ದಾರ್ಶನಿಕರ ನೆನಪು ಆಚರಣೆಗಳಲ್ಲಿ ಉಳಿದಾಗ ಅವರ ಚಿಂತನೆಗಳು ಆಡಂಬರದ ಚಿಹ್ನೆಗಳಾಗುತ್ತವೆ
ಭಾರತೀಯ ಸಂಸ್ಕೃತಿಯಲ್ಲಿ ಗತಕಾಲದ ಚಿಂತನೆಗಳನ್ನಾಗಲೀ, ಚಿಂತಕರನ್ನಾಗಲೀ ನೆನೆಯುವುದೆಂದರೆ ಅದು ದಿನಾಚರಣೆಗಳ ಮೂಲಕವೇ ಹೆಚ್ಚು. ಈ ಆಚರಣೆಗಳು ಸಮಕಾಲೀನ ಹಾಗೂ ಚಾರಿತ್ರಿಕ ವ್ಯಕ್ತಿಗಳ ನೆಲೆಯಲ್ಲಿ ಜನ್ಮ-ಮರಣಗಳ ಸಂದರ್ಭಗಳಲ್ಲಿ ತಾರಕಕ್ಕೇರುವುದು ಒಂದು ಸಹಜ ಸಾಂಸ್ಕೃತಿಕ ಪ್ರಜ್ಞೆಯಾಗಿ ಇಲ್ಲಿ ಬೇರೂರಿದೆ. ಪೌರಾಣಿಕ ರಾಮ-ಕೃಷ್ಣರಿಂದ ಹಿಡಿದು ಚಾರಿತ್ರಿಕ ದಾರ್ಶನಿಕ ವ್ಯಕ್ತಿಗಳವರೆಗೂ ವಿಸ್ತರಿಸುವ ಈ ಮನೋಭಾವ ಸಾಂಸ್ಕೃತಿಕ ನೆಲೆಯಲ್ಲಿ ಸ್ವೀಕಾರಾರ್ಹವೆನಿಸಲು ಕಾರಣ, ನಮ್ಮ ಪಾರಂಪರಿಕ ಬೆಳವಣಿಗೆಯಲ್ಲೇ ಪೋಷಿಸಲ್ಪಟ್ಟಿರುವ ಭಕ್ತಿ ಎಂಬ ಅನುಭಾವಿಕ ಮನಸ್ಥಿತಿ. ಈ ಆಚರಣೆಗಳು ವಿಶಾಲ ಸಮಾಜವನ್ನು ಆವರಿಸಿದಂತೆಲ್ಲಾ, ಅಲ್ಲಿ ಉದ್ಭವಿಸುವ ಆರಾಧನಾ ಮನೋಭಾವ ವ್ಯಕ್ತಿಗತ ನೆಲೆಯನ್ನು ದಾಟಿ ಅತೀತ ಕಲ್ಪನೆಯತ್ತ ಸಾಗುವುದು ನಾವು ಕಂಡಂತಹ ಸಾಮಾಜಿಕ ಬೆಳವಣಿಗೆಯ ಒಂದು ವಿದ್ಯಮಾನ. ಅಂಬೇಡ್ಕರ್
–ನಾ ದಿವಾಕರ
ಈ ಮನಸ್ಥಿತಿಯೇ ಭಾರತೀಯರನ್ನು ಬೌದ್ಧಿಕವಾಗಿ ಕೋಶೀಕರಣಕ್ಕೊಳಪಡಿಸುತ್ತದೆ (Cellularisation), ತತ್ಪರಿಣಾಮವಾಗಿ ಮಹಾನ್ ದಾರ್ಶನಿಕರ ವ್ಯಕ್ತಿಗತ ನೆಲೆಯಲ್ಲಿ ಕಾಣಬಹುದಾದ ದರ್ಶನಗಳು ಕ್ರಮೇಣ ಆವಿಯಾಗುತ್ತಾ, ವಿಶಾಲ ಸಮಾಜ ನಿರ್ದೇಶಿಸುವ ಒಂದು ಭಿನ್ನ ಸಂಸ್ಕೃತಿಯಲ್ಲಿ ಅಥವಾ ಬೌದ್ಧಿಕ ಚಿಂತನಾಧಾರೆಯೊಳಗೆ ವಿಲೀನವಾಗಿಬಿಡುತ್ತದೆ. ಈ ಅಪಾಯವನ್ನು ಅರಿತೇ ಡಾ. ಬಿ. ಆರ್. ಅಂಬೇಡ್ಕರ್ ಆರಾಧನಾ ಸಂಸ್ಕೃತಿಯನ್ನು ವರ್ಜಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ನೆಲೆಯಲ್ಲಿ ದೂರಗಾಮಿ ಚಿಂತನೆಗಳನ್ನು ಅನುಸರಿಸಿ, ಅನುಕರಿಸಿ, ಅಳವಡಿಸಿಕೊಂಡು, ಭವಿಷ್ಯದ ಸಮಾಜಕ್ಕೆ ದೀವಿಗೆಯಾಗುವಂತೆ ಕರೆ ನೀಡುತ್ತಾರೆ. ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಯನ್ನು ಅರ್ಥಮಾಡಿಕೊಂಡವರಿಗೆ ಇದು ಸುಲಭಗ್ರಾಹ್ಯ ಆಲೋಚನೆ ಎನ್ನಬಹುದು.
ವರ್ತಮಾನದ ಸಿಕ್ಕುಗಳ ನಡುವೆ
ಆದರೆ ವರ್ತಮಾನ ಭಾರತದ ಸಂದಿಗ್ಧ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿಗಳ ನೆಲೆಯಲ್ಲಿ ನಿಂತು ನೋಡಿದಾಗ, ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದ ತಳಸ್ತರದವರೆಗೂ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತಿರುವ ಒಂದು ಬೃಹತ್ ಸಮಾಜವು ಎರಡು ಆಯಾಮಗಳಲ್ಲಿ ಈ ಆಲೋಚನೆಯನ್ನು ಗ್ರಹಿಸುವಂತೆ ತೋರುತ್ತಿದೆ. ಒಂದೆಡೆ ವೈಜ್ಞಾನಿಕತೆ ಮತ್ತು ವೈಚಾರಿಕ ಬುದ್ಧಪ್ರಜ್ಞೆಯನ್ನು ಒಪ್ಪಿಕೊಳ್ಳುತ್ತಲೇ ಮತ್ತೊಂದು ಬದಿಯಲ್ಲಿ ಅಂಬೇಡ್ಕರ್ ರನ್ನುʼ ದೇವರು ʼ ಎಂದು ಸಂಬೋಧಿಸುವ ಧೋರಣೆಗಳನ್ನೂ ಗುರುತಿಸಬಹುದಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳು ಕಳೆದರೂ ಇಂದಿಗೂ ನಿತ್ಯ ಶೋಷಣೆ, ದಬ್ಬಾಳಿಕೆ, ಬಹಿಷ್ಕಾರ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳಿಗೆ ತುತ್ತಾಗುತ್ತಿರುವ ದಲಿತ ಜಗತ್ತು, ಈ ದ್ವಂದ್ವದ ನಡುವೆಯೇ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನವನ್ನು ಭಾರತ ಆಚರಿಸುತ್ತಿದೆ.
ಅಂಬೇಡ್ಕರ್ ಅವರ ಭವಿಷ್ಯದ ದಿಕ್ಸೂಚಿ ಚಿಂತನೆಯಾಗಿ ಮೂಡಿಬಂದಿದ್ದು ಜಾತಿ ವಿನಾಶ ಎಂಬ ಕ್ರಾಂತಿಕಾರಕ ಆಲೋಚನೆ. ಅಂತರ್ಜಾತಿ ವಿವಾಹ, ಸಹಭೋಜನ ಮತ್ತು ದೇವಾಲಯ ಪ್ರವೇಶ ಈ ಮೂರು ಚಳುವಳಿಯ ರೂಪದ ಚಟುವಟಿಕೆಗಳು ಒಂದು ಹಂತದವರೆಗಾದರೂ ಜಾತಿ ಗೋಡೆಗಳನ್ನು ಕೆಡವಿ, ಅಸ್ಮಿತೆಗಳ ಚೌಕಟ್ಟುಗಳನ್ನು ಕುಗ್ಗಿಸುತ್ತವೆ ಎಂಬ ಅಂಬೇಡ್ಕರರ ಕನಸು ಬಹುತೇಕ ಸಾಕಾರಗೊಂಡಿದೆ. ಇಂದು ಈ ಮೂರೂ ಪ್ರಕ್ರಿಯೆಗಳು ಸಮಾಜದಲ್ಲಿ ಅತಿಯಾದ ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತಿಲ್ಲ. ಮೇಲ್ಜಾತಿ ಗುಂಪುಗಳಲ್ಲಿ ಪಳೆಯುಳಿಕೆಗಳಾಗಿ ಕಾಣುವ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳ ಪರಿಣಾಮವಾಗಿ , ಕರ್ಮಠ ಸಮಾಜಗಳಲ್ಲಿ ಈ ಮೂರೂ ಪ್ರಕ್ರಿಯೆಗಳು ಇಂದಿಗೂ ಪ್ರತಿರೋಧ, ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಎದುರಿಸುತ್ತಿರುವುದು ವಾಸ್ತವ. ಆದರೆ ವಿಶಾಲ ಸಮಾಜದ ನಡುವೆ ನಿಂತು ನೋಡಿದಾಗ, ಸಾಮಾಜಿಕ ಪಲ್ಲಟಗಳಿಗೆ ಇದು ಕಾರಣವಾಗುತ್ತಿಲ್ಲ.
ಇದನ್ನೂ ಓದಿ: ಕರ್ನಾಟಕದಾದ್ಯಾಂತ ಲಾರಿ ಮುಷ್ಕರ: ಡೀಸೆಲ್ ದರ, ಟೋಲ್ ಶುಲ್ಕ ವಿರೋಧಿಸಿ ಇಂದು ನಡುರಾತ್ರಿಯಿಂದ ಸಂಚಾರ ಸ್ಥಗಿತ
ಆದಾಗ್ಯೂ ಈ ಮೂರೂ ವಿದ್ಯಮಾನಗಳಲ್ಲಿ ಕಾಣಬಹುದಾದ ಸಮಾನ ವಿದ್ಯಮಾನ ಎಂದರೆ ವ್ಯಕ್ತಿಗತ ನೆಲೆಯಲ್ಲಿ ಸಂಕೋಲೆಯಂತೆ ಬಿಗಿದಿರುವ ʼಜಾತಿ ಅಸ್ಮಿತೆಗಳುʼ. ಅಂತರ್ಜಾತಿ ವಿವಾಹವಾಗುವ ಹೆಣ್ಣು ತನ್ನ ಮೂಲ ಅಸ್ಮಿತೆಯನ್ನು ಕಳಚಿಕೊಂಡರೂ, ಪುರುಷ ಕೇಂದ್ರಿತ ಸಾಂವಿಧಾನಿಕ ಅನುಕೂಲತೆಗಳ ಪರಿಣಾಮವಾಗಿ, ಆಕೆ ತನ್ನ ಸಂಗಾತಿಯ ಅಸ್ಮಿತೆಯನ್ನೇ ತನ್ನದಾಗಿಸಿಕೊಳ್ಳುತ್ತಾಳೆ. ಇಲ್ಲಿ ನಡೆಯುವ ಜಾತಿ ಸಂಕರದಿಂದ ಗೋಡೆಗಳನ್ನು ಕೆಡವಲಾಗಿದೆಯಾದರೂ, ಮೂಲ ಪ್ರಜ್ಞೆಯ ನೆಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಜಾತಿ ಅಥವಾ ಜಾತಿ ಪ್ರಜ್ಞೆ ಇಲ್ಲವಾಗಿದೆ ಎನ್ನುವುದು ಸಂಶೋಧನೆಗೊಳಪಡಬೇಕಿದೆ. ಆಧುನಿಕ ನಗರೀಕರಣ, ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸುವ ಬದುಕಿನ ಆವರಣಗಳಲ್ಲಿ ಇಂದು ʼ ಜಾತಿ ʼ ಒಂದು ಪ್ರಶ್ನೆಯಾಗಿ ಕಾಣುವುದಿಲ್ಲ. ವ್ಯಕ್ತಿಯನ್ನು ಜಾತಿಯಿಂದ ಗುರುತಿಸುವ ಪುರಾತನ ಚಿಂತನೆಗೆ ಕೊಂಚ ಮಟ್ಟಿಗೆ ಕಡಿವಾಣ ಹಾಕಲಾಗಿದೆ.
ಆದರೆ ಈ ಪ್ರಗತಿಯ ನಡುವೆಯೂ ಅಸ್ಪೃಶ್ಯರಿಗೆ ನಗರಗಳಲ್ಲಿ ಬಾಡಿಗೆ ಮನೆ ದೊರೆಯುವುದು ದುಸ್ತರವಾಗುತ್ತಿರುವುದನ್ನು ಹೇಗೆ ನೋಡಬೇಕು ? ಶಾಲೆಗಳಲ್ಲಿ ನೀರು ಮುಟ್ಟಿದ ಪ್ರಸಂಗಗಳು, ಅತ್ಯಾಧುನಿಕ ಸುಶಿಕ್ಷಿತ ಹಿತವಲಯಗಳು ಸೃಷ್ಟಿಸಿರುವ ಅಧುನಿಕ ಅಗ್ರಹಾರಗಳು, ದಲಿತ ಎಂಬ ಒಂದೇ ಕಾರಣಕ್ಕೆ ಎದುರಿಸಬೇಕಾದ ತಾರತಮ್ಯಗಳು ಇವೆಲ್ಲವೂ ಅಂಬೇಡ್ಕರ್ ಕನಸಿದ ʼ ಜಾತಿ ವಿನಾಶʼದ ಉದಾತ್ತ ಚಿಂತನೆಗೆ ತಡೆಗೋಡೆಗಳಾಗಿ ಪರಿಣಮಿಸಿವೆ. ಎಲ್ಲಿದೆ ಜಾತಿ ? ಎಂದು ಕೇಳುವ ದಾರ್ಷ್ಟ್ಯವನ್ನು ಯಾರೂ ತೋರಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏಕೆಂದರೆ ನೋಡಿ ಇಲ್ಲಿದೆ ! ಎಂದು ತೋರಿಸುವ ಪ್ರಸಂಗಗಳು ನಿತ್ಯ ಸಂಭವಿಸುತ್ತಲೇ ಇವೆ. ಇದರ ನೇರ ನಿದರ್ಶನವನ್ನು ದೇವಾಲಯ ಪ್ರವೇಶದಂತಹ ಸಾಮಾಜಿಕ ವಿದ್ಯಮಾನಗಳಲ್ಲಿ ಗುರುತಿಸಬಹುದು. ʼ ದಲಿತರ ದೇವಾಲಯ ಪ್ರವೇಶ ʼ ಒಂದು ಸಾಂವಿಧಾನಿಕ ಹಕ್ಕು ಎಂದು ಒಪ್ಪಿಕೊಂಡಿದ್ದರೂ, ಭಾರತದಲ್ಲಿ ಸಾಮಾಜಿಕ ಬದುಕಿನ ಪ್ರಧಾನ ನಡವಳಿಕೆಗಳು ನಿಷ್ಕರ್ಷೆಯಾಗುವುದು ಸಮುದಾಯಗಳ ನೆಲೆಯಲ್ಲೇ ಎನ್ನುವುದು ವರ್ತಮಾನದ ದುರಂತ ವಾಸ್ತವ.
ಸಮಾಜ ಸಂಸ್ಕೃತಿಗಳ ಸಂಘರ್ಷದಲ್ಲಿ
ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಅಂತರ್ಗತವಾಗಿರುವ ಮೇಲ್ಜಾತಿಯ ಕರ್ಮಠತನ, ಕೆಲವೆಡೆ ಔದಾರ್ಯವಾಗಿ ಕಾಣುವುದಾದರೂ, ಧಾರ್ಮಿಕ-ಆಧ್ಯಾತ್ಮಿಕ ಜಗತ್ತನ್ನು ಇಂದಿಗೂ ನಿಯಂತ್ರಿಸಿ ನಿರ್ದೇಶಿಸುತ್ತಿರುವ ಪ್ರಬಲ ಜಾತಿ ಸಮುದಾಯಗಳು ಈ ಔದಾರ್ಯವನ್ನು ಸಾಪೇಕ್ಷಗೊಳಿಸಿರುವುದನ್ನು ಗುರುತಿಸಲೇಬೇಕಿದ. ಹಾಗಾಗಿಯೇ ದಲಿತರ ದೇವಾಲಯ ಪ್ರವೇಶ ಇಂದಿಗೂ ಸಹ “ ಪ್ರಬಲ ಸಮುದಾಯ ಅನುಮತಿಸಬೇಕಾದ ” ಒಂದು ಪ್ರಕ್ರಿಯೆಯಾಗಿಯೇ ಕಾಣುತ್ತದೆ. ಈ ಸಂವಿಧಾನ ವಿರೋಧಿ ನಡೆಯನ್ನು ಸಮರ್ಥಿಸುವ ಒಂದು ಸಮಾಜವೂ ನಮ್ಮ ನಡುವೆ ಸಕ್ರಿಯವಾಗಿರುವುದರಿಂದಲೇ, ʼಸಾಮಾಜಿಕ ಬಹಿಷ್ಕಾರʼದಂತಹ ಪುರಾತನ ಚಿಂತನಾ ಕ್ರಮಗಳು ಜೀವಂತವಾಗಿವೆ. ಸಂವಿಧಾನದ ಫಲಾನುಭವಿಗಳಾಗಿರುವ ಹಿಂದುಳಿದ ವರ್ಗಗಳಲ್ಲೂ, ದಲಿತರಲ್ಲೇ ಆರ್ಥಿಕವಾಗಿ-ಸಾಮಾಜಿಕವಾಗಿ ಮುಂದುವರೆದ ಸಮುದಾಯಗಳಲ್ಲೂ, ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ದಲಿತ ಸಮುದಾಯಗಳಲ್ಲೂ, ಜಾತಿಯ ಮೂಲ ಒಂದು ಅಡ್ಡಗೋಡೆಯಾಗಿಯೇ ಮುಂದುವರೆಯುತ್ತಿದೆ.
ಮತ್ತೊಂದೆಡೆ ಸಾಂವಿಧಾನಿಕ ಫಲಾನುಭವಿಗಳಾಗಿರುವ, ಅಂಬೇಡ್ಕರ್ ಅನುಯಾಯಿಗಳೆಂದೇ ಬಿಂಬಿಸಲ್ಪಡುವ ಹಲವು ಹಿಂದುಳಿದ ಜಾತಿ ಸಮುದಾಯಗಳಲ್ಲಿ, ಸಾಮಾಜಿಕ ಬಹಿಷ್ಕಾರ, ಖಾಪ್ ಪಂಚಾಯತಿಯಂತಹ ಪ್ರಾಚೀನ ಪದ್ಧತಿಗಳು ಇಂದಿಗೂ ಜಾರಿಯಲ್ಲಿರುವುದನ್ನು ಕೊಳ್ಳೇಗಾಲ, ಚಾಮರಾಜನಗರ, ಕೋಲಾರ, ಕೊಪ್ಪಳ ಮತ್ತಿತರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಣಬಹುದು. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಈ ಜಾತಿಗಳಲ್ಲಿ ʼ ಯಜಮಾನ್ ʼ ಸಂಸ್ಕೃತಿಯೂ ಜಾರಿಯಲ್ಲಿದ್ದು, ಸಾಮಾಜಿಕ ಬಹಿಷ್ಕಾರ, ದೇವಾಲಯ ಪ್ರವೇಶ ನಿಷೇಧ ಮೊದಲಾದ ಸಂವಿಧಾನ ವಿರೋಧಿ ನಡವಳಿಕೆಗಳು ಜೀವಂತವಾಗಿವೆ. ದಲಿತ ಚಳುವಳಿಯಲ್ಲಾಗಲೀ ಅಥವಾ ಇದಕ್ಕೆ ಹೆಗಲು ನೀಡಿ ಸಂವಿಧಾನವನ್ನು ಅಪ್ಪಿಕೊಳ್ಳುವ ಅಹಿಂದ ಸಂಘಟನೆಗಳಲ್ಲಾಗಲೀ, ಈ ಅಸಾಂವಿಧಾನಿಕ ಸಾಮಾಜಿಕ ಪದ್ಧತಿಗಳ ವಿರುದ್ಧ ಪ್ರತಿರೋಧದ ದನಿಯೂ ಕೇಳಿಬರುತ್ತಿಲ್ಲ. ಏಪ್ರಿಲ್ 14ರಂದು ಅಂಬೇಡ್ಕರ್ ಪ್ರತಿಮೆಯನ್ನು ಆರಾಧಿಸುವ ಮುನ್ನ ಗಂಭೀರವಾಗಿ ಯೋಚಿಸಬೇಕಾದ ವಿಷಯ ಇದಲ್ಲವೇ ?
ಭಾರತದಲ್ಲಿ ಯಾವುದೇ ವ್ಯಕ್ತಿಯಾದರೂ ಮತ್ತೊಬ್ಬರನ್ನು ಗುರುತಿಸುವುದೇ ಜಾತಿಯ ಮೂಲಕ ಎಂಬ ಅಂಬೇಡ್ಕರ್ ಅವರ ಮಾತುಗಳು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸಬೇಕಿದೆ. ಏಳು ದಶಕಗಳ ನಂತರ ಭಾರತೀಯ ಸಮಾಜ, ತಳಸಮುದಾಯಗಳನ್ನೂ ಸೇರಿದಂತೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈಗ ಚಾರಿತ್ರಿಕ-ಪೌರಾಣಿಕ-ಕಾಲ್ಪನಿಕ ವ್ಯಕ್ತಿಗಳನ್ನೂ ನಿರ್ದಿಷ್ಟ ಜಾತಿ-ಉಪಜಾತಿಗಳ ʼಮೂಲ ಅಸ್ಮಿತೆಯʼ ಮೂಲಕವೇ ಗುರುತಿಸಿ, ಅಂತಹ ವ್ಯಕ್ತಿಗಳನ್ನು ಅವರ ಚಿಂತನೆಗಳನ್ನು ತಮ್ಮದಾಗಿಸಿಕೊಳ್ಳುವ ಒಂದು ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಒಂದು ವೇಳೆ ಈ ಜಾತಿಸೂಚಕ ಅಸ್ಮಿತೆ ಇಲ್ಲವಾದರೆ ಅಂತಹ ವ್ಯಕ್ತಿಗಳು-ಚಿಂತನೆಗಳು ಮಾನ್ಯತೆ ಪಡೆಯಲು ಸಾಧ್ಯವೇ ? ಈ ಜಟಿಲ ಪ್ರಶ್ನೆ ನಮ್ಮನ್ನು ಗಂಭೀರವಾಗಿ ಕಾಡಬೇಕಿದೆ. ಏಕೆಂದರೆ ಜಾತಿ ವಿನಾಶದತ್ತ ಸಾಗುತ್ತಿರುವ ಆಧುನಿಕ ಸಮಾಜದಲ್ಲೂ, ʼನಮ್ಮವರು ʼ ಎಂದು ಪರಿಭಾವಿಸುವ ಭಾವನಾತ್ಮಕತೆಗೆ ಜಾತಿಯ ಸೋಂಕು ತಗುಲಿದೆ.
ಜಾತಿ ವಿನಾಶದ ಅಡ್ಡಗೋಡೆಗಳು
ಈ ಪ್ರವೃತ್ತಿಯ ನೇರ ಪರಿಣಾಮವನ್ನು, ಜಾತಿ-ಉಪಜಾತಿಗಳ ವಿಘಟನೆಯಲ್ಲಿ ಗುರುತಿಸಬಹುದು. ಕಾಲ್ಪನಿಕ ವ್ಯಕ್ತಿಗಳನ್ನೂ ಸೇರಿದಂತೆ, ದಾರ್ಶನಿಕರಿಗೆ ಆರೋಪಿಸುವ ಜಾತಿ ಅಸ್ಮಿತೆಯೇ ದಲಿತ ಸಮುದಾಯದೊಳಗೆ, ಹಿಂದುಳಿದ ಜಾತಿಗಳೊಳಗೆ ಉಪಜಾತಿಗಳ ಸಾಂವಿಧಾನಿಕ ಅಸ್ಮಿತೆಗೆ ಆಧಾರವಾಗುವುದು, ಸಾಂಸ್ಕೃತಿಕವಾಗಿ ಅಪ್ಯಾಯಮಾನ ಎನಿಸಿದರೂ, ಸಾಮಾಜಿಕವಾಗಿ ಅದು ಹಿಂದೂ ಬಹುಸಂಖ್ಯಾವಾದಕ್ಕೆ ಪೂರಕವಾಗಿ ಪರಿಣಮಿಸುತ್ತದೆ. ದಾರ್ಶನಿಕರನ್ನು ಸಾಮುದಾಯಿಕ ಹೆಮ್ಮೆಯ ಸಂಕೇತವಾಗಿ ಗುರುತಿಸಿ ಗೌರವಿಸುವುದಕ್ಕೂ, ಅವರನ್ನೇ ದೈವೀಕರಿಸುವ ಅಥವಾ ವೈಭವೀಕರಿಸುವ ಮೂಲಕ ಪ್ರತ್ಯೇಕತೆಯ ಭಾವನೆಗಳನ್ನು ಬಿತ್ತುವುದಕ್ಕೂ ಇರುವ ಸೂಕ್ಷ್ಮ ಅಂತರವನ್ನು ನಾವು ಗ್ರಹಿಸಲೇಬೇಕಿದೆ. ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಕಳೆದಮೂರು ದಶಕಗಳಲ್ಲಿ ಈ ಎಲ್ಲ ಅಸ್ಮಿತೆಗಳನ್ನೂ ತನ್ನೊಳಗೆ ಸೆಳೆದುಕೊಳ್ಳುವುದಕ್ಕೆ ಹಾದಿ ಸುಗಮವಾಗಿರುವುದು, ಈ ವಿಘಟನಾತ್ಮಕ ಪ್ರತ್ಯೇಕತೆಯಿಂದಲೇ ಎಂದು ಹೇಳಬೇಕಿಲ್ಲ.
ಜಾತಿ ವಿನಾಶದ ಹಾದಿಯಲ್ಲಿ, ಜಾತಿ ಪ್ರಜ್ಞೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು ದುಸ್ಸಾಧ್ಯ ಎನಿಸಿದರೂ, ಜಾತಿ-ಉಪಜಾತಿಗಳ ನಡುವಿನ ಗೋಡೆಗಳನ್ನಾದರೂ ಕೆಡವಬೇಕಲ್ಲವೇ ? ಅಂಬೇಡ್ಕರ್ ಪ್ರತಿಪಾದಿಸಿದ ಸೋದರತ್ವ-ಸೋದರಿತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಇದು ಅಗತ್ಯವಲ್ಲವೇ ? ಈ ಪ್ರಶ್ನೆಯೊಂದಿಗೇ ನಮ್ಮ ಮುಂದಿರುವ ಸವಾಲು ಎಂದರೆ ದಲಿತ ಸಮಾಜವನ್ನು ಮತ್ತೊಮ್ಮೆ ಅನೈಕ್ಯತೆಯತ್ತ ದೂಡುತ್ತಿರುವ ʼಹೊಲೆ-ಮಾದಿಗರʼ ಸಂಕಥನಗಳು. ಇಲ್ಲಿ ಸಹಜವಾಗಿಯೇ ನಮಗೆ ಐದು ದಶಕಗಳ ಹಿನ್ನೋಟ ಇರಬೇಕಾಗುತ್ತದೆ. ಕರ್ನಾಟಕದಲ್ಲಿ ದಲಿತ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಜಾಗೃತಿ ಮೂಡಿಸಿದ ಕವಿ ಸಿದ್ಧಲಿಂಗಯ್ಯ ಅವರ ʼ ಹೊಲೆ ಮಾದಿಗರ ಹಾಡು ʼ ಐದು ದಶಕಗಳನ್ನು ದಾಟಿ ಇಂದಿಗೂ ತಳಸಮಾಜದ ಜನಮಾನಸದ ಅಂತರ್ ಧ್ವನಿಯಾಗಿ ಕಾಣುತ್ತಿದೆ. ಅವರ ʼ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ʼ ಎಂಬ ಒಂದು ಸಾಲನ್ನು ಮತ್ತೆಮತ್ತೆ ಗುನುಗುನಿಸುತ್ತಲೇ, ದಲಿತ ಸಮುದಾಯ ತನ್ನ ಅಸ್ತಿತ್ವ, ಅಸ್ಮಿತೆ ಮತ್ತು ಘನತೆಗಾಗಿ ಹೋರಾಡುತ್ತಾ ಬಂದಿದೆ.
ಆದರೆ ಈ ಐವತ್ತು ವರ್ಷಗಳಲ್ಲಿ ಮರೆಯಾಗಬೇಕಿದ್ದ ಜಾತಿ-ಉಪಜಾತಿ-ಅನ್ಯ ಜಾತಿಯ ನಡುವಿನ ಗೋಡೆಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು, ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ನಮ್ಮನ್ನು ಈಟಿಯಂತೆ ಇರಿಯುತ್ತಿರುವುದು ವಾಸ್ತವ. ಸಾಂವಿಧಾನಿಕವಾಗಿ ಜನರನ್ನು ಆಳುವ ರಾಜಕೀಯ ಪಕ್ಷಗಳು, ಸಾಂಸ್ಕೃತಿಕವಾಗಿ ರಾಯಭಾರ ನಡೆಸುವ ಸಂಘಟನೆಗಳು, ಬೌದ್ಧಿಕವಾಗಿ ನಿರ್ದೇಶಿಸುವ ಸಂಸ್ಥೆಗಳು, ಈ ಗೋಡೆಗಳನ್ನೇ ಭವಿಷ್ಯದ ಅಡಿಪಾಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿವೆ. ಇದಕ್ಕೆ ಕಾರಣವಾಗಿರುವುದು ಸಾಂವಿಧಾನಿಕವಾಗಿ ವರ್ತಮಾನದ ಯುವ ಸಮಾಜಕ್ಕೆ ಅತ್ಯವಶ್ಯವಾಗಿರುವ ʼ ಒಳಮೀಸಲಾತಿ ʼ ಮತ್ತು ʼ ಉಪವರ್ಗೀಕರಣ ʼ ಪ್ರಕ್ರಿಯೆಗಳು. ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳನ್ನು, ಪ್ರಜಾಸತ್ತಾತ್ಮಕ ಕನಸುಗಳನ್ನು ಅರ್ಥಮಾಡಿಕೊಂಡಿರುವ ಯಾರಿಗೇ ಆದರೂ, ಇದು ವಿವಾದಾಸ್ಪದ ಎನಿಸಕೂಡದು.
ಸಮ ಸಮಾಜದ ಕಲ್ಪನೆಗಳ ನಡುವೆ
ಏಕೆಂದರೆ ಬಾಬಾಸಾಹೇಬ್ ಕನಸಿದ ಭವಿಷ್ಯ ಭಾರತ, ತುಳಿತಕ್ಕೊಳಗಾದ-ಆಗಬಹುದಾದ, ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ ತಳಸ್ತರದ ಸಮಾಜದ ಸಮಸ್ತ ಜನತೆಯನ್ನೂ ಒಂದೇ ಸ್ತರದಲ್ಲಿಟ್ಟು, ಸಮ ಸಮಾಜವನ್ನು ಕಟ್ಟುವ ದಿಕ್ಕಿನಲ್ಲಿ ಸಾಗಬೇಕಿತ್ತು. ಸಂವಿಧಾನದಲ್ಲಿ ಸೋದರತ್ವ-ಸೋದರಿತ್ವದ ಕಲ್ಪನೆಗೆ ಹೆಚ್ಚು ಒತ್ತು ನೀಡಿರುವುದು ಈ ಕನಸಿನ ಒಂದು ಆಯಾಮ. ಆದರೆ ನವ ಉದಾರವಾದ ಮತ್ತು ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆಯ ದಾಳಿಗೆ ತುತ್ತಾಗಿರುವ ಭಾರತೀಯ ಸಮಾಜ, ಅಸಮಾನತೆಗಳನ್ನು ಪುರಸ್ಕರಿಸುತ್ತಲೇ, ಸಮಾನತೆಯನ್ನು ಸಾಧಿಸುವ ಆಳ್ವಿಕೆಯ ಚಿಂತನೆಗಳಿಗೆ ಸಾಕ್ಷಿಯಾಗಿದೆ. ಈ ಅಸಮಾನತೆಯ ನೆಲೆಗಳಲ್ಲಿ ಸಾಂವಿಧಾನಿಕ ಅವಕಾಶಗಳಿಂದ ವಂಚಿತರಾಗಿರುವ ಬಹುದೊಡ್ಡ ಸಮಾಜ, ದಲಿತರ ನಡುವೆ, ಹಿಂದುಳಿದವರ ನಡುವೆ, ಪರಿಶಿಷ್ಟ ಪಂಗಡಗಳ ನಡುವೆ ನಮ್ಮ ಕಣ್ಣಿಗೆ ರಾಚುತ್ತಿದೆ. ಸಂವಿಧಾನದ ಸವಲತ್ತು-ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದಿರುವ ಸಮಾಜಗಳಲ್ಲಿ ಶೋಷಿತರು ಸಹಜವಾಗಿ ಅಂಬೇಡ್ಕರ್ ಅವರತ್ತ ನೋಡುತ್ತಾರೆ .
ʼಒಳಮೀಸಲಾತಿ ʼ ಎಂಬ ಸಾಂವಿಧಾನಿಕ ಪದದ ಹಿಂದೆ ಈ ಸಾಮಾಜಿಕ ಸೂಕ್ಷ್ಮ ನೋಟ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದುರದೃಷ್ಟವಶಾತ್ ಐವತ್ತು ವರ್ಷಗಳ ಹಿಂದೆ ಕವಿ ಸಿದ್ಧಲಿಂಗಯ್ಯ ಅವರ ಧ್ವನಿಯಲ್ಲಿ ಮೂಡಿಬಂದ ʼ ಹೊಲೆ ಮಾದಿಗರ ಹಾಡು ʼ ಇಂದು ಹೊಲೆಯರ ಮತ್ತು ಮಾದಿಗರ ಪ್ರತ್ಯೇಕ ಹಾಡುಗಳಾಗಿ ಕಾಣುತ್ತಿದೆ. ಈ ವಿಭಜನೆಗೆ ಯಾವುದೇ ಸೈದ್ಧಾಂತಿಕ ತಳಹದಿ ಇರಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಸಾಂವಿಧಾನಿಕ ಮುನ್ನೋಟದಿಂದಾಚೆ ನೋಡಿದರೂ, ಅವರು ಬಲವಾಗಿ ಪ್ರತಿಪಾದಿಸಿದ ಬುದ್ಧ ಪ್ರಜ್ಞೆ ಈ ವಿಭಜನೆ-ವಿಘಟನೆಯನ್ನು ಸಮ್ಮತಿಸುವುದೇ ? ಏಳು ದಶಕಗಳ ಅಭಿವೃದ್ಧಿಯ ನಂತರದಲ್ಲಿ ಅಪಾರ ಸಂಖ್ಯೆಯಲ್ಲಿರುವ ಶೋಷಿತರು, ಇನ್ನೂ ಸಾಂವಿಧಾನಿಕವಾಗಿ ಅವಕಾಶವಂಚಿತರಾಗಿರುವುದು, ಅಂಬೇಡ್ಕರ್ ಅವರ ದೂರಗಾಮಿ ಮುನ್ನೋಟವನ್ನು ಭಗ್ನಗೊಳಿಸಿದಂತಲ್ಲವೇ ? ಇದಕ್ಕೆ ಪರಿಹಾರೋಪಾಯಗಳನ್ನು ಅಂಬೇಡ್ಕರರ ಬರಹ-ಚಿಂತನೆಗಳಲ್ಲಿ ಶೋಧಿಸುವುದಕ್ಕಿಂತಲೂ, ಅವರು ಪ್ರತಿಪಾದಿಸಿದ ತಾತ್ವಿಕ ನೆಲೆಗಳಲ್ಲಿ ನಿಂತು, ವರ್ತಮಾನದ ಸಮಾಜದ ಒಳಹೊಕ್ಕು ನೋಡುವುದು ವಿವೇಕಯುತ ಅಲ್ಲವೇ ?
ಅಲ್ಲಿ ನಮಗೆ ಶೋಷಿತರು ಕಾಣುತ್ತಾರೆ. ಇದಕ್ಕೆ ಕಾರಣ ಸಂವಿಧಾನ ಅಲ್ಲ. ಅಥವಾ ಅಂಬೇಡ್ಕರ್ ಚಿಂತನೆಯ ಕೊರತೆಯೂ ಅಲ್ಲ, ಮೂಲ ಕಾರಣ ಭಾರತವನ್ನು ಆಳಿದ, ಆಳುತ್ತಿರುವ, ಆಳಲು ಹಂಬಲಿಸುತ್ತಿರುವ ಸಂವಿಧಾನ ಪ್ರಮಾಣಿತ ಸರ್ಕಾರಗಳು ಮತ್ತು ಅವುಗಳು ಅನುಸರಿಸಿರುವ-ಅನುಸರಿಸುತ್ತಿರುವ ಆರ್ಥಿಕ ನೀತಿಗಳು. ಭಾರತದ ಸಂವಿಧಾನದಲ್ಲಿ ಬಂಡವಾಳಶಾಹಿ ವೃದ್ಧಿಯಾಗಲು ಅವಕಾಶಗಳು ವಿಪುಲವಾಗಿವೆ, ಆದರೆ ಇದನ್ನು ನಿರ್ವಹಿಸುವ ರಾಜಕೀಯ ಪಕ್ಷಗಳಲ್ಲಿ ಸಮಕಾಲೀನ ಸಾಮಾಜಿಕ ಪ್ರಜ್ಞೆ-ಅರಿವು ಮತ್ತು ಸಮ ಸಮಾಜದ ಆಲೋಚನೆ ಇದ್ದರೆ, ಭಿನ್ನ ಹಾದಿಯನ್ನು ಅರಸಿ, ಅಂಬೇಡ್ಕರ್ ಆಶಯದಂತೆ ಸಮಾಜವಾದದ ಸಮಸಮಾಜ ಪರಿಕಲ್ಪನೆಯತ್ತ ಸಾಗಬಹುದು. ಈ ಅಸಮಾನತೆ ಮತ್ತು ಅವಕಾಶ ವಂಚನೆಗಳಿಗೆ ಕಾರಣವಾದ, ನವ ಉದಾರವಾದದತ್ತ ಸಂಪೂರ್ಣ ವಾಲಿರುವ ಆಳ್ವಿಕೆಯ ಆರ್ಥಿಕ ನೀತಿಗಳನ್ನು ವಿರೋಧಿಸುವ ಜವಾಬ್ದಾರಿ ಯಾರದು ?
ಜವಾಬ್ದಾರಿಯ ನೊಗ ಹೊರುವುದು ಯಾರು ?
ಸಹಜವಾಗಿ ಅಂಬೇಡ್ಕರ್ ಅನುಯಾಯಿಗಳದ್ದೇ ಅಲ್ಲವೇ ? ಉಪವರ್ಗೀಕರಣ ಮತ್ತು ಒಳಮೀಸಲಾತಿ ರಾಜಕೀಯ ಪಕ್ಷಗಳಿಗೆ ಮತಬ್ಯಾಂಕುಗಳನ್ನು ಗಟ್ಟಿಗೊಳಿಸುವ ಸಾಂವಿಧಾನಿಕ ಸೇತುವೆ ಅಷ್ಟೆ. ಆದರೆ ಅಂಬೇಡ್ಕರ್ ತತ್ವಗಳಿಗೆ ಅನುಸಾರವಾಗಿ ಸಂಸದೀಯ ಪ್ರಜಾತಂತ್ರವನ್ನು ಒಪ್ಪಿರುವ ಬಹುಜನ ಸಮಾಜ ಪಕ್ಷ, ಆರ್‌ಪಿಐ, ಎಲ್‌ಜೆಪಿ ಮತ್ತಿತರ ದಲಿತ ಪ್ರಧಾನ ಪಕ್ಷಗಳಿಗೆ ಇದು ಶೋಷಿತ ಜನಸಮುದಾಯಗಳ ಬದುಕು, ಭವಿಷ್ಯ, ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಯಾಗಿ ಕಾಣಬೇಕಲ್ಲವೇ ? ಪ್ರಜಾಸತ್ತಾತ್ಮಕ ಅಧಿಕಾರ ರಾಜಕಾರಣದ ವಾರಸುದಾರಂತೆಯೇ ಬಿಂಬಿಸಿಕೊಳ್ಳುವ ಪ್ರಬಲ ಜಾತಿಗಳಲ್ಲಷ್ಟೇ ಅಲ್ಲದೆ, ಸಬಲೀಕರಣಗೊಂಡ ಹಿಂದುಳಿದ ಜಾತಿಗಳಲ್ಲೂ ʼ ಜಾತಿ ಗಣತಿ ʼ ಎಂಬ ಕಲ್ಪನೆಯೇ ಎದೆನಡುಕ ಉಂಟುಮಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸಾಂವಿಧಾನಿಕವಾಗಿ ಅವಕಾಶವಂಚಿತ ದಲಿತ ಸಮುದಾಯಗಳು ಅಸ್ತಿತ್ವದಲ್ಲಿವೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೂ ಈ ಸಮಾಜಗಳು ಹಿಂಜರಿಯುತ್ತವೆ.
ಏಕೆಂದರೆ ಇದು ರಾಜಕೀಯ ಅಧಿಕಾರ ಮತ್ತು ಆಧಿಪತ್ಯದ ಪ್ರಶ್ನೆ. ಸಾಂಸ್ಥಿಕವಾಗಿ ಪ್ರಜಾಪ್ರಭುತ್ವೀಯ ನೆಲೆಗಳಲ್ಲೂ ತಮ್ಮ ಬೌದ್ಧಿಕ ಹಿಡಿತವನ್ನು ಇಂದಿಗೂ ಕಾಪಾಡಿಕೊಂಡಿರುವ ಸವರ್ಣೀಯ ಜಾತಿಗಳಿಗಿಂತಲೂ, ಸಮಾಜದ ಮೇಲೆ ಆರ್ಥಿಕತೆಯ ಮೇಲೆ ಪಾರಮ್ಯ ಸಾಧಿಸಲು ಬೇಕಾಗುವ ಸಂಸದೀಯ ಅಧಿಕಾರವನ್ನು ಗಳಿಸಿರುವ ಮಧ್ಯವರ್ತಿ ಜಾತಿಗಳು ʼ ಜಾತಿ ಗಣತಿ ʼ ಮತ್ತು ʼ ಒಳಮೀಸಲಾತಿ ʼ ಎಂದರೆ ಸ್ಥಾನಪಲ್ಲಟದ ಭೀತಿಗೊಳಗಾಗುತ್ತವೆ. ಈ ಶಕ್ತಿಗಳೇ ಕರ್ನಾಟಕದಲ್ಲೂ ಸಹ ಹೊಲೆ ಮಾದಿಗರ ನಡುವೆ ದ್ವೇಷದ ಗೋಡೆಗಳನ್ನು ಕಟ್ಟುವ ಕಾಯಕದಲ್ಲಿ ತೊಡಗಿರುವುದನ್ನು ಮೇಲ್ನೋಟಕ್ಕೆ ಗುರುತಿಸಬಹುದು. ದುರಂತ ಎಂದರೆ ಇಲ್ಲಿ ಕಟ್ಟಲಾಗುವ ಗೋಡೆಗಳನ್ನು ಕೆಡವಿ ಹಾಕಲು ಸನ್ನದ್ಧವಾಗಬೇಕಾದ ದಲಿತ ಸಮುದಾಯಗಳು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ತಮ್ಮದೇ ಆದ ಪ್ರಾತಿನಿಧಿತ್ವಕ್ಕಾಗಿ ಹಂಬಲಿಸುತ್ತಿವೆ.
ಚಾರಿತ್ರಿಕ ಅವಕಾಶ ನಿರ್ಣಾಯಕ ಘಟ್ಟ
ಕರ್ನಾಟಕದ ಮಟ್ಟಿಗಾದರೂ, ದಲಿತ ಸಮುದಾಯಗಳು ತಮ್ಮೊಳಗಿನ ಸಾಂಸ್ಕೃತಿಕ ಭಿನ್ನ ಭೇದಗಳನ್ನು ಬದಿಗೊತ್ತಿ ಒಂದಾಗಿ ಎದ್ದುನಿಲ್ಲಲು ʼಒಳಮೀಸಲಾತಿʼ ಒಂದು ಭದ್ರ ಸೇತುವೆಯಾಗಬೇಕಿತ್ತಲ್ಲವೇ ? ಇಂತಹ ಚಾರಿತ್ರಿಕ ಅವಕಾಶಗಳನ್ನು ಕೈಚೆಲ್ಲಿ ಕೂರುವುದು ವರ್ತಮಾನಕ್ಕೆ ಬಗೆದ ದ್ರೋಹ, ಇತಿಹಾಸಕ್ಕೆ ಬಗೆಯುವ ವಂಚನೆ ಎನಿಸುವುದಿಲ್ಲವೇ ? ಐದು ದಶಕಗಳ ನಿರಂತರ ಸಂಘರ್ಷ, ಹೋರಾಟ, ಆಂದೋಲನಗಳ ಚರಿತ್ರೆಯಿದ್ದೂ, ಐಕ್ಯತೆಯ ಹಾದಿಯಲ್ಲಿ ಸಾಗುವ ಕ್ಷಮತೆಯನ್ನು ದಲಿತ ಚಳುವಳಿಗಳು ರೂಢಿಸಿಕೊಳ್ಳದೆ ಇರುವುದು, ಅಂಬೇಡ್ಕರ್ ಅವರಿಗೆ ದ್ರೋಹ ಬಗೆದಂತೆ ಅಲ್ಲವೇ ? ಇದಕ್ಕೆ ಸೈದ್ಧಾಂತಿಕ ಅಥವಾ ತಾತ್ವಿಕ ಕಾರಣಗಳಿರಲು ಸಾಧ್ಯವಿಲ್ಲ. ಏಕೆಂದರೆ ಅಂಬೇಡ್ಕರ್‌ವಾದ ಎನ್ನುವುದು ವಿಭಿನ್ನ ವಿಚಾರಧಾರೆಯ ಕವಲುಗಳಿಗೆ ಅವಕಾಶ ಮಾಡಿಕೊಡುವ ಒಂದು ಸಿದ್ಧಾಂತ ಅಲ್ಲ. ಈ ವಾದವನ್ನು ಒಪ್ಪುವವರ ಮುಂದೆ ಇರಬೇಕಾದ ಗುರಿ ಸಮಸ್ತ ಶೋಷಿತ-ದಲಿತ ಸಮುದಾಯದ ಸಾಮಾಜಿಕ ಘನತೆ, ಆರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಅಸ್ಮಿತೆ ಮಾತ್ರ.
ಇದನ್ನೂ ನೋಡಿ: ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ಅಂಬೇಡ್ಕರ್ ಚಿಂತನ ಕಾರ್ಯಕ್ರಮ
ಇಲ್ಲಿ ಮತ್ತೆ ನಮಗೆ ಕವಿ ಸಿದ್ಧಲಿಂಗಯ್ಯ ನೆನಪಾಗುತ್ತಾರೆ. ಹೊಲೆಯರು ಮತ್ತು ಮಾದಿಗರು ಚಾರಿತ್ರಿಕವಾಗಿ ಪ್ರತ್ಯೇಕ ಸಮಾಜಗಳಾಗಿಯೇ ಬೆಳೆದುಬಂದಿದ್ದಾರೆ, ಈಗ ಒಂದು ಮಾಡುವ ಅವಶ್ಯಕತೆ ಇಲ್ಲ ಎನ್ನುವ ಅಭಿಪ್ರಾಯವೂ ಅಂಬೇಡ್ಕರ್‌ವಾದದ ಸಂಕಥನಗಳಲ್ಲೇ ಕೇಳಿಬರುತ್ತಿದೆ. ಇಲ್ಲಿ ಒಂದಾಗುವುದು ಎಂದರೆ ಮೂಲ ಜಾತಿ ಅಸ್ಮಿತೆಯನ್ನು ಕಳಚಿಹಾಕಿ, ʼ ನಾವೆಲ್ಲಾ ಒಂದು ʼ ಎಂದು ಘೋಷಿಸುವ ಭೌತಿಕ ಹಂಬಲವನ್ನು ಗುರುತಿಸಬೇಕಿಲ್ಲ. ಈ ಗುರಿ ಸಾಧಿಸಲು ಭಾರತದ ಶೋಷಿತ ಸಮುದಾಯಗಳು ಬಹುದೂರ ಸಾಗಬೇಕಿದೆ. ಆದರೆ ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕವಾಗಿ ಒಂದಾಗುವ ಒಂದು ನಿರ್ಣಾಯಕ ಘಟ್ಟ ಇದಾಗಿದೆ. ವೈವಿಧ್ಯತೆಯಲ್ಲೇ ಏಕತೆ ಎಂಬ ಉದಾತ್ತ ಚಿಂತನೆಯೊಂದಿಗೆ ರೂಪುಗೊಂಡಿರುವ ಸಂವಿಧಾನವೂ ಇದನ್ನೇ ಅಪೇಕ್ಷಿಸುತ್ತದೆ ಅಲ್ಲವೇ ? ಇದನ್ನು ಅಲ್ಲಗಳೆಯುತ್ತಾ ಹೋದರೆ, ವಿಭಜನೆಯ ಗೋಡೆಗಳನ್ನು, ವಿಘಟನೆಯ ಬೇಲಿಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ, ಪರಸ್ಪರ, ಇಡೀ ಸಮುದಾಯಗಳನ್ನೇ ಪರಸ್ಪರ ಅಗೋಚರಗೊಳಿಸುವ ಶಕ್ತಿಗಳು ಸುತ್ತಲೂ ಇರುವುದನ್ನು ಈಗಲಾದರೂ ಗುರುತಿಸಬೇಕಲ್ಲವೇ ?
ಈ ಜವಾಬ್ದಾರಿಯ ನೊಗ ಹೊರಬೇಕಿರುವುದು ದಲಿತ ಚಳುವಳಿಗಳು. ತಮ್ಮ ಸಾಂಘಿಕ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಬದಿಗೊತ್ತಿ, ವ್ಯಕ್ತಿ ವೈಭವೀಕರಣದ ಹಾದಿಯಿಂದ ವಿಮುಖವಾಗಿ, ವೈಯುಕ್ತಿಕ ಪ್ರತಿಷ್ಠೆಗಳನ್ನು ಮರೆತು, ಈ ಗುರಿಯತ್ತ ಸಾಗದೆ ಹೋದರೆ, ಏಪ್ರಿಲ್ 14ರ ಆಚರಣೆಗಳೆಲ್ಲವೂ ಅದ್ಧೂರಿ ಆಡುಂಬೊಲಗಳಾಗಿಬಿಡುತ್ತವೆ. ಪ್ರತಿಮೆಗಳಿಂದಾಚೆ ಒಬ್ಬ ಅಂಬೇಡ್ಕರ್ ಇದ್ದಾರೆ, ಗ್ರಾಂಥಿಕ ಸಂವಿಧಾನವನ್ನು ಮೀರಿದ ಒಬ್ಬ ಅಂಬೇಡ್ಕರ್ ಇದ್ದಾರೆ, ಬುದ್ಧಪ್ರಜ್ಞೆಯಿಂದಾಚೆಗೂ ಒಬ್ಬ ಅಂಬೇಡ್ಕರ್ ಇದ್ದಾರೆ. ಈ ಅಂಬೇಡ್ಕರರನ್ನು ಗುರುತಿಸಲು ಹೊರಟಾಗ ನಮಗೆ ಗಾಂಧಿ ಎದುರಾಗಬಹುದು, ಮಾರ್ಕ್ಸ್ ಮುಖಾಮುಖಿಯಾಗಬಹುದು, ಲೋಹಿಯಾ ಚರ್ಚೆಗೆ ಸಿಕ್ಕಬಹುದು. ಈ ದಾರ್ಶನಿಕರ ಮೂಲ ವಿಚಾರಧಾರೆಗಳಲ್ಲಿರಬಹುದಾದ ಅಂತರಗಳು, ವರ್ತಮಾನದ ಸಂದರ್ಭದಲ್ಲಿ ಅಂಬೇಡ್ಕರರನ್ನು ಪ್ರತ್ಯೇಕಿಸುವ ಸಾಧನಗಳಾಗಕೂಡದು.
ಪರ್ವಕಾಲದ ಅನಿವಾರ್ಯತೆಯ ನಡುವೆ
ಏಕೆಂದರೆ ಭಾರತ ತನ್ನ ಪರ್ವಕಾಲದಲ್ಲಿದೆ. ವಿಕಸಿತ ಭಾರತವಾಗುವತ್ತ ಹೊರಟಿರುವ ಭಾರತ ʼ ವಿಕಾಸ ʼ ಎಂಬ ಕಲ್ಪನೆಯನ್ನು ಕೇವಲ ಮಾರುಕಟ್ಟೆಯ ಕಣ್ಣೋಟದಲ್ಲಿ ಕಾಣುತ್ತಿದೆ. ಆದರೆ ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಇಡೀ ಸಮಾಜವೇ ಮೌಲಿಕವಾಗಿ ಅವನತಿಯತ್ತ ಸಾಗುತ್ತಿದೆ. ಹಾಗಾಗಿಯೇ ಪ್ರಾಚೀನ ಭಾರತೀಯ ಲಕ್ಷಣಗಳಾದ ಅಸ್ಪೃಶ್ಯತೆ, ಪಿತೃಪ್ರಧಾನತೆ, ಊಳಿಗಮಾನ್ಯ ಯಜಮಾನಿಕೆ ಮತ್ತು ಜಾತಿ-ಮತ ಶ್ರೇಷ್ಠತೆಯ ಸಂಕೋಲೆಗಳು ಸಮಾಜವನ್ನು ಆವರಿಸುತ್ತಿವೆ. ಅಂಬೇಡ್ಕರ್ ಬಯಸಿದ-ಕನಸಿದ ವೈಚಾರಿಕತೆ ಮತ್ತು ವೈಜ್ಞಾನಿಕ ಆಲೋಚನೆಗಳು ಗ್ರಾಂಥಿಕವಾಗಿ ಸುರಕ್ಷಿತವಾಗಿವೆ. ಮನುವಾದ ಅಥವಾ ಮನುವಾದದ ಪುನರುತ್ಥಾನ ಎಂಬ ಕ್ಲೀಷೆಯನ್ನು ಬಳಸಿ ಇದನ್ನು ಎದುರಿಸಲಾಗುವುದಿಲ್ಲ. ಮನುವಾದ ಪ್ರತಿಪಾದಿಸುವ ಬಹಿಷ್ಕರಿಸುವ/ ಹೊರಗಿಡುವ ಪ್ರವೃತ್ತಿ, ಮೇಲರಿಮೆಯ/ಮಡಿವಂತಿಕೆಯ ಧೋರಣೆ, ಪ್ರತ್ಯೇಕಿಸುವ-ದೂರೀಕರಿಸುವ ಚಿಂತನೆ ಹಾಗೂ ಬಹಿಷ್ಕೃತರನ್ನು ಸೃಷ್ಟಿಸುವ ಸಾಂಸ್ಕೃತಿಕ ವಿಚಾರಧಾರೆ, ಎಲ್ಲ ಜಾತಿಗಳಲ್ಲೂ ಧಾರಾಳವಾಗಿದೆ.
ಈ ಮನಸ್ಥಿತಿಯಿಂದ ಸಮಾಜ ಹೊರಬರಬೇಕಿದೆ. ಆಗ ನಮಗೆ ಅಂಬೇಡ್ಕರ್ ಅವರೊಳಗಿದ್ದ ಸ್ತ್ರೀವಾದಿ ಕಾಣುತ್ತಾರೆ, ಮಹಿಳಾ ದೌರ್ಜನ್ಯಗಳ ವಿರುದ್ಧ ನಾವು ದನಿ ಎತ್ತುತ್ತೇವೆ. ಅವರೊಳಗಿದ್ದ ಸಮಾಜವಾದಿ ಕಾಣುತ್ತಾರೆ, ನವ ಉದಾರವಾದವನ್ನು ವಿರೋಧಿಸುತ್ತೇವೆ. ಅಂಬೇಡ್ಕರ್ ಅವರಲ್ಲಿ ಅಂತರ್ಗತವಾಗಿದ್ದ ಬುದ್ಧಪ್ರಜ್ಞೆ ಕಾಣುತ್ತದೆ, ಸಾಮಾಜಿಕ-ಬೌದ್ಧಿಕ ಏಕತೆಯನ್ನು ಬಯಸುತ್ತೇವೆ. ಸಂವಿಧಾನದ ಫಲಾನುಭವಿ ಸಮಾಜವೊಂದು ಸಾಂವಿಧಾನಿಕ ಅವಕಾಶಗಳಿಂದ ವಂಚಿತರಾಗಿರುವ ವಿಶಾಲ ಸಮಾಜದ ಕಡೆ ನೋಡುವ ವ್ಯವಧಾನವನ್ನು ಬೆಳೆಸಿಕೊಳ್ಳಲು ನಮಗೆ ಅಂಬೇಡ್ಕರ್ ಅವರೊಳಗಿನ ಈ ದಾರ್ಶನಿಕತೆ ನೆರವಾಗುತ್ತದೆ. ಆದರೆ ಇದು ಸಾಧ್ಯವಾಗಬೇಕಾದರೆ, ನಾವು ಅಂಬೇಡ್ಕರ್ ಅವರನ್ನು ನಮ್ಮೊಳಗೆ ಆಳಕ್ಕಿಳಿಸಿಕೊಳ್ಳಬೇಕು. ಪ್ರತಿಮೆ, ಹಾರ, ತುರಾಯಿ, ಮೆರವಣಿಗೆ, ಜೈಕಾರ, ಪರಾಕುಗಳಿಂದಾಚೆಗೆ, ದೂರ ದಿಗಂತದಲ್ಲೊಬ್ಬ ದಾರ್ಶನಿಕ ವ್ಯಕ್ತಿ ನಮ್ಮತ್ತ ನೋಡುತ್ತಿದ್ದಾರೆ ಎಂಬ ಅರಿವು ನಮ್ಮೊಳಗೆ ಜಾಗೃತವಾಗಬೇಕು.
ಆ ವ್ಯಕ್ತಿಯೇ ಡಾ. ಬಿ. ಆರ್. ಅಂಬೇಡ್ಕರ್. ಜೈ ಭೀಮ್ ಹೇಳುವ ಮುನ್ನ ಪ್ರತಿಯೊಂದು ಮನಸ್ಸಿನೊಳಗೂ ಈ ಆಲೋಚನಾ ಲಹರಿಯ ಒಂದು ತಂತು ಹರಿದುಹೋದರೂ, ಏಪ್ರಿಲ್ 14ರ ಆಚರಣೆ ಸಾರ್ಥಕವಾದೀತು.
ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು. ಜೈ ಭೀಮ್-ಲಾಲ್ ಸಲಾಂ !