ಯಾವುದು “ಧರ್ಮ” ಮಾರ್ಗ..? ಭಾರತದಲ್ಲಿ ಇರುವುದೆಲ್ಲವೂ “ಜಾತಿ” ಮಾರ್ಗವೇ..!

– ಎನ್ ಚಿನ್ನಸ್ವಾಮಿ ಸೋಸಲೆ 

ಭಾರತದ ನೆಲದಲ್ಲಿ ಸ್ಥಾಪಿತವಾದ ಬೌದ್ಧ ಹಾಗೂ ಜೈನ ಧರ್ಮಗಳು ಪ್ರವರ್ದ್ಧ ಮಾರ್ಗದಲ್ಲಿ ಇದ್ದ ಸಂದರ್ಭದಲ್ಲಿ ಭಾರತದ ನೆಲದಲ್ಲಿ ಧರ್ಮ ಪ್ರಭುತ್ವದೊಂದಿಗೆ ಸಮೀಕರಿಸಿಕೊಂಡು ಜನತೆಯೊಂದಿಗೆ ಮಾತನಾಡಿದವು.

ಆದರೆ ಕಾಲಕಾಲಕ್ಕೆ ಭಾರತಕ್ಕೆ ಆಗಮಿಸಿದವರು – ದಾಳಿ ಮಾಡಿದವರು – ಪ್ರವೇಶ ಮಾಡಿದವರು ತಮ್ಮ ಧರ್ಮಗಳನ್ನು ಇಲ್ಲಿ ಪ್ರತಿಷ್ಠಾಪಿಸಲು ಮುಂದಾಗಿ ಭಾರತದ ನೆಲಮೂಲ ಸಂಸ್ಕೃತಿಯ ನಿಜ ಧರ್ಮಗಳನ್ನೇ ತಮ್ಮ ತೋಳ್ತೆಕ್ಕೆಗೆ ತೆಗೆದುಕೊಂಡ ಮೇಲೆ ಭಾರತದಲ್ಲಿ ಧರ್ಮ ಎಂಬ ಸತ್ಯ ಮರೆಮಾಚಿತು. ಪ್ರಸ್ತುತ ಸಂದರ್ಭದಲ್ಲಂತೂ ಭಾರತದಲ್ಲಿ ಧರ್ಮ ಎಂಬುದೇ ಇಲ್ಲ – ಇರುವುದೆಲ್ಲವೂ ಸಹ ಜಾತಿಗಳೇ.

ಜಾತಿಗಳು ಎಂದಿಗೂ ಸಹ ಧರ್ಮವಾಗಲು ಸಾಧ್ಯವಿಲ್ಲ. ಹಾಗೆಯೇ ಧರ್ಮವು ಸಹ ಜಾತಿಯಾಗಲು ಸಾಧ್ಯವಿಲ್ಲ.

“ಧರ್ಮ” ತಂದೆ ತಾಯಿಯ ಸ್ಥಾನದ ಅತಿ ಎತ್ತರದಲ್ಲಿ ನಿಂತು ತನ್ನ ಮಕ್ಕಳು ಅಂದರೆ ಧರ್ಮದ ಅಧೀನದಲ್ಲಿ ಬರುವ “ಜಾತಿಗಳ” ನ್ನು ಸತ್ಮಾರ್ಗದಲ್ಲಿ ನಡೆಯಲು ಮುಂದಾಗಬೇಕು. ಕನ್ನಡ ನೆಲದ ಆದಿ ಕವಿ ಪಂಪ ಹೇಳಿರುವ ಹಾಗೆ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುವ ಹಾಗೆ ನೆಲದ ವಾರಸುದಾರ ಬಸವಣ್ಣ ಹೇಳಿದ ಹಾಗೆ “ದಯವೇ ಧರ್ಮದ ಮೂಲವಯ್ಯ” ಎನ್ನುವ ಹಾಗೆ ಸರ್ವರಿಗೂ ಲೆಸನ್ನೇ ಬಯಸುವ ಮಾದರಿಯ ಮಾರ್ಗದರ್ಶನ ಮಾಡುತ್ತದೆ.

ಆದರೆ.., ಜಾತಿಗಳೇ ಧರ್ಮವನ್ನು ( ತಂದೆ- ತಾಯಿಯರನ್ನು ) ಮೀರಿಸುವ ಹಾಗೆ ನಾನು, ನನ್ನದೆಂಬ “ನಾನತ್ವದ” ಹಿನ್ನೆಲೆಯಿಂದ ಬೆಳೆದು ನಿಂತರೆ ಅಥವಾ ಇಂದು ನಿಂತಿರುವ ಮಾದರಿಯಲ್ಲಿ ಜಾತಿಗಳು ಗಟ್ಟಿಯಾಗಿ ತಮ್ಮ ಜಾತಿಯ ಹಿನ್ನೆಲೆಯಿಂದಲೇ ಧರ್ಮವನ್ನೇ ನಾನು ಸೃಷ್ಟಿಸಿದ್ದು , ಭಾರತದಲ್ಲಿ ಧರ್ಮಸ್ಥಾಪನಚಾರ್ಯರು ನಮ್ಮ ಜಾತಿಯವರು , ನಮ್ಮ ಜಾತಿಯವರು ಕೊಟ್ಟ ಎಂಜಲು ಅಣ್ಣನ್ನೇ ಧರ್ಮದ ಹಿನ್ನೆಲೆಯ ದೇವರುಗಳು ತಿಂದದ್ದು , ನಾನೇ ಅವರನ್ನು ದೋಣಿಯಲ್ಲಿ ಕೂರಿಸಿಕೊಂಡು ನದಿ ದಾಟಿಸಿದ್ದು , ನಾನೇ ಅವರಿಗೆ ಮೊದಲು ಬಟ್ಟೆಯನ್ನು ಒಲಿದುಕೊಟ್ಟದ್ದು , ನಾನೇ ಅವರಿಗೆ ಬಂಗಾರದ ಒಡವೆಗಳನ್ನು ಮಾಡಿಕೊಟ್ಟದ್ದು , ನಾನು ಗಾಣದಿಂದ ತೆಗೆದ ಎಣ್ಣೆಯನ್ನೇ ಅವರು ಮಂಗಳಾರತಿ ಮಾಡಲು ದೀಪ ಹಚ್ಚಲು ಬಳಸುವುದು , ನಾನು ಮಾಡಿದ ಮಡಿಕೆಯೇ ಅವರ ಪೂಜೆಗೆ ಶ್ರೇಷ್ಠವಾದದ್ದು ಇತ್ಯಾದಿ ಇತ್ಯಾದಿ ಹಿನ್ನೆಲೆಯಿಂದಲೇ ದೇವರ ಮೂಲದಿಂದ ತಮ್ಮ ಜಾತಿಯನ್ನು ಬಹು ವೈಭವವಾಗಿ ಗುರುತಿಸಿಕೊಳ್ಳುವ ಹಿನ್ನೆಲೆಯಿಂದ ಧರ್ಮ ಎಂಬುದು ಒಡೆದು ಚೂರು ಚೂರಾಗಿ – ಚೂರು ಚೂರಾದ ಧರ್ಮದ ತುಂಡುಗಳು ಅದರದೇ ಆದ ಹೆಬ್ಬಾಗಿಲುಗಳನ್ನು ನಿರ್ಮಾಣ ಮಾಡಿ ಕೊಂಡಿವೆ. ಈ ಹಿನ್ನೆಲೆಯಿಂದ ಬಹುದೊಡ್ಡ ಜನತೆ ನಿಜ ಧರ್ಮದೊಳಗೆ ಬರುವುದು ಗೊತ್ತಿಲ್ಲದೇ- ಕಷ್ಟಪಟ್ಟು ಒಂದಷ್ಟು ಧರ್ಮದೊಳಗೆ ಬಂದರೂ ಸಹ ಅದರೊಳಗಿನ ವಿಷ ವರ್ತೂಲಕ್ಕೆ ಸಿಲುಕಿ ಹೊರಗೆ ಹೋಗುವುದೋ ತಿಳಿಯದೆ ಅಜ್ಞಾನದ ಕೊಂಪೆಯಲ್ಲಿ ತನಗೆ ತಾನೆ ಬೌದ್ಧಿಕವಾಗಿ ಮೂಲೆಗುಂಪಾಗುತ್ತಿದ್ದಾನೆ.

ಪ್ರಸ್ತುತ ಸಂದರ್ಭದಲ್ಲಿ ಭಾರತ ಇಂತಹ ಎಡಬಿಡಂಗಿ ತತ್ವ ಸಿದ್ಧಾಂತದ ಅಡಿಯ ಧರ್ಮದ ಭಾರತದಲ್ಲಿ ಸಿಲುಕಿದೆ.
ಭಾರತದ ಜನರಿಗೆ ತಮ್ಮ ಜಾತಿ ಗೊತ್ತೇ ಹೊರತು – ತಮ್ಮ ಧರ್ಮ ಯಾವುದೆಂದು ಗೊತ್ತೇ ಇಲ್ಲ.
ಜಾತಿಯಲ್ಲೇ ಹುಟ್ಟಿ – ಜಾತಿಯಲ್ಲೇ ಬೆಳೆದು – ಜಾತಿಯಲ್ಲೇ ಸಾಯುವುದು, ಸತ್ತ ನಂತರವೂ ಅವರವರ ಜಾತಿಗೆ ಮೀಸಲಾದ ಸ್ಮಶಾಣಗಳಲ್ಲಿ ಗೃತ ದೇಹವನ್ನು ಊಳುವ ಅಥವಾ ಸುಡುವ ಕಟ್ಟುನಿಟ್ಟಾದ ಪದ್ಧತಿ ಭಾರತದ ಬಹುದೊಡ್ಡ ಜನ ಸಂಸ್ಕೃತಿಯ ವಾಸ್ತವದ ನಿದರ್ಶನವಾಗಿದೆ.

ಇದನ್ನು ಓದಿ : ಬೀದಿಬದಿ ವ್ಯಾಪಾರಿಗಳ ಹಕ್ಕು ನಿರಾಕರಿಸಿದರೆ ಹೋರಾಟ ತೀವ್ರ – ಬಿಕೆ ಇಮ್ತಿಯಾಜ್

ನಾವು ಭಾರತದ ಧರ್ಮ ಸಂಸ್ಥಾಪಕರು, ಈ ಧರ್ಮ ಭಾರತ ನೆಲದಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಇಂದು ಬೀದಿಯಲ್ಲಿ ನಿಂತು ಹೋರಾಡುತ್ತಿರುವವರು ಸಹ ತಮ್ಮ ತಮ್ಮದೇಯಾದ ಜಾತಿಯ ಬಲೆಯಲ್ಲಿಯೇ ಸಿಲುಕಿರುವುದು ದುರಂತ. ಈ ಜಾತಿಯೆಂಬ ಬಿಡಿಸಲಾಗದ ಸಂಕೋಲೆಯಿಂದ ಹೊರಬರಲಾಗದೆ ಐಡೆಂಟಿಟಿಗಾಗಿ ಮಾತ್ರ ಧರ್ಮವನ್ನು ಮತ್ತೆ ಮತ್ತೆ ಸ್ವಾರ್ಥ ಸಾಧನೆಯ ಬಂಡವಾಳದ ಸರಕಾಗಿಸಿಕೊಂಡು ಒತ್ತಿ ಒತ್ತಿ ಹೇಳುವ ಅವಶ್ಯಕತೆ ಇಂದಿನ ಪ್ರಜಾಪ್ರಭುತ್ವ ಭಾರತದ ಎಪ್ಪತೆಂಟು ವರ್ಷದ ಸಂದರ್ಭದಲ್ಲಿ ಬಂದೊದಗಿದೆ.

ಈ ಐಡೆಂಟಿಟಿ ತಂದುಕೊಳ್ಳುವುದು ಸಹ ಜಾತಿಗಳನ್ನು ಧಿಕ್ಕರಿಸಿ , ಜಾತಿ ಆಧಾರದಿಂದ ಆಗುತ್ತಿರುವ ಮಾನವ ಕುಲದ ಅಪಮಾನಗಳನ್ನು ಸಂಹರಿಸಿ ಒಟ್ಟುಗೂಡಿಸುವ ಆಧಾರದಲ್ಲಲ್ಲ, ಬದಲಿಗೆ ಅನ್ಯ ಧರ್ಮೀಯರ ಜೊತೆ ಬಹುದೊಡ್ಡ ಸಂಘರ್ಷವನ್ನು ಕೋಮು ಭಾವನೆಯಿಂದ ಉಂಟು ಮಾಡಿ, ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ತಮ್ಮ ಧರ್ಮವನ್ನು ಸ್ವಾರ್ಥಕ್ಕಾಗಿ ಬಾಹ್ಯ ಲೋಕಕ್ಕೆ ತೋರ್ಪಡಿಸಿಕೊಳ್ಳುವುದೇ ಆಗಿದೆ. ಇದಕ್ಕೆ ಭಾರತದಲ್ಲಿ ಆಗುತ್ತಿರುವ ಸಮಕಾಲಿನ ಸಂದರ್ಭದ ಜ್ವಲಂತ ಘಟನೆಗಳೇ ಸಾಕ್ಷಿಕರಿಸುತ್ತವೆ.

ಈಗ ಭಾರತೀಯರು ತುಂಬಾ ಬಲವಂತದಿಂದ, ಯಾರನ್ನೂ ಮೆಚ್ಚಿಸಲು ಅಥವಾ ಇನ್ನೊಬ್ಬರಿಂದ ಮೆಚ್ಚಿಸಿಕೊಳ್ಳಲು ಹುಟ್ಟಿಸಿಕೊಳ್ಳುವ , ಇದೇ ನಮ್ಮ ಧರ್ಮ ಎಂದು ಅನೇಕ ಇಕ್ಕಟ್ಟು ಬಿಕ್ಕಟ್ಟುಗಳ ನಡುವೆ ಬಹು ಕಷ್ಟದಿಂದ ಹೇಳಿಕೊಳ್ಳುವ ಧರ್ಮ ತಮಗೆ ತಾವೇ ಏರಿಕೊಂಡ ಧರ್ಮವೇ ಹೊರತು, ನಿಜ ಧರ್ಮದ ತತ್ವ ಸಿದ್ಧಾಂತದ ಅಡಿಯಲ್ಲಿ ಮನಸೋ ಇಚ್ಛೆಯಿಂದ ನಿರ್ಮಲವಾಗಿ ಅಪ್ಪಿಕೊಂಡದ್ದಲ್ಲ.

ಧರ್ಮ ಎಂಬುವುದು ಸರ್ವಜನಾಂಗವು ಒಟ್ಟಾಗಿ ಬದುಕುವ ಪರಿಸರದ ಶಾಂತಿಯ ತೋಟ. ಇದೆ ನಿಜವಾದ ಧರ್ಮದ ಸಾರ. ಮುಂದುವರೆದು, ಈ ವಸುವಿನಲ್ಲಿ (ಭೂಮಿಯಲ್ಲಿ) ವಾಸಿಸುವ ಪ್ರತಿಯೊಬ್ಬ ಮನುಷ್ಯ ಜೀವಿಯು ಸಹ “ವಸುದೇವ ಕುಟುಂಬಕಂ” (ಭೂಮಿ ಮೇಲೆ ವಾಸಿಸುವ ಸಕಲ ಮನುಷ್ಯ ಜೀವಿಯು ಒಂದೇ ಕುಟುಂಬಕ್ಕೆ ಸೇರಿದವರು, ನಾವೆಲ್ಲರೂ ಸಹೋದರ ಭಾತೃತ್ವದ ನೆಲೆಯಲ್ಲಿ ಜೀವಿಸಬೇಕಾದವರು ಇಂದರ್ಥ ) ಎನ್ನುವ ಹಾಗೆ ರೂಪಿತಗೊಂಡಿದ್ದಾಗಿರುತ್ತದೆ. ಆದರೆ ಇಂದು ಈ ವಸುವಿನಲ್ಲಿ ಜೀವಿಸುತ್ತಿರುವ ಜನ “ತಾನೊಂದೇ ವಲಂ” ಎಂಬುವುದನ್ನು ಹೊರತುಪಡಿಸಿ “ಬಿಳಿಯ- ಕರಿಯ” “ಸ್ಪೃಶ್ಯ – ಅಸ್ಪೃಶ್ಯ ” ಎಂಬ ಬಹುದೊಡ್ಡ ವರ್ಣಭೇದ ಹಾಗೂ ಜಾತಿ ಭೇದಗಳ ನೀತಿಯ ವಿಷದ ವರ್ತುಲದಲ್ಲಿ ಸಿಲುಕಿ ಇತ್ತ ನುಂಗಲು ಆಗದೆ – ಅತ್ತ ಉಗಳಲ್ಲೂ ಆಗದೆ ಗಂಟಲಲ್ಲಿ ಜಾತಿ ಎಂಬ ಅಂಧಕಾರದ ಬಹುದೊಡ್ಡ ವಿಷ ವನ್ನು ಇಟ್ಟುಕೊಂಡು ನರಳುತ್ತಿದೆ. ಅಂದರೆ ಇತ್ತ ಧರ್ಮವನ್ನು ಒಪ್ಪಿಕೊಳ್ಳಲಾಗದೆ , ಧರ್ಮ ಪ್ರತಿಪಾದನೆ ಮಾಡುವ ಹಿನ್ನೆಲೆಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದ ಹಿನ್ನೆಲೆಯಲ್ಲಿ ಒಪ್ಪಿಕೊಳ್ಳದ ಜಾತಿಯನ್ನು ಬಿಡಲಾಗದೆ ಅತಂತ್ರ ಸ್ಥಿತಿಯಲ್ಲಿ ಪ್ರತಿಕ್ಷಣ ನರಳುತ್ತಿದೆ.

ಇನ್ನು ನಮ್ಮ ದೇಶದಲ್ಲಂತೂ ಧರ್ಮವನ್ನು ಮೀರಿ ಜಾತಿಗಳು ಮಾತಾಡುತ್ತವೆ. ಈ ಜಾತಿಗಳು ರೆಕ್ಕೆ- ಪುಕ್ಕಗಳನ್ನು ಕಟ್ಟಿಕೊಂಡು ಮುಗಿಲೆತ್ತರದ ಹಾರಾಟ ಹಾಗೂ ಈ ಭೂಲೋಕವೇ ಕಂಡು ಅರಿಯದ ಮೆರೆದಾಟಗಳ ಮುಂದೆ ಧರ್ಮ ಸಾಕ್ಷಾತ್ಕಾರದಿಂದ ಬದುಕಲು ಬಹುದೊಡ್ಡ ಧರ್ಮಸಂಕಟಕ್ಕೆ ಸಿಲುಕಿದೆ. ಭಾರತದಲ್ಲಿ ಧರ್ಮವೇ ಧರ್ಮ ಸಂಕಟಕ್ಕೆ ಸಿಲುಕಿರುವುದು ಇಲ್ಲಿನ ಕಟ್ಟುನಿಟ್ಟಿನ ಜಾತಿ ವ್ಯವಸ್ಥೆಯಿಂದ ಎಂಬುದನ್ನು ನಾವ್ಯಾರೂ ಮರೆಯಬಾರದು.

ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಧರ್ಮದ ಸಂಕಟ ಹೇಗಿದೆ ಎಂದರೆ

” ಧರ್ಮವೆಂಬ ನೀರಿನ ಪಾತ್ರೆಯಲ್ಲಿ ಕೇವಲ ಬೇಳೆಯನ್ನು ಮಾತ್ರ ಹಾಕಿ ಮೂಲಭೂತ ಧರ್ಮ ಪ್ರತಿಪಾದಕರು ಹಾಗೂ ಧರ್ಮ ಸಂಸ್ಥಾಪಕರು ಎಂದು ಹೇಳಿಕೊಳ್ಳುವವರು ಒಲೆಯನ್ನು ಹಚ್ಚದೆ, ಒಲೆಯ ಮೇಲೆ ನೀರಿನ ಪಾತ್ರೆ ಹಾಗೂ ಬೇಳೆಯನ್ನು ಹಾಕಿಟ್ಟು ಇದನ್ನು ಧರ್ಮಕ್ಕೆ ಸಮೀಕರಿಸಿಕೊಂಡಿರುವ ಸಾಕ್ಷಾತ್ ದೇವರೇ ಪ್ರತ್ಯಕ್ಷವಾಗಿ ತನ್ನ ಅಗಾಧ ಶಕ್ತಿಯಿಂದಲೇ ಬೆಳೆಯನ್ನು ಬೆಳೆಸುತ್ತದೆ ಎಂದು ಅವೈಜ್ಞಾನಿಕ ಹಿನ್ನೆಲೆಯ ಅಜ್ಞಾನದ ಪ್ರತಿಪಾದನೆ ಮಾಡಿ , ಈ ಪುರಾಣದ ಹಿನ್ನೆಲೆಯಿಂದಲೇ ಧರ್ಮ ಸ್ಥಾಪನೆಗೆ ಮುಂದಾದರೆ, ಇವರ ಈ ಅಜ್ಞಾನದ ದೇವರು ಲೇಪಿಸ ಧರ್ಮದ ಪ್ರತಿಪಾದನೆಗೆ “ಜಾತಿಯ” ಜನ, ತಮ್ಮ ಬಹುದೊಡ್ಡ ಶ್ರಮದಾಯಕ ದುಡಿಮೆಯ ಮೂಲಕ ಶತಶತಮಾನಗಳಿಂದ ಪುರಾಣ ಲೇಪಿತ ಹಿನ್ನಲೆಯ ಧರ್ಮ ಸಂಸ್ಥಾಪಕರ ವೈಭವದ ಜೀವನಕ್ಕೆ ಶ್ರಮದ ಮೂಲಕ ಆಧಾರವಾದರು. ಇವರು ಅವರದಲ್ಲದ ಧರ್ಮವನ್ನು ಪುರಾಣದ ಹಿನ್ನೆಲೆಯಿಂದ ಜಾತಿಗೆ ಸಮೀಕರಿಸಿಕೊಂಡು ಕಲ್ಪನಾ ಲೋಕದ ಧರ್ಮದ ಅಂಧಕಾರದಲ್ಲಿಯೇ ಬದುಕಿದರು. ಇವರ ಇಂತಹ ಅಜ್ಞಾನದ ಬದುಕೇ ಧರ್ಮ ಇನ್ನೂ ಸಹ ಭಾರತೀಯರಿಗೆ ದೊರಕದೆ ಇರಲು ಕಾರಣವಾಗಿದೆ .

ಏಕೆಂದರೆ ಒಲೆಯನ್ನು ಅಚ್ಚದೆ ಪಾತ್ರೆಯಲ್ಲಿ ನೀರು ಮತ್ತು ಬೇಳೆಯನ್ನು ಮಾತ್ರ ಹಾಕಿ ಒಲೆಯ ಮೇಲೆ ಇಟ್ಟಿರುವುದನ್ನು ಗಮನಿಸಿದ ಈ ನೆಲ ಮೂಲ ಸಂಸ್ಕೃತಿಯ ಸಮಜೀವಿಗಳು ಬಹು ಶ್ರಮವಹಿಸಿ ಕಾಡು -ಮೆಡುಗಳಿಂದ ಕಟ್ಟಿಗೆಯನ್ನು ತಂದು , ಬೆಂಕಿ ಹಚ್ಚಿ ಪಾತ್ರೆಯಲ್ಲಿ ಇಟ್ಟಿದ್ದ ಬೆಳೆಯನ್ನು ಹದವಾಗಿ ಅನೇಕ ದೇವರ ಹೆಸರಿನ ಮಾಲೆಗಳನ್ನು ಕೊರಳಿಗೆ ಹಾಕಿಕೊಂಡು, ಆ ಮೂಲಕ ಜಾತಿಯಾಧರಿತ ಧರ್ಮದ ಚೌಕಟ್ಟಿಗೆ ಸಿಲುಕಿ ಧರ್ಮದ ಸಾಲವನ್ನು ಅರಿಯದೆ – ಜಾತಿಯ ಬೌದ್ಧಿಕ ಮೌಲ್ಯವನ್ನು ತಿಳಿಯದೆ ಬೇಯಿಸುತ್ತಿದ್ದಾರೆ. ಹೀಗೆ ಜಾತಿ ಆಡಳಿತ ಹಿನ್ನೆಲೆಯಿಂದ ಶ್ರಮಪಟ್ಟು ಬೇಳೆ ಬೇಯಿಸಲು ಮುಂದಾಗುವ ಕೆಲವರು ತಮ್ಮ ತಮ್ಮ ಜಾತಿಯ ನಾನತ್ವದಿಂದ ಮೆರೆದರೆ, ಮತ್ತೊಬ್ಬರು ತಮ್ಮ ಜಾತಿಗೆ ಹಿನ್ನೆಲೆಯ ಕೀಳಿರಿಮೆಯಿಂದ ಸೊರಗುತ್ತಿದ್ದಾರೆ . ಇವರ ಮೇಲಿರಿಮೆ ಹಾಗೂ ಕೀಳಿರಿಮೆ ಮಾತ್ರ ಧರ್ಮ ಜವಾಬ್ದಾರಿಯಲ್ಲ. ಸಂಪೂರ್ಣ ಜವಾಬ್ದಾರಿ ಅವರ ಜಾತಿಗಳೇ.

ಆದರೆ ಅತ್ಯಂತ ಶ್ರಮಪಟ್ಟು, ಹೋರಾಟ ಮಾಡಿ ಜಾತಿಯ ಜನ ಬೇಯಿಸಿದ ಈ ಬೇಳೆಯನ್ನು ತಾವುಗಳು ಮಾತ್ರ ಯಾವುದೇ ಸಂದರ್ಭದಲ್ಲಿಯೂ ಮುಟ್ಟಲು ಆಗದೆ ಹೊರ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಮಾತ್ರ ಧರ್ಮ ಸ್ಥಾಪಕರಿಗೆ ಹಾಗೂ ದೇವರ ಹಿನ್ನೆಲೆಯ ಧರ್ಮದ ವಾರಸುದಾರರಿಗೆ ಇವರೆಲ್ಲರೂ ಸಹ ಜಾತೀಯ ಜನರೇ. ಹೀಗೆ ಹದವಾಗಿ ನಯವಾಗಿ ಬೆಂದ ಬೇಳೆಯನ್ನು ಮುಟ್ಟುವವರು ಮಾತ್ರ ಇಂದು ಸ್ವಾರ್ಥ ಸಾಧನೆಗೆ ಧರ್ಮವನ್ನು ಬಳಸಿಕೊಳ್ಳುತ್ತಿರುವವರು .

ಇದನ್ನು ಶತಶತಮಾನಗಳಿಂದಲೂ ಧರ್ಮದ ಚೌಕಟ್ಟಿಗೆ ಒಳಪಡದೆ ಕೇವಲ ಜಾತಿಯ ಜನರಾಗಿಯೇ ಇರುವ ಬಹುದೊಡ್ಡ ಈ ನೆಲ ಮೂಲ ಸಂಸ್ಕೃತಿಯ ದುಡಿಯುವ ಜನ ವರ್ಗ ಮಾತ್ರ ಬೇಳೆ ಬೇಯುವಾಗ ಹೊರಬರುವ ಗಮಲನ್ನೆ ಮೂಗಿನಿಂದ ಸವಿಯುತ್ತ , ಮೃಷ್ಟಾನ್ನ ತಿಂದಂತೆ ಕಲ್ಪಿಸಿಕೊಂಡು ಧರ್ಮ ನಮ್ಮದು ಎಂದು ಹೇಳಿಕೊಳ್ಳುವ ಆಧಾರದಲ್ಲಿ ಅರ್ಥವಿಲ್ಲದ ಹೋರಾಟ ಮಾಡುತ್ತಿದ್ದಾರೆ. ಈ ನೆಲದ ಸಂಸ್ಕೃತಿಯ ಸೃಷ್ಟಿಕರ್ತರಾದ ಜನ ವರ್ಗ ಇಂತಹ ಮರ್ಮವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಬಹುಜನರ ಕಟ್ಟಿಗೆ ಹಾಗೂ ಬೆಂಕಿಯಿಂದ ಬೇಳೆಯನ್ನು ಹದವಾಗಿ ಬೇಯಿಸಿಕೊಂಡು ಹೊಟ್ಟೆ ತುಂಬಾ ಸಮಯ ಸಮಯಕ್ಕೆ ಸರಿಯಾಗಿ ಉಣ್ಣುವವರು ಇಲ್ಲಿ ಧರ್ಮ ಸ್ಥಾಪಕರು ಹಾಗೂ ನಿಯಂತ್ರಕರು ಆಗಿದ್ದಾರೆ. ಶ್ರಮದಿಂದ ಧರ್ಮವನ್ನು ಕಟ್ಟಿದವರು ಇಲ್ಲಿ ಧರ್ಮ ಹೀನರಾಗಿ ಜಾತಿಯ ಜನರಾಗಿದ್ದಾರೆ.

ಈ ಹಂತದಲ್ಲಿ ದೇವರನ್ನೇ ಆಧಾರವಾಗಿಟ್ಟುಕೊಂಡಿರುವ ಏಕಮುಖ ಚಿಂತನೆಯ ದೇವರು ಲೇಪಿತ ಧರ್ಮದ ‘ತೀರ್ಥ’ ಮೆರೆಯುತ್ತಿದೆಯೇ ಹೊರತು – ಕಾಯಕವನ್ನೇ ಆಧಾರವಾಗಿಟ್ಟುಕೊಂಡಿರುವ ಬಹುದೊಡ್ಡ ಶ್ರಮಜೀವಿಗಳ ‘ಬೆವರಿನಿಂದ’ ಸ್ಥಾಪಿತವಾದ ನಿಜ ಧರ್ಮ ಸೋಲುತಿದೆ. ‘ತೀರ್ಥ’ ಪುರಾಣವನ್ನು ವೈಭವಿಕರಿಸುತ್ತದೆ. ‘ಬೆವರು’ ವಾಸ್ತುವನ್ನು ಮನವರಿಕೆ ಮಾಡುತ್ತದೆ. ನಮ್ಮ ದೇಶ ಭಾರತ ಪುರಾಣದ ಭಾರತವಲ್ಲ ಬದಲಿಗೆ ಬುದ್ಧ, ಅಶೋಕ, ಬಸವಣ್ಣ, ಅಂಬೇಡ್ಕರ್ ಅವರು ರೂಪಿಸಿದ ವಾಸ್ತವದ ಭಾರತ.

ಏಕೆಂದರೆ, ಇಂದು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಕೇವಲ ವ್ಯವಹಾರಿಕವಾಗಿ ದೇವರ ಹೆಸರಿನಲ್ಲಿ ಮಾರಾಟಕ್ಕೆ ಇಟ್ಟಿರುವ ಲಡ್ಡು ಪ್ರಾಣಿಗಳ ಕೊಬ್ಬಿನಿಂದ ಮಾಡಲ್ಪಟ್ಟಿತೆಂದು, ಇದರಿಂದ ಯಾರೋ ಕಂಡರಿಯದ ಮಾದರಿಯಲ್ಲಿ ಮಾಲಿನ್ಯಗೊಂಡಿತು ಎಂಬ ಕಾರಣಕ್ಕಾಗಿ ಅಲ್ಲಿನ ಮೂಲಭೂತವಾದಿಗಳು ಮಾಡುತ್ತಿರುವ ಬಹುದೊಡ್ಡ ಶುದ್ದಿಕರಣವನ್ನು ಗಂಭೀರವಾಗಿ ಗಮನಿಸಿದಾಗ, ಇದೇ ತಿಮ್ಮಪ್ಪನ ಸನ್ನಿಧಾನದಲ್ಲಿ ಅವರು ಮಾಡುವ ಪವಿತ್ರ ಪೂಜೆಗಳಲ್ಲೇ ಇನ್ನೂ ಹೆಚ್ಚಿನ ಪವಿತ್ರ ಪೂಜೆಗಳನ್ನು – ದೇವರಿಗೆ ಪೂರಕವಾದ ಪುರಸ್ಕಾರವನ್ನು ಮಾಡಿ ಶುದ್ಧಿ ಮಾಡುತ್ತಿರುವ ಜನ ವರ್ಗ ಸತಶತಮಾನಗಳಿಂದ ತಾವೇ ಅದೇ ದೇವರ ಹೆಸರಿನಿಂದಲೇ ತಮ್ಮಂತೆ ಇರುವ ಬಹುದೊಡ್ಡ ಶ್ರಮಿಕ ಜನವರ್ಗವನ್ನು ಅಸ್ಪೃಶ್ಯರನ್ನಾಗಿಸಿ ತಮ್ಮ ಶಾಶ್ವತ ಮನೆ ಹಾಗೂ ಮನವನ್ನು ಶಾಶ್ವತವಾಗಿ ಮಲಿನಗೊಳಿಸಿಕೊಂಡಿರುವ ತಮ್ಮ ಮನಸ್ಸುಗಳನ್ನು ಮಾತ್ರ ಶುದ್ಧೀಕರಿಸಿಕೊಳ್ಳಲು ಯಾವ ಕ್ಷಣದಲೂ ಮುಂದಾಗುವುದಿಲ್ಲ. ಏಕೆಂದರೆ, ಈ ವಿಷಯದಲ್ಲಿ ಮಾತ್ರ ಅವರು ಪಿತ್ರಾಜಿತವಾಗಿ ಶಾಶ್ವತ ದೃಷ್ಟಿಕೋನದಿಂದ ಅಜ್ಞಾನ ಅಂಧಕಾರದಿಂದ ಮಲಿನಗೊಂಡವರೇ. ಈ ಹಂತದಲ್ಲಿ ಮಾತ್ರ ಈ ಜನ ವರ್ಗ ನಾವು ಶ್ರೇಷ್ಠರು – ಈ ನೆಲದಲ್ಲಿ ದೇವರ ವಾರಸುದಾರಿಕೆಯ ಹಿನ್ನೆಲೆಯಿಂದ ಸ್ಪೃಶ್ಯರು – ಇವರು ದೇವರು ಹಾಗೂ ಧರ್ಮದ ಹಿನ್ನೆಲೆಯಿಂದ ಅಸ್ಪೃಶ್ಯರು ಎಂದು ಹೇಳಿಕೊಂಡು ಶತಶತಮಾನಗಳಿಂದಲೂ ಹಂದಿ, ದನ, ಕತ್ತೆ , ಕುರಿ ಮೇಕೆಗಳ ಕೊಬ್ಬನ್ನು ದಿನನಿತ್ಯ- ಪ್ರತಿಕ್ಷಣ ತಿನ್ನುತ್ತಿರುವವರೇ ಆಗಿದ್ದಾರೆ.

ಈ ಅರ್ಥದಲ್ಲಿಯೇ ಹೇಳುವುದಾದರೆ ಭಾರತದಲ್ಲಿ ‘ಧರ್ಮ’ ಸಮಯ ಸಂದರ್ಭಕ್ಕನುಸಾರವಾಗಿ ಕ್ಷಣಾರ್ಧದಲ್ಲಿ ಬಂದು ಹೋಗುವ ” ಪೊಳ್ಳು ” ಸಾಧನ ಮಾದರಿಯ ಕೈಗೊಂಬೆಯಾಗಿದೆ. ಆದ್ದರಿಂದ ಇದು ಭಾರತದಲ್ಲಿ ಗಟ್ಟಿಯಾಗಿ ನಿಲ್ಲುವುದರಕ್ಕಿಂತ ಸಮಯ ಸಂದರ್ಭಕ್ಕೆ ಅನುಸಾರವಾಗಿ ಬೀಳುವುದೇ ಹೆಚ್ಚಾಗಿದೆ.
ಆದರೆ,

‘ಜಾತಿ’ ಶಾಶ್ವತವಾಗಿ ಪ್ರತಿ ಕ್ಷಣ ಭಾರತೀಯರ ಮನ ಹಾಗೂ ಮನೆಯಲ್ಲಿ ಮನೆ ಮಾಡಿಕೊಂಡಿರುವ ಹಾಗೂ ಯಾವ ಸಂದರ್ಭದಲ್ಲಿಯೂ ಅಲುಗಾಡದ ಮಾದರಿಯ ” ಗಟ್ಟಿ ” ಸಾಧನವಾಗಿದೆ. ಈ ಸಾಧನ ಎಂತದ್ದೇ ಭೂಕಂಪ ಸುನಾಮಿಗಳಿಗೂ ಜಿಗ್ಗಿಲ್ಲ- ಬಗ್ಗಿಲ್ಲ. ಇದು ಮಾತ್ರ ಯಾವುದೇ ಸಂದರ್ಭದಲ್ಲಿಯೂ ಬದಲಾವಣೆಗೆ ಬಯಸುವುದಿಲ್ಲ. ರಾಜಪ್ರಭುತ್ವದ ಭಾರತದಲ್ಲಿ ಇದರ ಪ್ರಭಾವ ಯಥಾ ಸ್ಥಿತಿಯ ಮಾದರಿಯ ರೂಪವಾಗಿದ್ದರೆ – ಪ್ರಜಾಪ್ರಭುತ್ವದ ಭಾರತದಲ್ಲಿ ಇದರ ಪ್ರಭಾವ ಇನ್ನೂ ಹೆಚ್ಚು ಹೆಚ್ಚು ಗಟ್ಟಿಗೊಂಡು ಬೀದಿ ಬೀದಿಯಲ್ಲಿ ಕಿರಿಚಾಡುವ ಮಾದರಿದ್ದಾಗಿದೆ.

ನಿಜಾರ್ಥದಲ್ಲಿ ‘ಧರ್ಮ’ ಎಂಬುವುದು ಜಂಗಮದ ರೀತಿ. ಇದನ್ನು ಅರ್ಥ ಮಾಡಿಕೊಳ್ಳುವುದು ಬಹು ಕಠಿಣ. ಏಕೆಂದರೆ ಇದು ಜ್ಞಾನಕ್ಕೆ ( ನಾಲೆಡ್ಜ್ ) ಸಂಬಂಧ ಪಟ್ಟದ್ದು. ಆದರೆ.., ‘ಜಾತಿ’ ಸ್ಥಾವರದ ರೀತಿ. ಇದು ಶತಶತಮಾನಗಳಿಂದ ಅಲುಗಾಡದೆ ನಿಂತಲ್ಲೇ ನಿಂತಿರುವ ( ಅಜ್ಞಾನ ) ಅಜ್ಞಾನದ ಸಾಧನದ ಮಾದರಿಯದು . ಈ ಅಜ್ಞಾನದ ಜಾತಿ ಎಂಬ ಸ್ಥಾವರ ಸುಮ್ಮನೆ ನಿಂತಿಲ್ಲ. ತಾನು ಕಾಲ ಕಾಲಕ್ಕೆ ತನಗೆ ಅರಿವಿಲ್ಲದೆ ತಾನು ಸೇರ್ಪಡೆಗೊಂಡಿರುವ ಧರ್ಮದ ಒಳಗಡೆ ಪ್ರತಿದಿನ – ಪ್ರತಿಕ್ಷಣ ದೇವರಮಕ್ಕಳು ಎಂದು ತಮಗೆ ತಾವೇ ಹೇಳಿಕೊಳ್ಳುವವರಿಂದ ಪೂಜೆಯ ಜೊತೆ ಅರ್ಚನವನ್ನು ಅದ್ದೂರಿಯಾಗಿ, ಅಜ್ಞಾನದ “ನಾನತ್ವದ” ಹಿನ್ನೆಲೆಯಿಂದ ಮಾಡಿಸಿಕೊಂಡು ನಾನು ಶ್ರೇಷ್ಠ ಎಂದು ಮೆರೆಯುತ್ತಿದ್ದಾನೆ .

ಇಂತಹ ಅಜ್ಞಾನದ ಸಾಧನಗಳಿಂದ ನಾವು ಬಲಿಷ್ಠ ಭಾರತವನ್ನು ಕಟ್ಟಲಾಗದೆ ಶತಶತಮಾನಗಳ ಬಹುದೊಡ್ಡ ಜನ ಮುಖ ಚರಿತ್ರೆಯನ್ನು ಒಳಗೊಂಡಿರುವ ನಮ್ಮ ದೇಶ ಪ್ರತಿದಿನ ಸೊರಗುತ್ತಿದ್ದೇವೆ. ಇದರಿಂದ ಭಾರತ- ಭಾರತೀಯ ಹಾಗೂ ಭಾರತೀಯತೆಯೂ ಸಹ ಸೊರಗುತಿದೆ.

ಇಷ್ಟಾದರೂ ನಾವ್ಯಾರೂ ಸಹ ನಿರಾಶೆ ಆಗುವುದು ಬೇಡ. ಭಾರತ ಎಂದೆಂದಿಗೂ ಆಶಾವಾದಿಗಳಿಗೆ ಜನ್ಮ ನೀಡಿದ ನೆಲೆ. ಬುದ್ಧ, ಬಸವ, ಕನಕ, ಅಂಬೇಡ್ಕರ್ ಅವರು ಈ ನೆಲದ ನಿಜ ಆಶಾವಾದಿಗಳು. ಇವರ ಆಶಾವಾದದ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಲಿಷ್ಠ ಭಾರತವನ್ನು ಗಟ್ಟಿಯಾಗಿ ಕಟ್ಟಬೇಕಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಿಜ ಧರ್ಮದ ಸಾರದಲ್ಲಿ ರೂಪಿಸಿರುವ ಭಾರತದ ಬೃಹತ್ ಲಿಖಿತ ಸಂವಿಧಾನ ಆಶಾವಾದಿಗಳ ಭಾರತವನ್ನು ಬಲಿಷ್ಠವಾಗಿ ಕಟ್ಟಲು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ. ನಾವು ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುನ್ನಡೆಯದೆ ಕೇವಲ ಅಡ್ಡ ದಾರಿಯಲ್ಲಿ ಹೋಗುತ್ತಿರುವ ಕಾರಣಕ್ಕಾಗಿ ಒಂದು ಕೋಟಿ ನಲವತ್ತು ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ಬೃಹತ್ ಭಾರತ ಅಪೌಷ್ಟಿಕತೆಯಿಂದ ಶಕ್ತಿಹೀನವಾಗಿ ನರಳುತ್ತಿದೆ.

(ನಾನು ಸ್ಫೃಶ್ಯ- ನೀನು ಅಸ್ಪೃಶ್ಯ , ನನ್ನದು ಶ್ರೇಷ್ಠ ಕುಲ- ನಿನ್ನದು ಕನಿಷ್ಠ ಕುಲ , ನಾನು ಊರಿನವ – ನೀನು ಕೇರಿನವ, ನಾನು ಮೊದಲಿಗ – ನೀನು ಪಂಚಮ, ನಾನು ಸತ್ತರೆ ಸ್ವರ್ಗಕ್ಕೆ ಹೋಗುತ್ತೇನೆ – ನೀನು ಸತ್ತರೆ ನರಕಕ್ಕೆ ಹೋಗುತ್ತೀಯಾ , ನಾನು ಸಸ್ಯ ಆಹಾರಿ ಅದಕ್ಕಾಗಿ ಶ್ರೇಷ್ಠ – ನೀನು ಮಾಂಸ ಆಹಾರಿ ಅದಕ್ಕಾಗಿ ಕನಿಷ್ಠ… ಇತ್ಯಾದಿ ಇತ್ಯಾದಿ ಇಂದು ಹೇಳಿಕೊಂಡೆ ಸೊರಗುತಿದೆ. ಈ ಅನೀತಿ ಅಧರ್ಮವನ್ನೇ ವೈಭವ ಎಂದು ಹೇಳಿಕೊಂಡ ಪ್ರಪಂಚದ ಏಕೈಕ ರಾಷ್ಟ್ರ ಎಂದರೆ ಅದು ಭಾರತ ಎಂದು ಹೇಳಲು ದುಃಖವಾಗುತ್ತದೆ ).

ಪ್ರಾಕೃತಿಕವಾಗಿ ಬಹು ಶ್ರೀಮಂತಿಕೆಯನ್ನು ಹೊಂದಿರುವ ಭಾರತ ತನ್ನ ಒಡಲಾಳದ ಮನ ಹಾಗೂ ಮನೆ ತುಂಬಾ ದವಸ ಧಾನ್ಯಗಳನ್ನು ತುಂಬಿಸಿಕೊಂಡಿದ್ದರೂ ಸಹ ಅವುಗಳನ್ನು ಸಮನಾಗಿ ಹಂಚಿಕೊಂಡು, ಸಮೃದ್ಧಿಯಾಗಿ ಬಳಸಿಕೊಂಡು ಅಡುಗೆ ಮಾಡಿ ಊಟ ಮಾಡದೆ ಕೆಲವೇ ಕೆಲವು ಜನ ವರ್ಗದಲ್ಲಿ ಶೇಖರಣೆ ಮಾಡಿಕೊಂಡು ಸಂಪತ್ತನ್ನು ವ್ಯರ್ಥ ಮಾಡುತ್ತಿದೆ. ಭಾರತದ ಬಹು ದೊಡ್ಡ ಜನ ವರ್ಗ ಹಸಿವಿನಿಂದ ನರಳಿ ಅಜ್ಞಾನದ ಅಪೌಷ್ಟಿಕತೆಯ ನೆಲೆಯಾಗುತ್ತಿದೆ. ಎಪ್ಪತೆಂಟು ವಸಂತಗಳನ್ನು ಪೂರ್ಣಗೊಳಿಸಿದ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿಯೂ ಸಹ ಅದೇ ಮಾದರಿಯ ತತ್ವ ಸಿದ್ಧಾಂತವೇ ಮೆರೆಯುತ್ತಿದೆ.

ಇದಾಗಬಾರದು. ಏಕೆಂದರೆ ಈಗ ನಮ್ಮ ದೇಶವನ್ನು ಆಳ್ವಿಕೆ ಮಾಡುವ ಸರ್ಕಾರದ ಮುಖ್ಯಸ್ಥನು ರಾಜನ ಹೊಟ್ಟೆಯಿಂದ ಹುಟ್ಟುವುದಿಲ್ಲ . ಬದಲಿಗೆ ಪ್ರಜೆಗಳ ವೋಟಿನಿಂದ ಆಯ್ಕೆಯಾಗುತ್ತಾನೆ.

ಪ್ರಜೆಗಳ ವೋಟಿನಿಂದ ಆಯ್ಕೆಯಾಗುವ ಪ್ರತಿಯೊಬ್ಬ ಜನನಾಯಕನು ಸಹ ಸರ್ವ ಜನಾಂಗದ ಹಿತಕ್ಕಾಗಿ ಕೆಲಸ ಮಾಡಬೇಕೆ ಹೊರತು – ತನ್ನ ಜಾತಿಗೆ ಅಥವಾ ತನ್ನ ಧರ್ಮಕ್ಕೆ ಮಾತ್ರ ಸೀಮಿತವಾಗಿ ಗರ್ವದಿಂದ ಆಳ್ವಿಕೆ ಮಾಡಿದರೆ ಇದು ದೇಶಕ್ಕೆ ಮಾರಕ – ಅದೇ ಸಂವಿಧಾನದ ತತ್ವ ಸಿದ್ಧಾಂತದ ಅಡಿಯಲ್ಲಿ ತೆರೆದ ಕಣ್ಣಿನಿಂದ ಭಾರತವನ್ನು ನೋಡಿ ಸಮ ಸಮಾಜ ಸ್ಥಾಪಿಸುವ ಹಿನ್ನೆಲೆಯಿಂದ ಆಳ್ವಿಕೆ ಮಾಡಿದರೆ ನಮ್ಮ ದೇಶಕ್ಕೆ ಪೂರಕ.

ಇದನ್ನು ನೋಡಿ : ದುಃಖ ಆರದ ನೆಲದಲ್ಲಿ |ಶೋಷಿತರ ಒಡಲಾಳದ ನೋವನ್ನು ತೆರೆದಿಡುವ ಪುಸ್ತಕ – ಡಾ. ಕೆ.ಪಿ ಅಶ್ವಿನಿ

Donate Janashakthi Media

Leave a Reply

Your email address will not be published. Required fields are marked *