ನವೀನ್ ಸೂರಿಂಜೆ
ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಎದುರು ಮುಸ್ಲಿಂ ವ್ಯಾಪಾರಿ ನಬೀಸಾಬ್ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಸ್ತೆಗೆಸೆದು ಒಡೆದು ಹಾಕುತ್ತಿದ್ದರೆ ಆಂಜನೇಯನ ಭಕ್ತಾದಿಗಳು ಅದನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಗುಡಿಯಲ್ಲಿ ದೇವರಿದ್ದಾನೋ ಇಲ್ಲವೊ ಎನ್ನುವ ಅನುಮಾನದ ಮಧ್ಯೆ ಹಿಂದೂ ದೇವರ ಭಕ್ತರಲ್ಲಿ ಮನುಷ್ಯರಿದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುವಂತಾಗಿದೆ.
ಹಿಂದೂ ಧರ್ಮದ ಸಮಸ್ಯೆಯೇ ಇದು. ದೇವಸ್ಥಾನಕ್ಕೆ ಹೋಗುವ ಮೊದಲು ಅಥವಾ ದೇವರನ್ನು ಪ್ರಾರ್ಥಿಸುವ ಮೊದಲು ಆ ದೇವರ ಬಗ್ಗೆ ತಿಳಿದುಕೊಳ್ಳಲು ಹೋಗುವುದಿಲ್ಲ. ಹಾಗೇನಾದರೂ ದೇವಸ್ಥಾನಕ್ಕೆ ಹೋಗುವ ಲಕ್ಷಾಂತರ ಭಕ್ತರ ಮಧ್ಯೆ ನೂರು ಮಂದಿಯಾದರೂ ದೇವರ ಬಗ್ಗೆ, ದೇವಸ್ಥಾನದ ಇತಿಹಾಸದ ಬಗ್ಗೆ ತಿಳಿದಿದ್ದರೆ ದೇವಸ್ಥಾನದ ಎದುರು ಇಂತಹ ಅಪಚಾರ ನಡೆಯುತ್ತಿರಲಿಲ್ಲ.
ಶ್ರೀರಾಮ ಸೇನೆಯವರು ನಬಿಸಾಬ್ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಒಡೆದು ಹಾಳು ಮಾಡಿದ ಪ್ರಕರಣಕ್ಕೆ ಸಾಕ್ಷಿಯಾದ ನುಗ್ಗೀಕೇರಿ ಆಂಜನೇಯ ದೇವಸ್ಥಾನವನ್ನು ಪ್ರತಿಷ್ಠಾಪಿಸಿದವರು ವ್ಯಾಸತೀರ್ಥರು. ಮಧ್ವಮತದ ವ್ಯಾಸತೀರ್ಥರನ್ನು “ಮಾಧ್ವಮತದ ಕಲ್ಲಂಗಡಿ ಹಣ್ಣು” ಎಂದು ಕರೆಯುತ್ತಾರೆ. ವ್ಯಾಸತೀರ್ಥರ ವಿಧ್ವತ್ತು ಮತ್ತು ಒಳಗೊಳ್ಳುವಿಕೆಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ವ್ಯಾಸತೀರ್ಥರು ಈ ಬಿರುದಾಂಕಿತರಾಗಿದ್ದರು. ಅಪ್ಪಯ್ಯ ದೀಕ್ಷಿತರಂತೂ ನುಗ್ಗಿಕೇರಿ ಆಂಜನೇಯ ದೇವಸ್ಥಾನವನ್ನು ಮರುಪ್ರತಿಷ್ಠಾಪಿಸಿದ ವ್ಯಾಸತೀರ್ಥರನ್ನು “ಕಲ್ಲಂಗಡಿ ಹಣ್ಣು” ಎಂದೇ ಕರೆಯುತ್ತಿದ್ದರು.
ಮಾಧ್ವಾಚಾರ್ಯರ ದ್ವೈತ ಸಿದ್ದಾಂತವು ಕರ್ಮಠ ಮಡಿಯಿಂದಾಗಿ ಕರಾವಳಿಯ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ವ್ಯಾಪಿಸುತ್ತಿರಲಿಲ್ಲ. ಆಗ ಅದೇ ಮಧ್ವಮತದ ವ್ಯಾಸತೀರ್ಥರು ಧಾರವಾಡ ಭಾಗದಲ್ಲಿ ಮತಪ್ರಚಾರವನ್ನು ಕೈಗೊಳ್ಳುತ್ತಾರೆ. ಕೇವಲ ಬ್ರಾಹ್ಮಣರು ಮಾತ್ರ ದೇವಸ್ಥಾನದೊಳಗೆ ಹೋಗಬಹುದು ಎಂಬ ನಿಲುವನ್ನು ಆ ಕಾಲದಲ್ಲಿ ಮಧ್ವಮತ ಹೊಂದಿದ್ದರೂ ವ್ಯಾಸತೀರ್ಥರು ಎಲ್ಲಾ ಸಮುದಾಯಗಳು ದೇವಸ್ಥಾನದೊಳಗೆ ಹೋಗಬಹುದು ಎಂಬ ನಿಲುವನ್ನು ತಳೆದು ನುಗ್ಗಿಕೇರಿಯಲ್ಲಿದ್ದ ಆಂಜನೇಯ ಗುಡಿಯಲ್ಲಿ ಬಲಭೀಮರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ.
ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ವ್ಯಾಸತೀರ್ಥರ ಕಾಲದಿಂದಲೂ ಜಾತಿ, ಮತ, ಧರ್ಮದ ಭೇದವಿಲ್ಲ. ಮಧ್ವಾಚಾರ್ಯರು ಮತ್ತು ಅವರ ನಂತರ ಬಂದ ಮಾಧ್ವಸ್ವಾಮೀಜಿಗಳು ಪೂಜಾದಿಗಳಲ್ಲಿ ಸಂಸ್ಕೃತಕ್ಕೆ ಒತ್ತುಕೊಟ್ಟರೆ ವ್ಯಾಸತೀರ್ಥರು ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಕನ್ನಡ ಮತ್ತು ಉರ್ದುಮಿಶ್ರಿತ ಹಿಂದಿಗೆ ಒತ್ತುಕೊಟ್ಟರು. ದೇವಸ್ಥಾನದ ಸುತ್ತಮುತ್ತಲಿನ ಗ್ರಾಮದ ಹಿಂದೂ ಮುಸ್ಲೀಮರಿಗೆ ಅರ್ಥವಾಗುವ ರೀತಿಯಲ್ಲಿ ಈಗಲೂ ಕನ್ನಡ ಮತ್ತು ಉರ್ದುಮಿಶ್ರಿತ ಹಿಂದಿಯಲ್ಲಿ ಹನುಮಾನ್ ಚಾಲೀಸ್ ಈಗಲೂ ನಡೆಯುತ್ತದೆ.
ಇಂತಹ ಹಿಂದೂ ಧರ್ಮದ “ಕಲ್ಲಂಗಡಿ”ಯನ್ನೇ ಶ್ರೀರಾಮ ಸೇನೆಯವರು ಒಡೆದುಹಾಕಿದ್ದಾರೆ. ಇದು ಮುಸ್ಲೀಮರ ಮೇಲೆ ನಡೆದ ದಾಳಿ ಎಂದು ಶ್ರೀರಾಮಸೇನೆ ಸಂಭ್ರಮಿಸಬಹುದು. ಆದರೆ ಇದು ಹಿಂದೂಧರ್ಮದ ಮೇಲೆ ನಡೆದ ದಾಳಿ. ನಬೀಸಾಬ್ ಮೇಲೆ ನಡೆದ ದಾಳಿಯನ್ನು ಹಿಂದೂಗಳ್ಯಾರೂ ಒಪ್ಪಲು ಸಾಧ್ಯವಿಲ್ಲ. ತಾನು ಪ್ರತಿಷ್ಠಾಪಿಸಿದ ದೇವಸ್ಥಾನದ ಎದುರು ಚೂರುಚೂರಾಗಿ ಬಿದ್ದಿರೋ ಕಲ್ಲಂಗಡಿ ಹಣ್ಣುಗಳನ್ನು ಕಂಡು ಮಧ್ವಮತದ ಕಲ್ಲಂಗಡಿಯಾಗಿರುವ ವ್ಯಾಸತೀರ್ಥರ ಆತ್ಮ(?) ಏನಂದುಕೊಂಡಿರಬಹುದು ?