ರಾಣೆಬೇನ್ನೂರ: ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಘಟಕ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಯುವಜನರ ಸ್ಪೂರ್ತಿಗಳಾದ, ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆಯನ್ನು ಮಾರುತಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.
ಇದನ್ನು ಓದಿ: ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬ್ರಿಟೀಷರ ವಿರುದ್ದದ ಕೆಚ್ಚೆದೆ ಹೋರಾಟ ಇಂದಿಗೂ ಸ್ಪೂರ್ತಿದಾಯಕ
ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ಮಾತನಾಡಿ, ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಭಗತ್ ಸಿಂಗ್ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ ಓದಿನ ಪ್ರೀತಿ ಬದುಕಿನ ಕೊನೆಕ್ಷಣದವರೆಗೂ ಇತ್ತು. ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ‘ನಾನು ಹೇಳಿದ್ದ The Revolutionary lenin ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ್ದರು. ಪುಸ್ತಕ ಕೈಗೆ ಬರುತ್ತಿದ್ದಂತೆ ಓದಲು ಕುಳಿತೇ ಬಿಟ್ಟರು, ನಾಳೆ ನೇಣಿಗೆ ಕೊರಳುಡ್ಡುತ್ತಿರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ ದೇಶವಾಸಿಗಳಿಗೆ ನಿಮ್ಮ ಸಂದೇಶವೇನು? ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಶಾಹಿಗೆ ಧಿಕ್ಕಾರ, ಇಂಕ್ವಿಲಾಬ್ ಜಿಂದಾಬಾದ್- ಈ ಎರಡು ಘೋಷಣೆಗಳನ್ನು ತಿಳಿಸಿʼ ಎಂಬ ಮಹತ್ವ ಸಂದೇಶವನ್ನು ನೀಡಿರುವುದು ಭಗತ್ ಸಿಂಗ್ ಅವರು ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ಮಾರ್ಚ್-23. ಮಹಾನ್ ಅಪ್ಪಟ ದೇಶಪ್ರೇಮಿಗಳ ತ್ಯಾಗ ಬಲಿದಾನದ ಸ್ಮರಣೆಗೆ ಈ ದಿನವನ್ನು ಆಚರಿಸಲಾಗುತ್ತದೆ.
ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23, 1931ರ ಸಂಜೆ 7 ಗಂಟೆ 33 ನಿಮಿಷಕ್ಕೆ ಗಲ್ಲಿಗೇರಿಸಲಾಯಿತು. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಅವರನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅವರ ಅಂತ್ಯಕ್ರಿಯೆ ನೇರವೇರಿಸಿದರು.
ಇದನ್ನು ಓದಿ: ಭಗತ್‌ಸಿಂಗ್ ತನ್ನ ಸಣ್ಣ ವಯಸ್ಸಿಗೆ ಅಷ್ಟೊಂದು ಪ್ರಕಾರ ಜ್ಞಾನ ಪಡೆದಿರುವುದೇ ಸೋಜಿಗ
ಇಂದು ವಿದ್ಯಾರ್ಥಿ-ಯುವಜನರು ಸ್ವಾತಂತ್ರ್ಯ ಚಳುವಳಿಯ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಆ ಮೂಲಕ ಸಮಾಜವಾದಿ ಸಮಸಮಾಜ ಕಟ್ಟುವಲ್ಲಿ ತಮ್ಮನ್ನು ತಾವು ತ್ಯಾಗಕ್ಕೆ ಸಿದ್ದರಾಗಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಹಮದ್ ರಫೀಕ್, ಪ್ರದೀಪ ಹುಚ್ಚಳವರ, ಮಾಲತೇಶ ಎಚ್ ಆರ್, ಗಣೇಶ್ ಕೆ ಆರ್, ಬಸವರಾಜ ಸಿ ಕೆ, ನಾಗರಾಜ ನಾಯ್ಕರ್, ಅಮಿತ್ ಬಾರ್ಕಿ, ಮಾಲತೇಶ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಭಗತ್ ಸಿಂಗ್ ಭಾವಚಿತ್ರದ ಮುಂಭಾಗ ಜ್ಯೋತಿ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ಎಸ್‌ಎಫ್‌ಐ ಕಾರ್ಯಕರ್ತರು ಗೌರವಸಲ್ಲಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ