ಯು.ಎಸ್ ಮತ್ತು ಇರಾನ್ ಸರಕಾರಗಳ ನಡುವೆ ದೀರ್ಘ ಕಾಲ ಮಾತುಕತೆ ಮತ್ತು ಚೌಕಾಶಿಯ ನಂತರ ಪಶ್ಚಿಮ ಏಶ್ಯಾ ಯುದ್ಧ ನಿಲ್ಲಿಸುವ ಮತ್ತು ಶಾಂತಿ ಸ್ಥಾಪನೆಯ ಒಡಂಬಡಿಕೆ ಪತ್ರ (ಎಂ.ಒ.ಯು) ವನ್ನು ಅಂತಿಮಗೊಳಿಸಿವೆ. ಇದು ಒಪ್ಪಂದವಲ್ಲ. ಆದರೆ ತಕ್ಷಣದ ಕೆಲವು ಕ್ರಮಗಳ ಜಾರಿ ಮತ್ತು ಅಂತಿಮ ಒಪ್ಪಂದದ ಚೌಕಟ್ಟು ಇದರಲ್ಲಿದೆ. ಈ ಚಾರಿತ್ರಿಕ ಒಡಂಬಡಿಕೆ ಪತ್ರಕ್ಕೆ ಅಧ್ಯಕ್ಷ ಟ್ರಂಪ್ ಮತ್ತು ಇರಾನ್ ಅಧ್ಯಕ್ಷರು ಈಗಾಗಲೇ ಸಹಿಯನ್ನು ಮಾಡಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದ ಈ ಪೂರ್ಣ ಪಠ್ಯದ 14 ಅಂಶಗಳನ್ನು ಈಗಾಗಲೇ ಪ್ರತ್ಯೇಕ ಪೋಸ್ಟ್ ನಲ್ಲಿ ಹಾಕಲಾಗಿದೆ. ಇಲ್ಲಿ ಅದರ ಸ್ಥೂಲ ವಿಶ್ಲೇಷಣೆಯಿದೆ.
(ಕಾರ್ಟೂನ್ ಕೃಪೆ : ಸತೀಶ ಆಚಾರ್ಯ)
ಯು.ಎಸ್ ಮತ್ತು ಇರಾನ್ ಅಧ್ಯಕ್ಷರು, ಪಶ್ಚಿಮ ಏಶ್ಯಾದಲ್ಲಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪನೆಯತ್ತ ಮಾತುಕತೆ ನಡೆಸುವುದಕ್ಕೆ ಚೌಕಟ್ಟು ಒದಗಿಸುವ ಒಡಂಬಡಿಕೆ ಪತ್ರ (ಎಂ.ಒ.ಯು)ಕ್ಕೆ ಸಹಿ ಹಾಕಿರುವುದು ಒಂದು ‘ಸ್ವಾಗತಾರ್ಹ ಸಕಾರಾತ್ಮಕ ಚಾರಿತ್ರಿಕ. ಬೆಳವಣಿಗೆ’ ಇದು ಕಳೆದ ಹಲವು ತಿಂಗಳುಗಳಿಂದ ಯುದ್ಧದ ಕರಿನೆರಳಲ್ಲೇ ಬದುಕುತ್ತಿದ್ದ ಇರಾನ್ ಮತ್ತು ಇತರ ಪ.ಏಶ್ಯಾದ ದೇಶಗಳ ಜನತೆಯ ದೃಷ್ಟಿಯಿಂದಂತೂ ಸ್ವಾಗತಾರ್ಹ, ಮಾತ್ರವಲ್ಲ ಭಾರತ ಸೇರಿದಂತೆ ಬಹುಪಾಲು ತೈಲ ಆಮದಿನ ಮೇಲೆ ಅವಲಂಬಿಸಿರುವ ಏಶ್ಯಾ ಮತ್ತು ಇತರ ಜಾಗತಿಕ ದಕ್ಷಿಣದ ದೇಶಗಳ ಜನರು ಸಹ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಸಂಘರ್ಷ ಮುಂದುವರೆದಿದ್ದರೆ, ತೈಲ ಬೆಲೆ ಏರಿಕೆ ಜಗತ್ತಿನ ಎಲ್ಲ ಜನರ ಜೀವನವೆಚ್ಚದ ಭಾರೀ ಏರಿಕೆಯ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ತೀವ್ರತೆಯನ್ನು ತಡೆಯುವ ದೃಷ್ಟಿಯಿಂದಲೂ ಇದು ಸಕಾರಾತ್ಮಕ ಬೆಳವಣಿಗೆ. ಇದು ಚಾರಿತ್ರಿಕ ಸಹ ಯಾಕೆ ಅಂತ ತಿಳಿಯಬೇಕಾದರೆ ಈ MoU ದ 14 ಅಂಶಗಳನ್ನು ಸ್ವಲ್ಪ ವಿವರವಾಗಿ ನೋಡಬೇಕು.

ಇರಾನ್-ಯು.ಎಸ್ ಒಡಂಬಡಿಕೆ ಪತ್ರದ (MoU) ಪೂರ್ಣ ಪಠ್ಯ ಇಲ್ಲಿದೆ.
ಮೊದಲ ಮೂರು ಅಂಶಗಳನ್ನು ನೋಡುವುದಾದರೆ, “ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣದಿಂದ ಮತ್ತು ಶಾಶ್ವತವಾಗಿ ನಿಲ್ಲಿಸುವ ಘೋಷಣೆ” ಇಡೀ ಪಶ್ಚಿಮ ಏಶ್ಯಾದಲ್ಲಿ ಶಾಂತಿಯ ಸಾಧ್ಯತೆಯನ್ನು ಸೂಚಿಸುತ್ತದೆ. ಇದನ್ನು ಯು.ಎಸ್ ಮತ್ತು ಇರಾನ್ ಸಹಿ ಮಾಡುತ್ತಿದ್ದರೂ, ಅವರ ಸಹಚರರೂ ಇದಕ್ಕೆ ಬದ್ಧರಾಗಿರುತ್ತಾರೆ ಮತ್ತು ಲೆಬನಾನ್ ನ್ನು ಪ್ರಸ್ತಾಪಿಸಲಾಗಿದೆ ಎಂಬುದು, ಇಸ್ರೇಲಿನ ಯುದ್ಧಕೋರತನಕ್ಕೆ ಮತ್ತು “ಮಹಾ ಇಸ್ರೇಲ್’ ಯೋಜನೆಗೆ ಮೂಗುದಾರ ಹಾಕುವ ಜವಾಬ್ದಾರಿಯನ್ನು ಯು.ಎಸ್ ಮೇಲೆ ಹೇರುತ್ತದೆ. ಪರಸ್ಪರರ ಮಾತ್ರವಲ್ಲ, ‘ಲೆಬನಾನ್ ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆ ಖಚಿತ ಪಡಿಸುವ ಭರವಸೆ ಸಹ ಬಹಳ ಮಹತ್ವದ ಅಂಶ.. ಕದನ ವಿರಾಮ 60 ದಿನಗಳ ಕಾಲ ಮತ್ತು ಇತರ ವಿಷಯಗಳ ಚರ್ಚೆ ಹೆಚ್ಚಿನ ಸಮಯ ತೆಗೆದುಕೊಂಡರೆ ಮತ್ತೆ ವಿಸ್ತರಿಸುವ ಸಾಧ್ಯತೆ ಹೊಂದಿದೆ.
ಹೊರ್ಮುಝ್ ಜಲಸಂಧಿ ತೆರೆಯುವುದು
ಅಂಶ 4 ಮತ್ತು 5ಗಳನ್ನು ಪರಿಶೀಲಿಸಿದರೆ ತಕ್ಷಣದಿಂದ ಆರಂಭಿಸಿ 30 ದಿನಗಳೊಳಗೆ ಯು.ಎಸ್ ಮತ್ತು ಇರಾನ್ ಎರಡೂ ಹೊರ್ಮುಝ್ ಜಲಸಂಧಿಯನ್ನು ತೆರವು ಮಾಡಬೇಕು. ಯು.ಎಸ್ ಅದು ವಿಧಿಸಿರುವ ನೌಕಾದಿಗ್ಬಂಧನ ಮತ್ತು ಇತರ ಅಡೆತಡೆಗಳನ್ನು ತೆಗೆಯಬೇಕು. ಇರಾನ್ ಸಹ ಅದು ವಿಧಿಸಿರುವ ತಾಂತ್ರಿಕ ಮತ್ತು ಮಿಲಿಟರಿ (ಜಲ ಸ್ಫೋಟಕ ಇತ್ಯಾದಿ) ಇತ್ಯಾದಿ ಅಡೆತಡೆಗಳನ್ನು ತೆಗೆಯಬೇಕು. ಎರಡೂ ದೇಶಗಳು ಅಡೆತಡೆಗಳನ್ನು ಏಕಕಾಲದಲ್ಲಿ ಪರಸ್ಪರ ಅದೇ ಅನುಪಾತದಲ್ಲಿ ತಗೆಯಬೇಕು ಎಂಬ ಷರತ್ತು ವಿಧಿಸಲಾಗಿದೆ. ಇರಾನ್ 60 ದಿನಗಳ ವರೆಗೆ ಸಾಗಾಣಿಕೆ ಹಡಗುಗಳ ಮೇಲೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಆದರೆ ಇರಾನ್, ಒಮನ್ ಮತ್ತು ಇತರ ಕೊಲ್ಲಿಯ ಕರಾವಳಿ ದೇಶಗಳ ಜತೆ ಚರ್ಚಿಸಿ, ಅವರ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಕಾನೂನುಗಳ ಜಲಸಂಧಿಯ ಜಲಸಾರಿಗೆ ಸೇವೆ ಮತ್ತು ಸಾಗಾಣಿಕೆಯ ನಿರ್ವಹಣೆ ಮಾಡಬಹುದು. ಈ ಅಂಶ ಇರಾನ್ ಗೆ ಒಮನ್ ಜತೆ ಜಂಟಿಯಾಗಿ ಹೊರ್ಮುಝ ಜಲಸಂಧಿಯ ಮೇಲೆ ನಿಯಂತ್ರಣವನ್ನು ಅಧಿಕೃತಗೊಳಿಸುತ್ತದೆ. ಮುಂದೆ ಈ ಸೇವೆಗೆ ಶುಲ್ಕ ವಿಧಿಸಬಹುದು ಎಂಬುದನ್ನು ನಿಷೇಧಿಸುವುದಿಲ್ಲ. ಇದು ಇರಾನ್ ಗೆ ದೊಡ್ಡ ವಿಜಯ ಮತ್ತು ಗಳಿಕೆ.
ಯುದ್ಧ ಪರಿಹಾರ?
“ಇರಾನಿನ ಪುನರ್-ರಚನೆ ಮತ್ತು ಆರ್ಥಿಕ ಅಭಿವೃದ್ಧಿಗೆ, ಯು.ಎಸ್ ಪ್ರಾದೇಶಿಕ ಸಹಚರರ ಜತೆ ಸೇರಿ ಕನಿಷ್ಟ 300 ಶತಕೋಟಿ ಡಾಲರ್ ಗಳ ನಿರ್ದಿಷ್ಟ ಯೋಜನೆ” ಯನ್ನು ತಯಾರಿಸುತ್ತದೆಯೆಂದು ಅಂಶ 6 ಹೇಳುತ್ತದೆ. ಇದು ಒಡಂಬಡಿಕೆಯ ಅತ್ಯಂತ ಅನಿರೀಕ್ಷಿತ ಅಂಶ. ಯು.ಎಸ್-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಹೂಡಿದ ಯುದ್ಧದ ದಾಳಿಗಳಲ್ಲಿ ಇರಾನ್ ನ ಮೂಲ ಸೌಕರ್ಯ ಹಾಗೂ ನಾಗರಿಕ ಸ್ಥಾವರಗಳಿಗೆ ಆದ ಹಾನಿಯನ್ನು ತುಂಬಿ ಕೊಡಬೇಕೆಂಬುದು ಇರಾನ್ ಹಕ್ಕೊತ್ತಾಯವಾಗಿತ್ತು. ಯು.ಎಸ್ ಇದಕ್ಕೆ ಒಪ್ಪಿಕೊಳ್ಳಬೇಕಾಗಿದೆಯೆಂಬುದು ವಿಶೇಷ.. ಅದನ್ನು ಯು.ಎಸ್ ಮಿಲಿಟರಿ ನೆಲೆ ಹೊಂಧಿರುವ ಕೊಲ್ಲಿ ದೇಶಗಳಿಂದ ಕೊಡಿಸಲು ಯು.ಎಸ್ ಪ್ರಯತ್ನಿಸುತ್ತದಂತೆ. ಯುದ್ಧ ಪರಿಹಾರವನ್ನು ‘ರಾಯಭಾರ ಭಾಷೆ’ಯಲ್ಲಿ ‘ಪುನರ್-ರಚನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಯೋಜನೆ’ ಎಂದು ಕರೆಯಲಾಗಿದೆ ಅಷ್ಟೇ.

ಇದನ್ನೂ ಓದಿ : ಶಾಂತಿ ಸ್ಥಾಪನೆಯ ಮಾತುಕತೆಯತ್ತ ಯು.ಎಸ್-ಇರಾನ್ ಒಡಂಬಡಿಕೆ ಪತ್ರ(MoU) – ಪೂರ್ಣ ಪಠ್ಯ
ನಿಧಿ ಮುಕ್ತ, ತೈಲ ರಫ್ತಿಗೆ ದಿಗ್ಬಂಧನದಿಂದ ರಿಯಾಯಿತಿ
ಅಂಶ 10 ಮತ್ತು 11 ಇರಾನ್ ಇತ್ತೀಚಿನ ಯುದ್ಧ ಮತ್ತು ದಿಗ್ಬಂಧಗಳಿಂದಾಗಿ ಅನುಭವಿಸುತ್ತಿರುವ ಆರ್ಥಿಕ ಬವಣೆಗಳಿಗೆ ತಕ್ಷಣದ ಸ್ವಲ್ಪ ಮಟ್ಟಿನ ಪರಿಹಾರವೊದಗಿಸುತ್ತದೆ. ಅಂಶ 10ರ ಪ್ರಕಾರ ಇರಾನಿನ ತೈಲ ಉತ್ಪನ್ನ ಮತ್ತು ಉಪ-ಉತ್ಪನ್ನಗಳ ರಫ್ತಿಗೆ ಸಂಬಂಧ ಪಟ್ಟ ಎಲ್ಲ ಈಗಿರುವ ದಿಗ್ಬಂಧನಗಳಿಂದ ಯು,ಎಸ್ ರಿಯಾಯಿತಿ ಕೊಡುತ್ತದೆ. ಅಂಶ 11ರ ಪ್ರಕಾರ ಯು.ಎಸ್ ಮತ್ತು ಅದರ ಕೊಲ್ಲಿ, ಯುರೋಪಿಯನ್ ಸಹಚರ ದೇಶಗಳ ಹಣಕಾಸು ವ್ಯವಸ್ಥೆಯಲ್ಲಿ ಸ್ಥಗಿತಗೊಳಿಸಿರುವ ಇರಾನಿ ನಿಧಿ ಮತ್ತು ಆಸ್ತಿಗಳನ್ನು ಮುಕ್ಕಗೊಳಿಸಬೇಕು. ಇಂತಹ ಸುಮಾರು 24 ಶತಕೋಟಿ ಡಾಲರ್ ನಿಧಿ ಕೊಲ್ಲಿ ದೇಶಗಳಲ್ಲಿ ಇದೆ. ಅದರಲ್ಲಿ ಯು.ಎ.ಇ ಈಗಾಗಲೇ 3 ಶತಕೋಟಿ ಡಾಲರ್ ಪಾವತಿ ಮಾಡಿದೆ. ಕೊಲ್ಲಿ ದೇಶಗಳು ಉಳಿದ ನಿಧಿಯನ್ನು ಮಾತುಕತೆ ಆರಂಭ ಮಾಡುವ ಮೊದಲು ಪಾವತಿ ಮಾಡುವುವು ಅಂತ ಭರವಸೆ ಕೊಡಲಾಗಿದೆ ಎಂದು ವರದಿಯಾಗಿದೆ. ಈ ನಿಧಿಯಿಂದ ಇರಾನಿ ಕೇಂದ್ರೀಯ ಬ್ಯಾಂಕ್ ಹೇಳಿದ ಯಾರಿಗೂ, ಯಾವ ಸಂಸ್ಥೆಗೂ ಹಣ ಪಾವತಿ ಮಾಢಬಹುದು ಅಂತ ಅಂಶ 11ರಲ್ಲಿ ಸ್ಪಷ್ಟ ಪಡಿಸುವ ಮೂಲಕ, ಯು.ಎಸ್ ಈ ಹಣದ ವಿತರಣೆಗೆ ನಿರ್ಬಂಧಗಳು, ಷರತ್ತುಗಳನ್ನು ವಿಧಿಸುವುದನ್ನು ತಡೆಯಲಾಗಿದೆ.
ದಿಗ್ಬಂಧನ, ಅಣ್ವಸ್ತ್ರ/ಅಣು ಸಾಮಗ್ರಿ ನಿರ್ವಹಣೆ
“ವಿಶ್ವಸಂಸ್ಥೆ ನಿರ್ಣಯಗಳು, ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐ.ಎ.ಇ.ಎ) ಯ ಬೋರ್ಡ್ ನಿರ್ಣಯಗಳು, ಯು.ಎಸ್ ನ ಎಲ್ಲ ಏಕಪಕ್ಷೀಯ ಪ್ರಾಥಮಿಕ ಮತ್ತು ಅಧೀನ ದಿಗ್ಬಂಧನಗಳು ಸೇರಿದಂತೆ ಇರಾನ್ ವಿರುದ್ಧ ವಿಧಿಸಲಾದ ಎಲ್ಲ ರೂಪಗಳಲ್ಲಿರುವ ದಿಗ್ಬಂಧನಗಳನ್ನು” ಕೊನೆಗೊಳಿಸುವುದು ಅಂಶ 7ರ ಸಾರ.
ಯು.ಎಸ್, ಯುರೋ ಕೂಟಕ್ಕೆ ಮತ್ತು ಅಧ್ಯಕ್ಷ ಟ್ರಂಪ್ ಗೆ ನಿರ್ಣಾಯಕವಾದ ಅಣ್ವಸ್ತ್ರ, ಮತ್ತು ಅಣು ಸಾಮಗ್ರಿಗಳ ನಿರ್ವಹಣೆಯ ಕುರಿತು ಅಂಶ 8 ಮತ್ತು 9 ಹೇಳುತ್ತದೆ. “ಇರಾನ್ ಅಣ್ವಸ್ತ್ರಗಳನ್ನು ಖರೀದಿಸುವುದಿಲ್ಲ ಅಥವಾ ಅಭಿವೃದ್ಧಿ ಪಡಿಸುವುದಿಲ್ಲ ಎಂದು ಮತ್ತೆ ಖಚಿತಪಡಿಸುತ್ತದೆ”. ಎನ್ನುವ ಮೂಲಕ ಇದರಲ್ಲಿ ವಿವಾದಾಸ್ಪದವಾಗಿದ್ದು ಅಥವಾ ಹೊಸದು ಏನೂ ಇಲ್ಲ. ಯು.ಎಸ್ ಸುಮ್ಮನೆ ಇದನ್ನು ದೊಡ್ಡ ವಿಷಯ ಮಾಡಿತ್ತು ಎಂದು ಇರಾನ್ ಇಡೀ ಜಗತ್ತಿಗೆ ಈ ಅಂಶದ ಮೂಲಕ ಪರೋಕ್ಷವಾಗಿ ಸಾರುತ್ತಿದೆ. ಇರಾನ್ ನ ಅಣು ಶಕ್ತಿ ಅಗತ್ಯಗಳಿಗೆ ಸಂಬಂಧಿತ “ಅಣು ಸಾಮಗ್ರಿ ಪುಷ್ಟೀಕರಣ ಮತ್ತು ಇತರ ಪರಸ್ಪರ ಒಪ್ಪಿತ ವಿಷಯಗಳನ್ನು, ಪರಸ್ಪರ ಒಪ್ಪಿತ ವಿಧಾನ ಮತ್ತು ಕಾಲಕ್ರಮದಲ್ಲಿ” ಮಾತುಕತೆ ಮೂಲಕ ಬಗೆಹರಿಸಬಹುದು ಎಂದು ಹೇಳುವ ಮೂಲಕ ಈ ವಿಷಯವನ್ನು ವಿವರವಾದ ಮಾತುಕತೆಗಳಿಗೆ ಅಂಶ 8 ಮುಂದೂಡುತ್ತದೆ. “ ಅದೇ ಸ್ಥಳದಲ್ಲಿ ಐ.ಎ.ಇ.ಎ ಮೇಲ್ವಿಚಾರಣೆಯಲ್ಲಿ ಅಣು ಸಾಮಗ್ರಿಯನ್ನು ತೆಳುಗೊಳಿಸುವುದು ಕನಿಷ್ಟ ವಿಧಾನವಾಗಿರುತ್ತದೆ.” ಮಾತ್ರ ಅಣು ಸಾಮಗ್ರಿ ನಿರ್ವಹಣೆಯ ಕುರಿತ ನಿರ್ದಿಷ್ಟ ಹೇಳಿಕೆ. ಈ ಹೇಳಿಕೆ “ಪುಷ್ಟೀಕರಿಸಿದ ಮತ್ತು ಶೇಖರಿಸಿದ ಅಣು ಸಾಮಗ್ರಿಯನ್ನು” ಇರಾನಿನಿಂದ ಹೊರದೇಶಗಳಿಗೆ ಕಳಿಸುವುದಕ್ಕೆ ಇರಾನ್ ಒಪ್ಪಿಲ್ಲ ಅಂತಲೂ ಸ್ಪಷ್ಟವಾಗುತ್ತದೆ. ಒಬಾಮ ಅಧ್ಯಕ್ಷ ಅವಧಿಯಲ್ಲಿ 2015ರಲ್ಲಿ JCOPA ಒಪ್ಪಂದ ಮತ್ತು ಈ ಸುತ್ತಿನ ಯುದ್ಧದ ಮೊದಲು ಫೆಬ್ರುವರಿ 2026ರಲ್ಲಿ ಇರಾನ್ ಪುಷ್ಟೀಕರಿಸಿದ ಮತ್ತು ಶೇಖರಿಸಿದ ಅಣು ಸಾಮಗ್ರಿಗಳ ನಿರ್ವಹಣೆಯ ವಿಧಾನ, ಹಂತ, ಕಾಲಕ್ರಮವನ್ನು ಸಹ ಒಪ್ಪಲು ತಯಾರಿಲ್ಲ ಎಂಬ ಸೂಚನೆ ಸಿಗುತ್ತದೆ.

ತಕ್ಷಣ ಆರ್ಥಿಕ ಪರಿಹಾರ, ಮಾತುಕತೆಗೆ ಪೂರ್ವಶರತ್ತು
ಇರಾನಿಗೆ ತಕ್ಷಣ ಬೇಕಾದ ಮತ್ತು ಅಧ್ಯಕ್ಷ ಟ್ರಂಪ್ ಅಧಿಕಾರದೊಳಗೆ (ಯು.ಎಸ್ ಸಂಸತ್ತಿನ ಅಥವಾ ಇತರ ಸಂಸ್ಥೆಗಳ ಅನುಮೋದನೆ ಅಗತ್ಯವಿಲ್ಲದ) ಇರುವಂಥ ಅಂಶಗಳ ಜಾರಿ, ಮುಂದಿನ ವಿವರವಾದ ಮಾತುಕತೆ ಆರಂಭಿಸಲು ಪೂರ್ವಷರತ್ತು ಎಂದು ಅಂಶ 13 ಹೇಳುತ್ತದೆ. ಅಂಶ 1 (ಎಲ್ಲ ರಂಗಗಳಲ್ಲಿ ಕದನವಿರಾಮ), 4 (ನೌಕಾ ದಿಗ್ಬಂಧನ ತೆರವು), 5( ಹೊರ್ಮುಝ್ ತೆರೆಯುವುದು), 10 (ಇರಾನ್ ತೈಲ ರಫ್ತು/ಸಾಗಾಣಿಕೆ ವಿನಾಯಿತಿ) ಮತ್ತು 11 (ಸ್ಥಗಿತ ನಿಧಿ ಮುಕ್ತಗೊಳಿಸುವ) ಜಾರಿ ಇದರಲ್ಲಿ ಸೇರುತ್ತದೆ. ಆ ಮೇಲೆ ಆರಂಭವಾಗುವ ವಿವರವಾದ ಮಾತುಕತೆಗಳ ಮುಖ್ಯ ಭಾಗ (ಇತರ ಅಂಶಗಳ ವಿವರಗಳು ಮತ್ತು ದೃಢೀಕರಣದ ಜತೆಗೆ) – ಅಣ್ವಸ್ತ್ರ,/ಅಣು ಸಾಮಗ್ರಿಗಳ ನಿರ್ವಹಣೆ ಮತ್ತು ಎಲ್ಲ ದಿಗ್ಬಂಧನಗಳನ್ನು ತೆರವುಗೊಳಿಸುವ – ಹಂತಗಳು, ವಿಧಾನ, ಕಾಲಕ್ರಮ ಇತ್ಯಾದಿ.
“ಅಂತಿಮ ಒಪ್ಪಂದವನ್ನು ಎಲ್ಲರಿಗೂ ಬಾಧ್ಯವಾದ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದ ಮೂಲಕ ದೃಢೀಕರಿಸಲಾಗುತ್ತದೆ” ಎಂಬುದು 14ನೆಯ, ಕೊನೆಯ ಮತ್ತು ಅತ್ಯಂತ ಗಮನಾರ್ಹ ಅಂಶ. ಅಂದರೆ ಮುಂದೆ ಅಂತಿಮಗೊಳಿಸುವ ಒಪ್ಪಂದ ಬರಿಯ ದ್ವಿಪಕ್ಷೀಯ ಒಪ್ಪಂದವಾಗಿರುವುದಿಲ್ಲ. ಇಸ್ರೇಲ್, ಕೊಲ್ಲಿ ದೇಶಗಳು – ಎಲ್ಲರಿಗೂ ಬಾಧ್ಯವಾದ ಅಂತರರಾಷ್ಟ್ರೀಯ ಒಪ್ಪಂದವಾಗಿರುತ್ತದೆ. ಅದರ ಉಲ್ಲಂಘನೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದ ಉಲ್ಲಘನೆಯಾಗುತ್ತದೆ.
ಸೋಲೊಪ್ಪಿಗೆಯಂತೆ ಕಾಣುವ ಚಾರಿತ್ರಿಕ ಒಡಂಬಡಿಕೆ
ಯು.ಎಸ್-ಇಸ್ರೇಲ್ ಯುದ್ಧದ ಗುರಿ ಮತ್ತು ಒತ್ತಾಯಗಳಾಗಿದ್ದ, ‘ಇರಾನಿನ ಗುರಿ-ನಿರ್ದೇಶಿತ ಕ್ಷಿಪಣಿಗಳ ನಾಶ’ ಮತ್ತು ‘ಹೆಜಬೊಲ್ಲ’ ನಂತಹ ಇರಾನಿನ ಸಹಚರ ಸಂಘಟನೆಗಳಿಗೆ ಬೆಂಬಲ ನಿಲುಗಡೆ’ ಗಳ ಪ್ರಶ್ನೆ MoU ನಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು. ಇದನ್ನು ಚರ್ಚೆಗೆ ಸಹ ತೆಗೆದುಕೊಳ್ಳಲು ನಿರಾಕರಿಸಿದೆ ಮತ್ತು ಅದಕ್ಕೆ ಯು.ಎಸ್ ಒಪ್ಪಬೇಕಾಗಿದೆ ಎಂದು ಅದರ ಅರ್ಥ.
ಈ ಒಡಂಬಡಿಕೆಯನ್ನು ಕೂಲಂಕಷವಾಗಿ ನೋಡಿದ ಮೇಲೆ, ಯು.ಎಸ್ ಯುದ್ಧದ ತನ್ನ ಮೂಲ ಉದ್ದೇಶ (ಇರಾನ್ ಸರಕಾರ ಬದಲಾವಣೆ, ಅಣ್ವಸ್ತ್ರ/ಕ್ಷಿಪಣಿಗಳ ನಾಶ, ಹೆಜಬೊಲ್ಲ ಇತ್ಯಾದಿ ಸಹಚರ ಸಂಘಟನೆಗೆ ಬೆಂಬಲ ನಿಲುಗಡೆ)ವನ್ನು ಸಾಧಿಸಲಾಗಲಿಲ್ಲ. ಬದಲಿಗೆ ಮುಕ್ತವಾಗಿದ್ದ ಹೊರ್ಮುಝ ಜಲಸಂಧಿಯಲ್ಲಿ ಇರಾನಿ ನಿಯಂತ್ರಣ ಬಂದಿದೆ. ಯು.ಎಸ್ ನ ‘ದೈತ್ಯ’ ಮತ್ತು ಇಸ್ರೇಲಿನ ಜಂಟಿ ಮಿಲಿಟರಿ ಬಲ ಹುಸಿಯೆಂದು ಸಾಬೀತಾಗಿದೆ. ಪ್ರದೇಶದಲ್ಲಿದ್ದ ಮಿಲಿಟರಿ ನೆಲೆಗಳ ಬಹುಪಾಲು ನಷ್ಟವಾಗಿದೆ. ಕೊಲ್ಲಿ ದೇಶಗಳ ಸಹಚರರು ಯು.ಎಸ್ ಜತೆಗಿನ ಮಿಲಿಟರಿ, ಆರ್ಥಿಕ ಸಂಬಂಧ ವಿಮರ್ಶೆ ಮಾಡುವ ಸ್ಥಿತಿಯಿದೆ. ಏಕಮಾತ್ರ ಸಹಚರ ಇಸ್ರೇಲ್ ಜತೆಗೂ ಸಂಬಂಧ ಕೆಟ್ಟಿದೆ. ಇಡೀ ಪ್ರದೇಶದಲ್ಲಿ ಇರಾನ್ ಪ್ರಮುಖ ಶಕ್ತಿ ರಾಷ್ಟ್ರವಾಗಿಯೂ, ಯು.ಎಸ್-ಇಸ್ರೇಲಿ ಕೂಟ ದುರ್ಬಲ ಮತ್ತು ಏಕಾಂಗಿಯಾಗಿದೆ. ಯು.ಎಸ್ ಸೋತಿದೆ. ಇರಾನ್ ಗೆದ್ದಿದೆ. ಈ ಒಡಂಬಡಿಕೆ ಸೋಲೊಪ್ಪಿಗೆಯಂತೆ ಕಾಣುತ್ತಿದೆ.
ಅಧ್ಯಕ್ಷ ಟ್ರಂಪ್ ಅದಕ್ಕೆ ಜಿ-7 ಶೃಂಗಸಭೆ ನಡೆಯುತ್ತಿರುವ ಫ್ರಾನ್ಸ್ ನ ವೆರ್ಸಲೈಸ್ ನಲ್ಲಿ (ಇಲ್ಲೇ ಮೊದಲ ಮಹಾಯುದ್ಧದ ನಂತರ ಜರ್ಮನಿ ಸೋಲೊಪ್ಪಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು) ಸಹಿಹಾಕಿರುವುದು ಚಾರಿತ್ರಿಕ ವಿಡಂಬನೆಗಳಲ್ಲಿ ಒಂದು
ಒಡಂಬಡಿಕೆ ಮಾತುಕತೆಗಳ ನಂತರ ಒಪ್ಪಂದವಾಗಲಿ ಅಥವಾ ಆಗದಿರಲಿ ಇದೊಂದು ಚಾರಿತ್ರಿಕ ಒಡಂಬಡಿಕೆ ಎಂಬುದಕ್ಕೆ ಸಂದೇಹವಿಲ್ಲ. ಯುದ್ಧದ ನಂತರ ಶರಣಾಗತಿಯಂತೆ ಕಾಣುವ ಇಂತಹ ಒಂದು ಒಡಂಬಡಿಕೆಗೆ ಯು.ಎಸ್ ಅಧ್ಯಕ್ಷ ಸಹಿ ಹಾಕಬೇಕಾಯಿತು ಎಂಬುದೇ ಚಾರಿತ್ರಿಕ, ಹಲವು ದಶಕಗಳ ದಿಗ್ಬಂಧನದ, ಮತ್ತು ಪಡೆಗಳ ಹಿಂತೆಗೆತ, ಯುದ್ಧ-ಪರಿಹಾರಕ್ಕೆ ಒಪ್ಪಿಗೆ, ದ್ವಿಪಕ್ಷೀಯ ಒಪ್ಪಂದವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿರ್ಣಯವಾಗಿ ದೃಡೀಕರಿಸುವುದಕ್ಕೆ ಒಪ್ಪಿಗೆ – ಇವೆಲ್ಲಾ ಕಡಿಮೆ ಚಾರಿತ್ರಿಕವಲ್ಲ.

ಏಕಾಂಗಿ ಇಸ್ರೇಲ್ ವಿರೋಧ
ಈ ಒಡಂಬಡಿಕೆಯನ್ನು ಜಾಗತಿಕವಾಗಿ ಸ್ವಾಗತಿಸಲಾಗಿದೆ. ಇರಾನ್ ಮತ್ತು ಯು.ಎಸ್ ಒಳಗೆ ಸರಕಾರದ ಕೆಲವು ಅಂಗಗಳು, ವಿರೋಧ ಪಕ್ಷಗಳು ಮತ್ತು ಜನತೆಯ ಒಂದು ವಿಭಾಗ ಇದನ್ನು ವಿರೋಧಿಸಬಹುದು. ಇರಾನ್ ನಲ್ಲಿ ಒಡಂಬಡಿಕೆಯ ಕೆಲವು ಅಂಶಗಳಿಗೆ ಕೆಲವರು ವಿರೋಧಿಸಬಹುದು. ಆದರೆ ಇದು ಇರಾನಿಗೆ ಇಂದಿನ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಾದ ಅತ್ಯುತ್ತಮ ಒಪ್ಪಂದವೆಂದು ರಾಷ್ಟ್ರೀಯ ಸಹಮತ ರೂಪಿಸಲು ಕಷ್ಟವಾಗಲಿಕ್ಕಿಲ್ಲ. ಯು.ಎಸ್ ನಲ್ಲಿ ಪ್ರಭುತ್ವದ ಒಳಗೂ ಹೊರಗೂ ಹಲವು ವಿಭಾಗಗಳಿಂದ ಸಾಕಷ್ಟು ವಿರೋಧ ಬರಬಹುದು. ಆದರೆ ಇತ್ತೀಚಿನ ಅವಧಿಯಲ್ಲಿ ಇಸ್ರೇಲ್-ವಿರೋಧಿ ಯುದ್ಧ-ವಿರೋಧ ಯು.ಎಸ್ ನಲ್ಲಿ ವ್ಯಾಪಕವಾಗಿದ್ದು (ಒಂದು ಸಮೀಕ್ಷೆ ಪ್ರಕಾರ ಶೇ.65 ಜನ ಇರಾನ್ ಮೇಲೆ ಯುದ್ಧಕ್ಕೆ ವಿರೋಧವಾಗಿದ್ದಾರೆ), ಅಲ್ಲಿ ಟ್ರಂಪ್ ಗೆ ರಾಜಕೀಯ ಇಚ್ಛೆಯಿದ್ದರೆ ಅಧ್ಯಕ್ಷರಿಗಿರುವ ಅಪಾರ ಅಧಿಕಾರ ಬಳಸಿ ಅದನ್ನು ಜಾರಿ ಮಾಡಬಹುದು. ನವೆಂಬರ್ ನಲ್ಲಿ ಮಧ್ಯಂತರ ಚುನಾವಣೆಗಳ ದೃಷ್ಟಿಯಿಂದಲೇ ಟ್ರಂಪ್ ಈ ಒಡಂಬಡಿಕೆಗೆ ಒಪ್ಪಿಕೊಂಡಿದ್ದಾರೆ. ಇದು ಅವರ ಅಧ್ಯಕ್ಷತೆ ಉಳಿವು-ಅಳಿವಿನ ಪ್ರಶ್ನೆ. ಇಲ್ಲದಿದ್ದರೆ ಮಿಲಿಟರಿ ಸೋಲು, ತೈಲಬೆಲೆ-ಕೊರತೆ ಮತ್ತು ಆರ್ಥಿಕ ದುಸ್ಥಿತಿ ನವೆಂಬರ್ ಹೊತ್ತಿಗೆ ಇನ್ನಷ್ಟು ತೀವ್ರವಾಗಬಹುದು ಎಂಬ ಆತಂಕ ಇದರ ಹಿಂದಿದೆ.
ನೇತನ್ಯಾಹು ಮತ್ತು ಇಸ್ರೇಲ್ ಸರಕಾರ ಈ ಒಪ್ಪಂದವನ್ನು ಬಲವಾಗಿ ವಿರೋಧಿಸುತ್ತದೆ. ಅದನ್ನು ಬುಡಮೇಲು ಮಾಡಲು ಎಲ್ಲ ಪ್ರಯತ್ನಗಳನ್ನು ಮಾಢುತ್ತದೆ. ಅದಕ್ಕಾಗಿಯೇ ಲೆಬನಾನ್ ಮೇಲೆ ದಾಳಿ ಮಾಡುತ್ತಿದೆ. ಇಸ್ರೇಲಿನಲ್ಲೂ ಅಕ್ಟೋಬರ್ ನಲ್ಲಿ ಚುನಾವಣೆಗಳಿವೆ. ನೇತನ್ಯಾಹುಗೆ ಯುದ್ಧ ಮುಂದುವರೆಸಬೇಕಾಗಿದೆ. ಅದು ಅವರ ಅಸ್ತಿತ್ವದ ಪ್ರಶ್ನೆ. ಇಸ್ರೇಲಿ ಜನತೆ ಸತತ ಯುದ್ಧದಿಂದಾಗಿ ನೆಲಮಾಳಿಗೆಯ ಬಾಂಬ್ ಶೇಲ್ಟರ್ ಗೆ ಓಡಾಡಿ ದಣಿದಿದ್ದರೂ, ಯುದ್ಧಕ್ಕೆ ಬೆಂಬಲ ಕಡಿಮೆಯಾಗಿಲ್ಲ. ಅಕ್ಟೋಬರ್ 2023ರ ಹಮಾಸ್ ದಾಳಿಯನ್ನು ತಡೆಯಲು ಸಾಧ್ಯವಾಗದ್ದು, ಇರಾನ್ ಮೇಲಿನ ಯುದ್ಧವನ್ನೂ ಗೆಲ್ಲಲಾಗದ್ದು ನೇತನ್ಯಾಹುಗೆ ಸವಾಲಾಗಿದೆ. ನಿಜವಾಗಿಯೂ ಟ್ರಂಪ್ ಮನಸ್ಸು ಮಾಡಿದರೆ ಇಸ್ರೇಲ್, ನೆತನ್ಯಾಹು ಸಹ ಕದನವಿರಾಮ ಮನ್ನಿಸುವಂತೆ ಮಾಡುವುದು ಕಷ್ಟವೇನಲ್ಲ. ಯು.ಎಸ್ ಬೆಂಬಲವಿಲ್ಲದೆ ಇಸ್ರೇಲ್ ಗಂಭೀರ ಮಿಲಿಟರಿ ದಾಳಿ ಮಾಡಲಾರದು. ಆದರೆ ಟ್ರಂಪ್ ಗೆ ಆ ಕಟು ನಿರ್ಣಯ ಸಾಧ್ಯವಾ ಅಥವಾ ಇದು ಬರಿಯ ನಾಟಕವಾ ಎಂಬುದರ ಮೇಲೆ ಈ ಒಡಂಬಡಿಕೆ ಶಾಂತಿ ಒಪ್ಪಂದದತ್ತ ಮುನ್ನಡೆಯುತ್ತಾ ಎಂಬುದು ಅವಲಂಬಿಸಿದೆ. ಸದ್ಯದಲ್ಲಂತೂ (ಕನಿಷ್ಟ ನವೆಂಬರ್ ವರೆಗೆ) ಮಿಲಿಟರಿ ಆಯ್ಕೆ ಟ್ರಂಪ್ ಗಿಲ್ಲ. ಹಾಗಾಗಿ ನೇತನ್ಯಾಹು ಮತ್ತು ಇಸ್ರೇಲಿಗೆ ಮೂಗುದಾರ ಹಾಕಿ, ಶಾಂತಿ ಒಪ್ಪಂದಕ್ಕೆ ಮಾತುಕತೆಯತ್ತ ಸಾಗುವ ಸಾಧ್ಯತೆಯಿದೆ.
*************************
ಇದನ್ನೂ ನೋಡಿ : LIVE : SIR ವಿರೋಧಿಸಿ ಬೃಹತ್ ಪ್ರತಿರೋಧ ಸಮಾವೇಶ
