ಟ್ರಂಪ್ MAGA ಮೂಲಕ ಪ್ರಯತ್ನಿಸುತ್ತಿರುವುದು ಬಂಡವಾಳಶಾಹಿ ಜಗತ್ತಿನ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಮುಂದಾಳುತ್ವ ವಹಿಸುವ ಮೂಲಕ ಅಲ್ಲ, ಬದಲಾಗಿ ಉಳಿದ ಬಂಡವಾಳಶಾಹಿ ಜಗತ್ತಿನ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳ ಕೈ ತಿರುಚಿ ಅವು ಇನ್ನೂ ಹೆಚ್ಚು ದುಃಖವನ್ನು ನುಂಗುವಂತೆ ಮಾಡುವ ಮೂಲಕ ಅಮೆರಿಕ ಮಾತ್ರವೇ ಬಿಕ್ಕಟ್ಟಿನಿಂದ ಹೊರಬರುವುದಕ್ಕಾಗಿ. ಟ್ರಂಪ್ ಸುಂಕಗಳು ನಮ್ಮ ದೇಶವನ್ನು, ರೈತರ ಹಿತಾಸಕ್ತಿಗಳನ್ನು ಬಲಿ ಕೊಡಬೇಕೋ, ಅಥವಾ ಔಷಧಗಳು, ರತ್ನಾಭರಣಗಳು, ಬಟ್ಟೆ ಮುಂತಾದವುಗಳನ್ನು ಉತ್ಪಾದಿಸುವವರ ಹಿತಾಸಕ್ತಿಗಳನ್ನು ಬಲಿ ಕೊಡಬೇಕೋ ಎಂಬುದರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದಂತಹ ಒಂದು ಸನ್ನಿವೇಶವನ್ನು ಸೃಷ್ಟಿಸಿವೆ. ಇದರಿಂದ ಹೊರಬರುವ ಮಾರ್ಗವೆಂದರೆ, ಅಂತಹ ಯಾವುದೇ ಆಯ್ಕೆಯನ್ನು ಮಾಡುವುದಲ್ಲ, ಬದಲಿಗೆ ನಮ್ಮ ದೇಶವನ್ನು ಈ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಬಲವಂತಕ್ಕೆ ಒಳಗಾಗಿಸುವ ಸ್ಥಿತಿಗೆ ತಂದು ನಿಲ್ಲಿಸಿರುವ ನವ-ಉದಾರವಾದಿ ವ್ಯವಸ್ಥೆಯನ್ನೇ ಮೀರಿ ನಿಲ್ಲುವುದು. ಸುಂಕಗಳು
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಡೊನಾಲ್ಡ್ ಟ್ರಂಪ್ ಅವರ ಸುಂಕಗಳ ಬಗ್ಗೆ ಮಾಮೂಲಿನ ಮಾಧ್ಯಮ ಚರ್ಚೆಗಳು ಈ ಸುಂಕಗಳನ್ನು ಹೇರಿದ ಒಂದು ವಿಲಕ್ಷಣ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಮೆರಿಕ ಸರ್ಕಾರವು ಸರಕುಗಳ ಮತ್ತು ಸೇವೆಗಳ ಖರೀದಿಯ ಮೇಲೆ ಅಧಿಕವಾಗಿ ಹೇರಿದ ಸುಂಕಗಳ ಮೂಲಕ ಬರುವ ಆದಾಯವನ್ನು ಖರ್ಚು ಮಾಡಲು ಇಷ್ಟಪಡುವುದಿಲ್ಲ ಎಂಬುದೇ ಆ ಸನ್ನಿವೇಶ. ಈ ವಿಷಯವನ್ನು ಈ ಕೆಳಗೆ ವಿವರಿಸಲಾಗಿದೆ. ಟ್ರಂಪ್ ಹೇರಿದ ಸುಂಕಗಳ ಪರಿಣಾಮವಾಗಿ ಅಮೆರಿಕದ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿರುವ ಇತರ ದೇಶಗಳು ತಮಗೆ ಉಂಟಾಗುವ ನಷ್ಟವನ್ನು ತಮ್ಮ ತಮ್ಮ ದೇಶೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ಮೂಲಕ ಸರಿದೂಗಿಸಿಕೊಳ್ಳುವುದು ಕೂಡ ಸಾಧ್ಯವಾಗುತ್ತಿಲ್ಲ. ಇಂತಹ ಆಂತರಿಕ ಮಾರುಕಟ್ಟೆ ವಿಸ್ತರಣೆ ಸರಕಾರ ಹೆಚ್ಚು ಖರ್ಚು ಮಾಡುವ ಮೂಲಕ ಮಾತ್ರಸಾಧ್ಯವಿದ್ದು, ಅದನ್ನು ಒಂದೋ ವಿತ್ತೀಯ ಕೊರತೆಯ ಮೂಲಕ ಮಾಡಬೇಕು, ಇಲ್ಲವೇ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಮಾಡಬೇಕು. ಸುಂಕಗಳು
ಆದರೆ, ಈ ಕ್ರಮಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಇಷ್ಟಪಡುವುದಿಲ್ಲ. ಈಗಿನ ನವ-ಉದಾರವಾದಿ ಆಳ್ವಿಕೆಯಡಿಯಲ್ಲಿ ರಾಷ್ಟ್ರ-ಪ್ರಭುತ್ವವು ಜಾಗತಿಕ ಹಣಕಾಸು ಬಂಡವಾಳದ ಇಚ್ಛೆಯನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ, ಅಮೇರಿಕ ಅನುಸರಿಸಬಯಸುವ ವ್ಯಾಪಾರ-ರಕ್ಷಣಾ ನೀತಿಯು ಅಂತಿಮವಾಗಿ ಒಟ್ಟು ವಿಶ್ವ ಬೇಡಿಕೆಯನ್ನು ಕುಗ್ಗಿಸುತ್ತದೆ ಮತ್ತು ಆಮೂಲಕ ನವ-ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ. ಟ್ರಂಪ್ ಹೇರುವ ಸುಂಕಗಳು ಅಮೆರಿಕದೊಳಗೆ ಉತ್ಪಾದನೆಯನ್ನು ಮತ್ತು ಉದ್ಯೋಗಾವಕಾಶಗಳನ್ನು ಒಂದು ವೇಳೆ ಹೆಚ್ಚಿಸಿದರೂ ಸಹ, ವಿಶ್ವ ಬಂಡವಾಳಶಾಹಿ ಬಿಕ್ಕಟ್ಟನ್ನು ಅವು ಮತ್ತಷ್ಟು ಹದಗೆಡಿಸುತ್ತವೆ. ಏಕೆಂದರೆ, ಅಮೆರಿಕ ಮತ್ತು ಇತರ ದೇಶಗಳನ್ನು ಒಟ್ಟಿಗೆ ತೆಗೆದುಕೊಂಡು ಲೆಕ್ಕಹಾಕಿದಾಗ ಉತ್ಪಾದನೆಯ ಮಟ್ಟವು ಇಳಿಕೆಯಾಗಿರುತ್ತದೆ. ಮಾಧ್ಯಮ ಚರ್ಚೆಗಳು ಈ ಅಂಶದ ಬಗ್ಗೆ ಗಮನವನ್ನೇ ಹರಿಸಿಲ್ಲ. ಸುಂಕಗಳು
ಇದನ್ನೂ ಓದಿ: ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಿ: ಎಎಪಿ ನಾಯಕ ಒತ್ತಾಯ
ಒಟ್ಟು ವಿಶ್ವ ಬೇಡಿಕೆಯ ಇಳಿಕೆ ಹೇಗೆ ಸಂಭವಿಸುತ್ತದೆ ಎಂಬುದನ್ನು ನಾವೀಗ ನೋಡೋಣ. ಸುಂಕಗಳು, ಹಣ ಕೂಲಿಗೆ ಹೋಲಿಸಿದರೆ, ಆಮದು ಮಾಡಿಕೊಂಡ ಸರಕುಗಳ ಬೆಲೆಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಏರಿಸುತ್ತವೆ. ಹಾಗಾಗಿ, ಸರಕುಗಳನ್ನು ದೇಶೀಯವಾಗಿ ಉತ್ಪಾದಿಸಿದಾಗ ಆಮದುಗಳನ್ನು ಭಾಗಶಃವಾಗಿಯಾದರೂ ಬದಲಾಯಿಸುವುದು ಸಾಧ್ಯವಾಗುತ್ತದೆ. ಸುಂಕಗಳು ಆಮದುಗಳೇ ಇಲ್ಲದಂತೆ ಮಾಡುವಲ್ಲಿ ಪರಿಣಮಿಸದಿದ್ದರೂ ಸಹ, ಕೆಲವು ವಸ್ತುಗಳ ಆಮದನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸುತ್ತವೆ. ಮುಂದುವರಿಯುವ ಆಮದುಗಳ ಮೇಲೆ ಹೇರುವ ಸುಂಕಗಳು ಬೆಲೆ ಏರಿಕೆಯನ್ನು ಉಂಟುಮಾಡುತ್ತವೆ. ಗ್ರಾಹಕರು ಪಾವತಿಸುವ ಸುಂಕದ ಆದಾಯವನ್ನು ಸರ್ಕಾರ ಸಂಗ್ರಹಿಸುತ್ತದೆ. ಈ ಗ್ರಾಹಕರು ಪ್ರಧಾನವಾಗಿ ದುಡಿಯುವ ಜನರೇ ಆಗಿರುತ್ತಾರೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಸುಂಕಗಳು ಆಮದುಗಳು ಇಲ್ಲವೇ ಇಲ್ಲ ಎನ್ನುವಂತೆ ಮಾಡುವುದಿಲ್ಲವಾದರೂ, ಸ್ವಲ್ಪ ಆದಾಯವನ್ನಂತೂ ತರುತ್ತವೆ ಮತ್ತು ಕೊಳ್ಳುವ ಶಕ್ತಿಯನ್ನು ದುಡಿಯುವ ಜನರಿಂದ ಸರ್ಕಾರಕ್ಕೆ ವರ್ಗಾಯಿಸುತ್ತವೆ. ಸುಂಕಗಳು
ದುಡಿಯುವ ಜನರು ತಮ್ಮ ಕೊಳ್ಳುವ ಶಕ್ತಿಯನ್ನು ಸಂಪೂರ್ಣವಾಗಿ ಸರಕು ಮತ್ತು ಸೇವೆಗಳ ಮೇಲೆ ಖರ್ಚು ಮಾಡುವುದರಿಂದ ಮತ್ತು ಕೊಳ್ಳುವ ಶಕ್ತಿಯು ಅವರ ಜೇಬಿನಿಂದ ಸರ್ಕಾರದ ಖಜಾನೆಗೆ ಹೋಗುವುದರಿಂದ ಮತ್ತು ಈ ಸುಂಕದ ಆದಾಯವನ್ನು ಸರ್ಕಾರವು ಸರಕು ಮತ್ತು ಸೇವೆಗಳ ಖರೀದಿಗೆ ಖರ್ಚು ಮಾಡುವಂತಿದ್ದರೆ, ಈ ಮರುಹಂಚಿಕೆಯು ಸುಂಕ ವಿಧಿಸುವ ದೇಶದೊಳಗಿನ ಒಟ್ಟು ಬೇಡಿಕೆಯ ಮಟ್ಟವನ್ನು ಕಡಿಮೆ ಮಾಡುವುದಿಲ್ಲ. ಆದರೆ, ಈ ಸುಂಕದಿಂದ ಬರುವ ಆದಾಯವನ್ನು ಸರಕು ಮತ್ತು ಸೇವೆಗಳ ಮೇಲೆ ಒಂದು ವೇಳೆ ಖರ್ಚು ಮಾಡದಿದ್ದರೆ, ಆಗ, ಸುಂಕ ವಿಧಿಸುವ ದೇಶದಲ್ಲಿ ಒಟ್ಟು ಬೇಡಿಕೆಯ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಅಮೆರಿಕದಲ್ಲಿ ಸಂಭವಿಸುವ ವಿದ್ಯಮಾನವು ನಿಖರವಾಗಿ ಇದುವೇ, ಏಕೆಂದರೆ, ಟ್ರಂಪ್ ತಾನು ಹೇರಿದ ಸುಂಕಗಳಿಂದ ಬರುವ ಆದಾಯವನ್ನು ಸರಕು ಮತ್ತು ಸೇವೆಗಳ ಮೇಲೆ ಖರ್ಚು ಮಾಡುವುದಿಲ್ಲ. ಸುಂಕಗಳು
ಅಮೆರಿಕದಿಂದ “ನಿರುದ್ಯೋಗ ರಫ್ತು” ವಿನ ಪ್ರಕರಣವಷ್ಟೇ ಅಲ್ಲ….
ಟ್ರಂಪ್ ಆಡಳಿತವು ಶ್ರೀಮಂತರಿಗೆ ಭಾರಿ ತೆರಿಗೆ ರಿಯಾಯಿತಿಗಳನ್ನು ನೀಡುತ್ತಿದೆ ಮತ್ತು ಈ ರಿಯಾಯಿತಿಗಳಿಂದ ಉಂಟಾಗುವ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳಲು ಸುಂಕದಿಂದ ಬಂದ ಆದಾಯವನ್ನು ಬಳಸಿಕೊಳ್ಳಲಾಗುವುದು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ ಸುಂಕದ ಆದಾಯವನ್ನು ಖರ್ಚುಗಳಿಗಾಗಿ ಬಳಸಿಕೊಳ್ಳದೆ ಅದನ್ನು ಹಣಕಾಸಿನ ಕೊರತೆಯನ್ನು ತಗ್ಗಿಸಿಕೊಳ್ಳಲು ಬಳಸಲಾಗುವುದು. ಅಂದರೆ, ಸರ್ಕಾರವು ಪಡೆಯುವ ಪ್ರತಿ ಡಾಲರ್ ಸುಂಕದ ಆದಾಯವೂ ಅಮೆರಿಕದಲ್ಲಿ ಒಟ್ಟು ಬೇಡಿಕೆಯ ಮಟ್ಟವನ್ನು ಇಳಿಕೆ ಮಾಡುವ ಪರಿಣಾಮವನ್ನು ಹೊಂದಿರುತ್ತದೆ. ವಿಶ್ವದ ಉಳಿದ ಭಾಗಗಳ ಸರ್ಕಾರಗಳ ಖರ್ಚುಗಳು ಅಮೆರಿಕದಲ್ಲಿ ಬೇಡಿಕೆಯ ಈ ಇಳಿಕೆಯನ್ನು ಸರಿದೂಗಿಸುವ ಮಟ್ಟಕ್ಕೆ ಏರಿಕೆಯಾಗುವುದಿಲ್ಲ. ಸುಂಕಗಳು

ಆದ ಕಾರಣ, ಇಡೀ ವಿಶ್ವವನ್ನು ಒಟ್ಟಾರೆಯಾಗಿ ತೆಗೆದುಕೊಂಡಾಗ, ಒಟ್ಟು ಬೇಡಿಕೆಯ ಮಟ್ಟವು ಇಳಿಯುತ್ತದೆ. ಇದು ವಿಶ್ವ ಅರ್ಥವ್ಯವಸ್ಥೆಯಲ್ಲಿ ಹಿಂಜರಿತದ ಸ್ಥಿತಿಯನ್ನು ಹೆಚ್ಚಿಸುತ್ತದೆ. ಅಮೆರಿಕದಲ್ಲಿ, ಒಟ್ಟು ಬೇಡಿಕೆಯ ಇಳಿಕೆಯ ಹೊರತಾಗಿಯೂ, ಆಮದುಗಳ ವೆಚ್ಚದಲ್ಲಿ ದೇಶೀಯ ಉತ್ಪಾದನೆಯು ಏರಿಕೆಯಾಗಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸುಂಕದಿಂದಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಸ್ಥಿತಿ ಸುಧಾರಿಸಬಹುದಾದರೂ, ಬಂಡವಾಳಶಾಹಿ ಜಗತ್ತನ್ನು ಒಟ್ಟಾರೆಯಾಗಿ ನೋಡಿದಾಗ, ಅಂದರೆ ಅಮೆರಿಕ ಮತ್ತು ಉಳಿದ ಪ್ರಪಂಚವನ್ನು ಒಟ್ಟಿಗೆ ತೆಗೆದುಕೊಂಡರೆ, ಚಟುವಟಿಕೆಯ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ.
ಇದು ಅಮೆರಿಕದಿಂದ “ನಿರುದ್ಯೋಗ ರಫ್ತು”ವಿನ ಪ್ರಕರಣವಷ್ಟೇ ಅಲ್ಲ, ಅಂದರೆ, ಅಮೆರಿಕವು ಅನುಸರಿಸುತ್ತಿರುವ “ನಿನ್ನ ನೆರೆಯವನು ಹಾಳಾಗಲಿ” ನೀತಿಯ ಒಂದು ಸರಳ ಪ್ರಕರಣವಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚು ಕ್ರೂರವಾದುದು. ಆಮದುಗಳ ಮೇಲೆ ಹೇರಿದ ಸುಂಕದ ಪರಿಣಾಮವಾಗಿ ಅಮೆರಿಕದಲ್ಲಿ ದೇಶೀಯ ಉತ್ಪಾದನೆಯು ಒಂದು ವೇಳೆ ಶೇ. 100ರಷ್ಟು ಏರಿಕೆಯಾದರೆ, ಆಗ, ಉಳಿದ ಜಗತ್ತಿನ ಉತ್ಪಾದನೆಯು 120 ಅಥವಾ 150ರಷ್ಟು ಕುಗ್ಗುತ್ತದೆ. ಹಾಗಾಗಿ, ಇಡೀ ಜಗತ್ತಿನಲ್ಲಿ ಉತ್ಪಾದನೆಯ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಇದು, ಸಂಕ್ಷಿಪ್ತವಾಗಿ, ಅಮೆರಿಕದಲ್ಲಿ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವ ಸಮಯದಲ್ಲೇ ಇಡೀ ಜಗತ್ತಿನಲ್ಲಿ ಚಟುವಟಿಕೆಯ ಮಟ್ಟವನ್ನು ವಾಸ್ತವವಾಗಿ ಇಳಿಕೆ ಮಾಡುವ ವಿದ್ಯಮಾನದ ಒಂದು ಪ್ರಕರಣವಾಗುತ್ತದೆ.
ಇದು, ಅಮೆರಿಕದ ಸುಂಕಗಳ ವಿರುದ್ಧ ಇತರ ದೇಶಗಳು ಪ್ರತೀಕಾರ ಕ್ರಮಗಳನ್ನು ಕೈಗೊಂಡರೂ ಸಹ, ಎಳ್ಳಷ್ಟೂ ಬದಲಾಗುವುದಿಲ್ಲ. ಈ ಇತರ ದೇಶಗಳು ತಮ್ಮ ಕಾರ್ಮಿಕರಿಗೆ ನಷ್ಟವನ್ನುಂಟುಮಾಡಿ ಸಂಗ್ರಹಿಸಿದ ತಮ್ಮ ಸುಂಕದ ಆದಾಯವನ್ನು ಒಂದೊ ತಮ್ಮ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳುವ ಮಟ್ಟಿಗೆ ಅಥವಾ ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳನ್ನು ನೀಡಲು ಬಳಕೆಮಾಡಿಕೊಳ್ಳಬಹುದು. ಇದರ ಒಟ್ಟು ಪರಿಣಾಮವು ವಿಶ್ವದ ಒಟ್ಟು ಬೇಡಿಕೆಯನ್ನು ಅಷ್ಟರಮಟ್ಟಿಗೆ ಕುಗ್ಗಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಮೆರಿಕ ಹೇರುವ ಸುಂಕಗಳ ವಿರುದ್ಧ ಇತರ ದೇಶಗಳು ಪ್ರತೀಕಾರದ ಕ್ರಮವಾಗಿ ಅಮೆರಿಕದಿಂದ ಬೇಡಿಕೆಯನ್ನು ಮತ್ತು ಆಮೂಲಕ ಉತ್ಪಾದನೆಯನ್ನು ತಮ್ಮ ತಮ್ಮ ಅರ್ಥವ್ಯವಸ್ಥೆಗಳಿಗೆ ವರ್ಗಾಯಿಸಿಕೊಂಡಾಗ, ಒಟ್ಟಾರೆಯಾಗಿ ಅದು ವಿಶ್ವ ಅರ್ಥವ್ಯವಸ್ಥೆಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಮತ್ತು ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ಸುಂಕಗಳ ಕುರಿತಾದ ಮಾಧ್ಯಮಗಳ ಮಾಮೂಲಿನ ಚರ್ಚೆಯು ಈ ಬಿಕ್ಕಟ್ಟು ಉಲ್ಬಣಗೊಳ್ಳುವ ಅಂಶವನ್ನು ಗಮನಿಸದೆ ಬಿಟ್ಟುಬಿಡುತ್ತದೆ. ಈ ಚರ್ಚೆಯು ಸುಂಕಗಳನ್ನು ಅವು ಬೇರೆ ದೇಶಗಳಿಂದ ಸ್ವದೇಶಕ್ಕೆ ಬೇಡಿಕೆಯನ್ನು ವರ್ಗಾಯಿಸುವ ಒಂದು ಸಾಧನ ಎಂದು ಮಾತ್ರವೇ ನೋಡುತ್ತದೆ. ಆದರೆ, ದುಡಿಯುವ ಜನರಿಗೆ ನಷ್ಟವನ್ನುಂಟುಮಾಡುವ ಮೂಲಕ ಸಂಗ್ರಹಿಸುವ ಸುಂಕದ ಆದಾಯವನ್ನು ಸರ್ಕಾರವು ಖರ್ಚು ಮಾಡುವುದರ ಬದಲು ಅದನ್ನು ತನ್ನ ಬೊಕ್ಕಸಕ್ಕೆ ಸೇರಿಸುವ ಸನ್ನಿವೇಶದಲ್ಲಿ, ಈ ಸುಂಕಗಳ ಹೆಚ್ಚುವರಿ ಪರಿಣಾಮವಾಗಿ, ಒಟ್ಟಾರೆಯಾಗಿ ಜಗತ್ತಿನಲ್ಲಿ ಬೇಡಿಕೆಯನ್ನು ಮತ್ತು ಉತ್ಪಾದನೆಯ ಮಟ್ಟವನ್ನು ಕುಗ್ಗಿಸುತ್ತವೆ. ಅಂದರೆ, ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟನ್ನು ಜಟಿಲಗೊಳಿಸುತ್ತವೆ.
MAGA ಅಂದರೆ ಅಮೆರಿಕದ ಸ್ವಂತ ಹಿತಾಸಕ್ತಿ
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ ವಹಿಸುವ ಪಾತ್ರವು ಮುಖ್ಯವಾಗುತ್ತದೆ. ಉದಾರವಾದಿ ಬೂರ್ಜ್ವಾ ಅಭಿಪ್ರಾಯದ ಪ್ರಕಾರ, ಬಿಕ್ಕಟ್ಟನ್ನು ನಿವಾರಿಸಲು ಮುಂದುವರಿದ ಬಂಡವಾಳಶಾಹಿ ದೇಶಗಳ ಸಂಯೋಜಿತ ಅಭಿಪ್ರಾಯವನ್ನು ರೂಪಿಸುವಲ್ಲಿ ಬಂಡವಾಳಶಾಹಿ ಜಗತ್ತಿನ ನಾಯಕನಾಗಿ ಅಮೆರಿಕವು ಮುಂಚೂಣಿಯಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಉದಾರವಾದಿ ಬೂರ್ಜ್ವಾ ಅರ್ಥಶಾಸ್ತ್ರಜ್ಞರ ಅಭಿಪ್ರಾಯವೂ ಇದೇ ಆಗಿತ್ತು. ಹಾಗೆ ನೋಡಿದರೆ, ಮುಂದುವರಿದ ಬಂಡವಾಳಶಾಹಿ ದೇಶಗಳ ಇಂತಹ ಒಂದು ಸಂಯೋಜಿತ ಕ್ರಮವನ್ನು ಪ್ರಖ್ಯಾತ ಬೂರ್ಜ್ವಾ ಅರ್ಥಶಾಸ್ತ್ರಜ್ಞ ಜೆ.ಎಂ. ಕೀನ್ಸ್ ಅವರು 1930ರ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಸೂಚಿಸಿದ್ದರು.

ಈ ನಿರೀಕ್ಷೆಗೆ ವ್ಯತಿರಿಕ್ತವಾಗಿ ಇಂದು ಅಮೆರಿಕವು ತಾನು ಮಾತ್ರವೇ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿದೆ ಮತ್ತು ಅದೇ ಸಮಯದಲ್ಲಿ ಅದು ಇಡೀ ಬಂಡವಾಳಶಾಹಿ ಜಗತ್ತಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, “ಮತ್ತೊಮ್ಮೆ ಅಮೆರಿಕವನ್ನು ಅಗ್ರ ಮಾನ್ಯ ದೇಶವನ್ನಾಗಿಸಲು” (MAGA) ಟ್ರಂಪ್ ಪ್ರಯತ್ನಿಸುತ್ತಿರುವುದು ಬಂಡವಾಳಶಾಹಿ ಜಗತ್ತಿನ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಮುಂದಾಳತ್ವ ವಹಿಸುವ ಮೂಲಕ ಅಲ್ಲ, ಬದಲಾಗಿ ಉಳಿದ ಬಂಡವಾಳಶಾಹಿ ಜಗತ್ತಿನ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳ ಕೈ ತಿರುಚಿ ಅವು ಇನ್ನೂ ಹೆಚ್ಚು ದುಃಖವನ್ನು ನುಂಗುವಂತೆ ಮಾಡುವ ಮೂಲಕ ಅಮೆರಿಕ ಮಾತ್ರವೇ ಬಿಕ್ಕಟ್ಟಿನಿಂದ ಹೊರಬರುವುದಕ್ಕಾಗಿ.
ಟ್ರಂಪ್ ಒಬ್ಬ ದುಷ್ಟನೊ ಅಥವಾ ಪೆದ್ದನೊ ಆಗಿರುವುದರಿಂದಾಗಿ ಬಿಕ್ಕಟ್ಟಿನಿಂದ ಹೊರಬರುವ ಒಂದು “ಪ್ರಬುದ್ಧ” ಮಾರ್ಗವನ್ನು ತೊರೆದಿದ್ದಾರೆ ಎನ್ನಲಾಗದು. ಅವರು ಏನು ಮಾಡುತ್ತಿದ್ದಾರೊ ಅದು ಉದಾರವಾದಿ ಬೂರ್ಜ್ವಾ ಬುದ್ಧಿಜೀವಿಗಳು ಕಲ್ಪಿಸಿಕೊಳ್ಳುವ ಆಶಾದಾಯಕ ಪರಿಸ್ಥಿತಿಗಿಂತ ಭಿನ್ನವಾಗಿದೆ ಮತ್ತು ಬಂಡವಾಳಶಾಹಿಯ ಸ್ವರೂಪಕ್ಕೆ ಅನುಗುಣವಾಗಿದೆ. ಬಂಡವಾಳಶಾಹಿಯು ಒಂದು ಯೋಜಿತ ವ್ಯವಸ್ಥೆಯಲ್ಲದ ಕಾರಣ ಅದು ಎದುರಿಸುತ್ತಿರುವ ಬಿಕ್ಕಟ್ಟಿಗೆ ಯಾವುದೇ “ತರ್ಕಬದ್ಧ” ಪರಿಹಾರವನ್ನೂ ಅದು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅಮೆರಿಕವು ಈ ಬಿಕ್ಕಟ್ಟಿನಲ್ಲಿ ತನ್ನ ಹಿತಾಸಕ್ತಿಯನ್ನು ತಾನು ಕಾಪಾಡಿಕೊಳ್ಳುತ್ತಿದೆ.
ಸುಂಕಬೆದರಿಕೆಮತ್ತುವ್ಯಾಪಾರಒಪ್ಪಂದ
ಬಿಕ್ಕಟ್ಟಿನಿಂದ ಹೊರಬರಲು ಅಮೆರಿಕ ಮಾಡುತ್ತಿರುವ ಪ್ರಯತ್ನವು ಉಳಿದ ವಿಶ್ವವನ್ನು, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣವನ್ನು, ಇನ್ನೂ ಆಳದಲ್ಲಿ ಮುಳುಗಿಸುತ್ತಿದೆ ಎಂಬುದು ಬೇರೆ ಬೇರೆ ದೇಶಗಳೊಂದಿಗಿನ ಅದರ ವ್ಯಾಪಾರ ಮಾತುಕತೆಗಳಲ್ಲಿ ಅಮೆರಿಕವು ಮಾಡುತ್ತಿರುವ ಬೇಡಿಕೆಗಳಿಂದ ಸ್ಪಷ್ಟವಾಗುತ್ತದೆ. ಅತಿ ಹೆಚ್ಚಿನ ಸುಂಕಗಳನ್ನು ವಿಧಿಸುವುದಾಗಿ ಅದು ಆರಂಭದಲ್ಲಿ ಬೆದರಿಕೆ ಹಾಕುತ್ತದೆ. ಆದರೆ, ಮಾತುಕತೆ ನಡೆಸುವ ದೇಶವು ಅಮೇರಿಕದ ವಿವಿಧ ರೀತಿಯ ಸರಕುಗಳನ್ನು ಶೂನ್ಯ ಸುಂಕದಲ್ಲಿ ಆಮದು ಮಾಡಿಕೊಳ್ಳಲು ಒಪ್ಪಿಕೊಂಡರೆ, ತಾನು ಅತಿ ಸಣ್ಣ ಪ್ರಮಾಣದ ಸುಂಕ ಹೇರುವೆ ಎನ್ನುತ್ತದೆ. ಈ ರೀತಿಯಲ್ಲಿ ಅದು ಹಲವಾರು ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.
ಸುಂಕಗಳ ಹೇರಿಕೆಯು ಜಾಗತಿಕ ದಕ್ಷಿಣದ ದೇಶಗಳಿಗೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಲ್ಲದು. ಉದಾಹರಣೆಗೆ, ಜವಳಿ, ರತ್ನಾಭರಣಗಳು ಮತ್ತು ಔಷಧೀಯ ಉತ್ಪನ್ನಗಳೂ ಸೇರಿದಂತೆ ನಮ್ಮ ಪ್ರಮುಖ ರಫ್ತುಗಳ ಮೇಲೆ ಕೆಲವು ರಿಯಾಯಿತಿಗಳನ್ನು ಪಡೆಯಲು, ಭಾರತವು ಅಮೆರಿಕದ ಡೈರಿ ಉತ್ಪನ್ನಗಳು, ಒಣಗಿಸಿದ ಹಣ್ಣುಗಳು, ಗೇರು ಬೀಜಗಳು ಮುಂತಾದ ಸರಕುಗಳನ್ನು ಯಾವ ನಿರ್ಬಂಧವೂ ಇಲ್ಲದೆ ಆಮದು ಮಾಡಿಕೊಳ್ಳಬೇಕಾಗುತ್ತದೆ.
ಇದು ಭಾರತದ ಲಕ್ಷಾಂತರ ಮಂದಿ ರೈತರಿಗೆ ಸಂಕಷ್ಟವನ್ನು ತರುತ್ತದೆ. ಆಮದು ಮಾಡಿಕೊಂಡ ಅಮೆರಿಕದ ಸರಕುಗಳು ಉಂಟುಮಾಡುವ ಪೈಪೋಟಿಯನ್ನು ಭಾರತದ ರೈತರು ತಡೆದುಕೊಳ್ಳುವುದು ಸಾಧ್ಯವಾಗದು. ಸಾಧ್ಯವಾಗದಿರುವುದು ಅಮೆರಿಕದ ರೈತರು ಹೆಚ್ಚು “ದಕ್ಷರು” ಎಂಬ ಕಾರಣದಿಂದಲ್ಲ; ತಮ್ಮ ಉತ್ಪನ್ನಗಳಿಗೆ ಅಮೆರಿಕದ ರೈತರು ಅತ್ಯಧಿಕ ಪ್ರಮಾಣದ ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯುವ ಕಾರಣದಿಂದ. ಅಮೆರಿಕದ ರೈತರು ಪಡೆಯುವ ಸಬ್ಸಿಡಿಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯು ನಿಷೇಧಿತ ಸಬ್ಸಿಡಿಗಳ ಪಟ್ಟಿಯಿಂದ ಅತಾರ್ಕಿಕವಾಗಿ, ಆಕ್ರೋಶಕಾರೀ ರೀತಿಯಲ್ಲಿ ಹೊರಗಿಟ್ಟಿದೆ.
ನವ ಉದಾರವಾದವು ದೇಶವನ್ನು, ರೈತರ ಹಿತಾಸಕ್ತಿಗಳನ್ನು ಬಲಿ ಕೊಡಬೇಕೋ, ಅಥವಾ ಔಷಧಗಳು, ರತ್ನಾಭರಣಗಳು, ಬಟ್ಟೆ ಮುಂತಾದವುಗಳನ್ನು ಉತ್ಪಾದಿಸುವವರ ಹಿತಾಸಕ್ತಿಗಳನ್ನು ಬಲಿ ಕೊಡಬೇಕೋ ಎಂಬುದರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತಹ ಒಂದು ಸ್ಥಿತಿಗೆ ತಂದು ನಿಲ್ಲಿಸಿದೆ. ಇದರಿಂದ ಹೊರಬರುವ ಮಾರ್ಗವೆಂದರೆ, ಅಂತಹ ಯಾವುದೇ ಆಯ್ಕೆಯನ್ನು ಮಾಡುವುದಲ್ಲ, ಬದಲಿಗೆ ಈ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವಂತೆ ಬಲವಂತಪಡಿಸುವ ವ್ಯವಸ್ಥೆಯನ್ನೇ ಮೀರುವುದು, ಅಂದರೆ, ನವ-ಉದಾರವಾದವನ್ನೇ ಮೀರಿ ನಿಲ್ಲುವುದು ಎಂದಾಗುತ್ತದೆ.
ಇದನ್ನೂ ನೋಡಿ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1% ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ Janashakthi Media
