ಚಿಕ್ಕಮಗಳೂರು : ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಹೊಟ್ಟೆ ನೋವಿನಿಂದ ನರಳಾಡಿ ಪ್ರಾಣ ಬಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಂಜಿತಾ ಬಾಯಿ (21) ಹೊಟ್ಟೆ ನೋವಿನಿಂದ ಮೃತಪಟ್ಟ ಮಹಿಳೆ. ರಂಜಿತಾ ಮೂಲತಃ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ನಿವಾಸಿ, ಒಂದು ವರ್ಷದ ಹಿಂದೆಯಷ್ಟೇ ಶಶಿಧರ್ ನಾಯಕ್ ಎಂಬವರೊಂದಿಗೆ ವಿವಾಹವಾಗಿದ್ದರು.
ಇದನ್ನು ಓದಿ : ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದ ಸಪ್ದರ್ ಹಾಶ್ಮಿ
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸಖರಾಯಪಟ್ಟಣದ ವಡೇರಹಳ್ಳಿ ತಾಂಡ್ಯದ ರಂಜಿತಾ ಬಾಯಿ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ, ತಡರಾತ್ರಿ ರಂಜಿತಾ ಬಾಯಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವಿನಿಂದ ರಂಜಿತಾ ನರಳಾಡಿದ್ದಾರೆ. ಬಾಣಂತಿ ನರಳಾಡಿದ್ರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಹೀಗಾಗಿ ರಂಜಿತಾ ಬಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ವರ್ಷದ ಹಿಂದೆಯಷ್ಟೇ ರಂಜಿತಾ ಬಾಯಿ ಹಾಗೂ ಶಶಿಧರ್ ನಾಯಕ್ ವಿವಾಹವಾಗಿದ್ರು. ರಂಜಿತಾ ಸಾವಿಗೆ ನ್ಯಾಯ ನೀಡುವಂತೆ ಮಹಿಳೆಯ ಪೋಷಕರು ಆಗ್ರಹಿಸಿದ್ದಾರೆ.