7ನೇ ವೇತನ ಆಯೋಗ ರಚನೆಗೆ ಅನುಮೋದನೆ; ಮೂವರು ಸದಸ್ಯರ ನೇಮಕ

Please follow and like us:

ಬೆಂಗಳೂರು: 7ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಲಾಗಿದ್ದು, ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯ ಸಮಿತಿ ಮೂವರು ಸದಸ್ಯರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದಸ್ಯರ ನೇಮಕಕ್ಕೆ ಅನುಮೋದನೆ ನೀಡಿದ್ದು, ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತುಪಡಿಸಿ) ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ ನೂತನ ವೇತನ ಶ್ರೇಣಿಯನ್ನು ಶಿಫಾರಸ್ಸು ಮಾಡಲಾಗುತ್ತದೆ.

ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸ್ಸುಗಳನ್ನು ನೀಡಲಿದೆ.

ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002 ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಆರು ತಿಂಗಳ ಒಳಗಾಗಿ ಶಿಫಾರಸ್ಸು ಮಾಡಲಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *