ಕೊಚ್ಚಿ: ಕೇರಳದ ವಿಶ್ವವಿದ್ಯಾಲಯವೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನೇತೃತ್ವದ ವಿವಿ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಗೆ ಸ್ಪಂದಿಸಿರುವ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿನೀಯರು ಋತುಚಕ್ರದ ರಜೆ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ಇದೇ ಮೊದಲ ಬಾರಿಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿನೀಯರ ಬಹುಕಾಲದ ಬೇಡಿಕೆಯಾಗಿತ್ತು. ಎಸ್ಎಫ್ಐ ಸಂಘಟನೆಯ ಬೇಡಿಕೆಯ ನಂತರ ವಿವಿ ತನ್ನ ನಿರ್ಧಾರವನ್ನು ಪ್ರಕಟಿಸಿತು. ಇದರಿಂದ ವಿಶ್ವವಿದ್ಯಾನಿಲಯದ ಪಿಎಚ್ಡಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನೀಯರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ವಿವಿಯ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ. ಮಹಿಳಾ ವಿದ್ಯಾರ್ಥಿನೀಯರು ರಜೆ ಪಡೆಯಬಹುದಾಗಿದ್ದು, ಇದರೊಂದಿಗೆ ಹಾಜರಾತಿಯಲ್ಲಿ ಒಂದು ತ್ರೈಮಾಸಿಕಕ್ಕೆ ಶೇ. 2ರಷ್ಟು ಹಾಜರಾತಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಪ್ರಸ್ತುತ ಶೇ. 75ರಷ್ಟು ಹಾಜರಾತಿ ಇದ್ದವರು ಮಾತ್ರ ಸೆಮಿಸ್ಟರ್ ಪರೀಕ್ಷೆ ಬರೆಯಬಹುದು. ಇದಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಉಪಕುಲಪತಿಗಳಿಗೆ ಅರ್ಜಿ ಸಲ್ಲಿಸಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ಋತುಚಕ್ರದ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ