ಪದವಿ ಪೂರ್ವವರೆಗಿನ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲಿ – ವಿಠಲ .ಎ

ಮಂಗಳೂರು:  ಶಿಕ್ಷಣದ ಖಾಸಗೀಕರಣವು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಈ ಸಮಾಜದಲ್ಲಿ ಬಡವರ ಮಕ್ಕಳೂ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ಜೀವನ ಕ್ರಮಗಳು , ಬದುಕು, ಕಷ್ಟ ಸುಖಗಳು ಶ್ರೀಮಂತ ವಿದ್ಯಾರ್ಥಿಗಳಿಗೆ ಅದರ ಅರಿವೇ ಇಲ್ಲದ ರೀತಿಯಲ್ಲಿದ್ದು ಬಡವರ ಮತ್ತು ಶ್ರೀಮಂತರ ನಡುವಿನ ಅಂತರ, ತಾರತಮ್ಯಗಳು ಹೆಚ್ಚಾಗಲು ಕಾರಣವಾಗಿದೆ. ಮಕ್ಕಳಲ್ಲಿ ಸಹೋದರತೆ,‌ ಪ್ರೀತಿ, ವಾತ್ಸಲ್ಯ, ಸೌಹಾರ್ದತೆಗಳೆಲ್ಲವೂ ಜೀವಂತವಾಗಿರಬೇಕಾದರೆ ಸರಕಾರ ಪದವಿ ಪೂರ್ವವರೆಗಿನ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕೆಂದು ಕಿಟೆಲ್‌‌ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಠಲ್ ಎ ಅವರು ನಿನ್ನೆ (20-5-2023) ಪಕ್ಕಲಡ್ಕ ಯುವಕ ಮಂಡಲ( ರಿ), ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆದ ಆಟ ಪಾಠ ಮಕ್ಕಳ ಸಂತಸ‌ ಕಲಿಕಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸರಕಾರ ಸರಿಯಾಗಿ ಮನಸ್ಸು ಮಾಡಿದರೆ ಸರಕಾರಿ ಶಾಲೆಗಳನ್ನು ಮಾದರಿಯಾಗಿ ನಡೆಸುವುದು ಬಹಳ ಕಷ್ಟದ ಕೆಲಸವೇನಲ್ಲ. ಈ ಹಿಂದೆ ಎಲ್ಲರೂ ಸರಕಾರಿ ಶಾಲೆಯಲ್ಲೇ ಕಲಿತವರು. ಆ ಶಾಲೆಗಳಲ್ಲಿ ಕಲಿತಂತವರೇ ಸಮಾಜದಲ್ಲಿ ಬಹಳಷ್ಟು ಸಾಧನೆ ಮಾಡಿದ ಸಾಧಕರು ನಮ್ಮ ನಡುವೆ ಇದ್ದಾರೆ. ಸರಕಾರವೇ ನಡೆಸುವಂತಹ ಕೇಂದ್ರೀಯ ವಿದ್ಯಾಲಯ, ನವೋದಯ, ಎನ್ಐಟಿಕೆಯಂತಹ ಶಾಲೆಗಳಲ್ಲಿ ಈಗಲೂ ಮಾದರಿ ಶಿಕ್ಷಣವನ್ನು ನೀಡಲಾಗುತ್ತಿದ್ದೆ ಅಲ್ಲಿ ಪ್ರವೇಶ ಪಡೆಯುವುದೇ ಒಂದು ಸವಾಲಿನ ಕೆಲಸ. ಆದರೆ ಅಲ್ಲಿ ಎಷ್ಟು ಜನರಿಗೆ ಶಿಕ್ಷಣವನ್ನು ಪಡೆಯಲು ಸಾಧ್ಯ. ಎನ್ಐಟಿಕೆಯಂತಹ ಇಂಜನೀಯರಿಂಗ್ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗಿಂತ ಹೊರ ರಾಜ್ಯದ ವಿದ್ಯಾರ್ಥಿಗಳೇ ಜಾಸ್ತಿ. ನಮ್ಮ ರಾಜ್ಯದ ವಿದ್ಯಾರ್ಥಿಗಳು ಸರಕಾರಿ ಇಂಜನೀಯರಿಂಗ್ ಕಾಲೇಜುಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸಲು ಸಾಧ್ಯವಾಗಬೇಕು. ಇನ್ನು ಈಗಿನ ತಂತ್ರಜ್ಞಾನ ಮುಂದುವರಿದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆ ಅತಿಯಾಗಿದೆ ಇದು ಬಹಳ ಅಪಾಯಕಾರಿ. ಪರಸ್ಪರ ಮುಖ ನೋಡದೆ ವ್ಯವಹರಿಸುವಂತಹ ನಡವಳಿಕೆಯಿಂದಾಗಿ ಅಪನಂಬಿಕೆಗಳು ಜಾಸ್ತಿಯಾಗಿದೆ. ಅತೀಯಾದ ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕಳಪೆ ಫಲಿತಾಂಶವನ್ನು ನೀಡುವಂತಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ, ಶಿಕ್ಷಣಕ್ಕೆ ಸದಾ ಪ್ರೋತ್ಸಾಹಿಸುವ ಪಕ್ಕಲಡ್ಕ ಯುವಕ ಮಂಡಲ ಹಾಗೂ ಡಿವೈಎಫ್ಐ ನಡೆ ಅಭಿನಂದನೀಯ. ಒಂದು ವಾರಗಳ‌ ಕಾಲ ಬೇಸಿಗೆ ಶಿಬಿರದಲ್ಲಿ ಕಲಿತ ಕಲಿಕೆಯನ್ನು ಮರೆಯಬಾರದೆಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೆನೆಪೋಯ ಕಾಲೇಜಿನ ಪ್ರಾಧ್ಯಾಪಕರಾದ ಡಾ ಸವಿತಾ ಸುವರ್ಣ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ಮನೋಜ್ ವಾಮಂಜೂರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಯುವ ಉದ್ಯಮಿ ವಿಜಯ ಬಜಾಲ್, ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ, ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್ ಉಪಸ್ಥಿತರಿದ್ದರು. ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ನ ನಗರ ಅಧ್ಯಕ್ಷರಾದ ಪ್ರಥಮ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಸ್ತಾವಿಕ ಮಾತನ್ನಾಡಿದರು. ಶಿಬಿರಾರ್ಥಿ ಆಯುಷ್ ಸ್ವಾಗತಿಸಿ ಕುಮಾರಿ ಮಾನ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಪರಿಸರ ಸಂರಕ್ಷಣೆಯ ಕುರಿತು ಕನಸು ನಾಟಕವನ್ನು ಶಿಬಿರಾರ್ಥಿಗಳು ನಟಿಸಿ ಪ್ರದರ್ಶಿಸಿದರು.

Donate Janashakthi Media

Leave a Reply

Your email address will not be published. Required fields are marked *