ಬೆಂಗಳೂರು : ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು, ಅಖಿಲ ಭಾರತ ಸ್ವತಂತ್ರ ರಂಗವಾರು ಸಂಘಗಳು ಮತ್ತು ಸಂಘಟನೆಗಳನ್ನು ಒಳಗೊಂಡ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ನೀಡಿರುವ ಜುಲೈ 9 ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಎಡ ಪಕ್ಷಗಳು ಬೆಂಬಲ ನೀಡಿವೆ.
ಈ ಕುರಿತು ಇಂದು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಡಪಕ್ಷಗಳ ನಾಯಕರು, ಸಂಘಟಿಸುವ ಹಕ್ಕು, ಸಾಮೂಹಿಕ ಕಾರ್ಯಾಚರಣೆಯ ಹಕ್ಕನ್ನೂ ಒಳಗೊಂಡು, ಕಾರ್ಮಿಕರ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಪೊರೇಟ್ ಬಂಡವಾಳಿಗರ ಲೂಟಿಯ ಹಿತಾಸಕ್ತಿಯ ಭಾಗವಾಗಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುತ್ತಿರುವುದನ್ನು ಪ್ರಧಾನವಾಗಿ ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಜನವಿರೋಧಿ ನೀತಿಗಳ ವಿರುದ್ಧ ಜುಲೈ 9ರಂದು ಅಖಿಲ ಭಾರತ ಮುಷ್ಕರ
ಬಿಜೆಪಿ ನೇತೃತ್ವದ ಸರ್ಕಾರವು ನವ-ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ. ಕಾರ್ಮಿಕ ಸಂಹಿತೆಗಳ ಜಾರಿಯು ಇದರ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಈ ಸರ್ಕಾರವು ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲಗಳನ್ನು, ರಕ್ಷಣೆ ಮತ್ತು ಸಂಪರ್ಕ ಮುಂತಾದ ವ್ಯೂಹಾತ್ಮಕ ಕ್ಷೇತ್ರಗಳನ್ನೂ ಒಳಗೊಂಡು, ಖಾಸಗೀಕರಣ ಮಾಡುತ್ತಿದೆ. ಕಾರ್ಮಿಕ ವಿರೋಧಿ, ರೈತ ವಿರೋಧಿ, ದೇಶದ ವಿರೋಧಿಯಾದ ಈ ನೀತಿಗಳ ವಿರುದ್ಧ ನಡೆಯುತ್ತಿರುವ ಪ್ರತಿರೋಧಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದರು.
ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವುದು, ಗುತ್ತಿಗೆ ಪದ್ಧತಿಯನ್ನು ವ್ಯಾಪಕಗೊಳಿಸುವುದು, ಬಂಡವಾಳಿಗರು ಮಾಡುವ ಕಾನೂನು ಉಲ್ಲಂಘನೆಗಳಿಗೆ ಇದ್ದ ಅಪರಾಧಿಕ ಶಿಕ್ಷೆಯನ್ನು ತೆಗೆದುಹಾಕುವುದು, ಮಹಿಳೆಯರನ್ನು ಅಪಾಯಕಾರಿ ಕೆಲಸಗಳಲ್ಲಿ ಮತ್ತು ರಾತ್ರಿ ಪಾಳಿಗಳಲ್ಲಿ ಕೆಲಸಕ್ಕೆ ತೊಡಗಿಸುವುದು, ಕಾರ್ಖಾನೆಗಳ ವ್ಯಾಖ್ಯಾನವನ್ನು ಬದಲಾಯಿಸಿ ಬೃಹತ್ ಸಂಖ್ಯೆಯ ಕಾರ್ಮಿಕರನ್ನು ಕಾರ್ಮಿಕ ಕಾನೂನುಗಳ ರಕ್ಷಣೆಯಿಂದ ಹೊರಹಾಕುವುದು, ಕಾರ್ಖಾನೆಗಳನ್ನು ಸರ್ಕಾರದ ಅನುಮತಿ ಇಲ್ಲದೆ ಮುಚ್ಚಲು ಇದ್ದ ಮಿತಿಯನ್ನು ೧೦೦ ರಿಂದ ೩೦೦ ಕ್ಕೆ ಹೆಚ್ಚಿಸಿ ಕಾರ್ಮಿಕರನ್ನು ಮನಸೋ ಇಚ್ಚೆ ಕೆಲಸದಿಂದ ತೆಗೆದುಹಾಕಲು ಅವಕಾಶ ಕೊಡುವುದು, ಕನಿಷ್ಟ ವೇತನಗಳನ್ನು ತೀರಾ ಕೆಳಮಟ್ಟದಲ್ಲಿ ನಿಗದಿ ಮಾಡುವುದು, ಮುಂತಾದ ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಈ ಮುಷ್ಕರ ನಡೆಯುತ್ತಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವೂ ಕೇಂದ್ರದ ಬಿಜೆಪಿ ಸರ್ಕಾರದ ದಾರಿಯಲ್ಲೇ ಸಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಬಂಡವಾಳದಾರರ ಹಿತ್ತಾಸಕ್ತಿಯಂತೆ ಬದಲಾವಣೆ ಮಾಡುತ್ತಿದೆ. ಬಿಜೆಪಿ ಜಾರಿಗೊಳಿಸಿದ್ದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕಾಂಗ್ರೆಸ್ ಮುಂದುವರಿಸುತ್ತಿದೆ. ಭೂಸ್ವಾಧೀನದ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ.
ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಹೆಚ್ಚುತ್ತಿರುವ ಬಡವ-ಶ್ರೀಮಂತರ ಅಂತರ, ಸಂಪತ್ತಿನ ಕೇಂದ್ರೀಕರಣ, ಜನರನ್ನು ಮತಧರ್ಮ ಮತ್ತು ಜಾತಿ ಆಧಾರದಲ್ಲಿ ವಿಭಜನೆ, ಮುಂತಾದ ಅನಿಷ್ಟಗಳು ತೀವ್ರಗೊಳ್ಳುತ್ತಿವೆ. ಜುಲೈ 9 ರ ಮುಷ್ಕರದಲ್ಲಿ ಎತ್ತಲಾಗಿರುವ ಬೇಡಿಕೆಗಳು, ರೈತರು, ಕೃಷಿಕೂಲಿಕಾರರು ಮತ್ತು ವಿಶಾಲ ಜನಸಮೂಹಗಳ ಬೇಡಿಕೆಗಳನ್ನೂ ಧ್ವನಿಸುತ್ತದೆ. ಆದ್ದರಿಂದ ಅಖಿಲ ಭಾರತ ಮಟ್ಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ಮಟ್ಟದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಗಳು ಜುಲೈ ಮುಷ್ಕರವನ್ನು ಬೆಂಬಲಿಸಿವೆ. ರೈತರು, ಕೃಷಿಕೂಲಿಕಾರರು ಮತ್ತು ಕಾರ್ಮಿಕರ ನಡುವಿನ ಐಕ್ಯತೆಯನ್ನು ಬೆಸೆಯುವ ಈ ಸೌಹಾರ್ಧ ಕಾರ್ಯಾಚರಣೆಯು, ಮೋದಿ ಸರ್ಕಾರದ ಕೋಮುವಾದಿ ವಿಭಜನೆಯ ವಿರುದ್ಧದ ಐಕ್ಯತೆಯ ಕಾರ್ಯಾಚರಣೆಯೂ ಆಗಿದೆ ಎಂದು ಎಡಪಕ್ಷಗಳ ನಾಯಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ರೊಜಾರಿಯೋ, ಎಸ್‌ಯುಸಿಐ ರಾಜ್ಯ ನಾಯಕ ಶ್ರೀರಾಮ್, ಎಐಎಫ್‌ಬಿ ರಾಜ್ಯ ಕಾರ್ಯದರ್ಶಿ ಜಿ. ಶಿವಶಂಕರ್ ಹಾಜರಿದ್ದರು.
ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ Janashakthi Media
