ನವದೆಹಲಿ: ಬಜರಂಗ್ ಪುನಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಒಂದು ದಿನದಲ್ಲೆ, ಮತ್ತೊಬ್ಬ ಕುಸ್ತಿಪಟು, 2005 ರ ಬೇಸಿಗೆ ಡೆಫ್ಲಿಂಪಿಕ್ಸ್ ಚಿನ್ನದ ಪದಕ ವಿಜೇತ ವೀರೇಂದ್ರ ಸಿಂಗ್ ಯಾದವ್ ಅವರು ತಮ್ಮ ಪದ್ಮಶ್ರಿ ಪ್ರಶಸ್ತಿಯನ್ನು ವಾಪಾಸ್ ಮಾಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷರಾಗಿ ಆಯ್ಕೆಯಾಗುವುದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಪುನಿಯಾ ಅವರು ಪ್ರಶಸ್ತಿಯನ್ನು ಪ್ರಧಾನಿಯ ದೆಹಲಿ ನಿವಾಸದ ಫುಟ್‌ಪಾತಿನಲ್ಲಿ ಇಟ್ಟು ವಾಪಾಸಾಗಿದ್ದರು. ವೀರೇಂದ್ರ ಸಿಂಗ್ ಕೂಡಾ ಪುನಿಯಾ ಅವರ ದಾರಿಯನ್ನೆ ಆಯ್ಕೆ ಮಾಡಿಕೊಂಡಿದ್ದಾರೆ.
‘ಗೂಂಗಾ ಪೆಹಲ್ವಾನ್ ಎಂದೂ ಕರೆಯಲ್ಪಡುವ ವೀರೇಂದ್ರ ಸಿಂಗ್ ಯಾದವ್ ಅವರು 2021 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಅದಕ್ಕೂ ಮೊದಲು, ಅವರು 2015 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದರು. ಶುಕ್ರವಾರ ಪ್ರತಿಭಟನೆಯ ದ್ಯೋತಕವಾಗಿ ಪ್ರಧಾನಿ ನಿವಾಸದ ಬಳಿಯ ಫುಟ್‌ಪಾತ್‌ನಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಇಟ್ಟು ಪುನಿಯಾ ಸ್ಥಳದಿಂದ ತೆರಳಿದ್ದರು. “ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ಕೊಂಡೊಯ್ಯುವವರಿಗೆ ನಾನು ನೀಡುತ್ತೇನೆ” ಎಂದು ಪುನಿಯಾ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಡೆಫ್ಲಿಂಪಿಯಾಡ್ ಎಂದೂ ಕರೆಯಲ್ಪಡುವ ಡೆಫ್ಲಿಂಪಿಕ್ಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಅನುಮೋದಿಸಲ್ಪಟ್ಟ ಬಹು ಕ್ರೀಡಾ ಕಾರ್ಯಕ್ರಮಗಳ ಆವರ್ತಕ ಸರಣಿಯಾಗಿದೆ, ಇದರಲ್ಲಿ ಕಿವುಡ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಾರೆ.
ಟ್ವಿಟರ್‌ನಲ್ಲಿ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ ವೀರೇಂದ್ರ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಮೌನವನ್ನು ಕೂಡಾ ಪ್ರಶ್ನಿಸಿದ್ದಾರೆ. “ನಾನು ನನ್ನ ಸಹೋದರಿ ಮತ್ತು ದೇಶದ ಪುತ್ರಿಗಾಗಿ ಪ್ರಧಾನಿ ಮೋದಿ ಅವರಿಗೆ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ. ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿಮಲಿಕ್ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ವೀರೇಂದ್ರ ಸಿಂಗ್ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.
“ಆದರೆ ದೇಶದ ಅಗ್ರ ಆಟಗಾರರು ತಮ್ಮ ನಿರ್ಧಾರವನ್ನು ತಿಳಿಸುವಂತೆ ನಾನು ವಿನಂತಿಸುತ್ತೇನೆ” ಎಂದು ಅವರು ಜಾವೆಲಿನ್ ಪಟು ನೀರಜ್ ಚೋಪ್ರಾ ಮತ್ತು ಸಚಿನ್ ತೆಂಡುಲ್ಕರ್ ಅವರಿಗೆ ಟ್ವಿಟರ್ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ: ಡಿ ಕೆ ಶಿವಕುಮಾರ್
ಗುರುವಾರದಂದು 2016 ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು WFI ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾದ ನಂತರ ಕುಸ್ತಿಯನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಪತ್ರಿಕಾಗೋಷ್ಠಿಯಿಂದ ಕಣ್ಣೀರು ಹಾಕುತ್ತಲೆ ಮಾತನಾಡಿದ ಸಾಕ್ಷಿ ಅವರು, “ನಾನು ಬದ್ದತೆಯಿಂದಲೆ ಹೋರಾಟ ಮಾಡಿದ್ದೇನೆ, ಆದರೆ ಸೋತಿದ್ದೇನೆ. ಸಂಜಯ್ ಸಿಂಗ್ ಅವರಂತಹ ಜನರು ಅಧ್ಯಕ್ಷರು ಇರುವುದರಿಂದ ಇನ್ನು ಮುಂದೆ ನಾನು ಕುಸ್ತಿಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ತನ್ನ ಬೂಟುಗಳನ್ನು ತೆಗೆದು ವೇದಿಕೆಯ ಮೇಲೆ ಇಟ್ಟು ಅಲ್ಲಿಂದ ಅಳುತ್ತಲೆ ತೆರಳಿದ್ದರು.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಭಜರಂಗ್ ಪುನಿಯಾ ಅವರ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವು ವೈಯಕ್ತಿಕವಾಗಿದೆ, ಆದರೆ ಈ ಕ್ರಮವನ್ನು ಮರುಚಿಂತನೆಗೆ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಕ್ರೀಡಾ ಸಚಿವಾಲಯ ಶುಕ್ರವಾರ ಹೇಳಿದೆ.
“ಪದ್ಮಶ್ರೀಯನ್ನು ಹಿಂದಿರುಗಿಸುವುದು ಬಜರಂಗ್ ಪುನಿಯಾ ಅವರ ವೈಯಕ್ತಿಕ ನಿರ್ಧಾರವಾಗಿದೆ. ಡಬ್ಲ್ಯುಎಫ್‌ಐ ಚುನಾವಣೆಗಳು ನ್ಯಾಯಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆದವು. ಪದ್ಮಶ್ರೀಯನ್ನು ಹಿಂದಿರುಗಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ನಾವು ಬಜರಂಗ್ ಅವರನ್ನು ಮನವೊಲಿಸಲು ಇನ್ನೂ ಪ್ರಯತ್ನಿಸುತ್ತೇವೆ” ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ