಷ್ಕಳ ಬೆಳವಣಿಗೆಯ ಹೊರತಾಗಿಯೂ, ಕಂಪನಿಯು ಈ ಆರ್ಥಿಕ ಸಂಪನ್ಮೂಲಗಳನ್ನು ತನ್ನ ಉದ್ಯೋಗಿಗಳನ್ನು ರಕ್ಷಿಸಲು ಬಳಸುವ ಬದಲು ತನ್ನ ಕಾರ್ಯಪಡೆಯನ್ನು ಕಡಿತಗೊಳಿಸುವ ದಾರಿಯನ್ನು ಆಯ್ದುಕೊಂಡಿದೆ. ಇದು ಟಿಸಿಎಸ್ ನ ನಿಜವಾದ ಕಾರ್ಯಸೂಚಿ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೇರಿಸುವುದೇ ಹೊರತು, ಉದ್ಯಮದ ಸುಸ್ಥಿರತೆ ಮತ್ತು ಕಾರ್ಯಪಡೆಯ ರಕ್ಷಣೆ ಅಲ್ಲ ಎಂಬುದನ್ನು ಬಯಲಿಗೆಳೆಯುತ್ತದೆ.
ಜವಾಬ್ದಾರಿಯುತ ನಿಲುವನ್ನು ತಳೆಯುವ ಬದಲು, ಟಿಸಿಎಸ್ ಆಡಳಿತವು “ಸ್ಕಿಲ್ ಫಿಟ್ಮೆಂಟ್” ( ಕೌಶಲವನ್ನು ಹೊಂದಿಸಿಕೊಳ್ಳುವುದು) ಎಂಬ ಸೋಗಿನಲ್ಲಿ ಮಧ್ಯಮ ಮಟ್ಟದ ಮತ್ತು ಹಿರಿಯ ಉದ್ಯೋಗಿಗಳ ಮೇಲೆ ವ್ಯವಸ್ಥಿತವಾಗಿ ಗುರಿಯಾಗಿಸಲು ಪ್ರಾರಂಭಿಸಿದೆ. ಈ ಅನುಭವಿ ವೃತ್ತಿಪರರಲ್ಲಿ ಅನೇಕರು ಟಿಸಿಎಸ್ನಲ್ಲಿ 20 ರಿಂದ 25 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದಾರೆ, ಈಗ ಅವರನ್ನು ಬಲವಂತವಾಗಿ ಹೊರಹಾಕಲಾಗುತ್ತಿದೆ ಮತ್ತು ಅವರ ಜಾಗದಲ್ಲಿ 80–85% ಕಡಿಮೆ ಸಂಬಳಕ್ಕೆ ಹೊಸಬರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಮರು ಕೌಶಲ್ಯ ಅಥವಾ ಅವರ ಕೌಶಲವನ್ನು ಉನ್ನತೀಕರಿಸುವುದು ಮ್ಯಾನೇಜ್ಮೆಂಟಿನ ಜವಾಬ್ದಾರಿಯಾಗಿರಬೇಕು. ಈ ಜವಾಬ್ದಾರಿಯನ್ನು ನೌಕರರಿಗೆ ದಾಟಿಸುವುದು – ಅವರಿಗೆ ಮರು ಕೌಶಲ್ಯದ ಅವಕಾಶಗಳನ್ನು ನಿರಾಕರಿಸುವುದು ಮತ್ತು ಅವರನ್ನು ಬಲವಂತವಾಗಿ ಹೊರಹಾಕುವುದು – ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ.
ಸಾಮೂಹಿಕ ರಿಟ್ರೆಂಚ್ಮೆಂಟ್ ನಡೆಸುತ್ತಿರುವಾಗಲೇ, ಹೊಸ ಉದ್ಯೋಗಿಗಳ ನೇಮಕಾತಿಯು ಭರದಿಂದ ನಡೆಯುತ್ತಿರುವುದು ಕಂಪನಿಯ ಆಕ್ರಾಮಕ “ಜ್ಯೂನಿಯರೈಸೇಷನ್ ತಂತ್ರ”- ಅಂದರೆ ಮತ್ತು ಹಿರಿಯ ಸಿಬ್ಬಂದಿಯ ವೆಚ್ಚವನ್ನು ಕಡಿಮೆ ಮಾಡಲು ಕಡಿಮೆ ಸಂಬಳದ ಹೊಸಬರ ಪ್ರಮಾಣವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ತಂತ್ರ. ಇವೆಲ್ಲವೂಪ್ರತಿಕೂಲಸನ್ನಿವೇಶದಲ್ಲಿತನ್ನ ಲಾಭಾಂಶವನ್ನು ಉಳಿಸಿಕೊಳ್ಳಲಿಕ್ಕಾಗಿ. ಆದರೆ ಅದೇ ವೇಳೆಯಲ್ಲಿ ಅತ್ಯಂತ ಮೇಲ್ಮಟ್ಟದಲ್ಲಿರುವ ನಿರ್ವಾಹಕರುಗಳ ಆದಾಯಗಳನ್ನು ಅಸಹ್ಯಕರ ಮಟ್ಟಗಳಿಗೆ ಏರಿಸಲಾಗುತ್ತಿದೆ.
ಕಾರ್ಪೊರೇಟ್-ಕೋಮುವಾದಿ ನಂಟಿನ ಸರಕಾರದ ಹಿಂಜರಿಕೆ
ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ಟಿಪ್ಪಣಿ ಮಾಡಲು ಕೂಡ ಹಿಂಜರಿಯುತ್ತಿದೆ ಎಂಬುದು ಗಂಭೀರ ಕಳವಳದ ಸಂಗತಿ. ಕೇಂದ್ರದಲ್ಲಿನ ಕಾರ್ಪೊರೇಟ್-ಕೋಮುವಾದಿ ನಂಟು ಟಿಸಿಎಸ್ಗೆ ಒಲವು ತೋರುತ್ತಿದೆ, ಅದಕ್ಕೆ ಹಲವಾರು ಸಾರ್ವಜನಿಕ ವಲಯದ ಯೋಜನೆಗಳನ್ನು ವಹಿಸಿ ಕೊಡುತ್ತಿದೆ. ಬಿಎಸ್ಎನ್ಎಲ್ 4 ಜಿ / 5 ಜಿ, ರಕ್ಷಣಾ ಪಿಂಚಣಿದಾರರಿಗೆ ‘ಸ್ಪರ್ಶ್’ ಪಿಂಚಣಿ ವ್ಯವಸ್ಥೆ, ಮುಂದಿನ ತಲೆಮಾರಿನ ಪಾಸ್ಪೋರ್ಟ್ ಯೋಜನೆ ಮತ್ತು ಡಿಜಿಟಲ್ ಚುನಾವಣಾ ಪಟ್ಟಿಗಳ ನಿರ್ವಹಣೆ ಸೇರಿದಂತೆ ಟಿಸಿಎಸ್ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಒಪ್ಪಂದಗಳನ್ನು ಪಡೆಯುತ್ತಲೇ ಇದೆ.
ಈ ಯೋಜನೆಗಳಿಗೆ ತೆರಿಗೆದಾರರು ಹಣವನ್ನು ನೀಡುತ್ತಾರೆ, ಆದರೆ ಲಾಭವನ್ನು ಕಾರ್ಪೊರೇಟ್ ಗಣ್ಯರಿಗೆ ವರ್ಗಾಯಿಸಲಾಗುತ್ತದೆ ಮತ್ತು ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಿರ್ಣಾಯಕ ಸೇವೆಗಳನ್ನು ಒದಗಿಸುವ ಮತ್ತು ಭಾರತದ ವಿದೇಶಿ ವಿನಿಮಯ ಗಳಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಲಕ್ಷಾಂತರ ಐಟಿ ಉದ್ಯೋಗಿಗಳ ಜೀವನೋಪಾಯವನ್ನು ರಕ್ಷಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಟಿಸಿಎಸ್ ಆಡಳಿತದೊಂದಿಗೆ ಸಂವಾದವನ್ನು ಪ್ರಾರಂಭಿಸಬೇಕು ಎಂದು ಸಿಐಟಿಯು ಸಲಹೆ ನೀಡುತ್ತದೆ.
ಬಲವಂತದ ರಾಜೀನಾಮೆಗಳು, ವಜಾಗೊಳಿಸುವ ಬೆದರಿಕೆಗಳು, ಹೆಚ್ಚಿದ ಕೆಲಸದ ಒತ್ತಡ ಮತ್ತು ವಜಾಗೊಳಿಸುವ ಅನೌಪಚಾರಿಕ ಸಾಧನಗಳಾಗಿ ಬಳಸುವ ‘ಕಾರ್ಯಕ್ಷಮತೆ’ಯ ಹುಸಿಮಾಪನಗಳು 1947 ರ ಕೈಗಾರಿಕಾ ವಿವಾದ ಕಾಯ್ದೆಯ ಉಲ್ಲಂಘನೆಯಾಗಿವೆ ಎಂಬ ಸಂಗತಿಯತ್ತ ಸಿಐಟಿಯು ಗಮನ ಸೆಳೆಯುತ್ತದೆ. ಯಾವುದೇ ಸಂಸ್ಥೆಯಲ್ಲಿ 100 ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸುವುದಾದರೆ ಅದಕ್ಕೆ ಸರ್ಕಾರದ ಪೂರ್ವಾನುಮೋದನೆ ಕಡ್ಡಾಯವಾಗಿರುತ್ತದೆ ಎಂದು ಈ ಕಾಯಿದೆಯ ಸೆಕ್ಷನ್ 25ಎನ್ ಹೇಳುತ್ತದೆ. ಟಿಸಿಎಸ್ “ಸ್ವಯಂಪ್ರೇರಿತ ನಿರ್ಗಮನ” ಕ್ಕೆ ನೌಕರರ ಮೇಲೆ ಒತ್ತಡ ಹೇರುವ ಮೂಲಕ ಇದರಿಂದ ತಪ್ಪಿಸಿಕೊಳ್ಳುತ್ತಿದೆ. ಈ ಮೂಲಕ ಉದ್ಯೋಗಿಗಳಿಗೆ ಕಾನೂನು ರಕ್ಷಣೆ, ಪರಿಹಾರ ಮತ್ತು ಉದ್ಯೋಗ ಭದ್ರತೆಯನ್ನು ವಂಚಿಸಲಾಗುತ್ತಿದೆ.
ಇದನ್ನೂ ನೋಡಿ: ಧರ್ಮಸ್ಥಳ | ಮಗಳನ್ನು ನೆನೆದು ಕಣ್ಣೀರು ಹಾಕಿದ ತಾಯಿ, ಆ ದಿನ ಏನಾಯ್ತು? ವಿವರವಾಗಿ ಬಿಚ್ಚಿಟ್ಟ ಪದ್ಮಲತಾಳ ಅಕ್ಕ
1947 ರ ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 25ಕ್ಯು ಅಡಿಯಲ್ಲಿ, ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯವಿಧಾನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಅನ್ಯಾಯದ ಶ್ರಮ ಆಚರಣೆಗಳಲ್ಲಿ ತೊಡಗಿದ್ದಕ್ಕಾಗಿ ಸೆಕ್ಷನ್ 25ಟಿ ಮತ್ತು 25ಯು ಅಡಿಯಲ್ಲಿ ಟಿಸಿಎಸ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಒತ್ತಾಯಿಸುತ್ತಿದೆ. ಇದು ಟಿಸಿಎಸ್ ಗೆ ಮಾತ್ರ ಸೀಮಿತವಾಗಿಲ್ಲ – ಹಲವಾರು ಇತರ ಕಂಪನಿಗಳು ಸಹ ಉದ್ಯೋಗಿಗಳ ರಿಟ್ರೆಂಚ್ಮೆಂಟ್ ಮತ್ತು ಲೇ-ಆಫ್ಗಳನ್ನು ಪ್ರಾರಂಭಿಸುತ್ತಿವೆ.
ಸುಂಕ ಸಮರ ಮತ್ತು ಇತರ ಬಾಹ್ಯ ಅಂಶಗಳಿಂದಾಗಿ ಹೊರಗುತ್ತಿಗೆ-ಅವಲಂಬಿತ ಐಟಿ ವಲಯ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಐಟಿ ಕಂಪನಿಗಳು, ಕಾರ್ಮಿಕ ಸಂಘಗಳು ಮತ್ತು ಸೂಕ್ತ ಸರ್ಕಾರಿ ಅಧಿಕಾರಿಗಳ ನಡುವೆ ತ್ರಿಪಕ್ಷೀಯ ಸಭೆಗಳನ್ನು ಕರೆಯಬೇಕೆಂದು ಸಿಐಟಿಯು ಒತ್ತಾಯಿಸುತ್ತಿದೆ.
(ಆಧಾರ: ಸಿಐಟಿಯು ಪರವಾಗಿ ತಪನ್ ಸೆನ್ ರವರು ಆಗಸ್ಟ್ 4ರಂದು ನೀಡಿದ ಪತ್ರಿಕಾ ಹೇಳಿಕೆ)
