ಬೆಂಗಳೂರು | ಪೌರ ಕಾರ್ಮಿಕರ 90 ಕೋಟಿ ರೂ. ಬಾಕಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ 90 ಕೋಟಿ ರೂ. ಗೂ ಹೆಚ್ಚಿನ ಇಪಿಎಫ್‌ ಹಣ ಪಾವತಿಸುವಂತೆ ಪಾಲಿಕೆ ಆಡಳಿತಕ್ಕೆ ರಾಜ್ಯ ಹೈಕೋರ್ಟ್‌ ಗುರುವಾರ ಆದೇಶ ನೀಡಿದೆ. ಪೌರ ಕಾರ್ಮಿಕರಿಗೆ ನೀಡದೆ ಬಾಕಿ ಉಳಿಸಿಕೊಂಡಿದ್ದ ಬಾಕಿ ಪಿಎಫ್‌ ಹಣಕ್ಕೆ ವಾರ್ಷಿಕ 12% ಬಡ್ಡಿಯೊಂದಿಗೆ ಆದೇಶದ ದಿನಾಂಕದಿಂದ ಎಂಟು ವಾರಗಳಲ್ಲಿ ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮಾಮಾಡಬೇಕೆಂದು ಆದೇಶ ಹೇಳಿದೆ.

ಪೌರಕಾರ್ಮಿಕರ ಸೇವೆಯ ಮಹತ್ವ ಮತ್ತು ಕೆಲಸದ ದುಸ್ಥಿತಿಗಳನ್ನು ಕುರಿತು ಆದೇಶದಲ್ಲಿ ಒತ್ತಿ ಹೇಳಿರುವ ಹೈಕೋರ್ಟ್, ಅವರಿಗೆ ನೀಡಬೇಕಾಗಿದ್ದ ಬಾಕಿ ಹಣವಾದ 90,18,89,719 (ತೊಂಬತ್ತು ಕೋಟಿ ಹದಿನೆಂಟು ಲಕ್ಷ ಎಂಬತ್ತೊಂಬತ್ತು ಸಾವಿರದ ಏಳುನೂರ ಹತ್ತೊಂಬತ್ತು) ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ. ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿದ್ದರ ವಿರುದ್ಧ ಬಿಬಿಎಂಪಿ ಪೌರಕಾರ್ಮಿಕರ ಸಂಘ (ಎಐಸಿಸಿಟಿಯು) ಹೈಕೋರ್ಟ್ ಕದ ತಟ್ಟಿತ್ತು.

ಇದನ್ನೂ ಓದಿ:ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಬಿಬಿಎಂಪಿಯಲ್ಲಿ ಉದ್ಯೋಗದಲ್ಲಿರುವ ಪೌರಕಾರ್ಮಿಕರಿಗೆ 2011ರ ಜನವರಿಯಿಂದ 2017ರ ಜುಲೈ ನಡುವಿನ ಅವಧಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್ ಹಣವನ್ನು ಕೋರಿ ಎಐಸಿಸಿಟಿಯು ದೂರು ಸಲ್ಲಿಸಿತ್ತು. ಹೀಗಾಗಿ ಇಪಿಎಫ್ ಪ್ರಾಧಿಕಾರವು 26.10.2017 ರಂದು ಬಿಬಿಎಂಪಿಗೆ ರೂ. 90,18,89,719/- ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮೆ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಬಿಬಿಎಂಪಿಯು ಪ್ರಾಧಿಕಾರದ ಆದೇಶವನ್ನು ಅನುಸರಿಸದ ಕಾರಣ, ಆದೇಶವನ್ನು ಪಾಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಕಾರ್ಮಿಕ ಸಂಘಟನೆಯು ಹೈಕೋರ್ಟ್‌ಗೆ ತೆರಳಿತ್ತು.

ಪೌರಕಾರ್ಮಿಕರ ಕೆಲಸದ ಮಹತ್ವ ಮತ್ತು ಅವರ ಕೆಲಸದಲ್ಲಿನ ದುಸ್ಥಿತಿಗಳನ್ನು ಗುರುತಿಸಿರುವ ಹೈಕೋರ್ಟ್‌, “ಈ ಪೌರಕಾರ್ಮಿಕರು ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲಾ ಕಾರ್ಮಿಕರು ಸರಿಯಾದ ವೇತನವನ್ನು ಸಕಾಲಕ್ಕೆ ಪಡೆಯುವುದನ್ನು ಒಳಗೊಂಡಂತೆ ತಮ್ಮ ಬಾಕಿ ಮೊತ್ತಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಸಂಘಟನೆಯು ಹಲವಾರು ವರ್ಷಗಳಿಂದ ಕೆಲಸ ಮಾಡಿದೆ” ಎಂದು ಹೇಳಿದೆ.

ಇದನ್ನೂ ಓದಿ:ರೈತ ಹೋರಾಟ 3ನೇ ದಿನಕ್ಕೆ | 3ನೇ ಸುತ್ತಿನ ಮಾತುಕತೆ ನಡೆಸಲಿರುವ ಕೇಂದ್ರ ಸರ್ಕಾರ

“ಪೌರಕಾರ್ಮಿಕರು ದಲಿತ ಸಮುದಾಯವರಾಗಿದ್ದು ಅದರಲ್ಲೂ ಪ್ರಧಾನವಾಗಿ ಮಹಿಳೆಯರೇ ಇದ್ದಾರೆ. ಸಾಪ್ತಾಹಿಕ ಅಥವಾ ರಾಷ್ಟ್ರೀಯ ರಜಾದಿನಗಳು ಅಥವಾ ಯಾವುದೇ ವಿರಾಮಗಳಿಲ್ಲದೆಯೇ ಅವರು ವೈಜ್ಞಾನಿಕ ತಂತ್ರಜ್ಞಾನವಿಲ್ಲದ ಅಮಾನವೀಯ ಮತ್ತು ಹಳೆಯ ಮಾದರಿಯಲ್ಲೆ ಕಸ-ಸಂಗ್ರಹಣೆ ಮಾಡಿ, ರಸ್ತೆ ಗುಡಿಸುವಲ್ಲಿ ವರ್ಷವಿಡೀ ಕೆಲಸ ಮಾಡುತ್ತಾರೆ. ಅವರು ತಮ್ಮ ಸ್ವಂತ ಆರೋಗ್ಯವನ್ನು ಲೆಕ್ಕಿಸದೇ ನಿರಂತರವಾಗಿ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಿದ್ದಾರೆ. ಪ್ರತಿ ದಿನವೂ ಅದನ್ನು ಮುಂದುವರೆಸಿದ್ದಾರೆ” ಎಂದು ಹೈಕೋರ್ಟ್‌ ಹೇಳಿದೆ.

“ಇದರಿಂದಾಗಿ ಪೌರಕಾರ್ಮಿಕರು ಗಂಭೀರ ಮತ್ತು ಅವರ ಜೀವನಾವಧಿಯನ್ನು ಕಡಿಮೆಗೊಳಿಸುವ ಉಸಿರಾಟದ ಕಾಯಿಲೆಗಳು, ಹೃದಯದ ತೊಂದರೆಗಳು, ಬೆನ್ನು ಮತ್ತು ಮೊಣಕಾಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ” ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಬಿಬಿಎಂಪಿ ಪೌರಕಾರ್ಮಿಕರ ಮೇಲೆ ನಡೆಸಿದ ಅನ್ಯಾಯದ ಬಗ್ಗೆ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದ್ದು, “ಪ್ರತಿವಾದಿ ಬಿಬಿಎಂಪಿಯ ಕೃತ್ಯಗಳು ಅತ್ಯಂತ ಬಡ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದ ಕಾರ್ಮಿಕರಿಗೆ ಆರ್ಥಿಕ ಮತ್ತು ಮಾನಸಿಕ ನೋವನ್ನುಂಟುಮಾಡಿದೆ” ಎಂದು ಹೇಳಿದೆ. 26.10.2017ರ ಆದೇಶವನ್ನು ಪಾಲಿಸಲು ಮತ್ತು ಅನುಷ್ಠಾನಗೊಳಿಸಲು ಪಾಲಿಕೆ ವಿಫಲವಾಗಿದ್ದು, ಇದು ಕಾನೂನುಬಾಹಿರ ನಡೆಯಾಗಿದ್ದು, ಇದು ಸಾರ್ವಜನಿಕ ನೀತಿಯ ಉಲ್ಲಂಘನೆ ಮತ್ತು ಪೌರಕಾರ್ಮಿಕರ ಮೂಲಭೂತ ಮತ್ತು ಶಾಸನಬದ್ಧ ಜೀವಿಸುವ ಹಕ್ಕಿನ ವಿರುದ್ಧವಾಗಿದೆ ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *