ವಾರಾಂತ್ಯ ಕರ್ಫ್ಯೂ-ಕೊರೊನಾ ನಿರ್ಬಂಧಗಳನ್ನು ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಮಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ವಿಧಿಸಿದ ವಾರಾಂತ್ಯ ಕರ್ಫ್ಯೂ ಹಾಗೂ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಹಾಗೂ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರ್ಕಾರದ ವಿರುದ್ಧ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೇತೃತ್ವದಲ್ಲಿ ಮಂಗಳೂರು ನಗರದಲ್ಲಿಂದು ಪ್ರತಿಭಟನಾ ಪ್ರದರ್ಶನ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ರಾಜ್ಯ ಸರಕಾರದ ಅವೈಜ್ಞಾನಿಕ ಕ್ರಮಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ʻʻರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬೊಮ್ಮಯಿ ನೇತೃತ್ವದ ಬಿಜೆಪಿ ಸರಕಾರ ಹೆಜ್ಜೆಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಅದರ ಜೊತೆಗೆ ತನ್ನ ಕೋಮುವಾದಿ ಅಜೆಂಡಾವನ್ನು ಜಾರಿಗೊಳಿಸಿ ಜನರ ಗಮನವನ್ನು ಬೇರೆಡೆಗೆ ಸೆಲೆಯಲು ಯತ್ನಿಸುತ್ತಿದೆ. ಮಾತ್ರವಲ್ಲದೆ ಸರಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶವನ್ನು ಶಮನ ಮಾಡಲು ಕೊರೊನಾವನ್ನು ಮುಂದಿಟ್ಟುಕೊಂಡು ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ರಾಜ್ಯದ ಜನತೆಯ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಸರಕಾರವು ಅಧಿಕಾರ ನಡೆಸಲು ಅಯೋಗ್ಯರು. ಅಂದು ಭ್ರಷ್ಟಾಚಾರದ ವಿರುದ್ಧ ಬೊಗಳೆ ಬಿಟ್ಟವರು ಇಂದು 40% ಕಮಿಷನ್ ಪಡೆಯುವ ಸರಕಾರವೆಂದು ತನ್ನವರಿಂದಲೇ ಕರೆಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಕೊಳೆತು ನಾರುತ್ತಿರುವ ಮಾಧ್ಯಮ ರಂಗ, ಕುಲಗೆಟ್ಟ ರಾಜಕಾರಣ ಹಾಗೂ ಜನರ ಪ್ರಾಣದಲ್ಲಿ ಚೆಲ್ಲಾಟವಾಡುವ ಮೆಡಿಕಲ್ ಮಾಫಿಯಾಗಳ ಸಮ್ಮಿಶ್ರಣವು ಇಡೀ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿಟ್ಟು ಕೊರೊನಾ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ. ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳಿಗಾಗಿ ಜನರ ಹಿತವನ್ನು ಬಲಿಕೊಡುವ ಕೇಂದ್ರ ಸರ್ಕಾರದ ವಿರುದ್ಧವೂ ಜನತೆ ತಿರುಗಿ ಬೀಳುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿ, ಸುಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ನಾಯಕರಾದ ಸದಾಶಿವದಾಸ್, ಜಯಂತ ನಾಯಕ್, ಬಶೀರ್ ಪಂಜಿಮೊಗರು, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಬಿ.ಕೆ.ಇಮ್ತಿಯಾಜ್, ಜಯಂತಿ ಶೆಟ್ಟಿ, ಸಿಐಟಿಯು ಜಿಲ್ಲಾ ನಾಯಕರಾದ ರಾದಾ ಮೂಡಬಿದ್ರೆ, ಗಿರಿಜಾ, ರವಿಚಂದ್ರ ಕೊಂಚಾಡಿ, ಮಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್, ನಾಗೇಶ್ ಕೋಟ್ಯಾನ್, ಯುವ ಮುಖಂಡರಾದ ನವೀನ್ ಕೊಂಚಾಡಿ, ದಯಾನಂದ ಶೆಟ್ಟಿ, ಮನೋಜ್ ವಾಮಂಜೂರು, ನೌಷಾದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಷೀರುಬಾವಿ, ಜನವಾದಿ ಮಹಿಳಾ ಸಂಘಟನೆ ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಕಲಾವಿದರಾದ ಕೀತು ಫುರ್ಟಾಡೋ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ಜೆರಾಲ್ಡ್ ಟವರ್, ಉದಯ ಆಚಾರ್ಯ, ವಿದ್ಯಾರ್ಥಿ ನಾಯಕರಾದ ಮಾಧುರಿ ಬೋಳಾರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *