ಬೆಂಗಳೂರು : ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ನಿನ್ನೆ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ತುರ್ತು ಚಟುವಟಿಕೆಗಳು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬಹುತೇಕ ಕಡೆ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಬಸ್ ಹಾಗೂ ವಾಹನ ಸಂಚಾರ ವಿರಳವಾಗಿದೆ.
ಹೆಚ್ಚುಜನಸಂದಣಿ ಇರುತ್ತಿದ್ದ ಮೆಜೆಸ್ಟಿಕ್, ಏರ್ಪೋರ್ಟ್ ರಸ್ತೆ, ಯಶವಂತಪುರ ಮಾರ್ಗ್ ಖಾಲಿ ಖಾಲಿ ಹೊಡೆಯುತ್ತಿದ್ದವು. ನಗರದ ಹಲವೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ತುರ್ತು ಸೇವೆ ಬಿಟ್ಟು ಉಳಿದ ವಾಹನಗಳಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಎರಡು ದಿನಗಳ ಕಾಲ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿರಲಿದೆ. ಶಾಪಿಂಗ್ ಮಾಲ್, ಸಿನಿಮಾ ಹಾಲ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ಪಾ, ಜಿಮ್ ಎಲ್ಲವೂ ಕೂಡ ಈಗಾಗ್ಲೆ ಬಂದ್ ಆಗಿವೆ.
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ವ್ಯಾಪಾರ ನಡೆಸಿದ ಮಾರಾಟಗಾರರು ಮನೆಗಳಿಗೆ ವಾಪಸ್ಸಾಗಿದ್ದಾರೆ. ಮಧ್ಯಾಹ್ನದ ನಂತರ್ ಮಾರ್ಕೇಟ್ ಪೂರ್ಣ ಖಾಲಿ ಹೊಡೆಯುತ್ತಿತ್ತು. ಬೆಳಗ್ಗೆ ಮಾರ್ಕೆಟ್ನಲ್ಲಿ ಜನ ಸಂದಣಿ ಹೆಚ್ಚಿದ್ದ ಹಿನ್ನೆಲೆ ಮಾರ್ಷಲ್ಸ್ ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದರು. ಮಾರ್ಕೆಟ್ನಲ್ಲಿ ಮಾಸ್ಕ್ ಹಾಕದಿರುವವರಿಗೆ ಮಾರ್ಷಲ್ಗಳು ಫೈನ್ ಹಾಕಿದ್ದಾರೆ.
ಮಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಡಲ ನಗರಿ ಮಂಗಳೂರು ಸಂಪೂರ್ಣ ಸ್ಥಬ್ದವಾಗಿದೆ. ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದು, ಎಲ್ಲಾಕಡೆ ಪೊಲೀಸರಿಂದ ನಾಕಾಬಂಧಿ ಹಾಕಲಾಗಿದೆ. ಖುದ್ದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಿಶಿಕುಮಾರ್ ಫೀಲ್ಡ್ ಗೆ ಇಳಿದು ಕಾನೂನು ಸುವ್ಯಸ್ಥೆಯನ್ನು ಕಾಪಾಡುತ್ತಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಜನ ಎಷ್ಟಿದ್ದಾರೆ, ಮಾಸ್ಕ್ ಹಾಕಿದ್ದಾರಾ ಇಲ್ವಾ ಅಂತಾ ತಪಾಸಣೆ ನಡೆಸುತ್ತಿದ್ದಾರೆ.
ಉಡುಪಿ: ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಜನಸಂಖ್ಯೆ ಸಂಪೂರ್ಣ ವಿರಳವಾಗಿದೆ. ಖಾಸಗಿ ಹಾಗೂ ಸರಕಾರಿ ಬಸ್ಸುಗಳು ಒಡಾಡವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು ಹೆದ್ದಾರಿ ಸೇರಿದಂತೆ ಒಳರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿಸುತ್ತಿವೆ.
ಇದನ್ನೂ ಓದಿ : ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?
ವಿಜಯಪುರ: ಕೋವಿಡ್ ಎರಡನೇ ಅಲೆಯ ವೇಗಕ್ಕೆ ಕರ್ನಾಟಕ ತತ್ತರಿಸಿದ್ದು, ಸೋಂಕು ಹರಡುವಿಕೆ ತಡೆಗೆ ಸರ್ಕಾರ ವಾರಾಂತ್ಯದ ಕರ್ಫ್ಯೂ ರೂಪದಲ್ಲಿ ಲಾಕ್ ಡೌನ್ ವಿಧಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ವಿಜಯಪುರ ಜಿಲ್ಲೆಯಲ್ಲೂ ಕರ್ಫ್ಯೂ ಕಾರಣ ಸಂಪೂರ್ಣ ಸ್ತಬ್ಧವಾಗಿದೆ.
ವಿಜಯಪುರ ನಗರ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ, ದೇವರಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ, ಚಡಚಣ, ತಿಕೋಟಾ, ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕ ಕೇಂದ್ರಗಳು, ನಾಲತವಾಡ, ಹೂವಿನಹಿಪ್ಪರಗಿ ಹೀಗೆ ಜಿಲ್ಲೆಯ ಬಹುತೇಕ ಎಲ್ಲ ನಗರ-ಪಟ್ಟಣ ಪ್ರದೇಶಗಳಲ್ಲಿ ಲಾಕಡೌನ್ ಬಿಗಿಯಾಗಿದೆ.
ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಾರಂತ್ಯದ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರದ ಕ್ರಮದ ಕಾರಣದಿಂದ ಸಕ್ಕರೆ ನಾಡಿನಲ್ಲಿ ಸಂಪೂರ್ಣ ಸ್ತಬ್ಧಗೊಂಡಿದೆ.
ಕರ್ಫ್ಯೂ ಪಾಲಿಸಲು ನಗರದ ಜನತೆ ಬೆಂಬಲ ನೀಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದಾರೆ. ವಾಹನ ಸಂಚಾರವೂ ಸಂಫೂರ್ಣ ಬಂದ್ ಆಗಿದೆ
ಚಿಕ್ಕಮಗಳೂರು: ಕೋವಿಡ್-19 ನಿಯಂತ್ರಣದ ಉದ್ದೇಶದಿಂದ ವಾರಂತ್ಯದ ಕರ್ಫ್ಯೂ ಜಾರಿ ಮಾಡಿರುವ ರಾಜ್ಯ ಸರಕಾರದ ಕ್ರಮಕ್ಕೆ ಕಾಫಿನಾಡಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ : ಪರದೆಯಲ್ಲಿ ಮುಖ ತೋರ್ಸಿದ್ರೆ ಕೊರೊನಾ ಹೋಗಲ್ಲ ಪ್ರಧಾನಿಯವರೆ, ರಾಜ್ಯಗಳಿಗೆ ಆಕ್ಸಿಜನ್ ನೀಡಿ – ಸಿದ್ಧರಾಮಯ್ಯ
ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದಾರೆ. ವಾಹನ ಸಂಚಾರವೂ ಸಂಪೂರ್ಣ ಬಂದ್ ಆಗಿದ್ದು, ಶನಿವಾರ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕೆಲವೇ ಕೆಲ ಬಸ್ ಗಳು ಸಂಚಾರ ನಡೆಸಿದ್ದು, ಉಳಿದಂತೆ ಬಹುತೇಕ ಬಸ್ ಗಳು ಡಿಪೋಗಳಿಂದ ಹೊರ ಬಂದಿಲ್ಲ. ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಜನಸಂಚಾರ ವಾಹನಗಳ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ.
ಅದೇ ರೀತಿ ಕೊಪ್ಪಳ, ಕಲಬುರ್ಗಿ, ಬೀದರ್, ಗದಗ್, ಹಾವೇರಿ, ಬೆಳಗಾವಿ, ಬಾಗಲಕೋಟೆ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಗೆ (ಲಾಕ್ಡೌನ್) ಉತ್ತಮ ಬೆಂಬಲ ವ್ಯಕ್ತವಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಮುಂಜಾಗ್ರತಕ್ರಮಗಳನ್ನು ತೆಗೆದುಕೊಂಡಿದ್ದು ನಿಯಮ ಉಲ್ಲಂಗಿಸಿದವರ ಮೇಲೆ ದೂರು ದಾಖಲಾದ ಮತ್ತು ವಾಹನಗಳನ್ನು ವಶಕ್ಕೆ ಪಡೆದ ವರದಿಗಳು ಲಭ್ಯವಾಗಿವೆ.