ಚೆನ್ನೈ : ಕೋವಿಡ್ ಲಸಿಕೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರಬರೆದ ಬೆನ್ನಲ್ಲೇ ಮದ್ರಾಸ್ ಹೈ ಕೋರ್ಟ್ ” ಹಣಕೊಟ್ಟು ಲಸಿಕೆ ಪಡೆಯಲು ಸಾರ್ವಜನಿಕರಿಂದ ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.
ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಜನರು ಅಥವಾ ಕಡಿಮೆ ಸವಲತ್ತು ಹೊಂದಿರುವವರು 400-600 ರೂಪಾಯಿ ತೆತ್ತು ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಎಲ್ಲರಿಗೂ ಲಸಿಕೆ ಹೊರೆಯಾಗದಂತೆ ನೋಡಿಕೊಳ್ಳಿ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಬರೆದ ಪತ್ರಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕೋವಿಡ್ ಸಾಂಕ್ರಾಮಿಕತೆಯನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ಕುರಿತು ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಈ ಕಳಕಳಿ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಶಂಕರನಾರಾಯಣನ್ ಅವರು ನ್ಯಾಯಾಲಯದ ಕಳಕಳಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಇದನ್ನೂ ಓದಿ : ಕೋವಿಡ್ ನಿರ್ವಹಣೆಯಲ್ಲಿ ಹಿನ್ನಡೆ: ಕೇಂದ್ರಕ್ಕೆ ಪ್ರಶ್ನೆ ಮಾಡಿದ ಸುಪ್ರೀಂ
ಮೇ 1ರಿಂದ 18-45 ವಯೋಮಾನದವರಿಗೆ ಲಸಿಕೆಗೆ ನೀಡುವ ವೇಳೆಯಲ್ಲಿಯೇ ಲಸಿಕೆಯ ನೂತನ ದರ ಪ್ರಕಟಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಸರ್ಕಾರಿ ಕೌಂಟರ್‌ಗಳಲ್ಲಿ ಒಮ್ಮೆ ಲಸಿಕೆಗೆ 400 ರೂಪಾಯಿ ಹಾಗೂ ಖಾಸಗಿ ಕಡೆಗಳಲ್ಲಿ ಒಮ್ಮೆ ಲಸಿಕೆ ಪಡೆಯಲು 600 ರೂಪಾಯಿ ವಿಧಿಸುವುದರಿಂದ ದೇಶದ ಕೌಟುಂಬಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟು ನೋಡುವುದಾದರೆ ಬಹುತೇಕ ಜನ ಸಮುದಾಯಕ್ಕೆ ಅದನ್ನು ಪಡೆಯಲಾಗದು” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಕಡಿಮೆ ಸೌಕರ್ಯ ಹೊಂದಿರುವ ಜನರು, ಮೂಲಸೌಕರ್ಯವಿಲ್ಲದವರು ಮತ್ತು ಕಳೆದ ವರ್ಷದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡವರು ಹೇಗೆ ಅಷ್ಟು ದುಬಾರಿ ಮೊತ್ತ ತೆತ್ತು ಲಸಿಕೆ ಪಡೆಯುತ್ತಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.