ಸೋಮಣ್ಣ ಸೆಳೆಯಲು ಕೈ ತಂತ್ರ: ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ?

ಬೆಂಗಳೂರು: ಆಪರೇಷನ್ ಹಸ್ತದ ಬಗ್ಗೆ ವ್ಯಾಪಕ ವದಂತಿಗಳ ನಡುವೆ ರಾಜಕೀಯವಾಗಿ ಕಂಡುಬಂದಿರುವ ಪ್ರತಿತಂತ್ರಗಳು ಕಾಂಗ್ರೆಸ್ ಪಾಳಯವನ್ನು ನಿರಾಶೆಗೀಡು ಮಾಡುತ್ತದೆಯೇ ಎಂಬ ಅನುಮಾನ ಕೇಳಿಬರುತ್ತಿದೆ. ಜೆಡಿಎಸ್, ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿದ್ದ ವಲಸಿಗರು ಮರಳಿ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‍ನಿಂದ ಈ ಮೊದಲು ವಿವಿಧ ಹಂತಗಳಲ್ಲಿ ಬಿಜೆಪಿ ಸೇರಿದ್ದ ಹಲವಾರು ಮಾಜಿ ಶಾಸಕರು ಮತ್ತೆ ಪಕ್ಷ ಸೇರುವ ಸುಳಿವು ನೀಡಿದ್ದಾರೆ.

ಇದರಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರ ಹೆಸರೂ ಕೂಡ ಪ್ರಮುಖವಾಗಿ ಕೇಳಿಬರುತ್ತಿದ್ದು, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಎಂಬ ವದಂತಿಗಳಿವೆ. ಈ ಮೊದಲು ವಿಧಾನಸಭೆ ಚುನಾ ವಣೆಯ ಸಂದರ್ಭದಲ್ಲೇ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆಗಳಿದ್ದವು. ಸಚಿವರಾಗಿದ್ದ ಅವರು ಪಕ್ಷಾಂತರ ಮಾಡಿದರೆ ಪಕ್ಷಕ್ಕೆ ಮುಖಭಂಗವಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿಯ ವರಿಷ್ಠರು ಅವರನ್ನು ತಡೆದು ಮಾತುಕತೆ ನಡೆಸಿದ್ದರು. ನಂತರ ಸೋಮಣ್ಣ ಅವರಿಗೆ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಇತ್ತ ಸೋಮಣ್ಣ ಅವರ ಮೂಲಕ್ಷೇತ್ರ ಗೋವಿಂದರಾಜನಗರದಿಂದ ಅವರನ್ನು ಒಕ್ಕಲೆಬ್ಬಿಸಲಾಗಿತ್ತು. ಚುನಾವಣೆಯ ಬಳಿಕ ಸೋಮಣ್ಣ ಸ್ರ್ಪಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲು ಕಂಡಿದ್ದಾರೆ. ಅದರ ಬೆನ್ನಲ್ಲೇ ಅವರು ಪಶ್ಚಾತ್ತಾಪದ ಮಾತುಗಳನ್ನಾಡಿದ್ದು, ತಾವು ವರಿಷ್ಠರ ಮಾತು ಕೇಳಿ ಸ್ವಕ್ಷೇತ್ರವನ್ನು ಬಿಟ್ಟುಹೋಗಬಾರದೆಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ತಮಗೆ ಬಿಜೆಪಿಯ ರಾಜ್ಯಾಧ್ಯಕ್ಷರ ಸ್ಥಾನ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು. ಅದಕ್ಕೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಅಸಮಾಧಾನದಲ್ಲೇ ಕುದಿಯುತ್ತಿರುವ ಸೋಮಣ್ಣ ಅವರನ್ನು ಕಾಂಗ್ರೆಸ್‍ಗೆ ಸೆಳೆಯುವ ಯತ್ನ ನಡೆಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ತುಮಕೂರಿನಲ್ಲಿ ಸ್ರ್ಪಧಿಸಲು ಅವಕಾಶ ನೀಡಬೇಕು ಎಂಬುದು ಸೋಮಣ್ಣ ಅವರ ಬೇಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹೈಕಮಾಂಡ್ ಅದಕ್ಕೆ ಮನ್ನಣೆ ನೀಡದೇ ಇದ್ದರೆ ಸೋಮಣ್ಣ ಮತ್ತೆ ಕಾಂಗ್ರೆಸ್‍ನತ್ತ ಮುಖ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಈವರೆಗೂ ನಡೆದಿರುವ ಚರ್ಚೆಗಳು ಸಕಾರಾತ್ಮಕವಾಗಲಿವೆ ಎಂಬ ಮಾಹಿತಿಗಳು ದೊರೆತಿವೆ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದೇ ಆದರೆ ಅವರನ್ನು ತುಮಕೂರಿನಿಂದಲೇ ಕಣಕ್ಕಿಳಿಸಲು ಸಮಾಲೋಚನೆಗಳು ನಡೆದಿವೆ ಎಂದು ವಿಧಾನಸೌಧದ ತುಂಬೆಲ್ಲ ಚರ್ಚೆಗಳು ಕೇಳಿ ಬಂದಿವೆ.

Donate Janashakthi Media

Leave a Reply

Your email address will not be published. Required fields are marked *