ಟೊಕಿಯೊ: ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ಪಡೆಯುವ ಮೂಲಕ ಭಾರತಕ್ಕೆ ಮೂರನೇ ಪದಕ ಲಭಿಸುವಂತೆ ಮಾಡಿದ್ದಾರೆ. ಇಂದಿನ ಬಾಕ್ಸಿಂಗ್ನ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋಲುವುದರೊಂದಿಗೆ ಕಂಚಿನ ಪದಕ ಪಡೆಯಲು ಸಾಧ್ಯವಾಗಿದೆ.
ಮಹಿಳಾ ಬಾಕ್ಸಿಂಗ್ನ 69 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 23 ವರ್ಷದ ಲವ್ಲಿನಾ ಹೋರಾಟ ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಬುಸೆನಾಜ್ ಅವರ ಆಕ್ರಮಣಕಾರಿ ಆಟಕ್ಕೆ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದರು.
ಇದನ್ನು ಓದಿ: ಮುರಿದ ಹಾಕಿ ಸ್ಟಿಕ್ ನಿಂದ ನಾಯಕಿ ಪಟ್ಟದವರೆಗೆ – ರಾಣಿ ರಾಂಪಾಲ್ ಸಾಧಿಸಿದ ಸಾಹಸಗಾಥೆ
ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಮಹಿಳಾ ಬಾಕ್ಸಿಂಗ್ನಲ್ಲಿ ವಾಲ್ಟರ್ ಬೆಲ್ಟ್ 64 ರಿಂದ 69 ಕೆಜಿ ವಿಭಾಗದಲ್ಲಿ ಚೈನಾದ ತೈಪೆಯ ಮಾಜಿ ಚಾಂಪಿಯನ್ ನಿಯೆನ್ ಚಿನ್ ಚೆನ್ ಅವರ ವಿರುದ್ಧ ಲವ್ಲಿನಾ ಬೊರ್ಗೊಹೈನ್ ಕಾದಾಟ ನಡೆಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದರು. ಲವ್ಲಿನಾ ಬೊರ್ಗೊಹೈನ್ ಸೋತರೂ ವಿಶೇಷ ಸಾಧನೆ ಮಾಡಿದ್ದಾರೆ. ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆಲುವಿನ ಸನಿಹಕ್ಕೇರಿದ ಮೊದಲ ಭಾರತೀಯರೆನಿಸಲಿದ್ದಾರೆ.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈಗಾಗಲೇ ಭಾರತಕ್ಕೆ ಎರಡು ಪದಕ ಲಭಿಸಿದೆ. ಮೊದಲಿಗೆ ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯ್ ಚಾನೂ ಬೆಳ್ಳಿ ಪದಕ ಗೆದ್ದುಕೊಟ್ಟರೆ, ಬ್ಯಾಡ್ಮಿಂಟನ್ನಲ್ಲಿ ಪಿ.ವಿ.ಸಿಂಧು ಕಂಚಿನ ಪದಕ ಪಡೆದುಕೊಂಡಿದ್ದರು. ಈಗ ಮೂರನೇ ಪದಕದ ಸಾಧನೆ ಲವ್ಲಿನಾ ಬೊರ್ಗೊಹೈನ್ ಅವರದಾಗಿದೆ. ಭಾರತಕ್ಕೆ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಲಭಿಸಿದೆ. ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿ ಭಾರತ ಇದೆ.
ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್ : ಕಂಚಿಗೆ ಮುತ್ತಿಟ್ಟ ಪಿ.ವಿ. ಸಿಂಧು
ಮೊದಲಿಗೆ ಮುಯಿತೈ ಪಟುವಾಗಿದ್ದ ಲವ್ಲಿನಾ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ. ಈ ಹಿಂದಿನ ಒಲಿಂಪಿಕ್ಸ್ನಲ್ಲಿ ವಿಜೇಂದರ್ ಸಿಂಗ್ (2008) ಮತ್ತು ಮೇರಿ ಕೋಮ್ (2012) ಭಾರತಕ್ಕೆ ಪದಕವನ್ನು ತಂದವರು.
ಲವ್ಲಿನಾ ಬೋರ್ಗೊಹೈನ್ ಪಂದ್ಯದ ಕಾದಾಟ ಮಾಹಿತಿ ಹೀಗಿದೆ:
ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿಯ ಅಪೆಜ್ ನಡೈನ್ ವಿರುದ್ಧ 3–2ರಲ್ಲಿ ಗೆಲುವು. ಕ್ವಾರ್ಟರ್ ಫೈನಲ್ನಲ್ಲಿ ಚೀನಾ ತೈಪೆಯ ಚೆನ್ ನೀನ್ ಚಿನ್ ವಿರುದ್ಧ 4–1ರಲ್ಲಿ ಜಯ. ಸೆಮಿಫೈನಲ್ನಲ್ಲಿ ಸುರ್ಮೆನೆಲಿ ಬುಸೆನಜ್ ವಿರುದ್ಧ 0-5ರಲ್ಲಿ ಸೋಲು.
ಲವ್ಲಿನಾ ಬಗ್ಗೆ ಒಂದಷ್ಟು ಮಾಹಿತಿ
ಪೂರ್ಣ ಹೆಸರು ಲವ್ಲಿನಾ ಬೊರ್ಗೊಹೈನ್ ಆಗಿದೆ. ಜನ್ಮ ದಿನಾಂಕ: ಅಕ್ಟೋಬರ್ 2, 1997 ಮತ್ತು ಹುಟ್ಟಿದ ಸ್ಥಳ ಗೊಲಾಘಾಟ್, ಅಸ್ಸಾಂ ರಾಜ್ಯವಾಗಿದೆ. ಲವ್ಲಿನಾ ಪ್ರಮುಖ ಸಾಧನೆಗಳು 2021ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಕಂಚು. 2018ರಲ್ಲಿ ನಡೆದ ನೂತನ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು. 2017ರಲ್ಲಿ ನಡೆದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಕಂಚು. 2020ರಲ್ಲಿ ಅರ್ಜುನ ಪ್ರಶಸ್ತಿ.
ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ – ಬೆಳ್ಳಿ ಪದಕ ಗೆದ್ದ ಸೈಕೋಮ್ ಮೀರಾಬಾಯಿ ಚಾನು
ಕಿಕ್ ಬಾಕ್ಸಿಂಗ್ನಲ್ಲಿ ವೃತ್ತಿ ಬದುಕು ಆರಂಭಸಿದ್ದ ಲವ್ಲಿನಾ, 2012ರಲ್ಲಿ ಬಾಕ್ಸಿಂಗ್ ಅಂಗಣಕ್ಕೆ ಕಾಲಿಟ್ಟರು. 2017ರ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆಲ್ಲುವ ಮೂಲಕ ಮೊದಲ ಬಾರಿ ಖ್ಯಾತಿ ಗಳಿಸಿದರು. ಅಸ್ಸಾಂ ಬಾಕ್ಸರ್, ವಿಶ್ವ ಚಾಂಪಿಯನ್ಷಿಪ್ನಲ್ಲಿ ಒಂದರ ನಂತರ ಒಂದು ಪದಕವನ್ನು ಗೆಲ್ಲುವುದೊರೊಂದಿಗೆ ಒಲಿಂಪಿಕ್ಸ್ನಲ್ಲಿ ಭಾರತದ ಭರವಸೆಯ ಬಾಕ್ಸರ್ ಎನಿಸಿಕೊಂಡಿದ್ದಾರೆ.