ಟೊಯೊಟಾ ಕಾರ್ಮಿಕರ ಸಂಕಷ್ಟಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವೆ – ಸಿದ್ಧರಾಮಯ್ಯ

ಬೆಂಗಳೂರು ಜ 31: ಟಿಕೆಎಂ ನ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, 80 ದಿನಗಳಿಂದ ಮುಷ್ಕರ ನಡೆಸುತ್ತಿರುವ ಟೊಯೊಟ ಕಾರ್ಖಾನೆಯ ಬಿಡದಿ ಘಟಕದ ಕಾರ್ಮಿಕರು, ಮತ್ತವರ ಕುಟುಂಬದವರನ್ನು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಭೇಟಿ ಮಾಡಿ ಕಾರ್ಮಿಕರ ಅಹವಾಲು ಆಲಿಸದರು.

ನಂತರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಕರೆಮಾಡಿ ಮಾತನಾಡಿ, ಆದಷ್ಟು ಶೀಘ್ರ ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಿದರು.
ನಂತರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಜಪಾನಿನ ಟೊಯೊಟಾ ಕಂಪನಿಗೆ ರಾಜ್ಯದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಭೂಮಿ, ನೀರು, ವಿದ್ಯುತ್ ನೀಡಿರುವುದು ಇಲ್ಲಿನ ಸರ್ಕಾರ. ನಮ್ಮ ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ಇಲ್ಲಿನ ಕಾರ್ಮಿಕರ ಮೇಲೆ ಜಪಾನಿನ ಕಾನೂನುಗಳನ್ನು ಅನ್ವಯಿಸೋಕೆ ಹೊರಟರೆ ಅದು ತಪ್ಪಾಗುತ್ತೆ.

ಇದನ್ನೂ ಓದಿ : ದೇಶಭಕ್ತನನ್ನು ಕೊಂದವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ – ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ

ವಿದೇಶದ ಯಾವುದೇ ಕಂಪನಿಗಳು ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು, ಉತ್ಪಾದನಾ ಘಟಕಗಳನ್ನು ಆರಂಭಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಅವುಗಳು ಈ ನೆಲದ ಕಾನೂನಿಗೆ ಅನ್ವಯವಾಗಿ ತನ್ನ ಕಾರ್ಮಿಕರನ್ನು ನಡೆಸಿಕೊಳ್ಳಬೇಕು. ಬಿಡದಿಯ ಟೊಯೊಟಾ ಘಟಕದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಾ ಸುಮಾರು 3 ತಿಂಗಳಾಗುತ್ತಾ ಬಂತು, ಇಷ್ಟರೊಳಗೆ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಕಾರ್ಮಿಕ ಸಚಿವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಅಂದ್ರೆ ಮುಖ್ಯಮಂತ್ರಿಗಳೇ ಸಭೆ ಕರೆದು ಇತ್ಯರ್ಥಪಡಿಸಬೇಕಿತ್ತು.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ ನಾರಾಯಣ ಅವರು ಟೊಯೊಟಾ ಕಂಪನಿಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಗಳ ನಡುವೆ ಸಂಧಾನ ಸಭೆ ನಡೆಸಿದ್ದರು. ಕೇವಲ 20 ನಿಮಿಷ ಸಭೆ ನಡೆಸಿ ಸಮಸ್ಯೆ ಬಗೆಹರಿದಿದೆ ಅಂತ ಹೇಳಿದ್ರು. ಸಮಸ್ಯೆ ಬಗೆಹರಿದಿದ್ರೆ ಕಾರ್ಮಿಕರೇಕೆ ಇನ್ನೂ ಮುಷ್ಕರನಿರತರಾಗಿದ್ದಾರೆ? ಎಂದು ಪ್ರಶ್ನಿಸಿದರು. ಟೊಯೊಟಾದ ಬಿಡದಿ ಘಟಕದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕರ ಸಚಿವರ ಮೇಲೆ ಒತ್ತಡ ಹೇರುತ್ತೇನೆ ಎಂದರು.

ಈ ವೇಳೆ ಶಾಸಕರಾದ ರವಿ, ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರಾದ ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ನಾಯಕರು ಜೊತೆಗಿದ್ದರು.

Donate Janashakthi Media

Leave a Reply

Your email address will not be published. Required fields are marked *