ಸತ್ಯ ಹೇಳಿದ ವೀರ್‌ದಾಸ್‌ ರಾಷ್ಟ್ರದ್ರೋಹಿಯಾದ! ಸ್ವಾತಂತ್ರ್ಯ ಹೋರಾಟವನ್ನು ಅವಮಾನಿಸಿದ ಕಂಗನಾ ದೇಶಭಕ್ತೆಯಾದಳು!!

ಗುರುರಾಜ ದೇಸಾಯಿ

ಸತ್ಯ ನುಡಿಯುವವರಿಗೆ ಭಾರತದಲ್ಲಿ ಕಾಲವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.  ನಟ ಹಾಗೂ ಸ್ಟಾಂಡ್​ಅಪ್​ ಕಾಮೆಡಿಯನ್ ವೀರ್​ ದಾಸ್‌ರವರು​ ಅಮೆರಿಕದಲ್ಲಿ ಮಾಡಿದ ಕಾಮೆಡಿ ‘ಪರ್ಫಾರ್ಮೆನ್ಸ್​’ ಒಂದರಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಬಗ್ಗೆ ಆಡಿರುವ ಮಾತುಗಳನ್ನು ವಿವಾದಾತ್ಮಕ ಮಾತುಗಳು ಎಂದು ಪ್ರಚಾರ ಮಾಡಲಾಗುತ್ತಿದೆ.  ಹಲವು ರಾಷ್ಟ್ರಭಕ್ತರು ಕೆಂಗಣ್ಣಿನಿಂದ ವೀರ್‌ ದಾಸ್‌ ರವರ ಮೇಲೆ ಕತ್ತಿ ಮಸಿಯುತ್ತಿದ್ದಾರೆ.

ಹಲವು ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವೀರ್​ ದಾಸ್​ರ ಈ ವ್ಯಂಗ್ಯಮಯ ಮಾನೋಲಾಗ್​​ ದೇಶಕ್ಕೆ ಅವಮಾನ ಮಾಡುವಂಥದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಚಿತ್ರನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್​ ಪಂಡಿತ್​, ‘ತಮ್ಮದೇ ದೇಶವನ್ನು ಪರದೇಶದಲ್ಲಿ ಜರಿಯುವುದು ಉಗ್ರವಾದ. ವೀರ್​ ದಾಸ್​​ ಮೇಲೆ ಯುಎಪಿಎ ಅಡಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕು’ ಎಂದಿದ್ದಾರೆ. ವೀರ್​ ದಾಸ್​ ವಿರುದ್ಧ ಅದಾಗಲೇ ಎರಡು ಪೊಲೀಸ್​ ಕಂಪ್ಲೇಂಟುಗಳನ್ನು ದಾಖಲಿಸಲಾಗಿದೆ.

ವೀರ್‌ದಾಸ್‌ ಹೇಳಿದ್ದೇನು?: ವಾಷಿಂಗ್ಟನ್ ಡಿಸಿ ಯಲ್ಲಿನ ಜಾನ್ ಎಫ್ ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನೀಡಿರುವ ತಮ್ಮ ಪ್ರದರ್ಶನದಲ್ಲಿ  ಮಾತನಾಡಿರುವ ವಿಡಿಯೋದಲ್ಲಿ ಇರುವುದಾದರೂ ಏನು ? ಎನ್ನುವವುದನ್ನು ತಿಳಿದಾಗ ಮಾತ್ರ ಅದರ ನಿಜಾಂಶ ಅರ್ಥವಾಗುತ್ತದೆ.  ಅದರ ಸಾರಾಂಶದ ರೂಪ ಈ ಮುಂದಿನಂತಿದೆ.

ನಾನು ಭಾರತದಿಂದ ಬಂದಿದ್ದೇನೆ ಅಲ್ಲಿ AQI 9000 ಆದರೂ ನಾವು ಇನ್ನೂ ನಮ್ಮ ಛಾವಣಿಯ ಮೇಲೆ ಮಲಗುತ್ತೇವೆ ಮತ್ತು ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡುತ್ತೇವೆ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನಾವು ಹಗಲಿನಲ್ಲಿ ಮಹಿಳೆಯರನ್ನು ಪೂಜಿಸುತ್ತೇವೆ ಮತ್ತು ರಾತ್ರಿಯಲ್ಲಿ ಸಾಮೂಹಿಕ ಅತ್ಯಾಚಾರ ಮಾಡುತ್ತೇವೆ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನೀವು ನಮ್ಮ ಮನೆಯ ಗೋಡೆಯಾಚೆಯಿಂದಲೂ ನಮ್ಮ ನಗುವನ್ನು ಕೇಳಬಹುದು. ಕಾಮಿಡಿ ಕ್ಲಬ್‌ನ ಒಳಗಿನಿಂದ ನಗು ಬಂದಾಗ ಗೋಡೆಗಳನ್ನು ಒಡೆಯುವ ಭಾರತದಿಂದ ಕೂಡ ನಾನು ಬಂದಿದ್ದೇನೆ.
ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ಹಳೆಯ ನಾಯಕರು ತಮ್ಮ ಸತ್ತ ತಂದೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ಮತ್ತು ಹೊಸ ನಾಯಕರು ತಮ್ಮ ಜೀವಂತ ತಾಯಿಯ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸುವುದಿಲ್ಲ.

ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ಅತೀ ದೊಡ್ಡ ಜನಸಂಖ್ಯೆಯು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ, ಆದರೆ ಇನ್ನೂ 75 ವರ್ಷ ವಯಸ್ಸಿನ ನಾಯಕರ 150 ವರ್ಷಗಳ ಹಳೆಯ ವಿಚಾರಗಳನ್ನು ಕೇಳುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ಜನರು ಕ್ಲಬ್‌ನ ಹೊರಗೆ ಬೀದಿಗಳಲ್ಲಿ ಮಲಗುತ್ತಾರೆ, ಆದರೆ ವರ್ಷಕ್ಕೆ 20 ಬಾರಿ ಬೀದಿಗಳೇ ಕ್ಲಬ್ ಆಗಿರುತ್ತವೆ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನಾವು ಸಸ್ಯಾಹಾರಿಗಳಾಗಿದ್ದಕ್ಕೆ ಹೆಮ್ಮೆಪಡುತ್ತೇವೆ, ಆದರೆ ಆ ತರಕಾರಿಗಳನ್ನು ಬೆಳೆಯುವ ಅದೇ ರೈತರನ್ನೇ ಪುಡಿಮಾಡುತ್ತೇವೆ. ನಾನು ಎಂದಿಗೂ ಮೌನವಾಗಿರದ ಭಾರತದಿಂದ ಬಂದಿದ್ದೇನೆ ಮತ್ತು ನಾನು ಎಂದಿಗೂ ಮಾತನಾಡದೆ ಮೌನವಾಗಿರುವ ಭಾರತದಿಂದ ಬಂದಿದ್ದೇನೆ.
ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ಮಕ್ಕಳು ಮಾಸ್ಕ ಧರಿಸಿ ಒಬ್ಬರು ಮತ್ತೊಬ್ಬರ ಕೈ ಹಿಡಿಯುತ್ತಾರೆ, ಆದರೆ ನಾಯಕರು ಮಾಸ್ಕನ್ನೇ ಧರಿಸದೆ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ.

ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನಾವು ಬಾಲಿವುಡ್‌ನಿಂದಾಗಿ ಟ್ವಿಟರ್‌ನಲ್ಲಿ ವಿಭಜನೆಗೊಂಡಿರುತ್ತೇವೆ, ಆದರೆ ಚಿತ್ರಮಂದಿರಗಳ ಕತ್ತಲೆಯ ಅದೇ ಬಾಲಿವುಡ್‌ನಿಂದಾಗಿ ಒಟ್ಟಿಗೆ ಇದ್ದೇವೆ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನಾವು ‘ಗ್ರೀನ್’ ಆಡುವಾಗ, ನಾವು ‘ಬ್ಲೀಡ್ ಬ್ಲೂ’ ಎಂಬ ಘೋಷಣೆಯನ್ನು ನೀಡುತ್ತೇವೆ, ಆದರೆ ನಾವು ಗ್ರೀನ್‌ಗೆ ಸೋತಾಗ, ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತೇವೆ. ನಾನು ಭಾರತದಿಂದ ಬಂದಿದ್ದೇನೆ, ಅಲ್ಲಿ ನಮ್ಮ ಸಂಗೀತವು ‘ಬಹಳ ಹಾರ್ಡ ಆಗಿರುತ್ತದೆ’ ಆದರೆ ನಮ್ಮ ಭಾವನೆಗಳು ‘ತುಂಬಾ ಮೃದು’ ವಾಗಿರುತ್ತವೆ. ನಾನು ಆ ಭಾರತದಿಂದ ಬಂದಿದ್ದೇನೆ, ಯಾರು ಇದನ್ನು ನೋಡುತ್ತಾರೆ ಮತ್ತು ಹೇಳುತ್ತಾರೆ ‘ಇದು ಕಾಮಿಡಿ ಅಲ್ಲ.. ತಮಾಷೆ ಎಲ್ಲಿದೆ?’ ಮತ್ತು ನಾನು ಆ ಭಾರತದಿಂದಲೂ ಬಂದಿದ್ದೇನೆ, ಯಾರು ಇದನ್ನು ನೋಡುತ್ತಾರೆ ಮತ್ತು ಇದು ತುಂಬಾ ದೊಡ್ಡ ಜೋಕ್ ಎಂದು ತಿಳಿಯುತ್ತಾರೆ, ಕೇವಲ ತಮಾಷೆಯಲ್ಲ.
ಇದು ಹಾಸ್ಯನಟ ವೀರ್ ದಾಸ್ ಅವರು ವಾಷಿಂಗ್ಟನ್ DC ಯಲ್ಲಿನ ಜಾನ್ ಎಫ್ ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ತಮ್ಮ ಪ್ರದರ್ಶನದ ವೀಡಿಯೊದಲ್ಲಿರುವ ಮಾತುಗಳ ಸಾರಾಂಶ.

ಇಲ್ಲಿ ವಿರೋಧಿಸುವ ಯಾವ ಮಾತುಗಳೂ ಇಲ್ಲ. ಆದರೆ ಇದನ್ನು ವಿವಾದ ಮಾಡಬೇಕು ಎಂಬ ಕಾರಣಕ್ಕೆ ವಿರೋಧಿಸಲಾಗುತ್ತಿದೆ.  ಎರಡು ಭಾರತ ಇದೆ ಎಂಬುದು ಇವತ್ತು ನಿನ್ನೆಯ ಚರ್ಚೆ ಅಲ್ಲ. ಬಹು ದಿನಗಳಿಂದಲೂ ಅದನ್ನು ಚರ್ಚಿಸಲಾಗುತ್ತಿದೆ. ಒಂದು ಶ್ರೀಮಂತರ ಭಾರತ ಮತ್ತೊಂದು ಬಡವರ ಭಾರತ, ಅಮೇರಿಕಾದಲ್ಲಿ ವೀರ್‌ದಾಸ್‌ ಹೇಳಿದ್ದು ಕೂಡಾ ಇದನ್ನೆ ಸತ್ಯ ಮಾತನಾಡಿದ್ದಕ್ಕೆ ಅವರು ಈಗ ರಾಷ್ಟ್ರದ್ರೋಹಿ, ಉಗ್ರಗಾಮಿಯಾಗಿದ್ದಾರೆ.

ಅದರೆ ಪದ್ಮಶ್ರೀ ಪ್ರಶಸ್ತಿ ಪಡೆಯುವಾಗ ಕಂಗನಾ ರಾಣಾವತ್,  1947ರಲ್ಲಿ ಪಡೆದ ಸ್ವಾತಂತ್ರ್ಯ ಭಿಕ್ಷೆಯ ಸ್ವಾತಂತ್ರ್ಯವಾಗಿತ್ತು ಎಂದು ಸ್ವಾತಂತ್ರ್ಯ ಹೋರಾಟವನ್ನು ಅವಮಾನಿಸಿದಾಗ ಇಲ್ಲಿ ರಾಷ್ಟ್ರವಿರೋಧಿ ಮಾತುಗಳಾಗಲಿ, ಉಗ್ರಗಾಮಿ ಮಾತುಗಳಾಗಲಿ ಕಾಣಲೇ ಇಲ್ಲ.  ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಎದೆ ಒಡ್ಡಿ ಪ್ರಾಣಕಳೆದುಕೊಂಡ ಹುತಾತ್ಮರನ್ನು, ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ಹೋರಾಟಗಾರನ್ನು ಅವಮಾನಿಸಿದ ಕಂಗನಾ ರಾಣಾವತ್‌ರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಏಕೆ ಬಂಧಿಸ ಬಾರದು..? ಈ ಕಾನೂನಿನ ಬಳಕೆ ಕೇವಲ ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲು ಮಾತ್ರವೇ..? ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸ ಬೇಕಿದೆ.

Donate Janashakthi Media

Leave a Reply

Your email address will not be published. Required fields are marked *