ಬೆಂಗಳೂರು: ನಗರಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. 2025ರ ಈ ಬಾರಿ ಬೇಸಿಗೆಯಲ್ಲಿ ಎಲ್ಲಿಯೂ ನೀರಿಗೆ ಕೊರತೆ ಉಂಟಾಗಬಾರದು ಎಂದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ನಗರಕ್ಕೆ ಸಿಮೀತವಾಗಿ ಸಮೀಕ್ಷೆ ನಡೆಸಿದೆ. ಬೆಂಗಳೂರು
ನೀರಿನ ಕೊರತೆ ಎದುರಾಗಬಹುದಾದ ಸ್ಥಳಗಳ ಅಧ್ಯಯನ ನಡೆಸಿ IISc ಮತ್ತು BWSSB ವರದಿ ನೀಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಜಂಟಿಯಾಗಿ ನಗರಾದ್ಯಂತ ಅಧ್ಯಯನ ನಡೆಸಿ ವರದಿ ನೀಡಿವೆ. ಈ ವರದಿ ಪ್ರಕಾರ, ನಗರದಲ್ಲಿ ಮುಂದಿನ ಬೇಸಿಗೆಗೆ ಬರೋಬ್ಬರಿ 80 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ತಿಳಿಸಿದೆ. ಇದಷ್ಟೇ ಅಲ್ಲದೇ ಅಂತರ್ಜಲ ಕುಸಿತ, ಕೊರತೆ ಸ್ಥಳ ಗುರುತಿಸಲಾಗಿದೆ.
ಮುಂದಿನ ಏಪ್ರಿಲ್ 2025 ರಲ್ಲಿ ಹೆಚ್ಚು ನೀರಿನ ಕೊರತೆಯನ್ನು ಎದುರಿಸಬಹುದಾದ ವಾರ್ಡ್‌ಗಳ ಪಟ್ಟಿ, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸಲಹೆಗಳು ಹಾಗೂ ಅಂತರ್ಜಲದ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುವಂತಹ ಡ್ಯಾಶ್‌ಬೋರ್ಡ್ ನೀಡುವ ಗುರಿಯನ್ನು ನೀಡಲಾಗಿತ್ತು. ಈ ಅಧ್ಯಯನದ ಎರಡನೇ ಮಧ್ಯಂತರ ವರದಿಯನ್ನು ತಂತ್ರಜ್ಞರ ತಂಡ ಸಲ್ಲಿಸಿದೆ.
ಇದನ್ನೂ ಓದಿ: ತುಮಕೂರು| ಸೈಬರ್ ವಂಚಕರಿಂದ ಗಾರೆ ಕೆಲಸದವರಿಗೆ 10 ಲಕ್ಷ ರೂ ವಂಚನೆ
ನೀರು ಕೊರತೆಯ 80 ವಾರ್ಡ್‌ಗಳು
ಬಿಬಿಎಂಫಿ ವ್ಯಾಪ್ತಿಗೆ ಸೇರಿದ ಒಟ್ಟು 110 ಹಳ್ಳಿಗಳನ್ನು ಒಳಗೊಂಡಂತೆ ನಗರದ 80 ವಾರ್ಡ್‌ಗಳನ್ನು ಹೆಚ್ಚು ಅಂತರ್ಜಲ ಅವಲಂಬಿತ ಹಾಗೂ ಅತೀ ಹೆಚ್ಚು ನೀರಿನ ಕೊರತೆಯನ್ನು ಎದುರಿಸಬಹುದಾದ ವಾರ್ಡ್‌ಗಳಾಗಿ ಗುರುತಿಸಲಾಗಿದೆ. (ವಾರ್ಡ್‌ಗಳ ಪಟ್ಟಿಯನ್ನು ನೀಡಿದೆ). ನಗರದ ಕೇಂದ್ರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಮಾರು 5 ಮೀಟರ್‌ಗಳಷ್ಟು, ಸಿಎಂಸಿ ಪ್ರದೇಶದಲ್ಲಿ 10-15 ಮೀಟರ್‌ಗಳಷ್ಟು ಹಾಗೂ 110 ಹಳ್ಳಿಗಳಲ್ಲಿ 20-25 ಮೀಟರ್‌ಗಳಷ್ಟು ಕೆಳಕ್ಕೆ ಇಳಿಯುವ ಸಾಧ್ಯತೆ ಇದೆ ಎಂಬ ಕಳವಳಕಾರಿ ಸಂಗತಿ ಗೊತ್ತಾಗಿದೆ.
ನಿತ್ಯ 800 ಎಂಎಲ್‌ಡಿ ಬೋರ್‌ವೆಲ್ ನೀರು ತೆಗೆತ
ನಗರದಲ್ಲಿ ಕುಡಿಯಲು ಕಾವೇರಿ ನೀರು ಜೊತೆಗೆ ಬೋರ್‌ವೆಲ್ ನೀರಿನ ಮೇಲೂ ಹೆಚ್ಚಿನ ಅವಲಂಬನೆ ಇದೆ. ಇದು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದು ನಿತ್ಯ ಸುಮಾರು 800 ಎಂಎಲ್‌ಡಿಯಷ್ಟು ನೀರನ್ನು ಕೊಳವೆ ಬಾವಿಗಳಿಂದ ತಗೆಯಲಾಗುತ್ತಿದೆ. ನಗರದ 110 ಹಳ್ಳೀಗಳು, ಸೌತ್ ಈಸ್ಟ್ ಹಾಗೂ ವೈಟ್‌ಫೀಲ್ಡ್ ಕಡೆಗಳಲ್ಲಿ ಕೊಳವೆ ಬಾವಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಒಂದು ನಗರಕ್ಕೆ ಸೀಮಿತವಾಗಿ ಇಂತಹ ವೈಜ್ಞಾನಿಕ ಅಧ್ಯಯನ ಕೈಗೊಳ್ಳಲಾಗಿದೆ. ತಂತ್ರಜ್ಞರ ತಂಡ ನಡೆಸಿರುವ ಈ ಅಧ್ಯಯನ ವರದಿಯಲ್ಲಿ ಹಲವಾರು ಆಘಾತಕಾರಿ ಅಂಶಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ವೈಟ್‌ಫಿಲ್ಡ್ ಹಾಗೂ ನಗರದ ಹೊರ ಭಾಗಗಳಲ್ಲಿ ನೀರಿನ ಅತೀವ ಕೊರತೆ ಮತ್ತು ಬೇಡಿಕೆ ಸೃಷ್ಟಿ ಸಾಧ್ಯತೆ ಇದೆ. ನಗರಕ್ಕೆ ನೀರು ಪೂರೈಕೆಯ ಒತ್ತಡ ಎದುರಾಗಲಿದೆ. ಹೆಚ್ಚು ನೀರು ಅಗತ್ಯವಿರುವ 110 ಹಳ್ಳಿಗಳ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯುವಂತೆ ಮನವೊಲಿಕೆ ಕಾರ್ಯ ನಡೆಯುತ್ತಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ ಕಾವೇರಿ 5 ನೇ ಹಂತದ ಯೋಜನೆ ಅನುಷ್ಠಾನಗೊಳಿಸಿದೆ. ಬೆಂಗಳೂರಿಗೆ ಭವಿಷ್ಯದಲ್ಲಿ ಬೇಕಾದ ಕುಡಿಯುವ ನೀರಿನ ಪೂರೈಕೆಗೆ ಸಿದ್ಧವಿದೆ. ಸದ್ಯ ಬೇಸಿಗೆ ವೇಳೆ ಬೇಕಾಗು ನೀರು ಪಡೆಯಲು ಜನರು, ಅಪಾರ್ಟ್ಮೆಂಟ್, ಬಡಾವಣೆ ಜನರು ಕಾವೇರಿ ನೀರನ್ನು ಅವಲಂಬಿಸಬೇಕು. ಅಂತರ್ಜಲ್, ಬೋರ್‌ವೆಲ್ ನೀರಿನ ಅವಲಂಬನೆ ಕಡಿಮೆ ಮಾಡಬೇಕು ಎಂದು BWSSB ಜನರಲ್ಲಿ ಮನವಿ ಮಾಡಿಕೊಂಡಿದೆ.
ನೀರು ಕೊರತೆ 80 ವಾರ್ಡ್‌ಗಳು ಯಾವುವು?
ಜಕ್ಕೂರು, ತಣಿಸಂದ್ರ, ಕೋಡಿಗೆಹಳ್ಳಿ, ದೊಡ್ಡ ಬೊಮ್ಮಸಂದ್ರ, ಕುವೆಂಪು ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ, ಸಂಜಯನಗರ, ಹೆಬ್ಬಾಳ, ನಾಗವಾರ, ಹೊರಮಾವು, ರಾಮಮೂರ್ತಿ ನಗರ, ಕಮ್ಮನಹಳ್ಳಿ, ಕಾಡಗೊಂಡನಹಳ್ಳಿ, ಕುಶಾಲ್‌ನಗರ, ಭೈರಸಂದ್ರ, ಮನೋರಾಯನಪಾಳ್ಯ, ಯಶವಂತಪುರ, ಚೊಕ್ಕಸಂದ್ರ, ದೊಡ್ಡ ಬಿದರಕಲ್ಲು, ನಂದಿನಿ ಬಡಾವಣೆ ಮುನೇಶ್ವರ ನಗರ, ಲಿಂಗರಾಜಪುರ, ವಿಜನಪುರ, ಹೂಡಿ, ಎ.ನಾರಾಯಣಪುರ, ಸಿ.ವಿ.ರಾಮನ್ ನಗರ, ಮಹಾಲಕ್ಷ್ಮೀಪುರ, ಲಗ್ಗೆರೆ, ರಾಜಗೋಪಾಲ್ ನಗರ.
ಹೆಗ್ಗನಹಳ್ಳಿ, ಹೆರೋಹಳ್ಳಿ, ಶಕ್ತಿ ಗಣಪತಿ ನಗರ, ಶಂಕರಮಠ, ಸರ್ವಜ್ಞ ನಗರ, ವಿಜಯನಗರ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ಹಗದೂರು, ಮಾರತ್ತಹಳ್ಳಿ, ಶಿವಾಜಿನಗರ, ಗಾಂಧಿನಗರ, ಸುಭಾಶ್ ನಗರ, ದಯಾನಂದ ನಗರ, ವೃಷಭಾವತಿ ನಗರ, ಕಾವೇರಿ ಪುರ ಸೇರಿ ಒಟ್ಟು 80 ಬಡಾವಣೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ನೋಡಿ: ಗೋಷ್ಠಿ -1 | ಗಣರಾಜ್ಯ ಭಾರತ @75 – ಅಸ್ಥಿರಗೊಳ್ಳುತ್ತಿರುವ ಪ್ರಜಾಪ್ರಭುತ್ವ – ಜನರ ಕರ್ತವ್ಯ | ಡಾ. ಚಂದ್ರ ಪೂಜಾರಿ