ವಿಬಿ-ಜಿಆರ್‌ಎಎಂಜಿ ನಿಯಮಗಳು ಗ್ರಾಮೀಣ ದುಡಿಯುವ ಜನಗಳಿಗೆ ಕ್ರೂರ ಹೊಡೆತ: ತಕ್ಷಣ ಹಿಂಪಡೆಯಲು ಬೃಂದಾ ಕಾರಟ್‌ ಆಗ್ರಹ

ಮನರೆಗವನ್ನು ಮರುಸ್ಥಾಪಿಸಿ:ರೈತ-ಕಾರ್ಮಿಕ ಸಂಘಟನೆಗಳ ಆಗ್ರಹ
ಸಿಪಿಐ(ಎಂ)ನ ಹಿರಿಯ ಮುಖಂಡರು ಮತ್ತು ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಅವರು ಇತ್ತೀಚೆಗೆ ಪ್ರಕಟಿಸಿರುವ ವಿಕಸಿತ್‌ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (ವಿಬಿ-ಜಿಆರ್‌ಎಎಂಜಿ ಕಾಯ್ದೆ)ಯ ಕರಡು ನಿಯಮಗಳನ್ನು ಕರಡು ನಿಯಮಗಳನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ಇದನ್ನು “ಸಂವಿಧಾನದ ಒಕ್ಕೂಟ ಸ್ವರೂಪದ ಮೇಲಿನ ದಾಳಿ” ಮತ್ತು “ದೇಶದ ಗ್ರಾಮೀಣ ದುಡಿಯುವ ಜನರಿಗೆ ಅತ್ಯಂತ ಕ್ರೂರ ಹೊಡೆತ” ಎಂದು ಕರೆದಿದ್ದಾರೆ. 

ರಾಜಸ್ಥಾನದ ಉದಯಪುರದಲ್ಲಿರುವ ಆದಿವಾಸಿ ಗ್ರಾಮಕ್ಕೆ ಇತ್ತೀಚೆಗೆ ನೀಡಿದ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, “ನಿನ್ನೆ (ಜೂನ್ 28) ನಾನು ರಾಜಸ್ಥಾನದ ಉದಯಪುರ ಜಿಲ್ಲೆಯ ಬಾರಾಪಾಲ ಎಂಬ ಆದಿವಾಸಿ ಹಳ್ಳಿಯಲ್ಲಿ ಗೊತ್ತುಪಡಿಸಿದ MGNREGA ಕಾರ್ಯಕ್ಷೇತ್ರದಲ್ಲಿ ಪ್ರಧಾನವಾಗಿ ಮಹಿಳೆಯರೇ ಆಗಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸುತ್ತಿದ್ದೆ. ಬಿಸಿಲ ಬೇಗೆಯ ಕಾರಣ ರಾಜಸ್ಥಾನವು ವಿಶೇಷ ಬೇಸಿಗೆ ಸಮಯವನ್ನು ಹೊಂದಿದೆ. ನಾಲ್ಕು ಗಂಟೆಗಳ ಕಾಲ, 6.30 ರಿಂದ 10 ರವರೆಗೆ, ಆನ್‌ಲೈನ್ ಅಧಿಕೃತ ಹಾಜರಾತಿ ಸೈಟ್ ತೆರೆಯಲು ಹಲವಾರು ಮಹಿಳೆಯರು ಕಾಯುತ್ತಿದ್ದರು.

ಆದರೆ ಮತ್ತೆ-ಮತ್ತೆ ಪ್ರಯತ್ನಿಸಿದರೂ ಸಂಪರ್ಕವು ಲಭ್ಯವಾಗಲಿಲ್ಲ. ಕೊನೆಗೂ  ಉಸ್ತುವಾರಿ ನಡೆಸುವವರು ಈ ದಿನ ಯಾವುದೇ ಕೆಲಸವಿಲ್ಲ ಎಂದು ಘೋಷಿಸಬೇಕಾಯಿತು. ಇದು ಒಂದು ಸರ್ವೇಸಾಮಾನ್ಯವಾಗಿರುವ ಘಟನೆ ಎಂದು ನನಗೆ ಹೇಳಲಾಗಿದೆ” ಎಂದು ಈ ಪತ್ರದ ಆರಂಭದಲ್ಲಿ ಹೇಳಿರುವ ಬೃಂದಾ ಕಾರಟ್‌ , ಕರಡು ನಿಯಮಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಅತಿಯಾಗಿ  ಅವಲಂಬಿಸಿವೆ ಎಂದು ಅವರು ಟೀಕಿಸಿದ್ದಾರೆ, ಸಂಪರ್ಕದ ಸಮಸ್ಯೆಗಳು ಅನೇಕ ಮಹಿಳೆಯರು ತಮ್ಮ ಹಾಜರಾತಿಯನ್ನು ನೋಂದಾಯಿಸಲಾಗದಂತೆ ಮಾಡುತ್ತಿವೆ, ಇದರಿಂದಾಗಿ ಅವರು ಒಂದು ದಿನದ ವೇತನವನ್ನು ಕಳೆದುಕೊಳ್ಳಬೇಕಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಮನೆಗೆ BLO ಭೇಟಿ ಆರಂಭ: ಮೊದಲ ದಿನವೇ 12.48 ಲಕ್ಷ ಫಾರ್ಮ್ ವಿತರಣೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯಿಂದ ಹಿಂದೆ ಸರಿದಿರುವುದು ಈಗಾಗಲೇ ಗ್ರಾಮೀಣ ಜೀವನೋಪಾಯವನ್ನು ಧ್ವಂಸಗೊಳಿಸಿದೆ. ಕೆಲವು ಪ್ರದೇಶಗಳಲ್ಲಿ, ಕಾರ್ಮಿಕರು ಜನವರಿ ಮತ್ತು ಜೂನ್ ನಡುವೆ ಕೇವಲ ಪಡೆದಿರುವುದು ಕೇವಲ 18 ದಿನಗಳ ಉದ್ಯೋಗ ಎನ್ನುತ್ತ ಬೃಂದಾ ಅವರು MGNREGA ಕಾರ್ಮಿಕರ ಸಂಘಟನೆಗಳು ಮತ್ತು ಸಂಘಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ VB-GRAMG ಕಾಯ್ದೆಯ ಎಂಟು ನಿಯಮಗಳ ಅನುಷ್ಠಾನಕ್ಕೆ ಹೊರಟಿರುವುದನ್ನು ಪ್ರಶ್ನಿಸಿದ್ದಾರೆ.

ಪ್ರಮುಖ ಆಕ್ಷೇಪಣೆಗಳು

ಕರಡು ನಿಯಮಗಳು ಭಾರತೀಯ ಸಂವಿಧಾನದ 258 ನೇ ವಿಧಿಯನ್ನು ಉಲ್ಲಂಘಿಸುತ್ತಿಲ್ಲವೇ ಎಂದು ಪತ್ರವು ಪ್ರಶ್ನಿಸಿದೆ. VB-GRAMG ರಾಜ್ಯಗಳ ಮೇಲೆ ವ್ಯಾಪಕ ಆರ್ಥಿಕ ಹೊರೆಯನ್ನು ಹೇರುತ್ತದೆ.  ನಿರ್ಧಾರ ತೆಗೆದುಕೊಳ್ಳುವಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವನ್ನು ನಿರಾಕರಿಸಲಾಗಿದೆ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ ಎನ್ನುತ್ತ ಬೃಂದಾ ಕಾರಟ್ ಇದನ್ನು ಸಂವಿಧಾನದ ಒಕ್ಕೂಟ ಸ್ವರೂಪದ ಮೇಲಿನ ದಾಳಿ ಎಂದು ತಮ್ಮ ಪತ್ರದಲ್ಲಿ ಟೀಕಿಸಿದ್ದಾರೆ.

ನಿಯಮ 396E ತಾರತಮ್ಯದ ನಿಬಂಧನೆಗಳನ್ನು ಹೊಂದಿದೆ.  ಇದು ಐತಿಹಾಸಿಕವಾಗಿ ಕಡಿಮೆ ಜನಸಂಖ್ಯೆ ಅಥವಾ ಹೆಚ್ಚಿನ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (GSDP)ದ ಹೊರತಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ದೈನಂದಿನ ಉದ್ಯೋಗವನ್ನು ಒದಗಿಸುತ್ತ ಬಂದಿರುವ ಕೇರಳ ಮತ್ತು ತಮಿಳುನಾಡಿನಂತಹ ದಕ್ಷಿಣ ರಾಜ್ಯಗಳ ವಿರುದ್ಧ  ತಾರತಮ್ಯ ಮಾಡುತ್ತದೆ.

ನಿಯಮ 403E, 402E ಮತ್ತು 397E ನಲ್ಲಿರುವ ಮೂಲ ಸಮಸ್ಯೆಗಳತ್ತ ಗಮನ ಸೆಳೆಯುತ್ತ, ಇವು ರಾಜ್ಯ ಸರ್ಕಾರದಿಂದ ಯಾವುದೇ ಹೆಚ್ಚುವರಿ ಹಣ ನೀಡಿಕೆಯನ್ನು ಹೆಚ್ಚುವರಿ ಖರ್ಚು ಎಂದು ಅವಹೇಳನ ಮಾಡುತ್ತವೆ, ಕೂಲಿದರಗಳ ನಿಗದಿಯ ಬಗ್ಗೆ ಮತ್ತು ಮಹಿಳಾ ಕೂಲಿ ಕಾರ್ಮಿಕರಿಗೆ ಕೂಲಿ ರಕ್ಷಣೆ ಬಗ್ಗೆ ಮೌನವಾಗಿವೆ,  ಇ-ಕೆವೈಸಿ ಪರಿಶೀಲನೆಗಳು ಸ್ಮಾರ್ಟ್ ಫೋನ್‌ಗಳು ಮತ್ತು ಡಿಜಿಟಲ್ ಅವಕಾಶ ಲಭ್ಯವಿರದ  ಸುಮಾರು 44% ಕಾರ್ಮಿಕರನ್ನು ತಕ್ಷಣವೇ ಅನರ್ಹಗೊಳಿಸುತ್ತದೆ ಎಂದು ಬೃಂದಾ ಕಾರಟ್   ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಹೊಸದಾಗಿ ಪ್ರಸ್ತಾಪಿಸಲಾದ ರಾಷ್ಟ್ರೀಯ ಮಟ್ಟದ ಚಾಲನಾ ಸಮಿತಿಯಿಂದ (NLSC) ಕಾರ್ಮಿಕರ ಸಂಘಗಳು ಮತ್ತು ಬುಡಕಟ್ಟು ವ್ಯವಹಾರಗಳು, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳನ್ನು ಹೊರಗಿಡುವುದನ್ನು ಕೂಡ ಬೃಂದಾ ಕಾರಟ್ ಪತ್ರದಲ್ಲಿ ಟೀಕಿಸಿದ್ದಾರೆ.

ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆಂದು  ರಚಿಸಲಾದ ನಿಯಮಾವಳಿಗಳಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಗೆ ಪ್ರತ್ಯೇಕ ಸಂಸ್ಥೆ ಅಥವಾ ಯಾವುದೇ ಸ್ವತಂತ್ರ ಪ್ರಾಧಿಕಾರ ಇಲ್ಲದಿರುವುದು ವಿಪರ್ಯಾಸ. ಸಾಮಾಜಿಕ ಲೆಕ್ಕಪರಿಶೋಧನೆ ಅಥವಾ “ಮೇಲ್ವಿಚಾರಣೆ”ಯ ಕಾರ್ಯವನ್ನು ಸರ್ಕಾರ ನೇಮಿಸಿದ ಅಧಿಕಾರಿಗಳಿಗೆ ಬಿಡಲಾಗುವುದಿಲ್ಲ. ಅದು ಪೂರ್ಣ ಅಧಿಕಾರ ಹೊಂದಿರುವ ಒಂದು ಸ್ವತಂತ್ರ ಸಂಸ್ಥೆಯಾಗಿರಬೇಕು. ಇದು ಇಲ್ಲಿಯವರೆಗೆ ಪ್ರಕಟವಾದ ನಿಯಮಗಳಲ್ಲಿ ಇಲ್ಲ.

ಪಂಚಾಯತ್‌ಗಳ ಹಕ್ಕುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅವುಗಳ ದನಿಗೆ ಸಂಪೂರ್ಣ ಮನ್ನಣೆಯ ಕೊರತೆಯಿರುವ ಈ  ಇಡೀ ಪ್ರಕ್ರಿಯೆಯಲ್ಲಿ ಮೇಲಿನಿಂದ ಹೇರುವ  ಅಧಿಕಾರಶಾಹಿ ಸ್ವರೂಪ ಎದ್ದು ಕಾಣುತ್ತಿದೆ.

ಈ ಎಲ್ಲಾ ಕಾರಣಗಳಿಗಾಗಿ, ಈ ನಿಯಮಗಳನ್ನು ಹಿಂತೆಗೆದುಕೊಳ್ಳಬೇಕಾಗಿದೆ. MGNREGA ಜಾರಿಯಲ್ಲಿ ಉಳಿಯಬೇಕು. ಜುಲೈ 1 ರಂದು ಯೋಜಿಸಿದಂತೆ ಅದನ್ನು ರದ್ದುಗೊಳಿಸುವುದು ನಮ್ಮ ದೇಶದ ಗ್ರಾಮೀಣ ದುಡಿಯುವ ಜನರಿಗೆ ಅತ್ಯಂತ ಕ್ರೂರ ಹೊಡೆತವಾಗಿದೆ ಎಂದು ಬೃಂದಾಕಾರಟ್‌ ತಮ್ಮ ಪತ್ರದ ಕೊನೆಯಲ್ಲಿ  ಆಗ್ರಹಿಸಿದ್ದಾರೆ.

ಜುಲೈ ೧ರಂದು ವಿಬಿಜಿಆರ್‌ಎಎಂಜಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ: ರೈತ ಕಾರ್ಮಿಕರ ಬೆಂಬಲ

ಈ ನಡುವೆ ಜುಲೈ ೧ರಂದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೆಗ)ಯನ್ನು ರದ್ದುಗೊಳಿಸಿ ಅದರ ಸ್ಥಾನದಲ್ಲಿ ವಿಕಸಿತ್‌ ಭಾರತ್-‌- ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (ವಿಬಿ-ಜಿಆರ್‌ಎಎಂಜಿ ಕಾಯ್ದೆ)ಯನ್ನು ಜಾರಿಗೆ ಯರುತ್ತಿರುವುದರ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯಲಿದ್ದು, ಅದಕ್ಕೆ ಅಖಿಲ ಭಾರತ ಕಿಸಾನ್‌ ಸಭಾ (ಎಐಕೆಎಸ್)‌ ಮತ್ತು ಸಿಐಟಿಯು  ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಎಐಕೆಎಸ್‌ ಮನರೆಗವನ್ನು ಮರುಸ್ಥಾಪಿಸಬೇಕು, ಅದಕ್ಕೆ ಬಜೆಟ್‌ ನೀಡಿಕೆಯನ್ನು ಹೆಚ್ಚಿಸಬೇಕು, ಉದ್ಯೋಗದ ಖಾತ್ರಿ ಮತ್ತು ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಯಿರಬೇಕು ಎಂದು ಆಗ್ರಹಿಸಿದೆ.

ಸಿಐಟಿಯು ಕೂಡ ಮನರೆಗವನ್ನು ಮರುಸ್ಥಾಪಿಸಬೇಕು ಮತ್ತು ಪ್ರತಿ ಗ್ರಾಮೀಣ ಕುಟುಂಬಕ್ಕೆ ಕನಿಷ್ಟ ೨೦೦ ದಿನಗಳ ಉದ್ಯೋಗದ ಕಾನೂನಾತ್ಮಕ ಖಾತ್ರಿ ನೀಡಬೇಕು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *