ಬೆಂಗಳೂರು :ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡನನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ವಕೀಲ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಕೇಸ್ನ ವಿಚಾರಗಳು ಬಹಿರಂಗವಾಗಿವೆ. ಏಪ್ರಿಲ್ 1 ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ಥ ಮಹಿಳೆಯಿಂದ ದೂರು ನೀಡಲಾಗಿತ್ತು. ತಮ್ಮ ನಿವೇಶನವೊಂದರ ಮಾರಾಟ ವಿಚಾರವಾಗಿ ವಕೀಲ ದೇವರಾಜೇಗೌಡ ಸಂಪರ್ಕ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೈಟ್ ಮಾರಾಟ ಮಾಡಿಸಿಕೊಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೀಗಾಗಿ ಮಹಿಳೆ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಮಹಿಳೆ ಮೇಲಿನ ದೌರ್ಜನ್ಯ ಆರೋಪ ಕೇಸ್ನಲ್ಲಿ ಜಾಮೀನಿಗಾಗಿ ದೇವರಾಜೇಗೌಡ ಮೇ 8ರಂದು ಹಾಸನದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 15 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.