ಬಾಗಲಕೋಟೆ: ನಡುರಸ್ತೆಯಲ್ಲಿ ವಕೀಲೆ ಮೇಲೆ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಬಿಜೆಪಿ ಮುಖಂಡನೊಬ್ಬ ನೀಡಿದ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಎದುರಲ್ಲೆ ಮಹಿಳೆ ಅಂತ ನೋಡದೇ ಯುವಕನೊಬ್ಬ ಒದೆಯುತ್ತಿರುವ ದೃಶ್ಯ ಮೊಬೈಲ್ದಲ್ಲಿ ಸೆರೆ ಹಿಡಿಯಲಾಗಿದೆ. ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಅವರ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ವಕೀಲೆಯ ಮೇಲೆ ಬಾಗಲಕೋಟೆಯ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬುವವರು ಹಲ್ಲೆ ಮಾಡಿದ್ದಾರೆ. ಕಾಲು, ಎದೆಭಾಗ, ತಲೆಗೆ ಪೆಟ್ಟಾಗಿದೆ ಎಂದು ವಕೀಲೆ ಸಂಗೀತಾ ಆರೋಪಿಸಿದ್ದಾರೆ. ತನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ. ವಕೀಲೆ ಮತ್ತು ಪತಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾನೆ ಎಂದು ವಕೀಲೆ ಆರೋಪ ಮಾಡಿದ್ದಾರೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕಳೆದ ಮೇ 8 ರಂದು ನಸುಕಿನ ಜಾವ ಬುಲ್ಡೋಜರನಿಂದ ಸಂಗೀತಾ ಮನೆಯ ಮುಂದಿನ ಕಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದರು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ರಾಜು ನಾಯ್ಕರ್ ವಿರುದ್ಧ ಠಾಣೆಯಲ್ಲಿ ದೂರು ಕೊಟ್ಟಿದ್ದರಿಂದ ಮಹಾಂತೇಶ ಚೊಳಚಗುಡ್ಡ ಅವರು ಹಲ್ಲೆ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ವಕೀಲೆ ದೂರು ದಾಖಲಿಸಿದ್ದು, ಮಹಾಂತೇಶ್ ಚೊಳಚಗುಡ್ಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.