ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಪ್ರಕರಣ: ಬಿ ಎಲ್ ಸಂತೋಷ್​ಗೆ ಸಮನ್ಸ್​ ಜಾರಿ-ಬಂಧನ ಸಾಧ್ಯತೆ

ಹೈದರಾಬಾದ್​: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಪಕ್ಷದ ನಾಲ್ವರು ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಮನ್ಸ್ ಜಾರಿ ಮಾಡಿದ್ದು, ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಬಿ.ಎಲ್‌. ಸಂತೋಷ್‌ ಗೆ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 41 (ಎ) ಅಡಿಯಲ್ಲಿ ಸಮನ್ಸ್​ ಜಾರಿ ಮಾಡಿದ್ದು, ನವೆಂಬರ್ 21ರಂದು 10.30ಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದು, ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದೂ ಸಮನ್ಸ್​ನಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ಟಿಆರ್‌ಎಸ್‌ ನಾಲ್ವರು ಶಾಸಕರಿಗೆ ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಯ ತೆಕ್ಕೆಗೆ ಸೆಳೆಯಲು ಯತ್ನಿಸಲಾಗಿತ್ತು. ಮೂವರು ಆರೋಪಿಗಳಾದ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬುವವರನ್ನು ಅಕ್ಟೋಬರ್ 26 ರಂದು ಹೈದರಾಬಾದ್ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿತ್ತು. ಈ ವೇಳೆ ಬಂಧಿಸಲಾಗಿರುವ ಬಿಜೆಪಿ ಏಜೆಂಟ್‌ಗಳು ಎನ್ನಲಾದ ಮೂವರ ನಡುವಿನ ಸಂಭಾಷಣೆಯಲ್ಲಿ ಬಿ ಎಲ್ ಸಂತೋಷ್ ಹೆಸರು ಕೇಳಿಬಂದಿತ್ತು.

ಶಾಸಕರ ಕುದುರೆ ವ್ಯಾಪಾರದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ನೇತೃತ್ವದಲ್ಲಿ ನೇಮಿಸಿದೆ.  ಎಸ್‌ಐಟಿ ಮತ್ತು ನ್ಯಾಯಾಧೀಶರ ಮೇಲ್ವಿಚಾರಣೆ ನಂತರ ಈ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಿದೆ. ಅದರಂತೆ ನವೆಂಬರ್ 29 ರ ಒಳಗೆ ತನಿಖೆಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ತೆಲಂಗಾಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳು ಸೂಚಿಸಿದ ಪ್ರಮುಖ ಹೆಸರುಗಳಲ್ಲಿ ಬಿ.ಎಲ್.ಸಂತೋಷ್ ಮೊದಲಿಗರಾಗಿ ನಂತರ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಮುಂಚೂಣಿಯಲ್ಲಿದೆ.

ಇನ್ನು ಈ ನಡುವೆ ತೆಲಂಗಾಣದ ಟಿಆರ್‌ಎಸ್‌ ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ತೆಲಂಗಾಣ ಪೊಲೀಸರ ಆತಿಥ್ಯದಲ್ಲಿ ಇರುವ ಮೂವರು ಆರೋಪಿಗಳ ಹೇಳಿಕೆಯ ಅಡಿಯಲ್ಲಿ ತೆಲಂಗಾಣ ಪೊಲೀಸರು ಪುತ್ತೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮೂಲದವರಾಗಿರುವ ಕಾರಣ ಶಾಸಕರ ಖರೀದಿ ಕಾರಣಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಹಣ ಮತ್ತು ಇನ್ನುಳಿದ ಆರೋಪಿಗಳ ಶೋಧಕ್ಕೆ ತೀವ್ರ ತಪಾಸಣೆಗೆ ತೆಲಂಗಾಣ ಪೊಲೀಸರು ಇಳಿದಿದ್ದಾರೆ.

ಬಿ.ಎಲ್.ಸಂತೋಷ್ ಗೆ ಈ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿದ್ದು, ನವೆಂಬರ್ 21 ರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ. ಬಿಜೆಪಿ ಏಜೆಂಟರ ಬಂಧನಕ್ಕೂ ಮುನ್ನ ಮುನ್ನ ತಮ್ಮ ಪಕ್ಷದ ಶಾಸಕರನ್ನು ಹಣದ ಮೂಲಕ ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ ಟಿಆರ್‌ಎಸ್‌ ಆರೋಪಿಸುತ್ತಲೇ ಬಂದಿತ್ತು.

Donate Janashakthi Media

Leave a Reply

Your email address will not be published. Required fields are marked *