ಪಾಟ್ನಾ: ವಾಮಾಚಾರ ಆರೋಪವೊಂದು ಕೇಳಿಬಂದಿದ್ದು, ಈ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬಳಿಗೆ ಮನೆಯೊಂದರಲ್ಲಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಅಮಾನವೀಯ ಘಟನೆಯೊಂದು ಬಿಹಾರ ರಾಜ್ಯದಲ್ಲಿ ನಡೆದಿದೆ.
ಮಾಟ ಮಂತ್ರ ಮಾಡುತ್ತಿದ್ದಾಳೆ ಎಂಬ ಆರೋಪದ ಮೇಲೆ ಗುಂಪೊಂದು ದಾಳಿ ಮಾಡಿ ಮನೆಯಲ್ಲೇ ಬಟ್ಟೆಗಳನ್ನು ಸುತ್ತಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ಜಾರ್ಖಂಡ್ ಅರಣ್ಯಕ್ಕೆ ಹೊಂದಿಕೊಂಡಿರುವ ಬಿಹಾರದ ಗಯಾ ಜಿಲ್ಲೆಯ ಮೈಗ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಚ್ಮಾಹ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅಸಹಜವಾಗಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಗುಂಪೊಂದು ಇದಕ್ಕೆ ಮಹಿಳೆಯೇ ಕಾರಣ ಎಂದು ಆರೋಪಿಸಿ, ಅರ್ಜುನ್ ದಾಸ್ ಅವರ ಪತ್ನಿ ರೀಟಾ ದೇವಿ (45) ಅವರ ಮೇಲೆ ಸ್ಥಳೀಯ ಗುಂಪೊಂದು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ. ಈಕೆ ಮಂತ್ರ ವಿದ್ಯೆ ಮಾಡುವ ಮೂಲಕ ಪ್ರಯೋಗ ಮಾಡಿರುವುದರಿಂದಾಗಿ ವ್ಯಕ್ತಿಯೂ ಸಾವಿಗೀಡಾಗಿದ್ದಾನೆ ಎಂದು ಮಹಿಳೆ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ.
ದಾಳಿ ನಡೆಸಿದ ಗುಂಪೊಂದು ಕೋಣೆಯನ್ನು ಒಡೆದು ಮಹಿಳೆಯನ್ನು ಪ್ರಜ್ಞೆ ತಪ್ಪಿಸುವವರೆಗೂ ಥಳಿಸಿತು. ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾರೆ. ಮಹಿಳೆ ಸುಟ್ಟು ಕರಕಲಾದಳು. ಆಕೆಯ ಪತಿ ಮತ್ತು ಇಬ್ಬರು ಪುತ್ರರು ಸ್ಥಳೀಯ ಪೊಲೀಸ್ ಠಾಣೆಗೆ ದೌಡಾಯಿಸಿ ಘಟನೆಯ ಬಗ್ಗೆ ವಿವರಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿದಾಗ ಕ್ರೋಧಗೊಂಡ ಗುಂಪು, ಸಿಬ್ಬಂದಿ ಮೇಲೂ ದಾಳಿ ಮಾಡಿದೆ. ಇದರಿಂದ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಬಳಿಕ ಸ್ಥಳಕ್ಕೆ ಇಮಾಮ್‌ಗಂಜ್ ಎಸ್‌ಡಿಪಿಒ ಮನೋಜ್ ರಾಮ್ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದಾರೆ ಈ ವೇಳೆ ಮಹಿಳೆಯ ಮೃತ ದೇಹವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗಯಾ ಜಿಲ್ಲಾ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 436 ಹಾಗೂ ವಾಮಾಚಾರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 9 ಮಹಿಳೆಯರನ್ನು ಬಂಧಿಸಲಾಗಿದೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್‌ಪ್ರೀತ್ ಕೌರ್ ಪ್ರಕಾರ, ಕೊಲೆ ನಡೆಸಿರುವ ಆರೋಪದಲ್ಲಿ ಇನ್ನೂ ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಾಟ್ನಾದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡದ ಸದಸ್ಯರು ಸ್ಥಳಕ್ಕೆ ಆಗಮಿಸಿ ಘಟನೆ ನಡೆದ ಸ್ಥಳದಲ್ಲಿ ಮಾದರಿಗಳನ್ನು ಸಂಗ್ರಹಿಸಿದೆ.
ಘಟನೆ ಹಿನ್ನೆಲೆ
ಒಂದು ತಿಂಗಳ ಹಿಂದೆ, ಗ್ರಾಮದ ಪರಮೇಶ್ವರ ಭುಯಾನ್ ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ ರೀಟಾ ದೇವಿ ಅವರು ನಡೆಸಿದ ವಾಮಾಚಾರದ ಮೂಲಕವೇ ಆತ ಸಾವಿಗೀಡಾಗಿದ್ದಾನೆ ಎಂದು ಆತನ ಕುಟುಂಬ ನಂಬಿತ್ತು. ಸಾವಿನ ನಂತರ ಎರಡೂ ಕುಟುಂಬಗಳು ಮತ್ತು ಅವರ ಬೆಂಬಲಿಗರು ಜಗಳವಾಡುತ್ತಿದ್ದರು.
ಪರಮೇಶ್ವರ ಅವರ ಕುಟುಂಬವು ಜಾರ್ಖಂಡ್‌ನಿಂದ ಭೂತೋಚ್ಚಾಟಕಕಾರನೊಬ್ಬನನ್ನು ಕರೆಸಿ ಅವನ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದಾರೆ. ಶನಿವಾರ ಪಂಚಾಯ್ತಿಯ ಮುಂದೆ ವಾಮಾಚಾರವನ್ನು ಬಳಸಿ ಹತ್ಯೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಆದರೆ, ಬಿಗುವಿನ ವಾತಾವರಣ ಮತ್ತು ಘರ್ಷಣೆಯ ಸಾಧ್ಯತೆಯಿಂದಾಗಿ ಭೂತೋಚ್ಚಾಟಕಕಾರ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಮತ್ತು ಆಕೆಯ ಕುಟುಂಬದವರು ಕೂಡ ಸ್ಥಳದಿಂದ ಪರಾರಿಯಾದರು.