₹200 ಕೋಟಿ ಸುಲಿಗೆ ಪ್ರಕರಣ; ಜಾಕ್ವೆಲಿನ್‌ ಫರ್ನಾಂಡೀಸ್‌ ಏಕೆ ಬಂಧಿಸಿಲ್ಲ? ಇಡಿಗೆ ದೆಹಲಿ ನ್ಯಾಯಾಲಯ ತರಾಟೆ

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ‘ಪಿಕ್ ಅಂಡ್‌ ಚೂಸ್’ ನೀತಿ ಅಳವಡಿಸಿಕೊಂಡಿದೆ ಎಂದು ದೆಹಲಿ ನ್ಯಾಯಾಲಯವು ಇಡಿಯನ್ನು ತರಾಟೆಗೆ ತೆಗೆದುಕೊಂಡಿದೆ. ₹200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ ಲುಕ್‌ ಔಟ್ ನೋಟೀಸ್‌ ಹೊರಡಿಸಿದ್ದರೂ ಜಾರಿ ನಿರ್ದೇಶನಾಲಯ ಸಂಸ್ಥೆಯು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಬಂಧಿಸಲಿಲ್ಲವೇಕೆ ಎಂದು ಪ್ರಶ್ನಿಸಿದೆ.

ʻʻನೋಟಿಸು ನೀಡಿದ್ದರೂ ಸಹ ಜಾಕ್ವೆಲಿನ್‌ ಫರ್ನಾಂಡಿಸ್‌  ಅನ್ನು ಏಕೆ ಬಂಧಿಸಲಿಲ್ಲ? ಒಬ್ಬೊಬ್ಬರಿಗೆ ಒಂದೊಂದು ನೀತಿ ಏಕೆ? ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ಪಿಕ್ ಅಂಡ್‌ ಚೂಸ್ ನೀತಿಯನ್ನು ಏಕೆ ಅಳವಡಿಸಿಕೊಳ್ಳಬೇಕು” ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ಫರ್ನಾಂಡಿಸ್ ಮತ್ತು ಇಡಿ ಪರ ವಕೀಲರ ವಾದವನ್ನು ಆಲಿಸಿದ ನಂತರ ಮಧ್ಯಂತರ ಜಾಮೀನು ಪಡೆದಿರುವ ಜಾಕ್ವೆಲಿನ್‌ ಫರ್ನಾಂಡಿಸ್ ಜಾಮೀನು ಅರ್ಜಿಯ ಆದೇಶವನ್ನು‌ ನ್ಯಾಯಾಲಯ ಕಾಯ್ದಿರಿಸಿದ್ದಾರೆ.

ವಂಚಕ ಸುಕೇಶ್‌ ಚಂದ್ರಶೇಖರ್‌ ಜತೆಗೆ ನಂಟು ಹೊಂದಿದ ಆರೋಪ ಹೊತ್ತಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮೂರು ದಿನದ ಅಂತರದಲ್ಲಿ ಎರಡನೇ ಬಾರಿಗೆ ಕೇಂದ್ರೀಯ ತನಿಖಾ ಸಂಸ್ಥೆ ಕಾರ್ಯವೈಖರಿಗೆ ಕೋರ್ಟ್‌ ಅಸಮಾಧಾನ ಹೊರ ಹಾಕಿದೆ.

ಕೋಟ್ಯಂತರ ಅವ್ಯವಹಾರದ ತನಿಖೆಗೆ ಜಾಕ್ವೆಲಿನ್‌ ಫರ್ನಾಂಡಿಸ್‌ ಸಹಕಾರ ನೀಡುತ್ತಿಲ್ಲ. ದೇಶ ಬಿಟ್ಟು ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಾದಿಸಿದರು. ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಲುಕ್‌ಔಟ್ ಸುತ್ತೋಲೆ(ಎಲ್‌ಒಸಿ) ಹೊರಡಿಸಲಾಗಿದೆ ಎಂದು ಇಡಿ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ಆಕೆಯ ಕಸ್ಟಡಿ ಅಗತ್ಯವಿಲ್ಲ ಎಂದು 50,000 ವೈಯಕ್ತಿಕ ಬಾಂಡ್ ಮೇಲೆ ನ್ಯಾಯಾಲಯವು ಸೆಪ್ಟೆಂಬರ್ 26 ರಂದು ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಾಲಯವು ಆಗಸ್ಟ್ 31 ರಂದು ಇಡಿ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ಅನ್ನು ಗಮನಕ್ಕೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ತಿಳಿಸಿತ್ತು.

Donate Janashakthi Media

Leave a Reply

Your email address will not be published. Required fields are marked *