ಬೆಂಗಳೂರಿನಲ್ಲಿ ಸಂಭವಿಸಿದ ಮಳೆ ಅನಾಹುತಗಳಿಗೆ ತುಷಾರ್ ಗಿರಿನಾಥ್ ಅವರೇ ನೇರ ಹೊಣೆ!

ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ಮಳೆ ಅನಾಹುತಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ ನೇರ ಹೊಣೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಳೆ ಅನಾಹುತಕ್ಕೆ ರಾಜಕಾಲುವೆಗಳ ಒತ್ತುವರಿ ಕಾರಣ ಎಂಬ ಸತ್ಯ ಗೊತ್ತಿದ್ದರೂ ಆಯುಕ್ತರು ಒತ್ತುವರಿ ತೆರವು ಮಾಡಿಸಲು ನಿರಾಸಕ್ತಿ ತೋರಿರುವುದೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎನ್ನಲಾಗಿದೆ.

ದೊಡ್ಡ ಬೊಮ್ಮಸಂದ್ರ, ಯಲಹಂಕ ಹಾಗೂ ಮಾನ್ಯತಾ ಟೆಕ್ ಪಾರ್ಕ್‌ಗಳಲ್ಲಿ ಅತಿ ಹೆಚ್ಚು ಮಳೆ ಅನಾಹುತಗಳು ಸಂಭವಿಸಿವೆ. ಅಲ್ಲಿನ ಅನಾಹುತಗಳಿಗೆ ರಾಜಕಾಲುವೆ ಒತ್ತುವರಿ ಕಾರಣ. ಸಕಾಲಕ್ಕೆ ಒತ್ತುವರಿ ತೆರವುಗೊಳಿಸಿದ್ದರೆ ಇಷ್ಟೆಲ್ಲಾ ಅನಾಹುತಗಳು ಸಂಭವಿಸುತ್ತಿರಲಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ದೊಡ್ಡ ಬೊಮ್ಮಸಂದ್ರ ಕೆರೆ ಕೋಡಿ ಬಿದ್ದ ನೀರು ಹೊರಗೆ ಹರಿದುಹೋಗಲು ನಿರ್ಮಿಸಿರುವ ಕಾಲುವೆಯನ್ನು ಕಿಡಿಗೇಡಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕೋಡಿ ನೀರು ಹೊರ ಹರಿದು ಸುತ್ತಮುತ್ತಲ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿರುವುದು ಸಾಬೀತಾಗಿದೆ.

ರಾಜಕಾಲುವೆ ಒತ್ತುವರಿಯಾಗಿರುವುದು ಗೊತ್ತಿದ್ದರೂ ಬಿಬಿಎಂಪಿ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತುವರಿ ತೆರವು ಮಾಡಲು ಸೂಚನೆ ನೀಡಿರಲಿಲ್ಲ. ಇದರ ಜೊತೆಗೆ ಯಲಹಂಕದ ಕೇಂದ್ರೀಯ ವಿಹಾರ್ ಸಮೀಪದ 20 ಅಡಿ ಉದ್ದದ ರಾಜಕಾಲುವೆಯನ್ನು ಕೇವಲ ಮೂರು ಅಡಿಗೆ ಇಳಿಸಿರುವುದು ಕಂಡು ಬಂದಿದೆ.

ಇದನ್ನು ಓದಿ : ಬೆಂಗಳೂರು| ಧಾರಾಕಾರ ಸುರಿದ ಮಳೆಗೆ ಸೇತುವೆ ಕುಸಿತ

ಅದೇ ರೀತಿ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ರಾಜಕಾಲುವೆಯನ್ನು ಕಿರಿದಾಗಿಸಿರುವುದೇ ಈ ಮೂರು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಅನಾಹುತ ಸಂಭವಿಸಲು ಕಾರಣ ಎನ್ನಲಾಗಿದೆ. ಅದರಲ್ಲೂ ಕಳೆದ 10 ದಿನಗಳಲ್ಲಿ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಮೂರು ಬಾರಿ ಜಲದಿಗ್ಬಂಧನಕ್ಕೆ ಒಳಗಾಗಿದೆ. ಇದಕ್ಕೆಲ್ಲಾ ಕಾರಣ ರಾಜಕಾಲುವೆ ಒತ್ತುವರಿ ಎನ್ನುವುದು ಗೊತ್ತಿದ್ದರೂ ಬಿಬಿಎಂಪಿ ಸುಮ್ಮನಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಎಲ್ಲಾ ಆದ ನಂತರ ಎಚ್ಚೆತ್ತುಕೊಂಡ ನಾಟಕ ಆಡುತ್ತಿರುವ ಬಿಬಿಎಂಪಿ ಅಧಿಕಾರಿಗಳು ಈಗ ಅಪಾರ್ಟ್ಮೆಂಟ್‌ನವರಿಗೆ ನೋಟೀಸ್‌ಜಾರಿ ಮಾಡಿರುವುದು ಹಾಸ್ಯಸ್ಪದಕ್ಕೆ ಈಡಾಗಿದೆ.

ಒತ್ತುವರಿ ಆಗಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಬದಲು ಅಪಾರ್ಟ್ ಮೆಂಟ್ ಸುತ್ತ 8 ಅಡಿ ಎತ್ತರದ ಆರ್‌ಸಿಸಿ ತಡೆಗೋಡೆ ನಿರ್ಮಿಸಲು ಸೂಚನೆ ನೀಡಿರುವುದು ಬಿಬಿಎಂಪಿ ಆಯುಕ್ತರ ಧೋರಣೆಗೆ ಸಾಕ್ಷಿಯಾಗಿದೆ. ಇನ್ನು ರಾಜಕಾಲುವೆಗಳಲ್ಲಿ ಹೂಳು ತೆಗೆಯಲಾಗಿದೆ ಎಂದು ಕೆಲ ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಕೆಲವರ ವಿರುದ್ಧ ದೂರು ನೀಡಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರು ಹಿಂದು ಮುಂದು ನೋಡುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರತಿ ಬಾರಿ ಸಂಭವಿಸುವ ಮಳೆ ಅನಾಹುತದ ಸಂದರ್ಭದಲ್ಲಿ ಮಾತ್ರ ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತೇವೆ ಎಂದು ಬೊಬ್ಬೆ ಹೊಡೆಯುವ ಆಯುಕ್ತರು ಆರಂಭದಲ್ಲಿ ಮಾತ್ರ ಶೂರತ್ವ ತೋರಿ ನಂತರ ಮತ್ತೆ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿಕೊಂಡೇ ಬರುತ್ತಿರುವುದನ್ನು ನೋಡಿದರೆ ಅವರು ಯಾರದೋ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಎನ್ನುತ್ತಿದ್ದಾರೆ .

ಇದನ್ನು ನೋಡಿ : ಭ್ರಷ್ಟ ರಾಜಕೀಯ ಹಾಗೂ ಅಧಿಕಾರಶಾಹಿಗೆ ಅಮಾಯಕ ಕಟ್ಟಡ ಕಾರ್ಮಿಕರು ಬಲಿ Janashakthi Media

Donate Janashakthi Media

Leave a Reply

Your email address will not be published. Required fields are marked *