ದೇಶದ ಹಿತದೃಷ್ಟಿಯಿಂದ ಸರಕಾರದ ರಾಜತಾಂತ್ರಿಕ ನಿಯೋಗದ ಭಾಗವಾಗಲು ಸಿಪಿಐ(ಎಂ) ಒಪ್ಪಿಗೆ
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಬೆಳವಣಿಗೆಗಳ ಕುರಿತು ಚರ್ಚಿಸಲು ಪ್ರಧಾನ ಮಂತ್ರಿಗಳು ಮತ್ತು ಅವರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ನಿರಾಕರಿಸಿರುವುದು ದುರದೃಷ್ಟಕರ ಎಂದು ತಮ್ಮ ಪಕ್ಷ ಭಾವಿಸುವುದಾಗಿ ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಸರ್ಕಾರವು ತಕ್ಷಣವೇ ಸಂಸತ್ತಿನ ಅಧಿವೇಶನವನ್ನು ಕರೆಯಬೇಕು, ಭಾರತದ ಜನರಿಗೆ ತಿಳಿಸಬೇಕು ಮತ್ತು ಏನಾದರೂ ಸ್ಪಷ್ಟೀಕರಣಗಳು ಬೇಕಾಗಿದ್ದರೆ, ಅವನ್ನು ಪಡೆಯಲು ಅವಕಾಶಗಳನ್ನು ಒದಗಿಸಬೇಕು ಎಂದು ಪೊಲಿಟ್ಬ್ಯುರೊ ಆಗ್ರಹಿಸಿದೆ.
ಆದರೆ ಪ್ರಧಾನ ಮಂತ್ರಿಗಳು, ಇದಕ್ಕೆ ಬದಲಾಗಿ ಬಿಜೆಪಿ-ಎನ್ಡಿಎ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ‘ಆಪರೇಷನ್ ಸಿಂಧೂರ್’ ಬಗ್ಗೆ ಅವರಿಗೆ ಮಾಹಿತಿ ನೀಡಲು ನಿರ್ಧರಿಸಿದರು. ಇದು ತಾರತಮ್ಯದ ಕ್ರಮ, ವಿಶೇಷವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ಒಂದು ವಿಷಯದಲ್ಲಿ ಎನ್ನುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ. ಆ ರೀತಿ ಮಾಹಿತಿ ಕೊಡಲು ಸರ್ಕಾರವು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದೆ..
ಸರ್ಕಾರವು ಮೊದಲು ಭಾರತದ ಜನತೆಗೆ ಜವಾಬುದಾರವಾಗಿರಬೇಕು ಮತ್ತು ತನ್ನ ಕ್ರಿಯೆಗಳಲ್ಲಿ ಪಾರದರ್ಶಕವಾಗಿರಬೇಕು. ಆಳುವ ಪಕ್ಷದ ನಾಯಕರು ಮತ್ತು ರಾಜ್ಯ ಸಚಿವರುಗಳು ಸಹ ಪರಿಸ್ಥಿತಿಯನ್ನು ಕೋಮುಗ್ರಸ್ತಗೊಳಿಸುವ ಅಭಿಯಾನ ತಕ್ಷಣವೇ ನಿಲ್ಲಬೇಕು.
ಸರ್ಕಾರವು ರಾಜ್ಯಸಭೆಯಲ್ಲಿ ನಮ್ಮ ಪಕ್ಷದ ನಾಯಕರನ್ನು ಕರೆದು, ಸರಕಾರದ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ವಿವಿಧ ದೇಶಗಳಿಗೆ ವಿವಿಧ ನಿಯೋಗಗಳನ್ನು ಕಳಿಸಲು ನಿರ್ಧರಿಸಿರುವುದಾಗಿ ತಿಳಿಸಿತು. ಈಗಾಗಲೇ ವ್ಯಕ್ತಪಡಿಸಿರುವಂತೆ ಸಿಪಿಐ(ಎಂ)ಗೆ ಭಿನ್ನ ಅಭಿಪ್ರಾಯಗಳಿದ್ದರೂ, ತನ್ನ ಮೇಲಿನ ಆಗ್ರಹವನ್ನು ಪುನರುಚ್ಚರಿಸುತ್ತಲೇ, ವಿಶಾಲ ರಾಷ್ಟ್ರೀಯ ಹಿತದೃಷ್ಟಿಯಿಂದ ಅಂತಹ ಒಂದು ನಿಯೋಗದ ಭಾಗವಾಗಲು ಬಾಧ್ಯರಾಗಿದ್ದೇವೆ ಎಂಬುದು ಸಿಪಿಐ(ಎಂ)ನ ಭಾವನೆ ಎಂದು ಪೊಲಿಟ್ಬ್ಯುರೊ ಹೇಳಿದೆ.