ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಗೊಂದಲ ಕೂಡಲೇ ನಿವಾರಿಸಿ: ಎಐಡಿಎಸ್‌ಒ

ಬೆಂಗಳೂರು: ಅಂತಿಮ ಪರೀಕ್ಷೆಗಳನ್ನು ಪೂರ್ವಭಾವಿಯಾಗಿ ನಡೆಸುವ ನಿರ್ಧಾರದಿಂದ ವೈದ್ಯಕೀಯ ವಿದ್ಯಾರ್ಥಿಗಳು ಅತ್ಯಂತ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಸಂಕಷ್ಟದ ಶೈಕ್ಷಣಿಕ ವರ್ಷದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈದ್ಯಕೀಯ ಪರೀಕ್ಷೆಗಳ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಆ ಸುತ್ತೋಲೆಯ ಪ್ರಕಾರ ಎರಡನೇ ವರ್ಷದ ಮತ್ತು ಅಂತಿಮ ವರ್ಷದ ಪರೀಕ್ಷೆಗಳನ್ನು ನಿಗದಿಪಡಿಸಿದ್ದ ವೇಳಾಪಟ್ಟಿಗಿಂತ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಧಿಡೀರ್ ಬದಲಾವಣೆ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಉಪನ್ಯಾಸಕರನ್ನು ಅತ್ಯಂತ ಆತಂಕಕ್ಕೆ ದೂಡಿದೆ. ಈ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘವು ಸಹ ಪ್ರಶ್ನಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭವಾಗಿದ್ದೆ ಮಾರ್ಚ್ ತಿಂಗಳಲ್ಲಿ. ಜೂನ್ ತಿಂಗಳವರೆಗೂ ಆನ್‌ಲೈನ್‌ ಮೂಲಕ ತರಗತಿಗಳು ನಡೆದಿವೆ. ಈ ಕಾರಣದಿಂದ  ಅಗತ್ಯವಿದ್ದಷ್ಟು ಕ್ಲಿನಿಕಲ್ ನೇಮಕಾತಿಗಳು ಸಹ ಆಗಿರಲಿಲ್ಲ. ಅಲ್ಲದೆ, ಅಂತಿಮ ವರ್ಷದ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಆಗಿನ ಅವಶ್ಯಕತೆಗೆ ಓಗೊಟ್ಟು, ಕೋವಿಡ್ ಕರ್ತವ್ಯವನ್ನು ಕೆಲವು ತಿಂಗಳುಗಳ ಕಾಲ ನಿರ್ವಹಿಸಿದ್ದರು. ಇದರೊಂದಿಗೆ ಈ ಬ್ಯಾಚ್ ನ ವಿದ್ಯಾರ್ಥಿಗಳು ಎರಡು ತಿಂಗಳು ಟೆಲಿ ಕಮ್ಯುನಿಕೇಶನ್ ಕರ್ತವ್ಯ ನಿರ್ವಹಿಸಿದ್ದಾರೆ.  ಅಂದರೆ ಒಟ್ಟಾರೆಯಾಗಿ ಈ ಎಲ್ಲಾ ಕಾರಣಗಳಿಂದ ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷೆ ತಯಾರಿಗೆ ಸಮಯ ಕಡಿಮೆಯಾಗಿದೆ. ಈಗ ಫೆಬ್ರವರಿ ಮಧ್ಯವಾರಕ್ಕೆ ಪರೀಕ್ಷೆ ಎನ್ನುವುದು ಮತ್ತಷ್ಟು ದುಗುಡಕ್ಕೆ ಕಾರಣವಾಗಿದೆ.

ಇದರೊಂದಿಗೆ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 18 (ಒಂದೂವರೆ ವರ್ಷ) ತಿಂಗಳ ವೇಳಾಪಟ್ಟಿಯಿಂದ ಕೇವಲ 10 ತಿಂಗಳ ವೇಳಾಪಟ್ಟಿಗೆ ಹೊಂದಾಣಿಕೆ ಆಗುವುದೇ ದೊಡ್ಡ ಸಾಹಸವಾಗಿದೆ. ಶೈಕ್ಷಣಿಕ ವರ್ಷ ಆರಂಭವಾದ 3 ತಿಂಗಳು ಆನ್‌ಲೈನ್ ಮೂಲಕ ತರಗತಿಗಳು ನಡೆದಿವೆ. ಆದ ಕಾರಣ, ಈ ವಿದ್ಯಾರ್ಥಿಗಳಿಗೆ ಮೂಲ ವಿಷಯಗಳ ಬಗ್ಗೆ ಸಮರ್ಪಕ ಅಡಿಪಾಯ ದೊರಕಲು ಸಾಧ್ಯವಾಗಿಲ್ಲ. ಅಂತಿಮ ಪರೀಕ್ಷೆಯನ್ನು ಜನವರಿ ಮಧ್ಯವಾರಕ್ಕೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಎಷ್ಟೋ ಕಾಲೇಜುಗಳು ಇನ್ನೂ ನವೆಂಬರ್ ಕಳೆಯುತ್ತಿದ್ದರೂ 2ನೆ ಆಂತರಿಕ ಪರೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಈಗ ಎರಡನೆಯದು ಮುಗಿಸಿ, ಮೂರನೆಯದನ್ನು ಮಾಡಿ, ಜನವರಿ ಒಳಗೆ ಅಂತಿಮ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಅಜಯ್ ಕಾಮತ್ ವಿವರಿಸಿದರು.

ಈ ಎಲ್ಲಾ ಕಾರಣಗಳಿಂದ, ಇಂತಹ ಬಿಕ್ಕಟ್ಟಿನ ಶೈಕ್ಷಣಿಕ ವೇಳಾಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಈಗ ಏಕಾಏಕಿ ಅಂತಿಮ ಪರೀಕ್ಷೆಗಳು ಪೂರ್ವಭಾವಿಯಾಗಿ ನಡೆಯುತ್ತವೆ ಎನ್ನುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮುಂದಿನ ಸಮಾಜದ ವೈದ್ಯರಾಗಿ ಸೇವೆಯಲ್ಲಿ ನಿರತರಾಗುವವರು. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಅವಶ್ಯಕತೆಗೆ ಓಗೊಟ್ಟು ಇವರೆಲ್ಲರೂ ದುಡಿದಿದ್ದಾರೆ. ಈಗ ಇವರ ಆತಂಕಕ್ಕೆ, ಸಮಸ್ಯೆಗೆ ಸ್ಪಂದಿಸಿ ಈ ಕೂಡಲೇ ಸುತ್ತೋಲೆಯನ್ನು ವಾಪಸ್ ಪಡೆದು, ಪರೀಕ್ಷೆಗಳನ್ನು ಮುಂದೂಡಬೇಕಾಗಿ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಎಐಡಿಎಸ್‌ಒ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *