ನಕಾರಾತ್ಮಕ ಅಭಿಪ್ರಾಯ: ಭಾರತದ 18 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳು ನಿಷೇಧ

ನವದೆಹಲಿ: ಮಾರ್ಚ್‌ ತಿಂಗಳಿನಲ್ಲಿ ಭಾರತದಲ್ಲಿರುವ 18 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸ್‌ಆ್ಯಪ್ ತಿಳಿಸಿದೆ. `ನಿಂದನೆ ಪತ್ತೆ ವಿಧಾನ’ ಹಾಗೂ ‘ರಿಪೋರ್ಟ್’ ಆಯ್ಕೆಯ ಮೂಲಕ ಬಳಕೆದಾರರು ನೀಡಿರುವ ನಕಾರಾತ್ಮಕ ಅಭಿಪ್ರಾಯಗಳನ್ನು ಪರಿಗಣಿಸಿ ನಿಷೇಧಿಸಲಾಗಿದೆ.

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್ ಫೆಬ್ರುವರಿಯಲ್ಲಿ 14 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. 2022ರ ಮಾರ್ಚ್ 1ರಿಂದ 31ರ ನಡುವಣ ಅವಧಿಯಲ್ಲಿ 597 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 74 ಖಾತೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ವರದಿಯ ಪ್ರಕಾರ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಮತ್ತು ಉಲ್ಲಂಘನೆಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಈ ಕೆಲಸ ಮಾಡಿಕೊಂಡು ಬರುತ್ತಿದೆ.

‘2021ರ ಐಟಿ ನಿಯಮಗಳ ಪ್ರಕಾರ, 2022ರ ಮಾರ್ಚ್‌ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದೇವೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳು, ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಈ ವರದಿಯಲ್ಲಿ ಮಾಹಿತಿ ನೀಡಿದ್ದೇವೆ. ನಿಂದನೆಯನ್ನು ತಡೆಯಲು ವಾಟ್ಸ್‌ಆ್ಯಪ್ ಅಳವಡಿಸಿರುವ ಕ್ರಮಗಳ ಬಗ್ಗೆಯೂ ಉಲ್ಲೇಖಿಸಿದ್ದೇವೆ. 18 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ’ ಎಂದು ವಾಟ್ಸ್‌ಆ್ಯಪ್ ವಕ್ತಾರರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಳಕೆದಾರರ ಸುರಕ್ಷತೆಗಾಗಿ ಕೃತಕ ಬುದ್ಧಿಮತ್ತೆ ಹಾಗೂ ಇತರ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದೂ ವಾಟ್ಸ್‌ಆ್ಯಪ್ ತಿಳಿಸಿದೆ.

ಹೊಸ ಐಟಿ ನಿಯಮಗಳು ಕಳೆದ ವರ್ಷ ಜಾರಿಗೆ ಬಂದಿವೆ. 2021ರ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರತಿ ತಿಂಗಳು ನಿಯಮ ಅನುಸರಣೆಗೆ ಸಂಬಂಧಿಸಿದ ವರದಿ ಬಿಡುಗಡೆ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *