ಸಿಪಹಿಜಾಲ: ಸೆಪ್ಟೆಂಬರ್ 5 ರಂದು ತ್ರಿಪುರಾದ ಧನ್‌ಪುರ್ ಮತ್ತು ಬೊಕ್ಸಾನಗರ ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಕಳೆದ ಅಸೆಂಬ್ಲಿ ಚುನಾವಣೆಯಿಂದ ಹೊರಗುಳಿಯುವವರೆಗೂ ಸತತ ನಾಲ್ಕು ಅವಧಿಗೆ ಪ್ರತಿನಿಧಿಸಿದ್ದ ಕ್ಷೇತ್ರವಾಗಿರುವುದರಿಂದ ಧನ್‌ಪುರ ಕ್ಷೇತ್ರವನ್ನು ಪ್ರತಿಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರತಿಷ್ಠೆಯ ಕಣವೆಂದು ಪರಿಗಣಿಸಿದೆ. ಸಿಪಿಐಎಂ
ಬಿಜೆಪಿ ನೇತೃತ್ವದ ಒಕ್ಕೂಟವು ಮಾರ್ಚ್‌ನಲ್ಲಿ ನಡೆದ 60 ಸದಸ್ಯರ ಅಸೆಂಬ್ಲಿಯಲ್ಲಿ 32 ಸ್ಥಾನಗಳ ಸರಳ ಬಹುಮತದೊಂದಿಗೆ ತ್ರಿಪುರಾದಲ್ಲಿ ಅಧಿಕಾರಕ್ಕೆ ಮರಳಿತು. 2023ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ವಿರುದ್ಧ ಸೋತ ಕೌಶಿಕ್ ಚಂದಾ ಅವರನ್ನು ಸಿಪಿಐ(ಎಂ) ಧನಪುರ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿಸಿದೆ. ಅವರ ವಿರುದ್ಧದ ಅಭ್ಯರ್ಥಿಯಾಗಿ ಅವರ ಕಾಲೇಜು ಸಹಪಾಠಿ ಬಿಂದು ದೇಬನಾಥ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಯಾವಾಗ ಮರುಸ್ಥಾಪಿಸುತ್ತೀರಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
2023ರ ವಿಧಾನಸಭಾ ಚುನಾವಣೆಯಲ್ಲಿ ಧನ್‌ಪುರ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದ ಪ್ರತಿಮಾ ಭೌಮಿಕ್ ಅವರು ತಮ್ಮ ಕೇಂದ್ರ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ರಾಜೀನಾಮೆ ನೀಡಿದ್ದರು. ಹೀಗಾಗಿ ಧನಪುರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಜುಲೈನಲ್ಲಿ ಸಿಪಿಐ(ಎಂ) ಶಾಸಕ ಸಂಸುಲ್ ಹಕ್ ನಿಧನದ ಕಾರಣಕ್ಕೆ ಬೊಕ್ಸಾನಗರ ಕ್ಷೇತ್ರವು ತೆರವಾಗಿತ್ತು.
ಸೆಪ್ಟೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಸಿಪಿಐ(ಎಂ) ಬಿಜೆಪಿ ವಿರುದ್ಧ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಈ ನಡುವೆ ಧನ್‌ಪುರ ಮತ್ತು ಬೋಕ್ಸಾ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ರಾಜ್ಯದ ಅತೀ ದೊಡ್ಡ ಪ್ರತಿಪಕ್ಷವಾದ ತಿಪ್ರಾ ಮೋತಾ ಹಾಗೂ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ. ಮತ ವಿಭಜಯನೆಯ ಕಾರಣಕ್ಕೆ ತಾವು ಸ್ಪರ್ಧಿಸುತ್ತಿಲ್ಲ ಎಂದು ಎರಡೂ ಪಕ್ಷಗಳು ಹೇಳಿವೆ.
ಅಲ್ಲದೆ, ವಾರದ ಹಿಂದೆಯಷ್ಟೆ 2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಪ್ರಮಾದ ಪುನರಾವರ್ತನೆಯಾಗದಂತೆ ಹಾಗೂ ಉಪಚುನಾವಣೆಯ ಕಾರ್ಯತಂತ್ರದ ಕುರಿತು ಸಿಪಿಐ(ಎಂ) ನಾಯಕತ್ವದೊಂದಿಗೆ ತಿಪ್ರಾ ಮೋತಾ ಮತ್ತು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಸಭೆ ನಡೆಸಿದ್ದರು. ಧನ್‌ಪುರ ಕ್ಷೇತ್ರದಲ್ಲಿ ಕಳೆದ ಒಂದು ಬಾರಿ ಬಿಟ್ಟರೆ ನಡೆದ ಎಲ್ಲಾ ಚುನಾವಣೆಯಲ್ಲಿ ಸಿಪಿಐಎಂ ಸತತವಾಗಿ ಗೆದ್ದುಕೊಂಡೆ ಬಂದಿದೆ. ಕಳೆದ ಬಾರಿ 3500 ಮತಗಳ ಅಂತರದಲ್ಲಿ ಸಿಪಿಐಎಂ ಸೋತಿತ್ತು, ಆದರೆ ತಿಪ್ರಾ ಮೋಥಾ ಪಕ್ಷದ ಅಭ್ಯರ್ಥಿ 8000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ತಿಪ್ರಾ ಮೋಥಾ ಸಿಪಿಐಎಂ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ, ಆಮ್ಲಜನಕ ಇರುವುದನ್ನು ಖಚಿತಪಡಿಸಿದ ಪ್ರಗ್ಯಾನ್ ರೋವರ್
ಚುನಾವಣೆ ಪ್ರಚಾರದ ಬಗ್ಗೆ ಮಾತನಾಡಿದ 42 ವರ್ಷದ ಸಿಪಿಐಎಂ ಅಭ್ಯರ್ಥಿ ಕೌಶಿಕ್ ಚಂದಾ, “ತಾನು ಮನೆ ಮನೆಗೆ ಹೋಗುತ್ತಿದ್ದೇನೆ ಮತ್ತು ಫೆಬ್ರವರಿಯಲ್ಲಿ ತಲುಪಲು ಸಾಧ್ಯವಾಗದ ಮತದಾರರನ್ನು ಈ ಬಾರಿ ತಲುಪಲು ಪ್ರಯತ್ನಿಸುತ್ತಿದ್ದೇನೆ. ಕಳೆದ ಬಾರಿ ನಾವು ಕರಪತ್ರಗಳ ಮೂಲಕ ತಲುಪಿದ ಮತದಾರರನ್ನು ಈ ಬಾರಿ ನಮ್ಮ ಕಾರ್ಯಕರ್ತರು ಮುಖತಃ ಭೇಟಿ ಮಾಡುತ್ತಿದ್ದಾರೆ. ನಾವು ಮನೆ-ಮನೆ ಪ್ರಚಾರಗಳು ಮತ್ತು ಮಾರುಕಟ್ಟೆಗಳಲ್ಲಿ ಕಾರ್ನರ್ ಸಭೆಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ” ಹೇಳಿದ್ದಾರೆ.
“ಸ್ಥಳೀಯ ಮತದಾರರ ಬೆಂಬಲ ಇರುವುದರಿಂದ ಈ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಭರವಸೆಯಿದೆ. ಉತ್ತಮ ಫಲಿತಾಂಶ ಸಿಗಲಿದೆ ಎಂಬ ಭರವಸೆಯಿದೆ. ನಾನು ಗೆದ್ದರೆ, ರಸ್ತೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸಲು ಮತ್ತು ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತೇನೆ” ಎಂದು ಚಂದಾ ಹೇಳಿದ್ದಾರೆ.
ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಬಿಂದು ದೇಬನಾಥ್ ಅವರು ತನ್ನ ವಿರೋಧಿ ಪಕ್ಷವಾಗಿದ್ದರೂ ಅವರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವುದಾಗಿ ಚಂದಾ ಹೇಳಿದ್ದಾರೆ. “ನಾವು ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೇವೆ. ರಾಜಕೀಯದ ಹೊರತಾಗಿ, ನಾವು ಸ್ನೇಹ ಸಂಬಂಧವನ್ನು ಹೊಂದಿದ್ದೇವೆ. ನಾವು ಭೇಟಿಯಾದಾಗಲೆಲ್ಲಾ ಪರಸ್ಪರ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಳ್ಳಿನಿಂದ ಭಾರತದ ರಕ್ಷಣೆ ಅಸಾಧ್ಯ: ಪ್ರಧಾನಿ ಮೋದಿಗೆ ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ
2004 ರಲ್ಲಿ ಎಡರಂಗದ ಅಂಗವಾಗಿದ್ದ ಕ್ರಾಂತಿಕಾರಿ ಸಮಾಜವಾದಿ ಪಕ್ಷದಲ್ಲಿದ್ದ ಬಿಂದು ದೇಬನಾಥ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ನಾಯಕರಾಗಿ ಗುರುತಿಸಿಕೊಂಡಿದ್ದರು. 2014 ರಲ್ಲಿ ಅವರು ಬಿಜೆಪಿಗೆ ಸೇರಿದ್ದರು.
“ಧನಪುರವು ರಾಜ್ಯದ ಸುದೀರ್ಘ ಮುಖ್ಯಮಂತ್ರಿ ಆಯ್ಕೆಯಾದ ಕ್ಷೇತ್ರವಾಗಿದ್ದರೂ ಅಭಿವೃದ್ಧಿ ಕೊರತೆಯ ಕಾರಣಕ್ಕೆ ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ನನಗೆ ಜನರಿಂದ ಅಪಾರ ಬೆಂಬಲ ಸಿಗುತ್ತಿದೆ. ಜನರು ಅಭಿವೃದ್ಧಿಗಾಗಿ ಮತ ಹಾಕುತ್ತಾರೆ. ಧನಪುರದಲ್ಲಿ ರಸ್ತೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ. ಕಳೆದ ಬಾರಿ ತಿಪ್ರಾ ಮೋತಾಗೆ ಬೆಂಬಲ ನೀಡಿದ ಬುಡಕಟ್ಟು ಮತದಾರರು ಈ ಬಾರಿ ನಮ್ಮ ಜೊತೆಯಾಗಿದ್ದಾರೆ. ತಿಪ್ರಾ ಮೋಥಾದಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ” ಎಂದು ದೇಬನಾಥ್ ಹೇಳಿದ್ದಾರೆ.
ವಿಡಿಯೊ ನೋಡಿ: “ಮುಗಿದ ಅಧ್ಯಾಯ” ಎಂದು ಸರ್ಕಾರ ಕೈ ತೊಳದುಕೊಳ್ಳಬಾರದು – ಒಡನಾಡಿ ಸ್ಟ್ಯಾನ್ಲಿ Janashakthi Media