ಖಾಂಡ್ವಾ: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಗಾಯಗೊಂಡಿರುವ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ತನ್ನ ಹಳ್ಳಿಯ ಕೃಷಿ ಹೊಲದಲ್ಲಿ ವೃದ್ಧೆ ಒಬ್ಬಂಟಿಯಾಗಿದ್ದಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಎಪ್ಸ್ಟೀನ್ ಕಡತಗಳ ಛಾಯೆ: ವಾಷಿಂಗ್ಟನ್ ನಿಂದ ದಿಲ್ಲಿಯ ವರೆಗೆ – ಬೃಂದಾ ಕಾರಟ್
ಸಂತ್ರಸ್ತ ಮಹಿಳೆ ಮರುದಿನ ಬೆಳಗ್ಗೆ ಬೇರೆ ಹಳ್ಳಿಯಲ್ಲಿ ವಾಸಿಸುವ ತನ್ನ ಮಗಳಿಗೆ ಘಟನೆಯ ಬಗ್ಗೆ ತಿಳಿಸಿದ್ದಾರೆ. ನಂತರ ಅವರು ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಹಿಳೆ ಮತ್ತು ಅವರ ಮಗಳಿಗೆ ಪೊಲೀಸರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರೈ ಪಿಟಿಐಗೆ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ನಂತರ, ಪೊಲೀಸರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 70 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ರೈ ಹೇಳಿದರು.
ಕಾಮುಕರ ಪತ್ತೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ನೋಡಿ: ಗೋಷ್ಠಿ – 01 | ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ
