ಕೊವಿಡ್​ ನಿರ್ವಹಣೆ ವೇಳೆ ಕೋಟ್ಯಂತರ ರೂ. ಅವ್ಯವಹಾರ ಆರೋಪ : ಯಡಿಯೂರಪ್ಪ ಸೇರಿದಂತೆ 28 ಜನರ ವಿರುದ್ಧ ಲೋಕಾಯುಕ್ತಗೆ ದೂರು

ಬೆಂಗಳೂರು : ಕೋಟ್ಯಾಂತರ ರೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಎಸ್‌. ಯಡಿಯೂರಪ್ಪ ಸೇರಿ 28 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಕೋವಿಡ್ ವೇಳೆ ಆಂಬುಲೆನ್ಸ್ ಖರೀದಿಗಾಗಿ 821.22 ಕೋಟಿ ಬೃಹತ್ ಮೊತ್ತದ ಹಗರಣ ನಡೆಸಿದ ಆರೋಪ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.  ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಚುನಾವಣೆ ಹೊತ್ತಲ್ಲೇ ಯಡಿಯೂರಪ್ಪಗೆ ಹೊಸ ಸಂಕಷ್ಟ ಎದುರಾಗಿದೆ.

ಕೊವಿಡ್​ ನಿರ್ವಹಣೆ ವೇಳೆ ಬಿಬಿಎಂಪಿಯಿಂದ ಕೋಟ್ಯಂತರ ಅವ್ಯವಹಾರ, ಆಂಬ್ಯುಲೆನ್ಸ್ ಖರೀದಿ ನೆಪದಲ್ಲಿ ಹೆಚ್ಚಿನ ವಾಹನಗಳ ಸಂಖ್ಯೆ ತೋರಿಸಿದ್ದಾರೆ. ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಕೊವಿಡ್​ ವಲಯವಾರು ಉಸ್ತುವಾರಿಯಾಗಿದ್ದರು. ಸಚಿವರಾದ ವಿ.ಸೋಮಣ್ಣ ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಜೋನಲ್ ಮ್ಯಾನೇಜ್​ಮೆಂಟ್ ನಿರ್ವಹಿಸಿದ್ದರು ಎಂದಿದ್ದಾರೆ.

IAS ಅಧಿಕಾರಿಗಳಾದ ಗೌರವ್ ಗುಪ್ತಾ, ಪಿ.ಸಿ.ಜಾಫರ್​, ಮನೋಜ್ ಕುಮಾರ್ ಮೀನಾ, ರವಿಕುಮಾರ್, ವಿ.ಅನ್ಬುಕುಮಾರ್, ಉಜ್ವಲ್ ಕುಮಾರ್, ಪಂಕಜ್ ಕುಮಾರ್ ಕೋಆರ್ಡಿನೇಟ್​ ಮಾಡುತ್ತಿದ್ದರು. 821 ಕೋಟಿಗೂ ಹೆಚ್ಚು ಅವ್ಯವಹಾರದಲ್ಲಿ 28 ಜನರು ಭಾಗಿಯಾಗಿದ್ದಾರೆ. ಕೊವಿಡ್ ವೇಳೆ ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿದ್ದರು. ಸಾವಿರಾರು ಆ್ಯಂಬುಲೆನ್ಸ್​ಗಳನ್ನು ಖರೀದಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆ್ಯಂಬುಲೆನ್ಸ್ ಹೊರತಾದ ವಾಹನಗಳ ನೋಂದಣಿ ಸಂಖ್ಯೆಗಳಿವೆ. ಬಿಎಸ್​ವೈ ಪುತ್ರ ಬಿ.ವೈ.ವಿಜಯೇಂದ್ರ ಆಪ್ತ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಹಗರಣದಲ್ಲಿ ಬಹುಪಾಲು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ‌. ಕೊವಿಡ್ ವೇಳೆ ಜನರ ಹೆಣ ಮಾರಿ ಹಣ ಮಾಡಿದ್ದಾರೆ. ಟ್ರಾವೆಲ್ಸ್​ನಲ್ಲಿ ಖರೀದಿ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು FIR ದಾಖಲಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *